ಬುದ್ಧಿಮಾಂದ್ಯನ ಪೋಷಣೆ: ಶಿಕ್ಷಕಿ ತಾಯಿಗೆ ರಜೆ ನಿರಾಕರಣೆ
-ಆತ್ಮಭೂಷಣ್
ಕ.ಪ್ರ.ವಾರ್ತೆ ಮಂಗಳೂರು ಸೆ. 22
ಈತನ ಹೆಸರು ದೀಪಕ್ ಶೆಣೈ, ವಯಸ್ಸು 17 ವರ್ಷ, ವರ್ತನೆ ಮಾತ್ರ 4 ವರ್ಷದ ಮಕ್ಕಳದ್ದು. ಶಿಕ್ಷಕಿಯಾದ ತಾಯಿಯೊಂದಿಗೆ ಶಾಲೆಗೆ ಹೋಗುತ್ತಾನೆ, ಸುಮ್ಮನೆ ಮಕ್ಕಳ ಜತೆ ತರಗತಿಯಲ್ಲಿ ಕೂರುತ್ತಾನೆ. ಪಾಠ ಅರ್ಥವಾಗುವುದಿಲ್ಲ, ಬರೆಯಲಾಗುವುದಿಲ್ಲ. ಸಂಜೆವರೆಗೆ ತರಗತಿಯಲ್ಲಿದ್ದು ವಾಪಾಸ್ ಅಮ್ಮನ ಜತೆಯೇ ಮನೆಗೆ ಬರುತ್ತಾನೆ.
ದೀಪಕ್ ಬೌದ್ಧಿಕವಾಗಿ ಬೆಳೆದಿಲ್ಲ. ಹಾಗಾಗಿ ಜತೆಯಲ್ಲಿ ಸಹಾಯಕ್ಕೆ ಯಾರಾದರೂ ಬೇಕೇ ಬೇಕು. ತಾಯಿ ಮಂಗಳೂರಿನ ಕೈಕುಡೆ ಸರ್ಕಾರಿ ಶಾಲಾ ಶಿಕ್ಷಕಿ. ತಂದೆ ಕಿನ್ನಿಗೋಳಿಯಲ್ಲಿ ಬ್ಯಾಂಕ್ ಉದ್ಯೋಗಿ. ಮನೆಯಲ್ಲಿ ಈತನನ್ನು ನೋಡಿಕೊಳ್ಳಲು ಬೇರೆ ಯಾರೂ ಇಲ್ಲ. ಆದ್ದರಿಂದ ತಾಯಿ ಶಿಕ್ಷಕಿಯೇ ಪ್ರತಿನಿತ್ಯ ಜತೆಯಲ್ಲಿ ಶಾಲೆಗೆ ಕರೆದುಕೊಂಡು ಹೋಗುತ್ತಾರೆ.
ಶಾಲಾ ಹಂತದಲ್ಲಿ ಮಕ್ಕಳು ಮನೆಯಲ್ಲಿರಬಾರದು ಎಂಬ ಒಂದೇ ಕಾರಣಕ್ಕೆ ಈತನನ್ನು ಶಾಲೆಗೆ ಸೇರಿಸಿದ್ದಾರೆ. ಆದರೆ, ಸ್ವಲ್ಪವೂ ಪ್ರಯೋಜನವಾಗಿಲ್ಲ. ಆದರೆ, ಈತನ ಭವಿಷ್ಯ ಬಗ್ಗೆ ಶಿಶುಪಾಲನಾ ರಜೆ ಮಂಜೂರು ಮಾಡುವಂತೆ ಎಲ್ಲ ದಾಖಲೆಯನ್ನು ಮಂಗಳೂರಿನ ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರ ಕಚೇರಿಗೆ(ಡಿಡಿಪಿಐ) ತೆಗೆದುಕೊಂಡು ಹೋಗಿ ಶಿಕ್ಷಕಿ ಬಸವಳಿದಿದ್ದೇ ಬಂತು. ಈವರೆಗೂ ರಜೆ ಮಂಜೂರಾಗಿಲ್ಲ.
ಮಾನವೀಯತೆ ಮರೆತರು: ಕಳೆದ ಜೂನ್ನಿಂದ ಮಗನನ್ನು ಮಂಗಳೂರಿನ ಅಂಗವಿಕಲ, ಬುದ್ಧಿಮಾಂದ್ಯರ ಪುನರ್ವಸತಿ ಕೇಂದ್ರಕ್ಕೆ ಸೇರಿಸಲು ನಿರ್ಧರಿಸಿದ್ದರು. ಅಲ್ಲಿ ಮಗುವಿನೊಂದಿಗೆ ಪೋಷಕರೂ ಶಾಲೆಗೆ ಹೋಗಬೇಕಾಗಿದ್ದು, ಅವರಿಗೂ ಸೂಕ್ತ ತರಬೇತಿ ನೀಡಲಾಗುತ್ತದೆ. ಅದಕ್ಕಾಗಿ ಸರ್ಕಾರವೇ ನೀಡುವ ವೇತನ ಸಹಿತ ಅಥವಾ ರಹಿತ ಶಿಶು ಪಾಲನಾ ರಜೆ ಮಂಜೂರು ಮಾಡುವಂತೆ ಮೇ 23, 2013ರಂದು ಡಿಡಿಪಿಐಗೆ ಬರೆದುಕೊಂಡಿದ್ದರು. ಮಗುವಿಗೆ ಶೇ.90ರಷ್ಟು ಬುದ್ಧಿಮಾಂದ್ಯ ಎಂಬುದಕ್ಕೆ ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ವೈದ್ಯಕೀಯ ಮಂಡಳಿಯ ಪ್ರಮಾಣ ಪತ್ರ ದಾಖಲೆಗೆ ಇರಿಸಿದ್ದರು. ಆದರೂ ಮನವಿ ತಿರಸ್ಕರಿಸಲಾಗಿದೆ.
