ಮತದಾನಕ್ಕೆ ಸುಳ್ಯ ಕ್ಷೇತ್ರ ಸಕಲ ಸಿದ್ಧತೆ 180 ಕೇಂದ್ರ
ಸುಳ್ಯ: ಗುರುವಾರ ನಡೆಯಲಿರುವ ಲೋಕಸಭಾ ಚುನಾವಣೆಗೆ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಸಂಪೂರ್ಣ ಸಿದ್ಧತೆ ನಡೆದಿದೆ.
ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ 1,46,015 ಮತದಾರರಿದ್ದಾರೆ. ಇವರಲ್ಲಿ 93,743 ಮಂದಿ ಪುರುಷರು, 92,266 ಮಂದಿ ಮಹಿಳೆಯರು. ಕ್ಷೇತ್ರದಲ್ಲಿ ಈ ಹಿಂದೆ 180 ಮತದಾನ ಕೇಂದ್ರಗಳಿದ್ದು, ಈ ಬಾರಿ ಅದನ್ನು 225ಕ್ಕೆ ಏರಿಸಲಾಗಿದೆ. ಸುಮಾರು 1500 ಮಂದಿ ಚುನಾವಣಾ ಸಿಬ್ಬಂದಿ ಈ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದು ಅವರೆಲ್ಲರೂ ಬುಧವಾರ ಮಸ್ಟರಿಂಗ್ ಕೇಂದ್ರವಾದ ಸುಳ್ಯ ನೆಹರೂ ಸ್ಮಾರಕ ಕಾಲೇಜಿನಿಂದ ಹೊರಟಿದ್ದಾರೆ.
ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಮಸ್ಟರಿಂಗ್ ಕೇಂದ್ರಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಸುಳ್ಯ ವಿಧಾನಸಭಾ ಕ್ಷೇತ್ರದ ಎನ್ಎಂಸಿ, ರೋಟರಿ ಶಾಲೆ, ಸ್ನೇಹ ಶಾಲೆಯ ಬೂತ್ಗಳನ್ನು ಮಾದರಿ ಬೂತ್ಗಳೆಂದು ಪರಿಗಣಿಸಲಾಗಿದ್ದು, ಅಲ್ಲಿ ಮತದಾರರಿಗೆ ಭವ್ಯ ಸ್ವಾಗತ ಕೋರಿ, ಆಸನ ವ್ಯವಸ್ಥೆ ಮಾಡಿ, ಕುಡಿಯಲು ಪಾನೀಯ ನೀಡಿ, ಮತದಾನ ಮಾಡಿದ ಬಳಿಕ ಗೌರವದಿಂದ ಕಳುಹಿಸಿ ಕೊಡುವ ವ್ಯವಸ್ಥೆ ಮಾಡಲಾಗಿದೆ.
ಮತದಾನ ಕೇಂದ್ರಕ್ಕೆ ಬಂದು ಹೋಗುವ ದೂರದ ಮತದಾರರಿಗೆ ವಾಹನ ವ್ಯವಸ್ಥೆಯನ್ನು ಚುನಾವಣಾ ಆಯೋಗವೇ ಮಾಡಿದ್ದು ಮತಗಟ್ಟೆ ಸಿಬ್ಬಂದಿಯನ್ನು ಕರೆದೊಯ್ಯುವ ವಾಹನವೇ ದೂರ ಮತದಾರನ್ನು ಕರೆತರಲು ವ್ಯವಸ್ಥೆ ಮಾಡಲಾಗಿದೆ.
ಬಂಟ್ವಾಳ: ಅಚ್ಚುಕಟ್ಟು ವ್ಯವಸ್ಥೆ ನಿಭಾಯಿಸಿದ ಚುನಾವಣೆ ಆಯೋಗ
ಬಂಟ್ವಾಳ: ಲೋಕಸಮರಕ್ಕೆ ಕ್ಷಣಗಣನೆ ಆರಂಭಗೊಂಡಿದ್ದು, ಬಂಟ್ವಾಳ ವಿಧಾನಸಭಾ ಕ್ಷೇತ್ರದ ಮತಗಟ್ಟೆಗಳಿಗೆ ನಿಯೋಜಿಸಲ್ಪಟ್ಟ ಅಧಿಕಾರಿಗಳು, ಸಿಬ್ಬಂದಿ ಮತಯಂತ್ರದೊಂದಿಗೆ ಮೊಡಂಕಾಪುವಿನ ಇನ್ಫೆಂಟ್ ಜೀಸಸ್ ಆಂಗ್ಲ ಮಾಧ್ಯಮ ಶಾಲೆಯ ವಠಾರದಿಂದ ಬಿಗಿ ಭದ್ರತೆಯಲ್ಲಿ ಮತಗಟ್ಟೆಗೆ ಪಯಣ ಬೆಳೆಸಿದರು. ಬುಧವಾರ ಬೆಳಗ್ಗಿನಿಂದಲೇ ಚುನಾವಣಾ ಸಿದ್ಧತೆ ಪ್ರಕ್ರಿಯೆ ಬಿರುಸಿನ ನಡೆದಿದ್ದು, ಮತಗಟ್ಟೆಗೆ ತೆರಳುವ ಅಧಿಕಾರಿಗಳಿಗೆ, ಸಿಬ್ಬಂದಿಗೆ ತರಬೇತಿ ಸೇರಿದಂತೆ ವಿವಿಧ ಮಾಹಿತಿ ನೀಡಲಾಯಿತು. ಮಧ್ಯಾಹ್ನದ ಹೊತ್ತಿಗೆ ಆಯಾ ಮತಗಟ್ಟೆ ಅಧಿಕಾರಿಗಳು ಸಿಬ್ಬಂದಿಯೊಂದಿಗೆ ತಮಗೆ ಗುರುತಿಸಲಾದ ಮತಗಟ್ಟೆಗೆ ಹೊರಟರು.
240 ಮತಗಟ್ಟೆ: ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 240 ಮತಗಟ್ಟೆಗಳಿದ್ದು ಇದರಲ್ಲಿ ಅತಿ ಸೂಕ್ಷ್ಮ 16, ಸೂಕ್ಷ್ಮ 48, 168 ಸಾಮಾನ್ಯ, 2 ಕ್ರಿಟಿಕಲ್ ಹಾಗೂ ಕಲ್ಲಡ್ಕ, ಕೊಡಂಗೆ ಸೇರಿದಂತೆ 6 ಮತಗಟ್ಟೆಯನ್ನು ವಲ್ನರೇಬಲ್ ಮತಗಟ್ಟೆಯೆಂದು ಪರಿಗಣಿಸಲಾಗಿದೆ.
ಮಹಿಳೆಯರೇ ಅಧಿಕ: ಬಂಟ್ವಾಳ ಕ್ಷೇತ್ರದಲ್ಲಿ ಪುರುಷ ಮತದಾರರಕ್ಕಿಂತ ಮಹಿಳಾ ಮತದಾರರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಕ್ಷೇತ್ರದ 2,01,422 ಮತದಾರರು ