ಒಳಚರಂಡಿ ಮಂಡಳಿಯಿಂದ ಕೋಟ್ಯಂತರ ನಷ್ಟ
ಬಂಟ್ವಾಳ: ಪುರಸಭೆ ವ್ಯಾಪ್ತಿಯಲ್ಲಿ ನಿಧಾನಗತಿ ಹಾಗೂ ಅಸಮರ್ಪಕವಾಗಿ ಕಾರ್ಯ ನಿರ್ವಹಿಸಿರುವ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಯ ವೈಖರಿಯನ್ನು ಬಂಟ್ವಾಳ ಪುರಸಭೆಯ ಸರ್ವಸದಸ್ಯರು ಖಂಡಿಸಿದ್ದಾರೆ.
ಬಂಟ್ವಾಳ ಪುರಸಭಾಧ್ಯಕ್ಷೆ ವಸಂತಿ ಸಿ. ಅಧ್ಯಕ್ಷತೆ, ಸಚಿವ ಬಿ.ರಮಾನಾಥ ರೈ ಉಪಸ್ಥಿತಿಯಲ್ಲಿ ಸೋಮವಾರ ಮೊದಲ ಸಾಮಾನ್ಯ ಸಭೆ ನಡೆಯಿತು.
ಒಳಚರಂಡಿ ಕಾಮಗಾರಿ ಅಪೂರ್ಣಗೊಂಡಿರುವುದರಿಂದ ಪುರಸಭೆ ವ್ಯಾಪ್ತಿಯಲ್ಲಿ ರಸ್ತೆ, ಚರಂಡಿ ಅಭಿವೃದ್ಧಿ ಮಾಡಲು ತೊಂದರೆಯಾಗುತ್ತಿದೆ. ಆರು ವರ್ಷಗಳ ಹಿಂದೆ ರು. 12 ಕೋಟಿ ವೆಚ್ಚದಲ್ಲಿ ಕಾಮಗಾರಿ ಆರಂಭಗೊಂಡಿದೆ. ಈಗ ರು. 66 ಕೋಟಿ ಹೆಚ್ಚುವರಿ ಅನುದಾನಕ್ಕಾಗಿ ಮತ್ತೆ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಲಾಗಿದೆ. ಒಳಚರಂಡಿ ಮಂಡಳಿಯ ವಿಳಂಬ ನೀತಿಯಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರುಪಾಯಿ ನಷ್ಟವಾಗಿದೆ ಎಂದು ವಿರೋಧ ಪಕ್ಷದ ಸದಸ್ಯ ದೇವದಾಸ ಶೆಟ್ಟಿ ಆರೋಪಿಸಿದಾಗ ಸಭೆಯಲ್ಲಿ ಹಾಜರಿದ್ದ ಎಲ್ಲ ಸದಸ್ಯರು ಧ್ವನಿಗೂಡಿಸಿದರು.
ಈ ಬಗ್ಗೆ ಸಭೆಯಲ್ಲಿ ಹಾಜರಿದ್ದ ಅಧಿಕಾರಿಯ ಉತ್ತರ ಸಮಾಧಾನ ನೀಡದೆ ಇದ್ದುದರಿಂದ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಮಂಡಳಿಯ ಎಂ.ಡಿ. ರಾಜೀವ್ ಚಾವ್ಲ ಅವರನ್ನು ಕರೆಸಿ ಚರ್ಚಿಸುವುದಾಗಿ ಸಚಿವ ರೈ ಸಭೆಗೆ ತಿಳಿಸಿದರು.
