ದಾಳಿ ಎದುರಿಸಿ ಕ್ರೈಸ್ತ ಸಮಾಜ ಸಂಘಟನೆ: ಮಾರ್ಗರೆಟ್ ಆಳ್ವ
ಮಂಗಳೂರು: ಅನೇಕ ವರ್ಷಗಳಿಂದ ಕೈಸ್ತ ಸಮಾಜದ ಮೇಲೆ ನಡೆಯುತ್ತಿದ್ದ ವಿವಿಧ ದಾಳಿ ಎದುರಿಸಿ ಕ್ರೈಸ್ತ ಸಂಘಟನೆ ಬೆಳೆದುಬಂದಿದೆ ಎಂದು ರಾಜಸ್ತಾನ ರಾಜ್ಯಪಾಲೆ ಮಾರ್ಗರೆಟ್ ಆಳ್ವ ಹೇಳಿದ್ದಾರೆ.
ನಗರದ ಮಿಲಾಗ್ರಿಸ್ ಸಭಾಂಗಣದಲ್ಲಿ ಭಾನುವಾರ ದ.ಕ.ಕೆಥೋಲಿಕ್ ಎಸೋಸಿಯೇಶನ್‌ನ(ಕಾಸ್ಕ್)ನೂರನೇ ವರ್ಷಾಚರಣೆ ಸಂಭ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕ್ರೈಸ್ತ ಸಮುದಾಯ ಅನೇಕ ಸಮಸ್ಯೆಗಳನ್ನು ಎದುರಿಸಿಯೂ ಸಮಾಜಕ್ಕೆ ಸಾಕಷ್ಟು ಕೊಡುಗೆ ನೀಡಿದೆ. ಶಿಕ್ಷಣ, ಆರೋಗ್ಯ ಹಾಗೂ ಸಾಮಾಜಿಕ ರಂಗದಲ್ಲಿ ತನ್ನದೇ ಛಾಪು ಮೂಡಿಸಿದ್ದು, ಸಾವಿರಾರು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಜಾತ್ಯತೀಯ ಹಾಗೂ ನಾಯಕತ್ವ ಗುಣ ಬೆಳೆಸಿದೆ. ಇಂಥ ಸಾಧನೆ ಮಧ್ಯೆ ಈ ಸಂಘಟನೆ ಶತಮಾನ ಪೂರೈಸಿರುವುದು ಶ್ಲಾಘನೀಯ ಎಂದರು.
ಸಾಂಸ್ಕೃತಿಕವಾಗಿ ಸಂಪದ್ಭರಿತವಾದ ಕೊಂಕಣಿ ಭಾಷೆಯ ಹಿರಿಮೆಯನ್ನು ಕೊಂಡಾಡಿದ ಮಾರ್ಗರೆಟ್, ಕೊಂಕಣಿ ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸುವಲ್ಲಿ ಕೊಂಕಣಿ ಸಂಘಟನೆಗಳ ಪರಿಶ್ರಮವನ್ನು ನೆನಪಿಸಿದರು.
ಸ್ಮರಣ ಸಂಚಿಕೆ ಬಿಡುಗಡೆ: ಇದೇ ಸಂದರ್ಭ, 'ಕಾಸ್ಕ್ ಶತಮಾನ ಚರಿತ್ರೆ ಮತ್ತು ಮಂಗಳೂರಿನ ಕೆಥೋಲಿಕ್ ಸಮುದಾಯ' ಕುರಿತ ಸ್ಮರಣ ಸಂಚಿಕೆಯನ್ನು ಮಾರ್ಗರೆಟ್ ಆಳ್ವ ಬಿಡುಗಡೆಗೊಳಿಸಿದರು.
ವೆಬ್‌ಸೈಟ್‌ಗೆ ಚಾಲನೆ ನೀಡಿ ಮಾತನಾಡಿದ ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ಆಸ್ಕರ್ ಫೆರ್ನಾಂಡಿಸ್, ಮಾರ್ಗರೆಟ್ ಆಳ್ವರ ಹಿರಿಯರಾದ ಜೋಕಿಂ ಆಳ್ವ ಮತ್ತು ವೈಲೆಟ್ ಆಳ್ವರ ಸೇವೆಯನ್ನು ಸ್ಮರಿಸಿ, ಕ್ರೈಸ್ತ ಜನತೆ ದೇಶಕ್ಕೆ ಸೇವೆ ನೀಡುವಲ್ಲಿ ಹಿಂದೆ ಬಿದ್ದಿಲ್ಲ. ಶಿಕ್ಷಣ ಕ್ಷೇತ್ರಕ್ಕೆ ಕ್ರೈಸ್ತ ಸಮುದಾಯ ಗಮನಾರ್ಹ ಕೊಡುಗೆ ನೀಡಿದೆ ಎಂದರು.
25 ಮಂದಿ ಶಾಲಾ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ವಿತರಿಸಿ ಮಾತನಾಡಿದ ಮಂಗಳೂರು ದಕ್ಷಿಣ ಶಾಸಕ ಜೆ.ಆರ್.ಲೋಬೋ, ನೂರು ವರ್ಷ ತುಂಬಿದ ಈ ಸಂಘಟನೆ ಮುಂದೆ ಹೇಗೆ ಮುಂದಡಿ ಇಡಬೇಕು ಎಂಬುದನ್ನು ಚಿಂತಿಸಬೇಕಾಗಿದೆ. ಒಗ್ಗಟ್ಟಾಗಿ ಕೆಲಸ ಮಾಡುವುದರಿಂದ ಸಮಾಜದ ಜತೆ ದೇಶದ ಅಭಿವೃದ್ಧಿ ಸಾಧ್ಯ ಎಂದರು.
ಪುಣೆ ರೋಸರಿ ಎಜುಕೇಶನ್ ಗ್ರೂಪ್ ಅಧ್ಯಕ್ಷ ವಿವೇಕ್ ಅರ್ಹಾನಾ ಆಗಮಿಸಿದ್ದರು. ಮಂಗಳೂರು ಬಿಷಪ್ ಡಾ.ಅಲೋಶಿಯಸ್ ಪೌಲ್ ಡಿಸೋಜ ಅಧ್ಯಕ್ಷತೆ ವಹಿಸಿದ್ದರು.
ಕಾಸ್ಕ್ ಅಧ್ಯಕ್ಷ ಡಾ.ಡೆರಿಕ್ ಲೋಬೋ ಸ್ವಾಗತಿಸಿ, ಕಾರ್ಯದರ್ಶಿ ಕ್ಯಾ.ಜೋನ್ ಮಿನೇಜಸ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

