ಕಾರ್ಮಿಕ ಕಲ್ಯಾಣ ಮಂಡಳಿ ಎಡವಟ್ಟು
ಸುಳ್ಯ: ಕಟ್ಟಡ ಕಾರ್ಮಿಕರೊಬ್ಬರಿಗೆ ಮೂತ್ರಪಿಂಡದ ಕಲ್ಲು ತೆಗೆಯುವ ಶಸ್ತ್ರ ಚಿಕಿತ್ಸೆಗೆ ಮಂಜೂರಾದ ರು. 23,265 ಸಹಾಯಧನವನ್ನು ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ಬೇರೆ ಯಾರದೋ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದು, ನೈಜ ಫಲಾನುಭವಿ ಹಣಕ್ಕಾಗಿ ಇದೀಗ ಕಚೇರಿಯಿಂದ ಕಚೇರಿ ಅಳೆದಾಡುವಂತಾಗಿದೆ.
ನೆಲ್ಲೂರು ಕೆಮ್ರಾಜೆ ಗ್ರಾಮದ ನಾರ್ಣಕಜೆಯ ಎನ್.ಜಿ. ರಾಮಚಂದ್ರ ಎಂಬವರು ನೋಂದಾಯಿತ ಕಟ್ಟಡ ಕಾರ್ಮಿಕರಾಗಿದ್ದು, ಮೂತ್ರ ಪಿಂಡದ ಕಲ್ಲು ತೆಗೆಯಲು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಕೊಂಡಿದ್ದರು. ಈ ಕುರಿತು ಅವರು ಕಾರ್ಮಿಕ ಕಲ್ಯಾಣ ಮಂಡಳಿ ನೆರವು ಯಾಚಿಸಿದ್ದರು. ಅದಕ್ಕೆ ಅಗತ್ಯ ದಾಖಲೆಗಳನ್ನು ಒದಗಿಸಿದ್ದರು.
ಅರ್ಜಿ ಕ್ರಮಬದ್ಧವಾಗಿದೆ ಎಂದು ಮಂಡಳಿ ಸಹಾಯಯಧನ ಮಂಜೂರು ಮಾಡಿತ್ತು. ಮತ್ತು ಅದನ್ನು ಫಲಾನುಭವಿಯ ಬ್ಯಾಂಕ್ ಖಾತೆಗೆ ಜೂನ್ 11ರಂದು ಜಮಾ ಮಾಡಲಾಗಿದೆ ಎಂದು ಉತ್ತರ ನೀಡಿತ್ತು. ಆದರೆ ಫಲಾನುಭವಿ ನೀಡಿದ ಬ್ಯಾಂಕ್ ಖಾತೆಗೆ ಜಮಾ ಮಾಡದೆ ಬೇರೆ ಯಾರದೋ ಖಾತೆಗೆ ಹಣವನ್ನು ಜಮಾ ಮಾಡಲಾಗಿದೆ. ಇವರು ನೀಡಿದ ಖಾತೆ ಸಂಖ್ಯೆ ಹಾಗೂ ಅವರು ಜಮಾ ಮಾಡಿದ ಖಾತೆ ಸಂಖ್ಯೆ ಬೇರೆ ಬೇರೆಯಾಗಿದೆ. ಈ ಕುರಿತು ಹಲವು ಮಾರಿ ಮಂಡಳಿ ಕಚೇರಿಗೆ ಪತ್ರ, ದೂರವಾಣಿ ಮೂಲಕ ದೂರಿಕೊಂಡರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ರಾಮಚಂದ್ರ.
