ಇವರು ಕಾಯಂ, ಸರ್ಕಾರಿ ನೌಕರರು.. ಈ ಶಿಕ್ಷಕರ ಹುದ್ದೆ ಮಾತ್ರ ತಾತ್ಕಾಲಿಕ!
-ಆತ್ಮಭೂಷಣ್
ಮಂಗಳೂರು: ಇವರು ಸರ್ಕಾರಿ ನೌಕರರು, ಮಿಗಿಲಾಗಿ ಹೆಸರಿಗಷ್ಟೇ ಸರ್ಕಾರಿ ಪ್ರೌಢಶಾಲೆಯ 'ಕಾಯಂ' ಶಿಕ್ಷಕರು. ಆದರೆ ಇವರಿಗೆ ಎರಡು ತಿಂಗಳಿಂದ ಸಂಬಳ ಸಿಕ್ಕಿಲ್ಲ. ಇದಕ್ಕೆ ಕಾರಣ ಕಡತಗಳಲ್ಲಿ ಅವರ ಹುದ್ದೆ 'ತಾತ್ಕಾಲಿಕ'.
ಪ್ರತಿ ವರ್ಷ ಏಪ್ರಿಲ್ನಲ್ಲಿ ತಾತ್ಕಾಲಿಕ ಹುದ್ದೆ ಮುಂದುವರಿಸಿ ಸರ್ಕಾರ ಆದೇಶ ನೀಡುತ್ತಿತ್ತು. ಈ ವರ್ಷ ಸೆಪ್ಟೆಂಬರ್ ಬಂದರೂ ಹುದ್ದೆ ಮುಂದುವರಿಕೆ ಆದೇಶ ಬಂದಿಲ್ಲ. ಹಾಗಾಗಿ ವೇತನವೂ ಬಂದಿಲ್ಲ. ಇದರಿಂದ ರಾಜ್ಯದಲ್ಲಿರುವ ಕಾಯಂ ಶಿಕ್ಷಕರೀಗ ಮಾಸಿಕ ಸಂಬಳಕ್ಕೆ ಕಾಯಬೇಕಾದ ಪರಿಸ್ಥಿತಿ ಬಂದಿದೆ.
ಕಳೆದ 15 ವರ್ಷ ಹಿಂದೆ ಸರ್ಕಾರಿ ಹೈಸ್ಕೂಲ್ಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಅಧಿಕವಿದ್ದಾಗ ಹೆಚ್ಚುವರಿ ಶಿಕ್ಷಕರನ್ನು ನೇಮಕಗೊಳಿಸಲಾಗಿತ್ತು. ಅನಿವಾರ್ಯ ನೆಲೆಯಲ್ಲಿ ಹೆಚ್ಚುವರಿ ಶಿಕ್ಷಕರನ್ನು ತೆಗೆದುಕೊಂಡರೂ ಅವರನ್ನು ನೇಮಿಸುವಾಗ ್ಡಹೆಸರಿಗಷ್ಟೇ 'ಕಾಯಂ' ಆಗಿ ಮಾಡಲಾಗಿತ್ತು. ಆದರೆ ಶಿಕ್ಷಕ ಹುದ್ದೆಯನ್ನು ಮಾತ್ರ ಕಡತಗಳಲ್ಲಿ ತಾತ್ಕಾಲಿಕ ಎಂದು ಪರಿಗಣಿಸಲಾಗಿತ್ತು. ಇದುವೇ ಈಗ ಈ ಶಿಕ್ಷಕರಿಗೆ ಮುಳುವಾಗಿದೆ.
ಹುದ್ದೆ ಕಾಯಂ ಮಾಡಿಲ್ಲ: ಶಿಕ್ಷಕ ಹುದ್ದೆಗೆ ಭರ್ತಿಗೊಳಿಸುವಾಗ ನೇಮಕಗೊಂಡ 5 ವರ್ಷದಲ್ಲಿ ಹುದ್ದೆ ಕಾಯಂಗೊಳಿಸಬೇಕು ಎಂಬುದು ಶಿಕ್ಷಣ ಇಲಾಖೆ ನಿಯಮ. ಇದು ಹಿಂದೆ ನೇಮಕಗೊಂಡ ಶಿಕ್ಷಕರಿಗೆ ಮಾತ್ರ ಅನ್ವಯವಾಗಿಲ್ಲ.
ಈ ರೀತಿ ರಾಜ್ಯದ 750 ಸರ್ಕಾರಿ ಪ್ರೌಢಶಾಲೆಗಳಲ್ಲಿ ಆರೂವರೆ ಸಾವಿರ ಮಂದಿ ಶಿಕ್ಷಕರನ್ನು ನೇಮಿಸಲಾಗಿದೆ. ಇವರೆಲ್ಲ ಹೆಸರಿಗೆ ಕಾಯಂ ಶಿಕ್ಷಕರು, ಸರ್ಕಾರಿ ನೌಕರರು. ಆದರೆ ಇವರ ಹುದ್ದೆ ಕಾಯಂ ಆಗಿಲ್ಲ.
