ದಕ್ಷಿಣ ಕನ್ನಡ

ವರದಕ್ಷಿಣೆ ಕಿರುಕುಳ: ಮೂವರ ಬಂಧನ

Published On :

ಸುಳ್ಯ: ವರದಕ್ಷಿಣೆ ಕಿರುಕುಳ ಆರೋಪದಲ್ಲಿ ಮಹಿಳೆಯೊಬ್ಬರು ನೀಡಿದ ದೂರಿನಂತೆ ಆಕೆಯ ಪತಿ, ಮಾವ ಹಾಗೂ ಅತ್ತೆಯನ್ನು ಪೊಲೀಸರು ಬಂಧಿಸಿದ್ದಾರೆ.  
ನಾಲ್ಕೂರು ಗ್ರಾಮದ ರವೀಂದ್ರ ಹಾಗೂ ಜಯಂತಿ ದಂಪತಿ ಪುತ್ರ ಪ್ರದೀಪನಿಗೆ 1 ವರ್ಷ 8 ತಿಂಗಳ ಹಿಂದೆ ಪುತ್ತೂರಿನ ಮೋಹಿನಿ(33) ಎಂಬಾಕೆಯೊಂದಿಗೆ ಮದುವೆಯಾಗಿತ್ತು. ಮದುವೆ ಸಂದರ್ಭ ಮೋಹಿನಿ ಮನೆಯವರು 10 ಪವನ್ ಚಿನ್ನ ಹಾಗೂ ರು. 80 ಸಾವಿರ ನಗದನ್ನು ವರದಕ್ಷಿಣೆಯಾಗಿ ಪ್ರದೀಪನ ಮನೆಯವರಿಗೆ ನೀಡಿದ್ದರು. ಪ್ರದೀಪ ಮಂಗಳೂರಿನಲ್ಲಿ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದು, ಮನೆಗೆ ಬಂದಾಗ ಪತ್ನಿಗೆ ನಿರಂತರ ಕಿರುಕುಳ ನೀಡುತ್ತಿದ್ದ. ಆಕೆಯ ಅತ್ತೆ ಮಾವ ಕೂಡಾ ಹೆಚ್ಚಿನ ವರದಕ್ಷಿಣೆ ನೀಡುವಂತೆ ಮೋಹಿನಿಗೆ ಕಿರುಕುಳ ನೀಡುತ್ತಿದ್ದರು. ವಾರದ ಹಿಂದೆ ಆಕೆಯ ಮೇಲೆ ಮೂವರು ಸೇರಿ ಹಲ್ಲೆ ಮಾಡಿ ಮನೆಯಿಂದ ಹೊರಗೆ ಹಾಕಿದ್ದು, ತೀವ್ರ ಗಾಯಗೊಂಡ ಆಕೆ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ರೈಲಿನಡಿಗೆ ಬಿದ್ದು ಮಹಿಳೆ ಸಾವು
ಪುತ್ತೂರು: ವಿವಾಹಿತ ಮಹಿಳೆಯೊಬ್ಬರು ಗುರುವಾರ ರಾತ್ರಿ ಕಬಕ ಸಮೀಪ ರೈಲಿನಡಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದ್ದು, ಇದು ಆತ್ಮಹತ್ಯೆಯಾಗಿರಬಹುದು ಎನ್ನಲಾಗಿದೆ.
 ಕೆಯ್ಯೂರು ಗ್ರಾಮದ ಕಲ್ಲಗುಡ್ಡೆ ನಿವಾಸಿ ದಿ. ಬಾಬು ರೈ ಎಂಬವರ ಪುತ್ರ ದಿ. ಉಮೇಶ್ ರೈ ತಿಂಗಳಾಡಿ ಎಂಬವರ ಮೊದಲ ಪತ್ನಿ, ಕೆಯ್ಯೂರು ಗ್ರಾಮದ ತೆಗ್ಗು ನಿವಾಸಿ ಮುತ್ತಪ್ಪ ಗೌಡರ ಪುತ್ರಿ ಸೌಮ್ಯ (26) ಮೃತರು.
