10 ಬಗೆಯ ನೌಕರರಿಗೆ ಚುನಾವಣೆ ಕರ್ತವ್ಯ ವಿನಾಯ್ತಿ
ಮಂಗಳೂರು: ಲೋಕಸಭೆ ಚುನಾವಣೆಗೆ ಸಂಬಂಧಿಸಿ ಮತಗಟ್ಟೆ ಅಧಿಕಾರಿ ಮತ್ತು ಸಿಬ್ಬಂದಿ ನೇಮಕ ಪ್ರಕ್ರಿಯೆ ನಡೆಯುತ್ತಿದ್ದು, ಇದರಲ್ಲಿ ಗರ್ಭಿಣಿ ಮಹಿಳೆ, ವಿಕಲ ಚೇತನರು, ಆರು ತಿಂಗಳೊಳಗಿನ ವಯೋ ನಿವೃತ್ತಿ ಹೊಂದುವವರ ಸಹಿತ ವಿವಿಧ 10 ಬಗೆಯ ನೌಕರರು ಚುನಾವಣೆ ಕರ್ತವ್ಯದಿಂದ ವಿನಾಯ್ತಿ ಪಡೆಯಬಹುದು.
ಚುನಾವಣೆ ಆಯೋಗ ಈ ಬಾರಿ ಇಂಥ ಅವಕಾಶ ಮಾಡಿಕೊಟ್ಟಿದೆ. ಇದರಲ್ಲಿ ನ್ಯಾಯಾಂಗ ಸಿಬ್ಬಂದಿ, ಪಶುವೈದ್ಯ ಆಸ್ಪತ್ರೆಯಲ್ಲಿ ದುಡಿಯುವ ವೈದ್ಯರು, ಕಂಪೌಂಡರ್‌ಗಳು, ಜಾನುವಾರು ವಿಸ್ತರಣಾಧಿಕಾರಿಗಳು, ಆರೋಗ್ಯ ಇಲಾಖೆ ವೈದ್ಯರು, ದಾದಿಯರು, ಎಎನ್‌ಎಂಗಳು, ಆಕಾಶವಾಣಿ ಸಿಬ್ಬಂದಿ, ದೂರದರ್ಶನ ಸಿಬ್ಬಂದಿ, ಕನಿಷ್ಠ ಸಿಬ್ಬಂದಿ ಇರುವ ವಾಣಿಜ್ಯ ಬ್ಯಾಂಕ್‌ಗಳ ಅಧಿಕಾರಿಗಳು/ನೌಕರರಿಗೆ ಈ ವಿನಾಯ್ತಿ ಸಿಗಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಎ.ಬಿ.ಇಬ್ರಾಹಿಂ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2200 ಅಧ್ಯಕ್ಷಾಧಿಕಾರಿಗಳು, 2200 ಸಹಾಯಕ ಅಧ್ಯಕ್ಷಾಧಿಕಾರಿಗಳು, 4400 ಮತಗಟ್ಟೆ ಅಧಿಕಾರಿಗಳು ಸೇರಿ ಒಟ್ಟು 8800 ಸಿಬ್ಬಂದಿ ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಳ್ಳಲಿದ್ದಾರೆ ಎಂದು ಹೇಳಿದರು.
ಸಿಬ್ಬಂದಿಗೆ ತರಬೇತಿ: ಜಿಲ್ಲೆಯ 8 ಕೇಂದ್ರಗಳಲ್ಲಿ ಚುನಾವಣೆ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ. ಕೆನರಾ ಕಾಲೇಜು, ಗೋಕರ್ಣನಾಥ ಕಾಲೇಜು, ರಾಮಕೃಷ್ಣ ಕಾಲೇಜು, ಕೆಪಿಟಿ, ಬಂಟ್ವಾಳ ಮೊಡಂಕಾಪು, ಉಜಿರೆ, ಸುಳ್ಯ ಮತ್ತು ಪುತ್ತೂರುಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಫಸ್ಟ್ ಪೋಲಿಂಗ್ ಆಫೀಸರ್ ಮತ್ತು ಮತಗಟ್ಟೆ ಅಧಿಕಾರಿಗೆ ಈ ತರಬೇತಿ ಇರುತ್ತದೆ ಎಂದರು. ಮಂಗಳವಾರ ಎಲೆಕ್ಟ್ರಾನಿಕ್ ಮತಯಂತ್ರಗಳ ಎರಡನೇ ಬಾರಿ ಪರಿಶೀಲನೆ ಮುಕ್ತಾಯವಾಗಿದೆ. ಚುನಾವಣೆ ವೀಕ್ಷಕರ ಎದುರು ಇದನ್ನು ದೃಢಪಡಿಸಲಾಗಿದೆ. 1,105 ಸೇವಾ ಮತಪತ್ರಗಳನ್ನು ಯೋಧರಿಗೆ ಕಳುಹಿಸಲಾಗಿದೆ. ಸುಮಾರು 60 ಸಾವಿರ ಮತಪತ್ರ ಬಂದಿದ್ದು, ಇದರಲ್ಲಿ 30 ಸಾವಿರ ಮತಪತ್ರ ಟೆಂಡರ್ ಮತಕ್ಕೆ ನಿಗದಿಪಡಿಸಲಾಗಿದೆ ಎಂದು ಹೇಳಿದರು.
ಈವರೆಗೆ 14113 ಆಯುಧ ಪೈಕಿ 13584 ಆಯುಧ ಠೇವಣಿ ಇಡಲಾಗಿದೆ. ಕೆಲವರಿಗೆ ಜಿಲ್ಲಾಧಿಕಾರಿ ನೇತೃತ್ವದ ಕಮಿಟಿ ಪರಿಶೀಲನೆಯಂತೆ ಆಯುಧ ಠೇವಣಿಯಿಂದ ವಿನಾಯ್ತಿ ನೀಡಲಾಗಿದೆ.
ಎರಡು ಪಕ್ಷಗಳ ವಿರುದ್ಧ ಕೇಸ್: ಯುಗಾದಿ ಶುಭಾಶಯ ಕೋರಿದ ಜಾಹೀರಾತಿನಲ್ಲಿ ನೀತಿಸಂಹಿತೆ ಉಲ್ಲಂಘನೆ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವಿರುದ್ಧ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ. ಬಿಜೆಪಿ ಈ ಬಗ್ಗೆ ದೂರು ನೀಡಿತ್ತು ಎಂದರು.
ಹರ ಹರ ಮೋದಿ ಘೋಷವಾಕ್ಯ ಬರೆದು ಎಲ್‌ಇಡಿ ಪರದೆಯಲ್ಲಿ ಪ್ರಚಾರ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಐವನ್ ಡಿಸೋಜ ಆಯೋಗಕ್ಕೆ ಬಿಜೆಪಿ ವಿರುದ್ಧ ದೂರು ಕೊಟ್ಟಿದ್ದಾರೆ. ಜಿಲ್ಲಾ ಸಹಾಯಕ ಚುನಾವಣಾಧಿಕಾರಿ ಸದಾಶಿವ ಪ್ರಭು, ವೆಚ್ಚ ವೀಕ್ಷಕ ಕೃಷ್ಣ ಪ್ರಸಾದ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

