ಚುನಾವಣೆ ಸಿದ್ಧತೆಪರಿಶೀಲನಾ ಸಭೆ ಇಂದು
ಮಂಗಳೂರು: ರಾಜ್ಯ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಹಾಗೂ ಭದ್ರತಾ ಕಾರ್ಯದರ್ಶಿ ಅವರು ಏ.7ರಂದು ಜಿಲ್ಲೆಯ ಚುನಾವಣಾಧಿಕಾರಿ ಮತ್ತು ಸಿಬ್ಬಂದಿ ಜತೆ ಚುನಾವಣೆ ಸಿದ್ಧತೆ ಪರಿಶೀಲನಾ ಸಭೆ ನಡೆಸಲಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಚುನಾವಣಾಧಿಕಾರಿ ಎ.ಬಿ.ಇಬ್ರಾಹಿಂ, ಜಿಲ್ಲೆಯಲ್ಲಿ ಚುನಾವಣೆ ಸಿದ್ಧತೆ ಕುರಿತು ಇವರಿಬ್ಬರು ಕಂದಾಯ ಹಾಗೂ ಪೊಲೀಸ್ ಇಲಾಖೆ ಜತೆ ಚರ್ಚೆ ನಡೆಸುವರು ಎಂದರು.
ಜಿಲ್ಲೆಯ 8 ಕ್ಷೇತ್ರಗಳಿಗೆ ಸಿಬ್ಬಂದಿ ಹಾಗೂ ಅಧಿಕಾರಿಗಳ ನಿಯೋಜನೆಗೆ 2ನೇ ಹಂತದಲ್ಲಿ ಹಂಚಿಕೆ ಮಾಡಲಾಗಿದೆ. 3ನೇ ಹಂತದ ಹಂಚಿಕೆ ಏ.16ರಂದು ನಡೆಯಲಿದೆ. ಮಸ್ಟರಿಂಗ್ ದಿನ ಯಾರಿಗೆ ಎಲ್ಲೆಲ್ಲಿ ಮತದಾನ ಕರ್ತವ್ಯ ಇರುತ್ತದೆ ಎಂಬುದು ಗೊತ್ತಾಗಲಿದೆ. ಮಹಿಳೆಯರನ್ನು ಆಯಾ ಕ್ಷೇತ್ರದಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗುತ್ತದೆ. ಈಗಾಗಲೇ ಮತಗಟ್ಟೆ ಕರ್ತವ್ಯ ನಿರ್ವಹಿಸುವ ತಂಡ ರಚಿಸಲಾಗಿದ್ದು, ಏ.12ರಂದು ಅವರಿಗೆ ತರಬೇತಿ ನೀಡಲಾಗುವುದು. ತಮ್ಮ ತಂಡದಲ್ಲಿ ಯಾರ್ಯಾರು ಇರುತ್ತಾರೆ ಎಂಬುದು ಈಗಾಗಲೇ ಗೊತ್ತಾಗಿರುವುದರಿಂದ ತರಬೇತಿ, ಸಂವಹನ ಸುಲಭವಾಗಲಿದೆ ಎಂದು ತಿಳಿಸಿದರು.
ಸರ್ಕಾರಿ ನೌಕರರಲ್ಲಿ ಶೇ.90 ಜಿಲ್ಲೆಯವರಿದ್ದರೂ ಶೇ.75 ಮಂದಿ ಇನ್ನೂ ಮತಗಟ್ಟೆಯಲ್ಲಿ ಮತದಾನಕ್ಕೆ ಇಡಿಸಿ ಪಡೆದಿಲ್ಲ. ಜಿಲ್ಲೆಯಲ್ಲಿ ಒಟ್ಟು 8,108 ಮಂದಿ ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ. 1,400 ಮಂದಿ ಹೊರ ಜಿಲ್ಲೆಯ ನೌಕರರಿದ್ದಾರೆ. ಇದುವರೆಗೆ 3,500 ಇಡಿಸಿ ಕೋರಿಕೆ ಬಂದಿದೆ. 177 ಅಂಚೆ ಮತಪತ್ರ ಬಂದಿದೆ ಎಂದರು.
ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಮತಗಟ್ಟೆಗೆ ಇರವನ್ನು ನೇಮಿಸಲಾಗುವುದು. ಜಿಲ್ಲೆಯಲ್ಲಿ 379 ಸೂಕ್ಷ್ಮ, 198 ಅತೀ ಸೂಕ್ಷ್ಮ, 62 ನಕ್ಸಲ್ ಬಾಧಿತ ಮತಗಟ್ಟೆಗಳಿವೆ. 305 ಮತಗಟ್ಟೆಗಳಲ್ಲಿ ವೈಯಕ್ತಿಕವಾಗಿ ಮೈಕ್ರೋ ಅಬ್ಸರ್ವರ್ಸ್ ಕಾರ್ಯನಿರ್ವಹಿಸಲಿದ್ದಾರೆ. ಈವರೆಗೆ ಅಬಕಾರಿ 20, ಇತರೆ 55 ಪ್ರಕರಣ, 3 ಸೈಬರ್ ಪ್ರಕರಣ ದಾಖಲಿಸಲಾಗಿದೆ. ಯುಗಾದಿ ಉತ್ಸವದಲ್ಲಿ ಧರ್ಮವನ್ನು ಚುನಾವಣೆ ಪ್ರಚಾರಕ್ಕೆ ಬಳಸಿದರೆಂದು ಆರ್ಎಸ್ಎಸ್ ಮುಖಂಡ ಡಾ.ಪ್ರಭಾಕರ ಭಟ್ ಕಲ್ಲಡ್ಕಗೆ ನೋಟಿಸ್ ನೀಡಲಾಗಿದೆ ಎಂದರು.
ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯಿಂದ ಒಟ್ಟು 438 ಪ್ರಕರಣ ದಾಖಲಿಸಲಾಗಿದೆ. 363 ಪ್ರಕರಣದಲ್ಲಿ ಮುಚ್ಚಳಿಕೆ ಪಡೆಯಲಾಗಿದೆ. 1 ಪ್ರಕರಣ ಮುಕ್ತಾಯಗೊಳಿಸಲಾಗಿದೆ. ಕಲಂ 109ರಂತೆ ಒಟ್ಟು 13 ಪ್ರಕರಣ ದಾಖಲಾಗಿದ್ದು, 17 ಮಂದಿಯಿಂದ ಮುಚ್ಚಳಿಕೆ ಪಡೆಯಲಾಗಿದೆ. 1 ಪ್ರಕರಣ ಮುಕ್ತಾಯಗೊಳಿಸಲಾಗಿದೆ. ಕಲಂ 110ರಂತೆ 417 ಪ್ರಕರಣ ದಾಖಲಾಗಿದ್ದು, 260 ಮಂದಿಯಿಂದ ಮುಚ್ಚಳಿಕೆ ಪಡೆಯಲಾಗಿದೆ ಎಂದು ಹೇಳಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