ಇವರ ಪತಿ ಉಮೇಶ್ ರೈ ಕಳೆದ ಕೆಲ ವರ್ಷಗಳ ಹಿಂದೆ ನಿಗೂಢ ರೀತಿಯಲ್ಲಿ ಮೃತಪಟ್ಟಿದ್ದು, ಬಳಿಕ ಇದೊಂದು ಕೊಲೆ ಕೃತ್ಯ ಎಂದು ತಿಳಿದು ಬಂದಿತ್ತು. ಪತಿ ಮೃತಪಟ್ಟ ಬಳಿಕ ಸೌಮ್ಯ ಅವರು ಕೆಲ ಕಾಲ ಸಾಲ್ಮರ, ಬಳಿಕ ಕಬಕದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು.
ತನ್ನ ಮಕ್ಕಳಾದ 6ನೇ ತರಗತಿಯಲ್ಲಿ ಕಲಿಯುತ್ತಿರುವ ಕಾವ್ಯ (11) ಮತ್ತು 5ನೇ ತರಗತಿಯಲ್ಲಿ ಕಲಿಯುತ್ತಿರುವ ಶ್ರೇಯ (10) ಅವರನ್ನು ಮಂಗಳೂರು ಸಮೀಪದ ಕಂಕನಾಡಿಯಲ್ಲಿನ ಆಶ್ರಮವೊಂದರಲ್ಲಿ ವಿದ್ಯಾಬ್ಯಾಸಕ್ಕೆಂದು ಸೇರ್ಪಡೆಗೊಳಿಸಿದ್ದರು.
 ಈ ನಡುವೆ ಕಳೆದ ಒಂದು ವಾರದ ಹಿಂದೆ ಕಬಕದ ಬಾಡಿಗೆ ಮನೆಯನ್ನು ಖಾಲಿ ಮಾಡಿ ಕೆಯ್ಯೂರು ಗ್ರಾಮದ ತೆಗ್ಗು ಸಮೀಪದ ಕಲ್ಲಗುಡ್ಡೆಯಲ್ಲಿರು ಪತಿಯ ಮನೆಯಲ್ಲಿ ವಾಸವಾಗಿದ್ದರು. ಗುರುವಾರ ಬೆಳಗ್ಗೆ ಪತಿಯ ಮನೆಯಿಂದ ಕಬಕಕ್ಕೆ ಹೋಗುತ್ತೇನೆ ಎಂದು ಹೇಳಿ ತೆರಳಿದ್ದರು. ಬಳಿಕ ರಾತ್ರಿ ಸುಮಾರು 9 ಗಂಟೆಗೆ ಕಬಕ ಸಮೀಪದ ರೇಲ್ವೆ ಹಳಿಯಲ್ಲಿ ಸೌಮ್ಯ ಅವರ ಮೃತದೇಹ ಪತ್ತೆಯಾಗಿದೆ. ಸೌಮ್ಯ ಅವರು ರೈಲಿನಡಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಮೃತದೇಹವನ್ನು ರೇಲ್ವೆ ಪೊಲೀಸರು ಮಂಗಳೂರಿನ ಆಸ್ಪತ್ರೆಯ ಶವಾಗಾರದಲ್ಲಿರಿಸಿ, ಮನೆ ಮಂದಿಗೆ ವಿಷಯ ತಿಳಿಸಿದ್ದಾರೆ.
