ಏಕಧರ್ಮ, ಬಹುಧರ್ಮ ಸಿದ್ಧಾಂತಗಳ ಸ್ಪರ್ಧೆ: ಸಿಎಂ
ಮಂಗಳೂರು: ಕೋಮುವಾದಿ ಬಿಜೆಪಿಯ ಏಕ ನಾಯಕತ್ವ, ಏಕ ಸಂಸ್ಕೃತಿ, ಏಕಧರ್ಮ ಪ್ರತಿಪಾದನೆ ಮತ್ತು ನಮ್ಮ ಬಹು ಸಂಸ್ಕೃತಿ, ಬಹುಧರ್ಮೀಯರ, ಸಮಾನತೆಯ ಸಿದ್ಧಾಂತ ನಡುವೆ ಸ್ಪರ್ಧೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮಂಗಳೂರಿನಲ್ಲಿ ಶುಕ್ರವಾರ, ಅಖಿಲ ಭಾರತ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ರಾಹುಲ್ ಗಾಂಧಿ ಭಾಗವಹಿಸಿದ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮೋದಿ ಹಾರ್ಡ್ಕೋರ್ ಆರೆಸೆಸ್ಸ್ ಪ್ರಧಾನಿಯಾದರೆ ದೇಶವನ್ನು ಹಿಂದುತ್ವದ ಕೋಮುವಾದ ರಾಷ್ಟ್ರ ನಿರ್ಮಾಣ ಮಾಡಬಹುದು ಎಂಬ ಭ್ರಮೆಯಲ್ಲಿದ್ದಾರೆ. ಮೋದಿ ಪ್ರಚಾರಕ್ಕೆ ಕೋಟ್ಯಂತರ ಖರ್ಚು, ಹಿಂದೆ ಕಾರ್ಪೊರೇಟ್ ಸಂಸ್ಥೆಗಳಿದ್ದರೂ ಮೋದಿ ಪ್ರಧಾನಿ ಆಗಲು ಸಾಧ್ಯವಿಲ್ಲ.
ಮೋದಿ ಅಲೆ ಇದೆ ಅಬ್ಬರಿಸುತ್ತಿದ್ದಾರೆ, ಪ್ರಚಾರ ಮಾಡುತ್ತಿದ್ದಾರೆ. ಎಲ್ಲೂ ಮೋದಿ ಅಲೆ ಇಲ್ಲ. ಮೋದಿ ಅಲೆ ಇದ್ದಿದ್ದರೆ ಬಿಜೆಪಿ ಶಕ್ತಿ ಕೇಂದ್ರ ಹೇಳುತ್ತಿರುವ ಇಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನ ಸೇರುತ್ತಿರಲಿಲ್ಲ ಎಂದರು.
ಮೋದಿ ಪದೇ ಪದೇ ರಾಜ್ಯಕ್ಕೆ ಬರುತ್ತಲೇ ಇದ್ದಾರೆ. ಏಕೆಂದರೆ ರಾಜ್ಯ ಬಿಜೆಪಿಗರಿಗೆ ಮುಖ ಇಲ್ಲ. ಜೈಲಿಗೆ ಹೋದವರೇ ಇರೋದು. ಇಂಥ ಮಾನಗೆಟ್ಟವರಿಗೆ, ಲಫಂಗರಿಗೆ ಮತ ನೀಡಬೇಕೇ ಎಂದರು.
ಕೇಂದ್ರ ಹೆದ್ದಾರಿ ಸಚಿವ ಆಸ್ಕರ್ ಫರ್ನಾಂಡಿಸ್, ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಶಾಂತಾರಾಮ ನಾಯಕ್ ಇದ್ದರು.
ಬಡತನ ರೇಖೆಗಿಂತ ಮೇಲೆ ಬಂದ್ರು: ಯುಪಿಎ ಆಡಳಿತದ ಹತ್ತು ವರ್ಷದಲ್ಲಿ 14 ಕೋಟಿ ಜನ ಬಡತನ ರೇಖೆಗಿಂತ ಮೇಲೆ ಬಂದಿದ್ದಾರೆ. ಹತ್ತುವರ್ಷದ ಹಿಂದೆ ಟೆಲಿಫೋನ್, ಮೊಬೈಲ್ ಸಂಖ್ಯೆ 3.5 ಕೋಟಿ ಇತ್ತು. ಈಗ 96 ಕೋಟಿ ಜನರ ಬಳಿ ಮೊಬೈಲ್ ಇದೆ, ಇದು ಯುಪಿಎ ಸರ್ಕಾರದ ಸಾಧನೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹೇಳಿದರು.
