ದಕ್ಷಿಣ ಕನ್ನಡ

ಯೋಜನೆಗಳ ತೂಗುಗತ್ತಿ; ಮತದಾನ ನಿರಾಸಕ್ತಿ!

Published On :

ಸುಬ್ರಹ್ಮಣ್ಯ: ಮಹಾ ಚುನಾವಣೆಯ ಕಾವು ರಂಗೇರುತ್ತಿದೆ, ವಿವಿಧ ಪಕ್ಷಗಳು ಮತದಾರ ಪ್ರಭುವಿನ ಮನೆ ಬಾಗಿಲು ತಟ್ಟುತಿದ್ದಾರೆ. ಆದರೆ ಸುಳ್ಯ ತಾಲೂಕಿನ ಕೆಲವು ಯೋಜನೆ ಬಾಧಿತ ಗ್ರಾಮಗಳ ಮತದಾರರು ಮಾತ್ರ ಈ ಬಾರಿ ಮತದಾನದತ್ತ ನಿರುತ್ಸಾಹ ತೋರುತಿದ್ದಾರೆ.
 ಕಳೆದೊಂದು ದಶಕದಿಂದ ಕಾಡುತ್ತಿರುವ ಹಲವು ಸಮಸ್ಯೆಗಳೇ ಇದಕ್ಕೆ ಕಾರಣವಾಗಿದೆ. ಇಲ್ಲಿಯ ಜನತೆ ಮತದಾನದ ಬಗ್ಗೆ ನಿರುತ್ಸಾಹ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ಪಕ್ಷಗಳ ಕಾರ್ಯಕರ್ತರು ಮತದಾರರ ಮನವೊಲಿಸಲು ನಾನಾ ಕಸರತ್ತು ನಡೆಸುತ್ತಿದ್ದಾರೆ.
ಓಟು ಕೇಳಿದರೆ ಮಂಗಳಾರತಿ!: ಆದರೆ, ಕಾರ್ಯಕರ್ತರ ಮರುಳು ಮಾತಿಗೆ ಸೊಪ್ಪು ಹಾಕದ ಜನ ಮನೆ ಮುಂದೆ ಪ್ರತ್ಯಕ್ಷವಾಗುವವರಿಗೆ ಸರಿಯಾದ ಮಂಗಳಾರತಿ ಎತ್ತಿ ಕಳುಹಿಸುತ್ತಿರುವುದು ಕಂಡುಬರುತ್ತಿದೆ. ಇದರಿಂದಾಗಿ ಇಲ್ಲಿಯ ವಿವಿಧ ಪಕ್ಷಗಳ ನಾಯಕರಲ್ಲಿ ನಡುಕ ಉಂಟಾಗಿದೆ, ಪ್ರಚಾರ ಕಾರ್ಯಕ್ಕೆ ಕಾರ್ಯಕರ್ತರ ಕೊರತೆಯಿಂದ ಬೆರಳೆಣಿಕೆ ಮಂದಿ ಇರುವ ನಾಯಕರೇ ಮನೆ ಹಾದಿ ತುಳಿಯುತ್ತಿರುವ ದೃಶ್ಯ ಕಂಡುಬರುತ್ತಿದೆ.
ಯೋಜನೆಗಳ ತೂಗುಗತ್ತಿ: ಈ ಭಾಗದ ಜನರ ತಲೆ ಮೇಲೆ ತೂಗಾಡುತ್ತಿರುವ ಹಲವಾರು ಅವೈಜ್ಞಾನಿಕ ಯೋಜನೆಗಳ ತೂಗುಗತ್ತಿ, ಜೊತೆಗೆ ಕಳೆದೊಂದು ದಶಕದಿಂದ ಎದುರಿಸುತ್ತಿರುವ ವಿದ್ಯುತ್, ರಸ್ತೆ, ನೀರು ಇತ್ಯಾದಿ ನಾನಾ ಸಮಸ್ಯೆಗಳಿಂದ ಬೇಸತ್ತ ಗ್ರಾಮಾಂತರ ಮಂದಿ ಈ ಬಾರಿ ಮತದಾನದ ಬಗ್ಗೆ ನಿರುತ್ಸಾಹ ಹೊಂದಿದ್ದಾರೆ. ಮತದಾನ ಬಹಿಷ್ಕಾರ ಅಥವಾ 'ನೋಟಾ' ಮೊರೆ ಹೋಗುವ ಚಿಂತನೆಯಲ್ಲಿದ್ದಾರೆ. ಇದು ಎಲ್ಲ ಪಕ್ಷಗಳ ನಾಯಕರಿಗೆ ತಲೆ ನೋವಾಗಿ ಪರಿಣಮಿಸಿದೆ.