ಅಕ್ರಮ ಗೋಸಾಗಾಟ ವಾಹನ
ಪಲ್ಟಿ 8 ದನ, 2 ಕರು ಸಾವು
ಮಂಗಳೂರು: ಅಕ್ರಮ ಗೋಸಾಗಾಟ ಮಾಡುತ್ತಿದ್ದ ಪಿಕಪ್ ವಾಹನ ನಾಟೆಕಲ್ ತಿರುವು ಬಳಿ ಪಲ್ಟಿಯಾಗಿ 8 ದನ, 2 ಕರು ದಾರುಣವಾಗಿ ಸಾವನ್ನಪ್ಪಿದೆ. ವಾಹನದಲ್ಲಿ 18 ಗೋವುಗಳಿದ್ದವು. ಗುರುವಾರ ತಡರಾತ್ರಿ 2 ಗಂಟೆ ವೇಳೆಗೆ ವಾಹನ ಪಲ್ಟಿಯಾಗಿತ್ತು.
ಇದೇ ದಾರಿಯಲ್ಲಿ ಸಾಗುತ್ತಿದ್ದ ಹಾಲು ವಿತರಕ ವಾಹನದ ಚಾಲಕ ಚೇತನ್ ಮತ್ತು ಸುನಿಲ್ ಪಲ್ಟಿಯಾದ ವಾಹನವನ್ನು ಹಗ್ಗದ ಸಹಾಯದಲ್ಲಿ ಮೇಲೆತ್ತಿ ಉಳಿದ ಗೋವುಗಳನ್ನು ರಕ್ಷಿಸಿದರು. ಪಿಕಪ್ ವಾಹನದ ಚಾಲಕ ಮತ್ತು ಅದರಲ್ಲಿದ್ದವರು ಅಪಘಾತ ನಡೆದ ತಕ್ಷಣ ಪರಾರಿಯಾಗಿದ್ದರು.  
ಕೊಣಾಜೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ಗೋವುಗಳನ್ನು ಠಾಣೆಗೆ ತಂದು ಆರೈಕೆ ಮಾಡಿದ್ದಾರೆ.  ಮುಡಿಪು, ಕುರ್ನಾಡು, ಸಜಿಪ ಪ್ರದೇಶಗಳಿಂದ ಗೋವುಗಳನ್ನು ಕದ್ದು ಚೆಂಬುಗುಡ್ಡೆ ಕಸಾಯಿಖಾನೆಗೆ ಸಾಗಿಸಲಾಗುತ್ತಿತ್ತು ಎಂದು ತಿಳಿದು ಬಂದಿದೆ.
ನೇಣು ಬಿಗಿದು ವೃದ್ಧ ಆತ್ಮಹತ್ಯೆ
ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಶಿರಾಡಿ ಗ್ರಾಮದ ಕಜೆತ್ತೋಡಿ ಮನೆ ನಿವಾಸಿ ಜೋಗಿ ಮುಗೇರ (80) ಎಂಬವರು ನೇಣು ಬಿಗಿದು ಸಾವನ್ನಪ್ಪಿದ ಘಟನೆ ಶುಕ್ರವಾರ ಸಂಭವಿಸಿದೆ.
ಚರ್ಮರೋಗ ಪೀಡಿತನಾಗಿದ್ದ ಇವರು, ಜೀವನದಲ್ಲಿ ಜಿಗುಪ್ಸೆ ಹೊಂದಿ, ಕಳೆದ ಸೋಮವಾರ ಮನೆಯಲ್ಲಿ ನೇಣು ಬಿಗಿದು ಸಾವನ್ನಪ್ಪುವ ಯತ್ನದಲ್ಲಿ ಅವರನ್ನು ರಕ್ಷಿಸಿ, ಅಸ್ವಸ್ಥ ಸ್ಥಿತಿಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ಅವರು ಮೃತಪಟ್ಟರೆಂದು ತಿಳಿದು ಬಂದಿದೆ. ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.  