20ರಂದು ಹಮಾಲಿ ಕಾರ್ಮಿಕರ ಪ್ರತಿಭಟನೆ
ಮಂಗಳೂರು: ರಾಜ್ಯ ನಗರ ಮತ್ತು ಗ್ರಾಮೀಣ ಮಾರುಕಟ್ಟೆ ಪ್ರದೇಶದ ಹಮಾಲಿ ಕಾರ್ಮಿಕರ ಪಿಂಚಣಿ, ವಸತಿ ಯೋಜನೆ ಆಗ್ರಹಿಸಿ ಸೆ. 20 ರಂದು ಜಿಲ್ಲಾಧಿಕಾರಿ ಕಚೇರಿಯೆದುರು ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಶನ್ ಪ್ರತಿಭಟನೆ ನಡೆಸಲಿದೆ. ಸಿಐಟಿಯು ನೇತೃತ್ವದಲ್ಲಿ ಹಮಾಲಿ ಕಾರ್ಮಿಕರು ಪ್ರತಿಭಟನೆ ನಡೆಸುವರು. ರಾಜ್ಯದಲ್ಲಿ ಸುಮಾರು 3 ಲಕ್ಷಕ್ಕೂ ಅಧಿಕ ಕಾರ್ಮಿಕರು 10 ವರ್ಷಕ್ಕಿಂತ ಜಾಸ್ತಿ ಭಾರವಾದ ಮೂಟೆಗಳನ್ನು ಹೊರುತ್ತಾ ಕನಿಷ್ಟ ಸೌಲಭ್ಯಗಳಿಲ್ಲದೆ ದುಡಿಯುತ್ತಿದ್ದಾರೆ. ಆದರೆ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಿಂದ ಇದುವರೆಗೂ ಕನಿಷ್ಟ ಗುರುತಿನ ಚೀಟಿ ಸೇರಿದಂತೆ ಯಾವುದೇ ಸೌಲಭ್ಯ ಜಾರಿಗೊಳಿಸಿಲ್ಲ. ಈ ಕುರಿತು ಜು. 18 ರಂದು ಹಮಾಲಿ ಕಾರ್ಮಿಕರು ಕೃಷಿ ಮಾರುಕಟ್ಟೆ ಸಚಿವ ಶಾಮನೂರು ಶಿವಶಂಕರಪ್ಪ ಹಾಗೂ ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ್ ಅವರಿಗೆ ಮನವಿ ಸಲ್ಲಿಸಿದ್ದರೂ, ಯಾವುದೇ ಕ್ರಮ ವಹಿಸಿಲ್ಲ. ಈ ಹಿನ್ನಲೆಯಲ್ಲಿ ವಿವಿಧ ಕಾರ್ಮಿಕ ವಿಭಾಗ ಪ್ರತಿಭಟನೆ ನಡೆಸಲಿವೆ ಎಂದು ರಾಜ್ಯ ಪ್ರ.ಕಾರ್ಯದರ್ಶಿ ಕೆ. ಮಹಾಂತೇಶ ತಿಳಿಸಿದ್ದಾರೆ.
17ರಂದು ಅಡಕೆ ಬೆಳೆಗಾರರ ಪ್ರತಿಭಟನೆ
ಮಂಗಳೂರು: ಅಡಕೆ ಬೆಳೆಗಾರರಿಗೆ ಸೂಕ್ತ ಭದ್ರತೆ ನೀಡುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ಸೆ. 17 ರಂದು ಬೆಳಗ್ಗೆ 10ಕ್ಕೆ ಜಿಲ್ಲಾಧಿಕಾರಿ ಕಚೇರಿಯೆದುರು ಪ್ರತಿಭಟನೆ ನಡೆಯಲಿದೆ. ಕಳೆದ ವರ್ಷ ಅಡಕೆಗೆ ಉತ್ತಮ ಧಾರಣೆಯಿದ್ದರೂ ಕೇಂದ್ರ ಸರ್ಕಾರ ವಿದೇಶದಿಂದ ಅಡಕೆ ಆಮದು ಮಾಡಿಕೊಳ್ಳುತ್ತಿದೆ. ಅತಿವೃಷ್ಟಿಯಿಂದಾಗಿ ಈ ಬಾರಿ ಅಡಕೆ ಬೆಳೆಗೆ ಕೊಳೆರೋಗ ಬಂದಿದ್ದು, ಇದರ ಪರಿಣಾಮ ಸಂಕಷ್ಟಕ್ಕೊಳಗಾದ ರೈತರು ಆತ್ಮಹತ್ಯೆಗೆ ಶರಣಾಗುವ ಪ್ರಮೇಯ ಉಂಟಾಗಿದೆ. ಕೃಷಿ ಕಾರ್ಯಕ್ಕಾಗುವ ವೈಜ್ಞಾನಿಕ ವೆಚ್ಚವನ್ನು ಗಣನೆ ಮಾಡಿ ಅದರ ಒಂದೂವರೆ ಪಟ್ಟು ಬೆಲೆ ನಿಗದಿಪಡಿಸಬೇಕೆಂದು ಶಿಪಾರಸ್ಸು ಮಾಡಿರುವ ಡಾ.