ಬೇಸಗೆ ಝಳದಲ್ಲಿ ಪ್ರಚಾರ ಬಿರುಸು
ಮಂಗಳೂರು: ಮಾರ್ಚ್ ಮಧ್ಯಭಾಗದಿಂದಲೇ ಜಿಲ್ಲೆಯಲ್ಲಿ ಬಿಸಿಲ ಧಗೆ. ಜತೆಯಲ್ಲಿ ಲೋಕಸಭೆ ಚುನಾವಣೆಯ ಝಳ. ಇದನ್ನು ಸಹಿಸಿಕೊಂಡು ಮತದಾರನ ಬಳಿಗೆ ಮತಯಾಚನೆಗೆ ತೆರಳಬೇಕು.
ಮತದಾನಕ್ಕೆ ದಿನ ಹತ್ತಿರಬರುತ್ತಿದ್ದಂತೆ ಪ್ರಚಾರ ಕಾರ್ಯಕ್ಕೂ ವೇಗ ಸಿಗಬೇಕು. ಎಲ್ಲರ ಮನದಲ್ಲೂ ಪ್ರಚಾರದ್ದೇ ಗುಂಗು. ಜತೆಜತೆಗೆ ಬಿಸಿಲಿನ ತಾಪವನ್ನೂ ಸಹಿಸಬೇಕು. ಸಾಮಾನ್ಯವಾಗಿ ಜಿಲ್ಲೆಯಲ್ಲಿ ಏಪ್ರಿಲ್ನಿಂದ ಬಿಸಿಲಿನ ಬಿರುಸು ಹೆಚ್ಚುತ್ತದೆ. ಈ ಬಾರಿ ಚುನಾವಣೆ ಘೋಷಣೆಯಾದಾಗಲೇ ಬಿಸಿಲು ತನ್ನ ಛಾಪು ತೋರಿಸಿತ್ತು. 40 ಡಿಗ್ರಿಗಿಂತಲೂ ಅಧಿಕ ತಾಪಮಾನ ದಾಖಲಾದ್ದು ಇದೆ. ಇದು ಪ್ರಚಾರದ ನಡೆಸುವವರ ಬೆವರು ಇಳಿಸಿದೆ.
ಕಣದಲ್ಲಿರುವ ಅಭ್ಯರ್ಥಿಗಳ ವಿವರ ಅಂತಿಮಗೊಂಡ ಬಳಿಕ ಭಾನುವಾರದಿಂದ ಪ್ರಚಾರಕ್ಕೆ ಬಿರುಸಿನ ಚಾಲನೆ ಸಿಕ್ಕಿದೆ. ಪ್ರಚಾರಕ್ಕೆ ತೆರಳುವವರಿಗೆ ಮನೆಯೊಳಗೆ ಕರೆದು ಬಾಯಾರಿಕೆ ನೀಡುವುದು ಸಂಪ್ರದಾಯ. ಹೀಗಿದ್ದೂ ಮಧ್ಯಾಹ್ನ ವೇಳೆಯ ಬಿಸಿಲು ಹೊರಗೆ ಕಾಲಿಡಲು ಅಸಾಧ್ಯ ಎಂಬ ಪರಿಸ್ಥಿತಿ ತಂದೊಡ್ಡಿದೆ. ಆದರೂ ಎಲ್ಲ ರಾಜಕೀಯ ಪಕ್ಷಗಳು ಪ್ರಚಾರ ಕಾರ್ಯ ಭರದಿಂದ ನಡೆಸುತ್ತಿವೆ.
ಬಿಸಿಲ ತಾಪ ಲೆಕ್ಕಕ್ಕಿಲ್ಲ: 'ಬಿಜೆಪಿ ಮನೆ ಮನೆ ಪಾದಯಾತ್ರೆ ನಡೆಸುತ್ತಿದೆ. ಬಿಸಿಲಿನ ಝಳ ಹೈರಾಣ ಮಾಡಿದ್ದರೂ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮಂತ್ರ ಇವರನ್ನು ಧೃತಿಗೆಡಿಸಿಲ್ಲ. ಪಕ್ಷ ಗೆಲವಿಗೆ ಸುಡುಬಿಸಿಲೆನ್ನದೆ ಪ್ರಚಾರ ಮಾಡುತ್ತಿದ್ದಾರೆ. ಮೋದಿ ಪ್ರಧಾನಿ ಆಗಬೇಕು ಎಂಬ ಒಂದೇ ಧ್ಯೇಯ ಮನಸ್ಸಲ್ಲಿಟ್ಟುಕೊಂಡು ಪ್ರಚಾರ ಮಾಡುತ್ತಿದ್ದಾರೆ. ಹಾಗಾಗಿ ಇವರಿಗೆ ಬಿಸಿಲು ಸಮಸ್ಯೆಯೇ ಆಗಿಲ್ಲ' ಎನ್ನುತ್ತಾರೆ ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಪ್ರತಾಪ್ಸಿಂಹ ನಾಯಕ್.