ಮೇಲ್ಸೇತುವೆಯಡಿಯಲ್ಲೇ ಸಭೆ ಮಾಡಿ: ಬಿ.ಸಿ.ರೋಡ್ನಲ್ಲಿ ಸಮಸ್ಯೆಗಳನ್ನು ಸೃಷ್ಟಿಸುತ್ತಿರುವ ಮೇಲ್ಸೇತುವೆಯಡಿಯಲ್ಲೇ ಸರ್ವಪಕ್ಷಗಳ ಸಭೆ ಕರೆದು, ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಬೇಕೆಂದು ಪುರಸಭಾ ಸದಸ್ಯರು ಆಗ್ರಹಿಸಿದ ಸನ್ನಿವೇಶವೂ ನಡೆಯಿತು. ಚತುಷ್ಪಥ ಮೇಲ್ಸೆತುವೆ ನಿರ್ಮಾಣಗೊಂಡ ಬಳಿಕ ಬಿ.ಸಿ.ರೋಡಿನಲ್ಲಿ ಅವ್ಯವಸ್ಥೆ ಉಂಟಾಗಿದೆ. ನಗರ ಸೌಂದರ್ಯ ಹಾಗೂ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಮೇಲ್ಸೆತುವೆಯಡಿಯಲ್ಲೇ ಸರ್ವಪಕ್ಷದ ಸಭೆ ಕರೆಯುವಂತೆ ಆಡಳಿತ ಪಕ್ಷದ ಸದಸ್ಯ ಸದಾಶಿವ ಬಂಗೇರ ಒತ್ತಾಯಿಸಿದರು.
ಕಸ ಕಸಿವಿಸಿ: ಪುರಸಭೆ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಕಸವನ್ನು ಈವರೆಗೆ ಮಂಗಳೂರು ಮಹಾನಗರ ಪಾಲಿಕೆಯ ಡಂಪಿಂಗ್ ಯಾರ್ಡ್ಗೆ ಕೊಂಡೊಯ್ಯಲಾಗುತ್ತಿತ್ತು. ಆದರೆ ಇದೀಗ ಇಲ್ಲಿನ ಕಸ ಮಹಾನಗರಪಾಲಿಕೆ ಪ್ರವೇಶಿಸದಂತೆ ಆಯುಕ್ತರು ಸ್ಪಷ್ಟ ಸೂಚನೆ ನೀಡಿದ್ದಾರೆ. ಕಂಚಿನಡ್ಕ ಪದವಿನಲ್ಲಿ ನಿರ್ಮಾಣ ಹಂತದಲ್ಲಿರುವ ತ್ಯಾಜ್ಯ ಸಂಸ್ಕರಣ ಘಟಕ ನಿರ್ಮಾಣವಾಗುವವರೆಗೆ ಮಹಾನಗರಪಾಲಿಕೆಯ ಡಂಪಿಂಗ್ ಯಾರ್ಡ್ಗೆ ಕೊಂಡೊಯ್ಯಲು ಅವಕಾಶ ಮಾಡಿಕೊಡುವಂತೆ ಸಚಿವ ರಮನಾಥ ರೈ ಅವರನ್ನು ಮುಖ್ಯಾಧಿಕಾರಿ ವಿನಂತಿಸಿದರು. ಈ ಬಗ್ಗೆ ಸಹಾಯಕ ಆಯುಕ್ತರೊಂದಿಗೆ ಮಾತುಕತೆ ನಡೆಸುವುದಾಗಿ ಸಚಿವರು ತಿಳಿಸಿದರು.
ಸಚಿವ ಬಿ.ರಮಾನಾಥ ರೈ ಮಾತನಾಡಿ, ಪುರಸಭಾ ವ್ಯಾಪ್ತಿಯಲ್ಲಿ ಎರಡನೇ ಹಂತದ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಅನುದಾನ ಬಿಡುಗಡೆಯಾಗಿದ್ದು, ಆದಷ್ಟು ಬೇಗ ಕ್ರಿಯಾಯೋಜನೆ ಸಿದ್ಧಪಡಿಸುವಂತೆ ಪುರಸಭಾ ಆಡಳಿತಕ್ಕೆ ಸೂಚಿಸಿದರು.
