ಬಿಜೆಪಿಯಲ್ಲಿ ಪೂಜಾರಿ, ಕಾಂಗ್ರೆಸ್ಸಲ್ಲಿ ಕಟೀಲ್!
ಮಂಗಳೂರು: ಇಲ್ಲಿ ಮೋದಿ ಅಲೆ ಇದೆ, ಕಾಂಗ್ರೆಸ್ ಸೋಲು ನಿಶ್ಚಿತ ಎಂದು 'ಪೂಜಾರಿ' ಹೇಳಿಕೆ ನೀಡುತ್ತಾರೆ, ಮೋದಿ ಅಲೆ ಇಲ್ಲ, ಬಿಜೆಪಿ ಸೋಲು ನಿಶ್ಚಿತ ಎಂದು 'ಕಟೀಲ್' ಹೇಳಿಕೆ ನೀಡುತ್ತಾರೆ!
ಕಾಂಗ್ರೆಸ್ ಅಭ್ಯರ್ಥಿ ಜನಾರ್ದನ ಪೂಜಾರಿ ಪಕ್ಕಾ ಫುಟ್ಬಾಲ್ ಆಟಗಾರನಂತೆ ವಿರೋಧಿಗಳ ಗೋಲ್ಪೋಸ್ಟ್ ಬಳಿ ಬಂದು 'ಪೂಜಾರಿ ಜಾತಿ' ಗೋಲ್ ಬಾರಿಸಲು ಸಿದ್ಧತೆ ಮಾಡುವಾಗ ಬಿಜೆಪಿ ಡಿಫೆಂಡರ್ 'ಪೂಜಾರಿ'ಗಳು ಗೋಲ್ ತಡೆಯಲು ಪೂಜಾರಿಯ ಸುತ್ತಲೇ ಸುತ್ತುತ್ತಾರೆ.
ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದ ಚುನಾವಣೆ ಪ್ರಚಾರ ವಿಭಿನ್ನ ರೂಪ ತಲುಪಿದೆ. ಚುನಾವಣೆ ಅಂದ್ರೆ ಯುದ್ಧ. ಇಲ್ಲಿ ಚಾಣಕ್ಯ ನೀತಿ ಜತೆ ಶಕುನಿ ತಂತ್ರಗಳು ಮೇಳೈಸುತ್ತಿದೆ. ಇದು ಮತದಾರರಿಗೆ ಗೊಂದಲದ ಜತೆ ಮನೋರಂಜನೆ ನೀಡುತ್ತಿದೆ. ಎದುರಾಳಿ ಅಭ್ಯರ್ಥಿಯ ಹೆಸರನ್ನೇ ಹೋಲುವವರನ್ನು ಚುನಾವಣೆ ಕಣದಲ್ಲಿ ನಿಲ್ಲಿಸಿ ಮತ ವಿಭಜನೆ ಮಾಡುವ ತಂತ್ರ ಹಳೆಯದು. ಇದೀಗ ಹೇಳಿಕೆ ನೀಡಲು ತದ್ರೂಪಿ ಹೆಸರುಗಳ ನಾಯಕರನ್ನು ಸೃಷ್ಟಿ ಮಾಡುವ ಕೆಲಸ ನಡೆಯುತ್ತಿದೆ.
ರುಕ್ಮಯ ಪೂಜಾರಿ ಜನತಾ ಪರಿವಾರದ ಕಾಲದಿಂದ ಈಗ ಬಿಜೆಪಿಗೂ ನಾಯಕರು. ಕಾಂಗ್ರೆಸ್ನ ಜನಾರ್ದನ ಪೂಜಾರಿಯ ಜಾತಿ ಇಮೇಜ್ಗೆ ಅಡ್ಡಗಾಲಾಗಲು ಅವರನ್ನು ಬಿಜೆಪಿ ಚುನಾವಣೆ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಮಾಡಿದರು. ಬಿಜೆಪಿ ಪರ ಹೇಳಿಕೆಗಳು ಪತ್ರಿಕೆಗಳಲ್ಲಿ ಪೂಜಾರಿ ಹೇಳಿಕೆ ರೂಪದಲ್ಲಿ ಪ್ರಕಟವಾಗಿ ಕಾಂಗ್ರೆಸ್ ಕಾರ್ಯಕರ್ತರಿಗೂ ಮುಖಂಡರಿಗೂ ಇರಿಸುಮುರಿಸಾಗುತ್ತಿತ್ತು. ಆಗಾಗ ಬಿಜೆಪಿಯ ಕೋಟಾ ಶ್ರೀನಿವಾಸ ಪೂಜಾರಿ ಹೇಳಿಕೆಗಳು ಕಾಂಗ್ರೆಸಿಗರಿಗೆ ಕಿರಿಕ್ ಆಗುತ್ತಿತ್ತು. ಇತ್ತೀಚೆಗಂತೂ ರುಕ್ಮಯ ಪೂಜಾರಿ ಸುದ್ದಿಗೋಷ್ಠಿಯ ವರದಿ ಪತ್ರಿಕೆಗಳಲ್ಲಿ 'ಮೋದಿ ಅಲೆ ಇದೆ, ಕಾಂಗ್ರೆಸ್ಗೆ ಸೋಲು ನಿಶ್ಚಿತ: ಪೂಜಾರಿ' ಎಂದು ಪ್ರಕಟವಾಯಿತು.
ಇದರಿಂದ ಸಿಟ್ಟಿಗೆದ್ದ ಜನಾರ್ದನ ಪೂಜಾರಿ ಅಭಿಮಾನಿಗಳು ಇದಕ್ಕೆ ಪ್ರತ್ಯಸ್ತ್ರವಾಗಿ ರಾತ್ರೋರಾತ್ರಿ ಕಾಂಗ್ರೆಸ್ನಲ್ಲಿ ಹಿಂದುಳಿದ ವರ್ಗಗಳ ಪ್ರಚಾರ ಸಮಿತಿ ಮಾಡಿ ಅದಕ್ಕೆ ನವೀನ್ ಕಟೀಲ್ ಎಂಬವರನ್ನು ಅಧ್ಯಕ್ಷರನ್ನಾಗಿ ಮಾಡಿದರು! ತರಾತುರಿ ಸುದ್ದಿಗೋಷ್ಠಿ ನಡೆಸಿ ಎರಡೇ ದಿನದೊಳಗೆ 'ಮೋದಿ ಅಲೆ ಇಲ್ಲ, ಬಿಜೆಪಿ ಸೋಲು ನಿಶ್ಚಿತ: ಕಟೀಲ್' ಎಂಬ ಹೇಳಿಕೆ ಸುದ್ದಿಯಾಗಿ ಪ್ರಕಟಿಸುವಲ್ಲಿ ಯಶಸ್ವಿಯಾದರು!
ಜಿತೇಂದ್ರ ಕುಂದೇಶ್ವರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

