ಕಡಬದಲ್ಲಿ ಪುರಾತನ ವಿಗ್ರಹ ಪಾದ ಪತ್ತೆ
ಉಪ್ಪಿನಂಗಡಿ: ಕಡಬದ ಜಡೆಮನೆ ಎಂಬಲ್ಲಿ ಪುರಾತನ ಕಾಲದ ವಿಗ್ರಹದ ಪಾದವೊಂದು ಪತ್ತೆಯಾಗಿದ್ದು, ಇದರ ಹಿನ್ನೆಲೆ ತಿಳಿಯುವ ಕುತೂಹಲ ಪರಿಸರದ ಜನತೆಯಲ್ಲಿ ಮೂಡಿದೆ.
ಕಡಬದ ಶ್ರೀಕಂಠ ಸ್ವಾಮಿ ಶ್ರೀ ಮಹಾಗಣಪತಿ ದೇವಸ್ಥಾನ ಸಮೀಪದಲ್ಲಿರುವ ಕಡಬ ಬೈಲು ಜಡೆಮನೆ ಅರುಣ್ ಕುಮಾರ್ ಎಂಬವರ ಭೂಮಿಯಲ್ಲಿ ಈ ವಿಗ್ರಹ ಪಾದ ಪತ್ತೆಯಾಗಿದೆ. ಅವರ ಭೂಮಿಯಲ್ಲಿನ ಪಿಲಿ ಚಾಮುಂಡಿ ದೈವ ಹಾಗೂ ನಾಗ ಸಾನಿಧ್ಯದ ಸಮೀಪ ವಿಗ್ರಹದ ಸ್ವಲ್ಪ ಭಾಗ ಕಂಡಿತ್ತು. ಕುತೂಹಲದಿಂದ ಮಣ್ಣನ್ನು ಅಗೆದು ನೋಡಿದಾಗ ವಿಗ್ರಹದ ಪಾದ ಕಂಡುಬಂತು. ಪಾದದಲ್ಲಿ ಗೆಜ್ಜೆಯು ಕಂಡುಬಂದಿದ್ದು, ಇದು ದೇವಿ ಅಥವಾ ಬಾಲ ಶ್ರೀಕೃಷ್ಣ ವಿಗ್ರಹದ ಪಾದವಾಗಿರಬಹುದು ಎಂಬ ಶಂಕೆ ಮೂಡಿಸಿದೆ.
ಮಾತ್ರವಲ್ಲ, ಪಾದ ದೊರೆತಿರುವ ಶಿಲೆಯು ಪಾಣಿಪೀಠದಲ್ಲಿ ಜೋಡಿಸಲ್ಪಡುವ ರೀತಿಯಲ್ಲಿ ಕೆತ್ತನೆಗೆ ಒಳಗಾಗಿದೆ. ನಾನಾ ಊಹಾಪೋಹಗಳಿಗೆ ಕಾರಣವಾಗಿರುವ ಈ ವಿಗ್ರಹದ ನಿಖರ ಕಾಲಮಾನ ಯಾವುದು ಎಂಬುದನ್ನು ಪುರಾತತ್ವ ಇಲಾಖೆಯವರು ತಿಳಿಸಬೇಕಾಗಿದೆ.
ಉಜಿರೆ: ಬ್ರಿಟಿಷರ ಕಾಲದ ಬಾವಿ ಕುಸಿತ
ಬೆಳ್ತಂಗಡಿ: ಉಜಿರೆ ಪೇಟೆಯ ಮಾರಿಗುಡಿ ಸಮೀಪ 120 ವರ್ಷಗಳ ಇತಿಹಾಸವಿರುವ, ಬ್ರಿಟಿಷ್ ಸರ್ಕಾರದಿಂದ ನಿರ್ಮಿಸಲ್ಪಟ್ಟ ಬಾವಿ ಶುಕ್ರವಾರ ಮುಂಜಾನೆ ಕುಸಿದಿದೆ. ಕೆಂಪು ಕಲ್ಲಿನ ತಡೆಗೋಡೆ ಹಾಗೂ ಅಂಕಣದಿಂದ ಬಾವಿ ನಿರ್ಮಿತವಾಗಿತ್ತು. ಸುಮಾರು 68 ಅಡಿ ಆಳವಿರುವ ಬಾವಿ ನಿರಂತರವಾಗಿ ನೀರಿನ ಒರತೆ ಹೊಂದಿತ್ತು. ಉಜಿರೆ ಗ್ರಾಮ ಪಂಚಾಯಿತಿ ಸುಪರ್ದಿಗೆ ಒಳಪಟ್ಟ ಈ ಬಾವಿ ನೀರನ್ನು ಸುತ್ತಮುತ್ತಲಿನ ನಾಗರಿಕರು, ಅಂಗಡಿ, ಹೊಟೇಲ್ನವರು ಉಪಯೋಗಿಸುತ್ತಿದ್ದರು. ಗ್ರಾಮ ಪಂಚಾಯಿತಿ ವತಿಯಿಂದ ಮನೆ, ಅಂಗಡಿ ಮುಂಗಟ್ಟುಗಳಿಗೆ ಕೊಳವೆ ಮೂಲಕ ನೀರು ಸರಬರಾಜು ಮಾಡುವ ಮುನ್ನ ಉಜಿರೆ ಪೇಟೆಯಲ್ಲಿರುವ ಎಲ್ಲರೂ ಈ ಬಾವಿಯ ನೀರನ್ನೇ ಆಶ್ರಯಿಸಿದ್ದರು.