ಲೇಬರ್ ಕಾಲೋನಿ ಯುವತಿ ನಾಪತ್ತೆ
ಮಣಿಪಾಲ: ಇಲ್ಲಿನ ಹೆರ್ಗ ಗ್ರಾಮದ ವಿಜಯನಗರ ಲೇಬರ್ ಕಾಲೋನಿಯಿಂದ ವಲಸೆ ಕಾರ್ಮಿಕ ಯುವತಿಯೊಬ್ಬಳು ಕಾಣೆಯಾಗಿರುವ ಘಟನೆ ಮಂಗಳವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕಾಣೆಯಾದ ಮಹಿಳೆ ಅಕ್ಕಮ್ಮ (20), ಮೂಲತಃ ಕೊಪ್ಪಳ ಜಿಲ್ಲೆಯ ಯಲಬುರ್ಗಾ ಗ್ರಾಮದ ಗುದ್ದಪನಮಠ ಗ್ರಾಮದ ನಿವಾಸಿ, ನಾಗಯ್ಯ ಎಂಬವರ ತಂಗಿ.
ವಿಜಯ ನಗರ ಲೇಬರ್ ಕಾಲೋನಿಯಲ್ಲಿ ವಾಸವಾಗಿದ್ದು ಕೂಲಿ ಕೆಲಸ ಮಾಡುತ್ತಿದ್ದಳು.
ಸೆ.10ರಂದು ಬೆಳಗ್ಗೆ ಎಂದಿನಂತೆ ಕೆಲಸಕ್ಕೆ ಹೋದವಳು ಸಂಜೆ 4.30 ಗಂಟೆಗೆ ಕೆಲಸ ಮುಗಿಸಿ ಮನೆಗೆ ಬಾರದೇ ಕಾಣೆಯಾಗಿರುತ್ತಾಳೆ.
ಈ ಬಗ್ಗೆ ನಾಗಯ್ಯ ಅವರು ನೀಡಿದ ದೂರಿನಂತೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಲೆತ್ತೂರು ಕಾರಾಜೆ ಯುವತಿ ನಾಪತ್ತೆ
ವಿಟ್ಲ: ಮನೆಯಲ್ಲಿ ಸಂಭಾಳಿಸಲು ಕಷ್ಟವಾಗುತ್ತದೆಂಬ ಕಾರಣಕ್ಕೆ ಇನ್ನೊಬ್ಬರ ಮನೆಯಲ್ಲಿ ಬಿಟ್ಟ ಹುಡುಗಿ ನಾಪತ್ತೆಯಾಗಿದ್ದಾಳೆಂದು ತಾಯಿ ವಿಟ್ಲ ಠಾಣೆಗೆ ದೂರು ನೀಡಿದ ಘಟನೆ ಶುಕ್ರವಾರ ನಡೆದಿದೆ.
ಸಾಲೆತ್ತೂರು ಕಾರಾಜೆ ನಿವಾಸಿ ಕಮಲಾಕ್ಷಿ ಎಂಬವರ ಪುತ್ರಿ ಅಂಜಲಿ(17) ಸುಮಾರು ಮೂರು ತಿಂಗಳಿಂದ ತಾಯಿಯ ಕೋರಿಕೆಯಂತೆ ವೇಣೂರು ಅಣ್ಣಿಂಜ ನಿವಾಸಿ ಮಂಜುಳ ಎಂಬವರ ಮನೆಯಲ್ಲಿ ಕೆಲಸಕ್ಕೆ ಇದ್ದಳು ಎನ್ನಲಾಗಿದೆ. ಕಳೆದ ವಾರ ಒತ್ತಾಯದ ಮೇರೆಗೆ ತಾಯಿ ಮನೆಗೆ ಬಂದಿದ್ದು, ಮರಳಿ ಮಂಜುಳ ಅವರ ಮನೆಗೆ ಹೋಗುವುದಾಗಿ ತಾಯಿಯಲ್ಲಿ ತಿಳಿಸಿ ಎರಡು ದಿನದ ಮಟ್ಟಿಗೆ ಹೋಗಿದ್ದಳು. ಬಳಿಕ ಸೆ.8ರಿಂದ ನಾಪತ್ತೆಯಾಗಿದ್ದಾಳೆಂದು ತಾಯಿ ವಿಟ್ಲ ಠಾಣೆಗೆ ನೀಡಿ ದೂರಿನಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.