ಕಾಂಗ್ರೆಸಿಗರ ಭ್ರಷ್ಟಾಚಾರ, 2ಜಿ ಸ್ಪೆಕ್ಟ್ರಂ ಬಗ್ಗೆ ಮಾತನಾಡಲು ನರೇಂದ್ರ ಮೋದಿಗೆ ಯಾವ ನೈತಿಕತೆ ಇದೆ. ಬಗಲಲ್ಲಿ ಇರುವ ಯಡಿಯೂರಪ್ಪ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಅನಂತಕುಮಾರ್ ಕಾಣುವುದಿಲ್ಲವೇ ಎಂದು ಟೀಕಿಸಿದರು. ಮಂಗಳೂರಲ್ಲಿ ಮೋದಿ ಹಿಂದು ಧರ್ಮ ಮಾತನಾಡುತ್ತಾರೆ, 3-4 ದಿನ ಹಿಂದೆ ಕಾಂಗ್ರೆಸ್ನ ಮಹಿಳಾ ಕಾರ್ಪೊರೇಟರ್ ಮೇಲೆ ಆರ್ಎಸ್ಎಸ್, ಬಜರಂಗದಳದವರು ಯಾವ ರೀತಿ ನಡೆದುಕೊಂಡಿದ್ದಾರೆ ಎಂದು ತಿಳಿದುಕೊಳ್ಳಿ ಎಂದರು.
ಕಾಂಗ್ರೆಸ್ ಆಡಳಿತ ನಡೆಸಿ 9 ತಿಂಗಳು ಕಳೆದಿದೆ. ಯಾವುದಾದರು ಸಚಿವರ ಮೇಲೆ ಆಪಾದನೆ ಇದೆಯೆ? ಬಿಜೆಪಿ ಸರ್ಕಾರದಲ್ಲಿ ಡಜನ್ಗಟ್ಟಲೆ ಸಚಿವರ ಜೈಲಿಗೆ ಹೋದರು ಎಂದು ಟೀಕಿಸಿದರು. ನಾವು ಶಾಂತಿ, ಸಾಮರಸ್ಯದ ಯಾತ್ರೆ ಮಾಡಿದೆವು. ಬಿಜೆಪಿ ಸಾಮರಸ್ಯ ಕದಡುವ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ದೇಶದಲ್ಲಿ ಶೇ.12 ಇದ್ದ ವಿದ್ಯಾವಂತರ ಸಂಖ್ಯೆ ಶೇ.72ಕ್ಕೆ ಏರಿಸಿದೆ ಎಂದರು.
ಮೋದಿ ಪದೇ ಪದೇ ರಾಜ್ಯಕ್ಕೆ ಬರುತ್ತಲೇ ಇದ್ದಾರೆ. ಏಕೆಂದರೆ ರಾಜ್ಯ ಬಿಜೆಪಿಗರಿಗೆ ಮುಖ ಇಲ್ಲ. ಜೈಲಿಗೆ ಹೋದವರೇ ಇರೋದು. ಇಂಥ ಮಾನಗೆಟ್ಟವರಿಗೆ ಮತ ನೀಡಬೇಕೇ?
- ಸಿದ್ದರಾಮಯ್ಯ, ಮುಖ್ಯಮಂತ್ರಿ
ದೀನದಲಿತರಿಗೆ ಕಾಂಗ್ರೆಸ್ ತೊಂದರೆ ಕೊಟ್ಟಿಲ್ಲ: ಮೋಟಮ್ಮ
ಮಂಗಳೂರು: ಕಾಂಗ್ರೆಸ್ ದೀನದಲಿತರ ಉದ್ಧಾರಕ್ಕಾಗಿ ಶ್ರಮಿಸಿದೆ ಹೊರತು ಇಲ್ಲಿಯವರೆಗೆ ತೊಂದರೆ ಕೊಟ್ಟಿಲ್ಲ ಎಂದು ಮಾಜಿ ಸಚಿವೆ ಮೋಟಮ್ಮ ಹೇಳಿದರು. ಮಂಗಳೂರು ನೆಹರೂ ಮೈದಾನದಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಚುನಾವಣೆ ಸಮಾವೇಶದಲ್ಲಿ ಮಾತನಾಡಿದರು.