ಗ್ರಾ.ಪಂ. ವತಿಯಿಂದ 3 ವರ್ಷಗಳ ಹಿಂದೆ ಬಾವಿ ನೀರು ಸ್ವಚ್ಛಗೊಳಿಸಲಾಗಿತ್ತು. ಈ ಸಂದರ್ಭ ಬಾವಿ ನೀರನ್ನು ಎಷ್ಟೇ ಖಾಲಿ ಮಾಡಿದರೂ ಬತ್ತುತ್ತಿರಲಿಲ್ಲ. ಬೇಸಗೆ ಕಾಲದಲ್ಲೂ ಸುತ್ತಮುತ್ತಲಿನ ಬಾವಿಗಳಲ್ಲಿ ನೀರು ಬತ್ತಿದರೂ ಈ ಬಾವಿಯಲ್ಲಿ 10 ಅಡಿಗಳಷ್ಟಾದರೂ ನೀರು ಸಿಗುತಿತ್ತು. ಇದೀಗ ಈ ಬಾವಿ ಇತಿಹಾಸ ಪುಟ ಸೇರುವ ಹಂತದಲ್ಲಿದೆ.
ಇಂದು ಗುಲ್ವಾಡಿ ನೆನಪು ಕಾರ್ಯಕ್ರಮ
ಮರವಂತೆ: ನಡುಮನೆ ಸಾಹಿತ್ಯ, ಸಾಂಸ್ಕೃತಿಕ ಸಲ್ಲಾಪದ 79ನೇ ಕಾರ್ಯಕ್ರಮದ ಅಂಗವಾಗಿ ಸೆ.15ರಂದು ಗುಲ್ವಾಡಿ ಎಂ.ಜಿ.ಎಂ. ರಸ್ತೆಯ ತೋಟದ ಮನೆಯಲ್ಲಿ 'ಸಂತೋಷ್ ಕುಮಾರ್ ಗುಲ್ವಾಡಿ- ಒಂದು ನೆನಪು' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಮಧ್ಯಾಹ್ನ 2ರಿಂದ 5ರತನಕ ನಡೆಯುವ ಕಾರ್ಯಕ್ರಮವನ್ನು ಶಾಸಕ ಕೆ. ಗೋಪಾಲ ಪೂಜಾರಿ ಉದ್ಘಾಟಿಸುವರು. ನಿವೃತ್ತ ಉಪನ್ಯಾಸಕ ಎಸ್. ಜನಾರ್ದನ ಅಧ್ಯಕ್ಷತೆ ವಹಿಸುವರು. ಲೇಖಕ, ಸಾಹಿತ್ಯ ಪರಿಚಾರಕ ಉಡುಪಿಯ ಕುಗೋ ಮತ್ತು ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಮಿತಿ ಉಪಾಧ್ಯಕ್ಷ, ಹಿರಿಯ ಸಮಾಜ ಸೇವಕ ಹಾಜಿ ಕೆ.ಎ. ಮಹಮದ್ ಮುನೀರ್ ಅವರನ್ನು ಶಾಸಕ ಕೆ. ಪ್ರತಾಪಚಂದ್ರ ಶೆಟ್ಟಿ ಸನ್ಮಾನಿಸುವರು. ಮಾಜಿ ಶಾಸಕ ಬಿ. ಅಪ್ಪಣ್ಣ ಹೆಗ್ಡೆ ಆಂಟಿಕ್ ಗ್ಯಾಲರಿ ಉದ್ಘಾಟಿಸುವರು. ನಡುಮನೆಯ ಪ್ರಮುಖರು, ಸಾಹಿತಿಗಳು, ವಿವಿಧ ರಂಗಗಳ ಗಣ್ಯರನೇಕರು ಪಾಲ್ಗೊಳ್ಳುವರು ಎಂದು ಕಾರ್ಯಕ್ರಮದ ಸಂಚಾಲಕ ಯಾಕೂಬ್ ಖಾದರ್ ಗುಲ್ವಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
'ಗೋರಾಷ್ಟ್ರದ ಅನಭಿಷಿಕ್ತ ಸಾಮ್ರಾಟ್' ಪುಸ್ತಕ ಇಂದು ಲೋಕಾರ್ಪಣೆ
ವಿಟ್ಲ: ರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿಯವರ ರಾಷ್ಟ್ರವ್ಯಾಪಿ ಗೋ ಸಂರಕ್ಷಣಾ ಅಂದೋಲನಕ್ಕೆ ಪ್ರೇರಣೆ ನೀಡಿ, ಗೋ ಸಂರಕ್ಷಣೆ ಅಂದೋಲನಕ್ಕೆ ನಾಂದಿ ಹಾಕಿರುವ ಮಹಾನಂದಿಯ ಕುರಿತಾದ 'ಗೋರಾಷ್ಟ್ರದ ಅನಭಿಷಿಕ್ತ ಸಾಮ್ರಾಟ್' ಪುಸ್ತಕ ಸೆ. 15 ರಂದು ಲೋಕಾರ್ಪಣೆಗೊಳ್ಳಲಿದೆ.