ರಸ್ತೆ ಅಗಲೀಕರಣ ಏನಾಗಿದೆ: ಬಂಟ್ವಾಳ ಪೇಟೆ ರಸ್ತೆ ಅಗಲಿಕರಣಕ್ಕೆ ಸಂಬಂಧಿಸಿದಂತೆ ಕಳೆದ ಮೂರು ವರ್ಷಗಳಿಂದ ಚರ್ಚೆ ನಡೆಯುತ್ತಿದೆ. ಆದರೆ ರಸ್ತೆ ಅಗಲೀಕರಣ ಯೋಜನೆಗೆ ಇನ್ನೂ ಚಾಲನೆ ಸಿಕ್ಕಿಲ್ಲ ಎಂದು ಗೋವಿಂದ ಪ್ರಭು ಆರೋಪಿಸಿದರು. ಈ ಬಗ್ಗೆ ವ್ಯಾಪಾರಿಗಳು ಹಾಗೂ ಸಾರ್ವಜನಿಕರ ಸಭೆ ನಡೆಸಿ ನಿರ್ಣಯ ಕೈಗೊಂಡು ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಮುಖ್ಯಾಧಿಕಾರಿ ಜತ್ತನ್ನ ಪ್ರತಿಕ್ರಿಯಿಸಿದರು.
2013- 14ನೇ ಸಾಲಿನ ರಾಜ್ಯ ಹಣಕಾಸು ಆಯೋಗದಿಂದ ಮಂಜೂರಾದ ಅನುದಾನದ ಉಳಿಕೆ ಹಣಕ್ಕೆ ಸಭೆಯಲ್ಲಿ ಕ್ರಿಯಾಯೋಜನೆ ಸಿದ್ಧಪಡಿಸಲಾಯಿತು. ಪ್ರತಿ ಸದಸ್ಯರಿಗೆ ತಮ್ಮ ವಾರ್ಡ್ನ ರಸ್ತೆ, ಚರಂಡಿ ನಿರ್ಮಾಣಕ್ಕಾಗಿ ತಲಾ ರು. ಐದು ಲಕ್ಷದಂತೆ ಕಾಯ್ದಿರಿಸಲಾಯಿತು.
ಉಪಾಧ್ಯಕ್ಷೆ ಯಾಸ್ಮೀನ್ ವೇದಿಕೆಯಲ್ಲಿದ್ದರು. ಸದಸ್ಯರಾದ ರಾಮಕೃಷ್ಣ ಆಳ್ವ, ಮಹಮ್ಮದ್ ನಂದರಬೆಟ್ಟು, ವಾಸುಪೂಜಾರಿ, ಬಿ.ಪ್ರವೀಣ್, ಗಂಗಾಧರ್, ಸುಗುಣ ಕಿಣಿ, ಮೋನಿಶ್ ಅಲಿ ಇದ್ದರು.
ಪುರಸಭೆ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಕಸವನ್ನು ಈವರೆಗೆ ಮಂಗಳೂರು ಮಹಾನಗರ ಪಾಲಿಕೆಯ ಡಂಪಿಂಗ್ ಯಾರ್ಡ್ಗೆ ಕೊಂಡೊಯ್ಯಲಾಗುತ್ತಿತ್ತು. ಆದರೆ, ಇದೀಗ ಇಲ್ಲಿನ ಕಸ ಮಹಾನಗರಪಾಲಿಕೆ ಪ್ರವೇಶಿಸದಂತೆ ಆಯುಕ್ತರು ಸ್ಪಷ್ಟ ಸೂಚನೆ ನೀಡಿದ್ದಾರೆ. ಕಂಚಿನಡ್ಕ ಪದವಿನಲ್ಲಿ ನಿರ್ಮಾಣ ಹಂತದಲ್ಲಿರುವ ತ್ಯಾಜ್ಯ ಸಂಸ್ಕರಣ ಘಟಕ ನಿರ್ಮಾಣವಾಗುವವರೆಗೆ ಮಹಾನಗರಪಾಲಿಕೆಯ ಡಂಪಿಂಗ್ ಯಾರ್ಡ್ಗೆ ಕೊಂಡೊಯ್ಯಲು ಅವಕಾಶ ಮಾಡಿಕೊಡಬೇಕು.
ಜತ್ತನ್ನ, ಮುಖ್ಯಾಧಿಕಾರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

