ಯುವತಿ ಶವ ಪತ್ತೆ, ಪ್ರೇಮಿ ನಾಪತ್ತೆ
ಮಂಗಳೂರು: ಹೆತ್ತವರು ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪ್ರೇಮಿ ಜತೆ ಮನೆ ಬಿಟ್ಟು ಹೋದ ಯುವತಿ ಶವವಾಗಿ ಪತ್ತೆಯಾಗಿದ್ದಾಳೆ, ಯುವಕ ನಾಪತ್ತೆಯಾಗಿದ್ದಾನೆ.
ಗುರುವಾರ ಮಂಗಳೂರಿನ ಶವಾಗಾರ ಮುಂದೆ ನೂರಾರು ಕಾಲೇಜು ವಿದ್ಯಾರ್ಥಿಗಳು ಆಗಮಿಸಿ ವಿದ್ಯಾರ್ಥಿನಿ ಸಾವಿನ ಕುರಿತು ತನಿಖೆ ನಡೆಸಬೇಕು, ಆರೋಪಿಯನ್ನು ಬಂಧಿಸಬೇಕು ಎಂದು ಪ್ರತಿಭಟನೆ ನಡೆಸಿದ್ದಾರೆ.
ಅಡ್ಯಾರ್ ನಿವಾಸಿ ಅಕ್ಷತಾ (18) ಶನಿವಾರ ಮನೆಯಿಂದ ಕಾಲೇಜ್ಗೆ ಎಂದು ಹೋಗಿದ್ದವರು ನಾಪತ್ತೆಯಾಗಿದ್ದರು. ಅಕ್ಷತಾ ಜತೆಯಲ್ಲಿ ಕಲಿಯುತ್ತಿದ್ದ ಮಂಜೇಶ್ವರ ನಿವಾಸಿ ಮದನ್ ಕೂಡಾ ನಾಪತ್ತೆಯಾಗಿದ್ದ.ಪ್ರೀತಿ ಮಾಡಿ ಮನೆ ಬಿಟ್ಟಿರಬೇಕು ಎಂದು ಮನೆ ಮಂದಿ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ತನಿಖೆ ನಡೆಸುವಾಗ ಅಕ್ಷತಾಳ ಮೊಬೈಲ್ ಮಂಗಳೂರಲ್ಲಿಯೇ ಸ್ವಿಚ್ಡ್ ಆಫ್ ಆಗಿರುವುದು ತಿಳಿದು ಬಂತು. ಪೊಲೀಸರು ಎಲ್ಲೆಡೆ ತನಿಖೆ ಚುರುಕುಗೊಳಿಸಿದ್ದರು.
ಇದೇ ವೇಳೆಗೆ ಮುಳಿಹಿತ್ಲು ಸಮೀಪ ನದಿಯಲ್ಲಿ ಯುವತಿ ಶವ ಪತ್ತೆಯಾಗಿತ್ತು. ಈ ಬಗ್ಗೆ ಪಾಂಡೇಶ್ವರ ಪೊಲೀಸರು ಎಲ್ಲ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಗ್ರಾಮಾಂತರ ಪೊಲೀಸರು ಮಾಹಿತಿಯನ್ನು ಅಕ್ಷತಾ ಮನೆ ಮಂದಿಗೆ ರವಾನಿಸಿದ್ದರು. ಅಕ್ಷತಾ ಹೆತ್ತವರು ಶವ ಪರೀಕ್ಷಿಸಿದಾಗ ಧರಿಸಿದ್ದ ಚೂಡಿದಾರ್ ಮತ್ತು ಚಪ್ಪಲ್ನಿಂದ ಅದು ಅಕ್ಷತಾ ಶವ ಎಂದೇ ಗುರುತಿಸಿದ್ದಾರೆ. ಎರಡು ದಿನದ ಹಿಂದಷ್ಟೇ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಆದರೆ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಏನು? ಪ್ರೀತಿಯೇ ಆಗಿದ್ದರೆ ಆಕೆಯ ಜತೆಗಿದ್ದ ಮದನ್ ಎಲ್ಲಿ ಹೋದ ಎಂಬ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಸಿಕ್ಕಿಲ್ಲ. ಅಕ್ಷತಾ ಮನೆಯವರು ಮದನ್ ನಾಯಕ್ಗೆ ಮಂಜೇಶ್ವರದ ಮನೆಗೆ ತೆರಳಿ ಹೊಡೆದಿದ್ದಾರೆ. ನಾಪತ್ತೆಯಾಗುವ ದಿನವೂ ಆಕೆ ಮೊಬೈಲ್ಗೆ ಕರೆ ಮಾಡಿದ್ದು, ಆಕೆ ಕರೆ ಸ್ವೀಕರಿಸದೆ ಸ್ವಿಚ್ಡ್ ಆಫ್ ಮಾಡಿದ್ದಾಳೆ. ಬಳಿಕ ಮದನ್ಗೂ ಕರೆ ಮಾಡಿದ್ದಾರೆ. ಆತನೂ ಸ್ವಿಚ್ಡ್ ಆಫ್ ಮಾಡಿದ್ದ ಎಂದು ಸಂಬಂಧಿಕರು ಹೇಳುತ್ತಾರೆ.
'ನಾವು ಇಬ್ಬರಿಗೂ ಬುದ್ಧಿ ಹೇಳಿದ್ದೆವು. ಶನಿವಾರ ಮನೆ ಬಿಟ್ಟು ಹೋಗಿರುವುದು ಗೊತ್ತಾಗಿ ಕರೆ ಮಾಡಿದಾಗ ಸ್ವಿಚ್ಡ್ ಆಫ್ ಮಾಡಿದರು. ಮರುದಿನ ಪೊಲೀಸರಿಗೆ ದೂರು ನೀಡಿದೆವು. ಯುವಕನ ನಡತೆ ಸರಿ ಇಲ್ಲ. ತಾಯಿಗೂ ಹಲ್ಲೆ ನಡೆಸುತ್ತಿದ್ದ' ಎಂದು ಹಿಂದೆ ಶ್ರೀರಾಮಸೇನೆಯಲ್ಲಿ ಕೆಲಸ ಮಾಡಿದ್ದ, ಯುವತಿ ಸಂಬಂಧಿಕ ಲೋಹಿತ್ ಅಡ್ಯಾರ್ ತಿಳಿಸಿದ್ದಾನೆ.
ಮದನ್ಗೆ ಇಬ್ಬರು ಪೋಲಿ ಹುಡುಗರ ಸಹವಾಸವೂ ಇತ್ತು. ಅವರು ಪ್ರೇಮಿಗಳ ಜತೆ ಹೋಗಿದ್ದರೇ.
ಬಳಿಕ ಅನಾಹುತ ಸಂಭವಿಸಿತೇ ಎಂಬ ಸಂಶಯವೂ ಇದೆ. ಅಥವಾ ಯುವಕನನ್ನು ಯುವತಿ ಕಡೆಯವರು ಅಪಹರಿಸಿ, ಅಡಗಿಸಿಟ್ಟಿರಬಹುದೇ ಎಂಬ ಸಂಶಯವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