ಪೆರಾಜೆ ಮಾಣಿ ರಾಮಚಂದ್ರಾಪುರ ಮಠದಲ್ಲಿ ತಮ್ಮ 20 ನೇ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಅಂದು ಅಲ್ಲಿ ಏರ್ಪಡಿಸಿರುವ ಬೃಹತ್ ಯುವ ಸಮಾವೇಶದ ಸಂದರ್ಭ ಲೋಕಾರ್ಪಣೆ ಮಾಡಲಿದ್ದಾರೆ.
ಶ್ರೀಮಠದ ಕಾಮದುಘಾ ಯೋಜನೆಗೆ ಸ್ಪೂರ್ತಿಯ ನೆಲೆಯಾದ ಮಹಾನಂದಿಯ ಜೀವನ ಕುರಿತಾದ ಪುಸ್ತಕವನ್ನು ಲೇಖಕ ವಿದ್ವಾನ್ ಜಗದೀಶ ಶರ್ಮಾ ರೂಪುಗೊಳಿಸಿದ್ದಾರೆ. ಶ್ರೀಮಠದ ಭಾರತೀ ಪ್ರಕಾಶನ ಹೊರ ತರುತ್ತಿರುವ ಈ ಪುಸ್ತಕ ಲೋಕಾರ್ಪಣೆ ವೇಳೆ ಗೋ ಪ್ರೇಮಿಗಳು ಆಗಮಿಸಬೇಕು ಎಂದು ಭಾರತೀ ಪ್ರಕಾಶನ ಪ್ರಕಟಣೆಯಲ್ಲಿ ತಿಳಿಸಿದೆ.
25ರಿಂದ ಉಡುಪಿ ಕೃಷ್ಣ ಮಠದಲ್ಲಿ ರಾಷ್ಟ್ರೀಯ ಜಾನಪದ ಕಲಾವೈಭವ
ಉಡುಪಿ: ಇಲ್ಲಿನ ಶ್ರೀ ಕೃಷ್ಣ ಮಠ, ಪರ್ಯಾಯ ಶ್ರೀ ಸೋದೆ ವಾದಿರಾಜ ಮಠ ವತಿಯಿಂದ ಸೆ.25ರಿಂದ 29ರವರೆಗೆ ರಾಷ್ಟ್ರೀಯ ಜಾನಪದ ಕಲಾವೈಭವ ಕಾರ್ಯಕ್ರಮ ಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ ಎಂದು ಮಧ್ವೇಶ ತಂತ್ರಿ ತಿಳಿಸಿದ್ದಾರೆ. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ 20 ರಾಜ್ಯಗಳಿಂದ ಸುಮಾರು 24 ಜಾನಪದ ತಂಡಗಳು ಹಾಗೂ 500ಕ್ಕೂ ಹೆಚ್ಚು ಜಾನಪದ ಕಲಾವಿದರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸೆ.25ರಂದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಉದ್ಘಾಟನೆ ನೆರವೇರಿಸಲಿದ್ದಾರೆ. ಶ್ರೀಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಮತ್ತು ಪರ್ಯಾಯ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಭಾಗವಹಿಸಲಿದ್ದಾರೆ. ಉದ್ಘಾಟನಾ ಪೂರ್ವದಲ್ಲಿ ಸಂಜೆ 5 ಗಂಟೆಗೆ ಜೋಡುಕಟ್ಟೆಯಿಂದ ಎಲ್ಲ ಕಲಾವಿದರು ಆಯಾ ರಾಜ್ಯವಾರು ತಂಡಗಳಲ್ಲಿ ಆಕರ್ಷಕ ಮೆರವಣಿಗೆ ಮೂಲಕ ಶ್ರೀಕೃಷ್ಣ ಮಠದ ರಾಜಾಂಗಣಕ್ಕೆ ಆಗಮಿಸಲಿದ್ದಾರೆ. ಕಲಾಪ್ರದರ್ಶನವು ಪ್ರತಿ ದಿನ ಸಂಜೆ 7ರಿಂದ 10 ಗಂಟೆಯವರೆಗೆ ನಡೆಯಲಿದೆ ಎಂದು ತಿಳಿಸಿದರು. ಹೆರಂಜೆ ಕೃಷ್ಣಭಟ್, ಡಾ. ರಾಮಪ್ಪ ಇದ್ದರು.
