ಅವಧಿ ಮುಗಿದರೂ ಅಧಿಕ ದರ ವಸೂಲಿ!
ಮಂಗಳೂರು: ಪ್ರಯಾಮದ ಅಂತರದ (ಕಿಲೋ ಮೀಟರ್) ದರವನ್ನೇ ಶೇ.10 ಜಾಸ್ತಿ ಮಾಡಿ ಕೊಂಕಣ ರೇಲ್ವೆ ಕಾರ್ಪೋರೇಷನ್ ಪ್ರಯಾಣಿಕರಿಂದ ಹಣ ಕೀಳುತ್ತಿದೆ.
ಮಾರ್ಗ ನಿರ್ಮಾಣ ವೆಚ್ಚ ಸರಿದೂಗಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೊಂಕಣ ರೇಲ್ವೆ ಸಮಾಜಾಯಿಷಿ ನೀಡುತ್ತಿದ್ದರೂ ಭಾರತೀಯ ರೇಲ್ವೆ ಜತೆಗಿನ 10 ವರ್ಷ ಒಪ್ಪಂದ ಕೊನೆಗೊಂಡರೂ ಮತ್ತೆ ನವೀಕರಣವಾಗಿಲ್ಲ. ಆದ್ದರಿಂದ ದುಬಾರಿ ಕಿ.ಮೀ. ತೋರಿಸಿ ಪ್ರಯಾಣಿಕರಿಂದ ದರ ಕೀಳುವುದು ಯಥಾವತ್ ಮುಂದುವರಿದಿದೆ.
ಏನಿದು ಸಮಸ್ಯೆ?: ಕಾಸರಗೋಡಿನ ಶಿಕ್ಷಕ ರವಿಶಂಕರ ದೊಡ್ಡಮಾಣಿ ಇತ್ತೀಚೆಗೆ ಕೊಂಕಣ ಮಾರ್ಗದಲ್ಲಿ ಮಂಗಳೂರು ಸೆಂಟ್ರಲ್ನಿಂದ ಕುಮಟಾವರೆಗೆ ಪ್ರಯಾಣಿಸಿದ್ದರು. ಅವರ ಟಿಕೆಟ್ನಲ್ಲಿ ಅಂತರ 276 ಕಿ.ಮೀ. ಎಂದು ನಮೂದಿಸಲಾಗಿತ್ತು. ಈ ಬಗ್ಗೆ ರೇಲ್ವೆ ಅಧಿಕಾರಿಗಳಲ್ಲಿ ಪ್ರಶ್ನಿದಾಗ ಅವರಿಂದ ಸ್ಪಷ್ಟ ಉತ್ತರ ಬಂದಿರಲಿಲ್ಲ.
ಸರ್ವೇ ಆಫ್ ಇಂಡಿಯಾ ಮ್ಯಾಪ್ನಲ್ಲಿ ರಸ್ತೆ ಮಾರ್ಗವಾಗಿ ಕುಮಟಾಗೆ 197 ಕಿ.ಮೀ. ದೂರ. ಮಂಗಳೂರು-ಕಾರವಾರ ನಡುವಿನ ದೂರ ರೇಲ್ವೆ ಪ್ರಕಾರ 355 ಕಿ.ಮೀ. ರಸ್ತೆ ಮಾರ್ಗದಲ್ಲಿ 276 ಕಿ.ಮೀ. ಕೊಂಕಣ ರೇಲ್ವೆಯಲ್ಲಿ 100-200 ಕಿ.ಮೀ.ನಷ್ಟು ದೂರ ಹೆಚ್ಚಳಕ್ಕೆ ಕಾರಣ ಏನು ಎಂದು ಕಾರಣ ಹುಡುಕಿದಾಗ ಅಚ್ಚರಿಯ ಅಂಶ ಗಮನಕ್ಕೆ ಬಂದಿದೆ.
ವೆಚ್ಚ ಸರಿದೂಗಿಲು ಹೆಚ್ಚಳ: ಕೇಂದ್ರ ರೇಲ್ವೆ ಸಚಿವರಾಗಿದ್ದ ಜಾರ್ಜ್ ಫೆರ್ನಾಂಡಿಸ್ ಕೊಂಕಣ ರೇಲ್ವೆ ಕಾರ್ಪೊರೇಷನ್ ಲಿಮಿಟೆಡ್(ಕೆಆರ್ಸಿಎಲ್) 1989ರಲ್ಲಿ ಸ್ಥಾಪಿಸಿದ್ದರು.1998 ಮಾ.21ರಂದು ಕೊಚ್ಚಿನ್ನಿಂದ ಕುರ್ಲಾ ವರೆಗೆ ನೇತ್ರಾವತಿ ಎಕ್ಸ್ಪ್ರೆಸ್ ಪ್ರಥಮ ರೈಲು ಈ ಮಾರ್ಗದಲ್ಲಿ ಸಂಚರಿಸಿತು. ಕಾಮಗಾರಿ ವೆಚ್ಚ ದುಬಾರಿಯಾದ ಕಾರಣ ಕಿಲೋ ಮೀಟರ್ನಲ್ಲಿ ಶೇ.10 ಹೆಚ್ಚಳ ತೋರಿಸಿ ವೆಚ್ಚ ಸರಿದೂಗಿಸಲು ಉದ್ದೇಶಿಸಿದ್ದರು.