'ಮಹಿಳಾ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಚಾರಕ್ಕೆ ಹೋಗುತ್ತಿದ್ದಾರೆ. ತಂಡೋಪತಂಡ ಪ್ರಚಾರಕ್ಕೆ ಹೋಗುವುದರಿಂದ ಬಿಸಿಲಿನ ತಾಪ ಗೊತ್ತಾಗುತ್ತಿಲ್ಲ. ಚುನಾವಣೆ ಬಿಸಿ ಬಿಸಿಲಿನ ಬಿಸಿ ಕಡಿಮೆ ಮಾಡುತ್ತಿದೆ' ಎಂದು ಹಾಸ್ಯವಾಗಿ ಹೇಳುತ್ತಾರೆ ಅವರು.
'ಹೇರಳ ಬಿಸಿಲು ಇದ್ದರೂ ಪ್ರಚಾರಕ್ಕೆ ಅಡ್ಡಿಯಾಗುತ್ತಿಲ್ಲ. ಬೆಳಗ್ಗೆ 11ರಿಂದ ಹೊರಗೆ ಓಡಾಟ ತ್ರಾಸ. ಜೋರು ಬಿಸಿಲು ಎಂದು ಪ್ರಚಾರ ಮಾಡದಿರಲು ಸಾಧ್ಯವೇ? ಭಾನುವಾರ ಜಿಲ್ಲೆಯ ಎಲ್ಲ 1,800 ಬೂತ್ಗಳಲ್ಲಿ ಮನೆ ಮನೆ ಪ್ರಚಾರಕ್ಕೆ ಇಳಿದಿದ್ದೇವೆ. ಇನ್ನು ಬಿಸಿಲಿದ್ದರೂ ಲೆಕ್ಕವಿಲ್ಲ' ಎನ್ನುತ್ತಾರೆ ಕಾಂಗ್ರೆಸ್ ಕಾರ್ಯಕರ್ತ ಜಯರಾಮ.
ನಾವು ಕೂಡ ಭಾನುವಾರದಿಂದ ಪೂರ್ತಿ ಪ್ರಚಾರಕ್ಕೆ ಇಳಿದಿದ್ದೇವೆ. ನಮ್ಮಲ್ಲಿ ಒಂದು ಲಕ್ಷ ಮಂದಿ ಕಾರ್ಮಿಕ ಸದಸ್ಯರಿದ್ದಾರೆ. ಅವರೆಲ್ಲರನ್ನು ಸಂಪರ್ಕಿಸುತ್ತೇವೆ. ಬಿಸಿಲು ಜೋರಾಗಿದೆ. ಆದರೂ ಸಹಿಸಿಕೊಂಡು ಪ್ರಚಾರ ನಡೆಸುತ್ತೇವೆ ಎನ್ನುತ್ತಾರೆ ಸಿಪಿಎಂ ಅಭ್ಯರ್ಥಿ ಯಾದವ ಶೆಟ್ಟಿ.
ಆಮ್ಆದ್ಮಿ ಪಕ್ಷದವರು ಸಾಧ್ಯವಾದಷ್ಟು ಪಾದಯಾತ್ರೆಯಲ್ಲೇ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ಆದರೆ ತಲೆಗೆ ಪಕ್ಷದ ಟೊಪ್ಪಿ ಹಾಕಿ ಮತಯಾಚನೆ ಮಾಡುವುದರಿಂದ ಬಿಸಿಲು ಅಷ್ಟಾಗಿ ತಾಗುತ್ತಿಲ್ಲ. ಇದು ನಮಗೆ ವರದಾನವಾಗಿದೆ ಎನ್ನುತ್ತಾರೆ ಪಕ್ಷ ಕಾರ್ಯಕರ್ತರು.
ಆತ್ಮಭೂಷಣ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