ಎಂ.ಎಸ್. ಸ್ವಾಮಿನಾಥನ್ ವರದಿಯನ್ನು ಕೇಂದ್ರ ಸರ್ಕಾರ ಕಡೆಗಣಿಸಿದೆ. ಸರ್ಕಾರದ ಈ ಧೋರಣೆ ಖಂಡಿಸಿ ಪ್ರತಿಭಟನೆ ನಡೆಸಿ, ವಿವಿಧ ಬೇಡಿಕೆಗಳ ಮನವಿ ಸಲ್ಲಿಸಲಾಗುವುದು ಎಂದು ಸಂಘದ ಅಧ್ಯಕ್ಷ ಕೆ.ಆರ್. ಶ್ರೀಯಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
'ಎತ್ತಿನಹೊಳೆ ಯೋಜನೆ- ಗೊಂದಲ ಸೃಷ್ಟಿಸುವ ಅಗತ್ಯವಿಲ್ಲ'
ಬೆಳ್ತಂಗಡಿ: ಎತ್ತಿನಹೊಳೆ ಯೋಜನೆಯ ಸಾಧಕ- ಬಾಧಕಗಳ ವಿಮರ್ಶೆಯಾಗುವ ಅವಶ್ಯಕತೆ ಏನಿದೆ ಮತ್ತು ಸಂಶಯ ನಿವಾರಣೆಯ ಹೆಸರಿನಲ್ಲಿ ಸಭೆಗಳನುಢಿ ಏರ್ಪಡಿಸಿ ಇನ್ನಷ್ಟು ಗೊಂದಲ ಸೃಷ್ಟಿಸುವ ಅಗತ್ಯವಿದೆಯೇ ಎಂದು ನಾಗರಿಕ ಸೇವಾ ಟ್ರಸ್ಟ್ ಅಧ್ಯಕ್ಷ ಕೆ. ಸೋಮನಾಥ ನಾಯಕ್ ಪತ್ರಿಕಾ ಹೇಳಿಕೆಯಲ್ಲಿ ಪ್ರಶ್ನಿಸಿದ್ದಾರೆ. ಯೋಜನೆ ರೂಪಿಸಿದವರ ಮತ್ತು ವಿರೋಧಿಸುವವರ ಮುಖಾಮುಖಿ ಚರ್ಚೆ ಆಗಬೇಕು, ಸಂಶಯ ನಿವಾರಣೆಗೆ 100 ಸಭೆ ಮಾಡಬೇಕು. ಮೊದಲಾದ ಬೇಡಿಕೆಗಳನ್ನು ಬೆಳ್ತಂಗಡಿ ತಾಲೂಕು ಹಿತರಕ್ಷಣಾ ವೇದಿಕೆಯವರು ಸರ್ಕಾರದ ಮುಂದಿಟ್ಟಿರುವ ಹಾಗೂ ಜನಸಂಪರ್ಕ ಸಾಧಿಸಲು ಸಮಿತಿಯೊಂದನ್ನು ರಚಿಸಿದ ಪತ್ರಿಕಾ ವರದಿ ನೋಡಿದೆವು. ಈ ಯೋಜನೆಯ ಕುರಿತು ಸಾಧಕಗಳ ವಿಮರ್ಶೆಯ ಅಗತ್ಯವಾದರೂ ಏನಿದೆ ಎಂದು ಹೇಳಿದ್ದಾರೆ. ಶಾಸಕ ಕೆ. ವಸಂತ ಬಂಗೇರ ಅವರು, ನೇತ್ರಾವತಿ ತಿರುವು ಯೋಜನೆ ಮತ್ತು ಇದರದ್ದೇ ಮೊದಲ ಹಂತದ ಎತ್ತಿನಹೊಳೆ ಯೋಜನೆಗೂ ಸ್ಪಷ್ಟವಾಗಿ ವಿರೋಧ ವ್ಯಕ್ತಪಡಿಸಿರುವುದು ಅಭಿನಂದನೀಯ. 2003ರಲ್ಲಿ ನೇತ್ರಾವತಿ ಉಳಿಸಿ ಪಾದಯಾತ್ರೆ ಉದ್ಘಾಟನೆ ಮಾಡಿದಾಗಲೂ ಇದೇ ನಿಲುವು ಅವರದ್ದಾಗಿತ್ತು ಎಂದು ನಾಯಕ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