ಅದರಂತೆ 1990ರಿಂದ 10 ವರ್ಷ ವರೆಗೆ ಇದೇ ಮಾದರಿಯಲ್ಲಿ ಪ್ರಯಾಣ ದರ ನಿಗದಿಗೆ ಭಾರತೀಯ ರೇಲ್ವೆ ಜತೆ ಕೊಂಕಣ ರೈಲ್ವೆ ಒಪ್ಪಂದ ಮಾಡಿಕೊಂಡಿತ್ತು. 2000ನೇ ಸಾಲಿನಲ್ಲಿ ಮತ್ತೆ 10 ವರ್ಷಕ್ಕೆ ಒಪ್ಪಂದ ಮುಂದುವರಿಸಲಾಗಿದೆ. ಈಗ ಒಪ್ಪಂದ ಮುಗಿದು 3 ವರ್ಷ ಕಳೆದರೂ ಹಿಂದಿನಂತೆಯೇ ಅಧಿಕ ಕಿ.ಮೀ. ತೋರಿಸಿ ದರ ವಸೂಲಿ ಮುಂದುವರಿದಿದೆ.
ಆದಾಯ ಖೋತಾ: ಇಷ್ಟಾದರೂ ಕೊಂಕಣ ರೇಲ್ವೆ ಈಗಲೂ ಲಾಭದಲ್ಲಿ ನಡೆಯುತ್ತಿಲ್ಲ. ರೋಹಾದಿಂದ ಮಂಗಳೂರಿನ ತೋಕೂರು(1038 ಕಿ.ಮೀ., ವಾಸ್ತವ 740 ಕಿ.ಮೀ.) ವರೆಗೆ ಕೊಂಕಣ ಮಾರ್ಗಕ್ಕೆ ಸೇರಿದೆ. ದಿವಾದಿಂದ ರೋಹಾ ವರೆಗೆ 120 ಕಿ.ಮೀ. ಭಾರತೀಯ ರೈಲ್ವೆಗೆ ಸೇರಿದೆ. ತೋಕೂರಿನಿಂದ ಮಂಗಳೂರು ದಕ್ಷಿಣ ರೇಲ್ವೆಗೆ ಸೇರಿದೆ.
ಇದರ ಮಧ್ಯೆ ಇರುವ ಕೊಂಕಣ ರೇಲ್ವೆಗೆ ಆದಾಯ ಹಂಚಿಕೆಯಾಗಬೇಕು. ಮುಂಬೈಗೆ ರೋರೋ ಸರಕು ಸೇವೆ ಇದ್ದರೂ ನಿರೀಕ್ಷಿತ ಆದಾಯ ಇಲ್ಲದೆ ಕೊಂಕಣ ರೇಲ್ವೆ ನಷ್ಟದಲ್ಲಿ ಸಾಗುತ್ತಿದೆ. ಹಾಗಾಗಿ ಒಪ್ಪಂದ ಮುಗಿದರೂ ದುಬಾರಿ ಪ್ರಯಾಣದರ ಮುಂದುವರಿಯುತ್ತಿದೆ ಎನ್ನುತ್ತದೆ ರೇಲ್ವೆ ಮೂಲಗಳು.
ವ್ಯಾಪ್ತಿ ವಿಸ್ತಾರ ಬೇಡಿಕೆ: ನಷ್ಟದಿಂದ ಪಾರಾಗಲು ಪ್ರತ್ಯೇಕ ಮಂಗಳೂರು ವಿಭಾಗಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಕೊಂಕಣ ರೇಲ್ವೆ ವ್ಯಾಪ್ತಿಯನ್ನು ರೋಹಾದಿಂದ ಉಳ್ಳಾಲ ಸೇತುವೆ ವರೆಗೆ ವಿಸ್ತರಿಸಬೇಕು. ಉಳ್ಳಾಲ-ಮಡ್ಗಾಂವ್ ಪ್ರದೇಶವನ್ನು ಮಂಗಳೂರು ವಿಭಾಗಕ್ಕೆ ಸೇರಿಸಬೇಕು. ಇದರಿಂದ ಆದಾಯ ಹೆಚ್ಚಳಗೊಂಡು ಕೊಂಕಣ ರೈಲ್ವೆ ಲಾಭದಲ್ಲಿ ಮುನ್ನಡೆಯಲು ಸಾಧ್ಯ. ಈ ಬಗ್ಗೆ ಕೇಂದ್ರ ರೈಲ್ವೆಗೆ ಮನವಿ ಸಲ್ಲಿಸಲಾಗಿದೆ ಎನ್ನುತ್ತಾರೆ ಉಡುಪಿ ರೇಲ್ವೆ ಯಾತ್ರಿಕರ ಸಂಘ ಅಧ್ಯಕ್ಷ ಆರ್.ಎಲ್.ಡಯಾಸ್.
ಕಿಲೋ ಮೀಟರ್ನ್ನು ಹೆಚ್ಚು ತೋರಿಸಿ, ಆ ಮೂಲಕ ಅಧಿಕ ದರ ವಸೂಲಿ ಮಾಡುವ ಕೊಂಕಣ ರೇಲ್ವೆ ಕ್ರಮ ಸರಿಯಲ್ಲ. ಹಾಗಾದರೆ ಕಿಲೋ ಮೀಟರ್ ಎನ್ನುವುದು ಯಾಕೆ. ಕಿಲೋ ಮೀಟರ್ ಸರಿಯಾದ್ದನ್ನೇ ತೋರಿಸಲಿ. ಬೇಕಾದರೆ ಪ್ರಯಾಣ ದರ ಹೆಚ್ಚಳ ಮಾಡಲಿ.
- ರವಿಶಂಕರ ದೊಡ್ಡಮಾಣಿ, ರೈಲು ಪ್ರಯಾಣಿಕ
-ಆತ್ಮಭೂಷಣ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