ವರ್ಷಕ್ಕೆ 3 ಬಾರಿ ರಜೆ ಅವಕಾಶ: ಆರ್ಥಿಕ ಇಲಾಖೆಯ ಅಧೀನ ಕಾರ್ಯದರ್ಶಿ ಸಹಿಯಲ್ಲಿರುವ ಆರ್ಥಿಕ ಸಚಿವಾಲಯದ ತಿದ್ದುಪಡಿ ನಿಯಮ (ಆದೇಶ ಸಂಖ್ಯೆ: ಆಇ1ಸೇನಿಸೇ 2011 ದಿ.29-6-2011ರ ಆದೇಶ ಭಾಗದಲ್ಲಿರುವ ಷರತ್ತು (ಗಐಐ) ಬದಲಾದ ಪ್ರಕಾರ, ಮಕ್ಕಳು ಗುಣಮುಖವಾಗದ ಮತ್ತು ಶಾಶ್ವತವಾಗಿ ಅಂಗವಿಕಲ/ಬುದ್ಧಿಮಾಂದ್ಯದಿಂದ ಬಳಲುತ್ತಿದ್ದರೆ ಮತ್ತು ಇದನ್ನು ವೈದ್ಯಕೀಯ ಮಂಡಳಿ ಪ್ರಮಾಣೀಕರಿಸಿದರೆ ಅಂಥ ಪ್ರಕರಣಗಳಲ್ಲಿ ಮಹಿಳಾ ಸರ್ಕಾರಿ ನೌಕರರು, ಈ ಪ್ರಮಾಣ ಪತ್ರವನ್ನು 5 ವರ್ಷಕ್ಕೊಮ್ಮೆ ಸಲ್ಲಿಸಬೇಕು. ಆದರೆ, ವೈದ್ಯಕೀಯ ಮಂಡಳಿಯ ಪ್ರಮಾಣಪತ್ರವನ್ನು ಇದು ಅವಲಂಬಿಸಿದೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದೆ.
ಸಬೂಬು ನೀಡುವ ಇಲಾಖೆ: ಆದರೆ ವೈದ್ಯಕೀಯ ಮಂಡಳಿ ನೀಡಿದ ಶೇ.90 ಬುದ್ಧಿಮಾಂದ್ಯತೆ ಇದೆ ಎನ್ನುವ ಪ್ರಮಾಣ ಪತ್ರಕ್ಕೆ ಬೆಲೆ ಕೊಡದ ಶಿಕ್ಷಣ ಅಧಿಕಾರಿಗಳು, ವೈದ್ಯಕೀಯ ಮಂಡಳಿ ಗುಣಮುಖವಾಗದ/ಶಾಶ್ವತ ಎಂದು ಪ್ರಮಾಣ ಪತ್ರದಲ್ಲಿ ಉಲ್ಲೇಖಿಸಿಲ್ಲ ಎಂದು ಲಿಖಿತವಾಗಿ ಶಿಶುಪಾಲನಾ ರಜೆ ಮಂಜೂರು ಮಾಡಲು ಸಾಧ್ಯವಿಲ್ಲ ಎಂದು ಜೂನ್ 9, 2013ರಂದು ಪ್ರಸ್ತಾವನೆ ತಿರಸ್ಕರಿಸಿದೆ. ಮತ್ತೆ ಇದನ್ನು ಪುನರ್ ಪರಿಶೀಲಿಸುವಂತೆ ಶಿಕ್ಷಕಿ ಆ.8ರಂದು ಕೋರಿ ಮನವಿ ಸಲ್ಲಿಸಿದ್ದು, ಈ ಬಗ್ಗೆ ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿಗೆ ಡಿಡಿಪಿಐ ಪತ್ರ ಬರೆದು ಸ್ಪಷ್ಟನೆ ಕೋರಿದೆ.
ಶಿಕ್ಷಕಿಯೊಬ್ಬರು ತಮ್ಮ ಬುದ್ಧಿಮಾಂದ್ಯ ಮಗುವಿನ ಪೋಷಣೆಗೆ ಶಿಶು ಪಾಲನಾ ರಜೆ ಕೋರಿ ಮನವಿ ಸಲ್ಲಿಸಿರುವುದು ಗಮನಕ್ಕೆ ಬಂದಿದೆ. ಆದರೆ ಆ ಮಗು ಶಾಲೆಗೆ ಹೋಗುತ್ತಿರುವುದರಿಂದ ನಿಯಮಾನುಸಾರ ಶಿಶುಪಾಲನಾ ರಜೆ ನೀಡಲು ಸಾಧ್ಯವಿಲ್ಲ ಎಂದು ಪ್ರಸ್ತಾವನೆ ತಿರಸ್ಕರಿಸಿದ್ದೇವೆ. ಮರುಮನವಿ ಸಲ್ಲಿಸಿದ್ದರಿಂದ ಪ್ರಾದೇಶಿಕ ಕಚೇರಿಗೆ ಸ್ಪಷ್ಟನೆ ಕೋರಲಾಗಿದೆ.
-ಮೋಸೆಸ್ ಜಯಶೇಖರ್, ಡಿಡಿಪಿಐ, ಮಂಗಳೂರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