ಜಾತ್ಯಾತೀತ ಜನತಾದಳ ಜಾತಿ ಆಧಾರದ ಮೇಲೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಬಗ್ಗೆ ಈ ಬಾರಿ ಸಾಬೀತುಪಡಿಸಿದೆ. ಆದರೆ ಕಾಂಗ್ರೆಸ್ ದೇಶದ ಅಭಿವೃದ್ಧಿಯಲ್ಲಿ ಮೈಲುಗಲ್ಲು ಸಾಧಿಸಿದೆ ಎಂದರು. ಇದೇ ಸಂದರ್ಭ ಚಿತ್ರನಟಿ ಭವ್ಯ ಮಾತನಾಡಿ, ಚಿತ್ರರಂಗದಲ್ಲಿ ತನ್ನನ್ನು ಪ್ರೋತ್ಸಾಹಿಸಿದ ಅಭಿಮಾನಿಗಳು ರಾಜಕೀಯದಲ್ಲೂ ಬೆಳೆಸುತ್ತೀರಾ ಎಂಬ ನಂಬಿಕೆಯಿದೆ ಎಂದರು.
ಮಿಠಾಯಿ ನೀಡಿದ ರಾಹುಲ್!
ಕಾಂಗ್ರೆಸ್ ಉಪಾಧ್ಯಕ್ಷ ಯುವ ನಾಯಕ ರಾಹುಲ್ ಗಾಂಧಿ ವೇದಿಕೆ ಬಂದು ಕುಳಿತ ಸ್ವಲ್ಪ ಹೊತ್ತಲ್ಲಿಯೇ ಕಿಸೆಯಿಂದ ಮಿಠಾಯಿ ತೆಗೆದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೈಗೆ ಕೊಟ್ಟರು. ರ್ಯಾಪರ್ ಕಳಚಿದ ಸಿದ್ದರಾಮಯ್ಯ ಎಲ್ಲರ ಎದುರೇ ಬಾಯಿಗೆ ಹಾಕಿದರು.
ಬೇಗನೇ ಎದ್ದರು
ರಾಹುಲ್ ಗಾಂಧಿ ಭಾಷಣ ಆರಂಭಿಸುತ್ತಿದ್ದಂತೆಯೇ ಪ್ರೇಕ್ಷಕರ ಗ್ಯಾಲರಿ ಹಿಂಭಾಗದಲ್ಲಿ ಕುಳಿತಿದ್ದವರು ಅದರಲ್ಲಿಯೂ ಮಹಿಳೆಯರು ಎದ್ದು ಹೋಗತೊಡಗಿದರು. ಟ್ರಾಫಿಕ್ ಜಾಮ್ಗಿಂತ ಮುಂಚಿತ ಮನೆ ಸೇರುವ ತವಕ ಅವರಲ್ಲಿತ್ತು.
ಜೋರಾಗಿ ಹೇಳ್ರಿ...!
ಕಾಂಗ್ರೆಸ್ನ ತಾಯಿಗೆ ಶಕ್ತಿ ಕೊಡಬೇಕು ಎಂದು ದಿಲ್ಲಿಯಿಂದ ಮಗ ರಾಹುಲ್ನನ್ನು ಇಲ್ಲಿಗೆ ಕಳುಹಿಸಿದ್ದಾರೆ. ಮಂಗಳೂರಿನ ಜನ ಗೌರವ ಕೊಡಬೇಕು ಅಲ್ವ, ಹೌದೋ ಅಲ್ವಾ ಎಂದು ಪರಮೇಶ್ವರ್ ಪ್ರಶ್ನಿಸಿದರು. ಕಾರ್ಯರ್ತರಿಂದ ಪ್ರತಿಕ್ರಿಯೆ ಸಿಗದಾಗ ಜೋರಾಗಿ ಹೇಳ್ರಿ , ಹೌದಾ ಅಲ್ವಾ ಎಂದು ರೇಗಿದರು. ಜನ ಹೌದು ಕೂಗಿದರು.
ರೆಡ್ಡಿ-ಪೂಜಾರಿ...
ಭಾಷಣದಲ್ಲಿ ಜನಾರ್ದನ ಪೂಜಾರಿ ಹೆಸರು ಹೇಳುವ ಬದಲು ಜನಾರ್ದನ ರೆಡ್ಡಿ ಎಂದು ಸಿದ್ದರಾಮಯ್ಯ ಹೇಳಿ ಬಳಿಕ ತಿದ್ದಿಕೊಂಡರು. ಪೂಜಾರಿ ಹಿರಿಯ ನಾಯಕರು, ಅವರನ್ನು ಲೋಕಸಭೆಗೆ ಕಳುಹಿಸಿ, ಲೋಕಸಭೆಗೂ ಗೌರವ ಬರುತ್ತದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

