ಮತಗಟ್ಟೆ ಸಿಬ್ಬಂದಿಗೆ ಪರೋಟ, ಉಪ್ಪಿಟ್ಟು ಮೆನು...
ಮಂಗಳೂರು: ರಾತ್ರಿಗೆ ವೆಜಿಟೇಬಲ್ ಬಾತ್, ಪರೋಟ ಸಬ್ಜಿ ಮತ್ತು ಬಾಳೆಹಣ್ಣು, ಮರುದಿನ ಬೆಳಗ್ಗೆ ಉಪ್ಪಿಟ್ಟು ಅವಲಕ್ಕಿ, ಮಧ್ಯಾಹ್ನ ಪಲಾವು, ಪರೋಟ...
ಇದು ಏ.17ರಂದು ನಡೆಯುತ್ತಿರುವ ಲೋಕಸಭೆ ಚುನಾವಣೆಯ ಮತದಾನ ದಿನದ ಮೆನು. ಮತಗಟ್ಟೆಗೆ ನಿಯೋಜಿಸಲ್ಪಟ್ಟ ಸಿಬ್ಬಂದಿಗೆ ಈ ಬಾರಿ ಅಕ್ಷರ ದಾಸೋಹ ಹಾಗೂ ಇಸ್ಕಾನ್ನಿಂದ ಊಟೋಪಹಾರ ವ್ಯವಸ್ಥೆ ಮಾಡಲಾಗಿದೆ. ಮತಗಟ್ಟೆ ಸಿಬ್ಬಂದಿ ಖುಷಿಯಿಂದ ಮತಗಟ್ಟೆ ಕೆಲಸ ನಿರ್ವಹಿಸುವಂತೆ ಚುನಾವಣೆ ಆಯೋಗವೇ ಆಹಾರ ವ್ಯವಸ್ಥೆಯಲ್ಲಿ ಸುಧಾರಣೆ ಕ್ರಮ ತಂದಿದೆ.
ಈವರೆಗೆ ಚುನಾವಣೆಯಲ್ಲಿ ಮತಗಟ್ಟೆ ಸಿಬ್ಬಂದಿಗೆ ಆಹಾರ ವ್ಯವಸ್ಥೆ ಆಯೋಗ ಮಾಡಿದ್ದಿಲ್ಲ. ಬೂತ್ ಮಟ್ಟದ ಅಧಿಕಾರಿಗಳೇ ಇದನ್ನು ಹೊಂದಿಸಬೇಕಾಗುತ್ತಿತ್ತು. ಅದೂ ಕೆಲವು ಕಡೆ ಅಧ್ವಾನ ಆಗುತ್ತಿತ್ತು. ಈ ಕಾರಣಕ್ಕೂ ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಳ್ಳಲು ಸರ್ಕಾರಿ ನೌಕರರು ಹಿಂದೇಟು ಹಾಕುತ್ತಿದ್ದರು. ವೀಡಿಯೋ ಆಫೀಸರ್, ವೆಬ್ಕಾಸ್ಟಿಂಗ್ ಸಿಬ್ಬಂದಿ ಆಹಾರವಿಲ್ಲದೆ ಕಾರ್ಯನಿರ್ವಹಿಸಿದ ಉದಾಹರಣೆ ಇರುತ್ತಿತ್ತು.
ಈ ಬಾರಿ ಆಹಾರ ಸಮಸ್ಯೆ ಇಲ್ಲ: ಈ ಬಾರಿ ಮತಗಟ್ಟೆ ಸಿಬ್ಬಂದಿ ಆಹಾರ ವಿಚಾರದಲ್ಲಿ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಮಸ್ಟರಿಂಗ್ ಕೇಂದ್ರದಲ್ಲಿ ಬೆಳಗ್ಗೆ ಉಪಹಾರ, ಮಧ್ಯಾಹ್ನ ಊಟ ನೀಡಿದರೆ, ರಾತ್ರಿ ಮತಗಟ್ಟೆಯಲ್ಲಿ ನಾಲ್ಕೈದು ಮಂದಿಗೆ ಶಾಲೆಯ ಅಕ್ಷರದಾಸೋಹ ಸಿಬ್ಬಂದಿ ಅಡುಗೆ ಮಾಡುತ್ತಾರೆ. ಸ್ಥಳೀಯ ಲಭ್ಯತೆಯನುಸಾರ ಮೆನು ಇರುತ್ತದೆ. ಮತದಾನ ದಿನ ಬೆಳಗ್ಗೆ ತಿಂಡಿ, ಮಧ್ಯಾಹ್ನ ಊಟ ಸಿದ್ಧಪಡಿಸುತ್ತಾರೆ.