ಬಹುತೇಕ ಮಂದಿ ಕೆಲವೇ ವರ್ಷದಲ್ಲಿ ನಿವೃತ್ತಿ ಅಂಚಿಗೆ ತಲುಪುವವರು. ಹುದ್ದೆ ಕಾಯಂಗೊಳಿಸುವಂತೆ ಸರ್ಕಾರಕ್ಕೆ ಪದೇ ಪದೇ ಮನವಿ ಮಾಡಿದ್ದಾರೆ. ಆದರೆ ಪ್ರಯೋಜನವಾಗಿಲ್ಲ.
ಆದೇಶ ಬರದಿದ್ರೆ ಸಂಬಳ ಇಲ್ಲ: ಪ್ರತಿ ವರ್ಷ ಮಾರ್ಚ್ಗೆ ಇವರ ನೇಮಕ ಅವಧಿ ಮುಗಿಯುತ್ತದೆ. ಏಪ್ರಿಲ್ಗೆ ಮತ್ತೆ ಮುಂದಿನ ವರ್ಷಕ್ಕೆ ನೇಮಕಗೊಳಿಸಿದ ಬಗ್ಗೆ ಆದೇಶ ಮಾಡಬೇಕು. ನೇಮಕದ ಅವಧಿ ಮುಗಿದು 2 ತಿಂಗಳೊಳಗೆ ಮತ್ತೆ ನೇಮಕ ಮುಂದುವರಿಸದಿದ್ದರೆ ನಂತರ ವೇತನವೂ ಸಿಗದು.
ಈ ಬಾರಿ ಇಂಥ ಸಂದಿಗ್ಧ ಪರಿಸ್ಥಿತಿಯನ್ನು ಈ ಶಿಕ್ಷಕರು ಎದುರಿಸುತ್ತಿದ್ದಾರೆ. ಸೆಪ್ಟೆಂಬರ್ ಬಂದರೂ ಜುಲೈನಿಂದ ವೇತನ ಆಗಿಲ್ಲ. ನೇಮಕ ಮುಂದುವರಿಸಿದ ಆದೇಶ ಬಾರದ ಕಾರಣ ವೇತನ ನೀಡುವುದು ಸಾಧ್ಯವಿಲ್ಲ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ ಎನ್ನುತ್ತಾರೆ ನೊಂದ ಶಿಕ್ಷಕರು.
ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚು ಕಡಿಮೆ ಆದರೆ ಹುದ್ದೆಯನ್ನು ವರ್ಗಾಯಿಸುವುದು ಅಥವಾ ಅಲ್ಲೇ ಕಾಯಂ ಮಾಡಲು ಅವಕಾಶವಿದೆ. ಈ ಬಗ್ಗೆ ಮನವಿ ಸಲ್ಲಿಸಿದರೂ ಶಿಕ್ಷಣ ಇಲಾಖೆ ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ ಎನ್ನುತ್ತಾರೆ ಶಿಕ್ಷಕರು.
ತಾತ್ಕಾಲಿಕ ಹುದ್ದೆಯಲ್ಲಿರುವ ಕಾಯಂ ಶಿಕ್ಷಕರಿಗೆ ವೇತನ ಸಿಗದಿರುವ ಸಂಗತಿ ಈಗಷ್ಟೇ ಗೊತ್ತಾಗಿದೆ. ಇದನ್ನು ಮೊದಲೇ ಗಮನಕ್ಕೆ ತಂದಿದ್ದರೆ ಶಿಕ್ಷಣ ಇಲಾಖೆ ಜತೆ ಮಾತುಕತೆ ನಡೆಸಿ ಪರಿಹರಿಸಲಾಗುತ್ತಿತ್ತು. ಈಗ ಈ ಬಗ್ಗೆ ವಿಸ್ತೃತ ಮಾಹಿತಿ ಪಡೆದು ಮುಂದುವರಿಯಲಾಗುವುದು ಎಂದು ಪ್ರೌಢ ಶಾಲಾ ಸಹಶಿಕ್ಷಕರ ಸಂಘ ಅಧ್ಯಕ್ಷ ರಾಮಕೃಷ್ಣ ಶಿರೂರು ಪ್ರತಿಕ್ರಿಯಿಸಿದ್ದಾರೆ.
ಕಾಯಂ ಶಿಕ್ಷಕರಿಗೆ ತಾತ್ಕಾಲಿಕ ಹುದ್ದೆಯಿಂದ ತೊಂದರೆಯಾಗಿರುವ ವಿಚಾರ ತನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ವಿಚಾರಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪ್ರೌಢ ಶಿಕ್ಷಣ ಇಲಾಖೆ ಆಯುಕ್ತ ಮಹಮ್ಮದ್ ಮೋಸಿನ್ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