ಕೆಲಸ ಮಾಡದ ಭರವಸೆ: ಕಳೆದೊಂದು ದಶಕದಿಂದ ನಾನಾ ಸಮಸ್ಯೆಗಳ ಸುಳಿಗೆ ಸಿಲುಕಿ ತಮ್ಮ ಅಸ್ತಿತ್ವಕ್ಕಾಗಿ ಹೋರಾಟದ ದಾರಿ ಕಂಡುಕೊಂಡ ಸುಳ್ಯ ತಾಲೂಕಿನ ಹರಿಹರ, ಬಾಳುಗೋಡು, ಕಲ್ಮಕಾರು ಐನಕಿದು, ಕೊಲ್ಲಮೊಗ್ರು ಏನೆಕಲ್ಲು, ಸುಬ್ರಹ್ಮಣ್ಯ, ನಾಲ್ಕೂರು, ಕೂತ್ಕುಂಜ, ಮಡಪ್ಪಾಡಿ, ಉಬರಡ್ಕ, ಅರಂತೋಡು ಆಲೆಟ್ಟಿ, ಸಂಪಾಜೆ, ತೊಡಿಕಾನ ಮುಂತಾದ ಪರಿಸರದ ಜನತೆಯಲ್ಲಿ ಮತದಾನದ ಆಸಕ್ತಿ ಬತ್ತಿ ಹೋಗಿದೆ. ಪಶ್ಚಿಮಘಟ್ಟಗಳ ತಪ್ಪಲಿನ ಜನವಸತಿ ಪ್ರದೇಶಗಳನ್ನು ಯುನೆಸ್ಕೋ ಸೂಕ್ಷ್ಮ ವಲಯಕ್ಕೆ ಸೇರ್ಪಡೆಗೊಳಿಸುವ ಯೋಜನೆ ವಿಚಾರದಲ್ಲಿ ಈ ಭಾಗದ ಜನತೆಯಲ್ಲಿ ಭಾರಿ ಆತಂಕ ಮನೆ ಮಾಡಿದೆ. ಪುಷ್ಪಗಿರಿ ವನ್ಯಧಾಮ, ಆನೆಕಾರಿಡಾರ್, ಗ್ರೇಡರ್ ತಲಕಾವೇರಿ ಇತ್ಯಾದಿ ದಿನಕ್ಕೊಂದು ಹೊಡೆತ ನೀಡುವ ಯೋಜನೆಗಳ ಹೇರಿಕೆಯಲ್ಲಿನ ಭಯ ಇವರನ್ನು ಕಾಡುತ್ತಲೇ ಬಂದಿದೆ.
 ಜೊತೆಗೆ ಕಾಡು ಪ್ರಾಣಿಗಳ ಹಾವಳಿ, ನಕ್ಸಲ್ ಹಾವಳಿ, ಕೊಳೆರೋಗಕ್ಕೆ ನಿರೀಕ್ಷಿತ ಪರಿಹಾರ ಮೊತ್ತ ಲಭಿಸದಿರುವ ಕುರಿತು ಕೂಡ ಅಸಮಾಧಾನ ಹೊಂದಿದ್ದಾರೆ. ಅವೈಜ್ಞಾನಿಕ ಯೋಜನೆಗಳ ತರುವಾಯ ಮೂಲಭೂತ ಸೌಕರ್ಯಗಳಾದ ರಸ್ತೆ, ವಿದ್ಯುತ್, ಸಾರಿಗೆ ಕುಡಿಯುವ ನೀರು ಮುಂತಾದ ಅಭಿವೃದ್ಧಿಕಾರ್ಯ ಸ್ಥಗಿತಗೊಂಡು ಅವರ ನೆಲೆಗೆ ಸಂಚಾಕಾರ ಎದುರಾಗಿದೆ. ಈ ಹಂತದಲ್ಲಿ ಯಾರೂ ನಮ್ಮ ನೆರವಿಗೆ ಬಂದಿಲ್ಲ ಎಂಬ ಸಿಟ್ಟು ಇವರಲ್ಲಿದೆ.