ಮಂಗಳೂರು ದಸರಾ ಉದ್ಘಾಟನೆಗೆ ಡಾ.ವೀರೇಂದ್ರ ಹೆಗ್ಗಡೆ
ಮಂಗಳೂರು: ಈ ಬಾರಿ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಲ್ಲಿ ಮಂಗಳೂರು ದಸರಾ ಉತ್ಸವವನ್ನು ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಉದ್ಘಾಟಿಸಲಿದ್ದಾರೆ ಎಂದು ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.10ರಂದು ಸಂಜೆ 5.30ಕ್ಕೆ ಡಾ.ಹೆಗ್ಗಡೆ ಉದ್ಘಾಟಿಸಿ ದಸರಾ ಉತ್ಸವಕ್ಕೆ ಚಾಲನೆ ನೀಡುವರು ಎಂದರು.
ನೆಹರೂ ಯುವಕೇಂದ್ರಕ್ಕೆ6ನೇ ಬಾರಿ ರಾಜ್ಯ ಪ್ರಶಸ್ತಿ
ಮಂಗಳೂರು: ದ.ಕ. ಜಿಲ್ಲೆಯ ಯುವಜನರಲ್ಲಿ ಸಂಚಲನ ಉಂಟು ಮಾಡುವಲ್ಲಿ ಉತ್ತಮ ಕಾರ್ಯಚರಣೆ ನಿರ್ವಹಿಸುತ್ತಿರುವ ನೆಹರು ಯುವ ಕೇಂದ್ರವು ಕಳೆದ 8 ವರ್ಷಗಳಲ್ಲಿ 6ನೇ ರಾಜ್ಯ ಪ್ರಶಸ್ತಿ ಪಡೆದಿದೆ ಹಾಗೂ ಸುಳ್ಯದ ಶ್ರೀ ಲಕ್ಷ್ಮಿನಾರಾಯಣ ಎಂಬವರಿಗೆ ರಾಷ್ಟ್ರ ಪ್ರಶಸ್ತಿ ಲಭಿಸಿದ್ದು, ಇದು ಜಿಲ್ಲೆಗೆ ಹೆಮ್ಮೆ ತಂದಿದೆ ಎಂದು ಜಿಲ್ಲಾಧಿಕಾರಿ ಎನ್.ಪ್ರಕಾಶ್ ಹೇಳಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ನಡೆದ ನೆಹರು ಯುವ ಕೇಂದ್ರದ 2013-14ನೇ ಸಾಲಿನ ಕ್ರಿಯಾ ಯೋಜನೆ ಅನುಷ್ಠಾನ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ಮಾತನಾಡಿ 2013-14 ನೇ ಸಾಲಿನಲ್ಲಿ ಒಟ್ಟು 53 ವಿವಿಧ ಕಾರ್ಯಕ್ರಮಗಳಿಗೆ ಒಟ್ಟು ರು. 6,06,500 ನಿಗದಿಪಡಿಸಲಾಗಿದೆ. ಅಲ್ಲದೆ ಈ ಬಾರಿ ಹದಿಹರೆಯದ ಹೆಣ್ಣು ಮಕ್ಕಳಲ್ಲಿ ಶುಚಿತ್ವದ ಕುರಿತು ನೆಹರು ಯುವ ಕೇಂದ್ರ ಅರಿವು ಮೂಡಿಸುವ ಅಭಿಯಾನ ಹಮ್ಮಿಕೊಳ್ಳಲಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