ಹಣ ಆಯೋಗ ನೀಡುತ್ತೆ: 'ಜಿಲ್ಲೆಯಲ್ಲಿ 1,766 ಮತಗಟ್ಟೆ ಇದ್ದು, ಎಲ್ಲ ಮತಗಟ್ಟೆಗಳಲ್ಲಿ ಆಹಾರ ವ್ಯವಸ್ಥೆಗೆ ಆಯೋಗವೇ ಮೊತ್ತ ನೀಡುತ್ತಿದೆ. ಒಟ್ಟು ರು. 17.66 ಲಕ್ಷ ಮೊತ್ತ ಬಿಡುಗಡೆ ಮಾಡಲಾಗಿದೆ. ಪ್ರತಿ ಸಿಬ್ಬಂದಿಗೆ ರು. 150 ಆಹಾರಕ್ಕೆ ವೆಚ್ಚ ಬರುತ್ತದೆ. ಈ ಮೊತ್ತವನ್ನು ಪ್ರತಿ ಮತಗಟ್ಟೆಯ ಬೂತ್ ಮಟ್ಟದ ಅಧಿಕಾರಿಗೆ ಕೊಟ್ಟಿದ್ದೇವೆ' ಎಂದು ಜಿಲ್ಲಾ ಚುನಾವಣಾಧಿಕಾರಿ ಎ.ಬಿ.ಇಬ್ರಾಹಿಂ ತಿಳಿಸಿದ್ದಾರೆ.
'ಮತಗಟ್ಟೆ ಸಿಬ್ಬಂದಿಗೆ ಆಹಾರ ವ್ಯವಸ್ಥೆಯನ್ನು ಆಯೋಗ ಮಾಡುತ್ತಿದೆ. ಊಟ, ತಿಂಡಿ ಹೊರತುಪಡಿಸಿ ಕಾಫಿ ಟೀ ವ್ಯವಸ್ಥೆಯನ್ನು ಸ್ಥಳೀಯವಾಗಿ ಮಾಡುವಂತೆ ಸೂಚಿಸಲಾಗಿದೆ. ಮಧ್ಯಾಹ್ನ ನಂತರ ರಾತ್ರಿ ವರೆಗೆ ಕಾಫಿ, ತಿಂಡಿ ಅನುಕೂಲ ಇರುವಲ್ಲಿ ಮಾಡಿಕೊಳ್ಳುವಂತೆ ಬೂತ್ ಮಟ್ಟದ ಅಧಿಕಾರಿಗೆ ಸೂಚಿಸಿದ್ದೇವೆ. ಇದಲ್ಲದೆ ಆಯೋಗದಿಂದ ಊಟೋಪಹಾರಕ್ಕೆಂದು ಮತಗಟ್ಟೆ ಸಿಬ್ಬಂದಿಗೆ ಪ್ರತ್ಯೇಕವಾಗಿ ರು. 1,500 ನೀಡುತ್ತೇವೆ. ಮತದಾನ ಮುಕ್ತಾಯ ಬಳಿಕ ಮತಗಟ್ಟೆ ಸಿಬ್ಬಂದಿಗೆ ಡಿಮಸ್ಟರಿಂಗ್ ಕೇಂದ್ರದಲ್ಲಿ ರಾತ್ರಿ ಊಟದ ವ್ಯವಸ್ಥೆ ಮಾಡಲಾಗಿದೆ' ಎನ್ನುತ್ತಾರೆ ಹೆಚ್ಚವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು.
'ನಾಲ್ಕು ಮಂದಿ ಮತಗಟ್ಟೆ ಸಿಬ್ಬಂದಿ ಹಾಗೂ ಓರ್ವ ಡಿ ಗ್ರೂಪ್ ನೌಕರ, ಅಲ್ಲದೆ, ಅಲ್ಲಿನ ಭದ್ರತಾ ಸಿಬ್ಬಂದಿ, ಸೆಕ್ಟರ್ ಅಧಿಕಾರಿ, ವಿಡಿಯೋ ಗ್ರಾಫರ್, ವೆಬ್ಕಾಸ್ಟಿಂಗ್ ಸಿಬ್ಬಂದಿಗೂ ಪಾಲಿಕೆ ವ್ಯಾಪ್ತಿಯಲ್ಲಿ ಇಸ್ಕಾನ್ ಊಟೋಪಹಾರ ಸಿಗಲಿದೆ. ಆದರೆ ಮತಗಟ್ಟೆ ಸಿಬ್ಬಂದಿ ಕರೆದುಕೊಂಡು ಬರುವ ವಾಹನ ಚಾಲಕರಿಗೆ ಈ ವ್ಯವಸ್ಥೆ ಇರುವುದಿಲ್ಲ' ಎಂದು ಮಂಗಳೂರು ಮಹಾನಗರ ಪಾಲಿಕೆ ಮತಗಟ್ಟೆ ಆಹಾರ ಉಸ್ತುವಾರಿ ನೋಡಿಕೊಳ್ಳುತ್ತಿರುವ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ತಿಳಿಸಿದ್ದಾರೆ.
-ಆತ್ಮಭೂಷಣ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