ಸರ್ಕಾರಗಳ ಬಗ್ಗೆ ಅಸಮಾಧಾನ: ತಮ್ಮ ಅಸ್ತಿತ್ವವನ್ನೇ ಬುಡಮೇಲು ಮಾಡುವ ಈ ಎಲ್ಲ ಯೋಜನೆಗಳ ಜಾರಿಯ ವಿಚಾರದಲ್ಲಿ ಈಗಿನ ಆಡಳಿತರೂಢ ಮತ್ತು ಹಿಂದಿನ ಆಡಳಿತದಲ್ಲಿದ್ದ ಪಕ್ಷಗಳ ಕಾರ್ಯ ವೈಖರಿಯಿಂದ ಜನ ಬೇಸತಿದ್ದಾರೆ.
   ಜೊತೆಗೆ ಈ ವಿಚಾರದಲ್ಲಿ ವಿವಿಧ ಪಕ್ಷಗಳ ನಾಯಕರ ನಿಲುವಿನಲ್ಲಿನ ಗೊಂದಲಗಳಿಂದ ಮತ ಕೇಳಲು ಮನೆ ಬಾಗಿಲ ಮುಂದೆ ಪ್ರತ್ಯಕ್ಷರಾಗುತ್ತಿರುವ ವಿವಿಧ ಪಕ್ಷಗಳ ಕಾರ್ಯಕರ್ತರು ಪ್ರಶ್ನೆಗಳ ಸರಮಾಲೆಗೆ ಮರು ಉತ್ತರಿಸಲಾಗದೆ ಬೆವರುತ್ತಿದ್ದಾರೆ. ಮತ ಕೇಳುವವರಿಗೆ ಮತದಾರ ಮಾತಿನ ಚಾಟಿ ಬೀಸುತಿದ್ದರೆ ಎಲ್ಲ ಪಕ್ಷಗಳಿಗೂ ಇದರ ಬಿಸಿ ತಟ್ಟಿದೆ.
ಆರಂಭದಲ್ಲಿ ಯೋಜನೆಗಳ ಜಾರಿಯ ಬಗ್ಗೆ ವಿವಿಧ ಪಕ್ಷಗಳು ಸ್ಪಷ್ಟ ನಿಲುವನ್ನು ಒಂದೇ ವೇದಿಕೆಯಡಿ ವ್ಯಕ್ತಪಡಿಸಬೇಕು, ಇಲ್ಲವಾದರೆ ರೈತಪರ ಸಂಘಟನೆಗಳು ಮತದಾನ ಬಹಿಷ್ಕಾರದ ಎಚ್ಚರಿಕೆ ಒಡಿದ್ದಾರೆ.
ಆದರೆ ಕೊನೆ ಕ್ಷಣದ ನಿಲುವಿನಲ್ಲಿ ಮೃದುವಾಗಿದ್ದು, ಇದೀಗ ಪಕ್ಷ ನಾಯಕರ ಒತ್ತಡಕ್ಕೆ ಮಣಿದು ಮತ ಚಲಾವಣೆ ಮಾಡುವ ನಿರ್ಧಾರಕ್ಕೆ ಬರುವ ಸಾಧ್ಯತೆಯಲ್ಲಿದ್ದಾರೆ.

ಬಾಲಕೃಷ್ಣ ಭೀಮಗುಳಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.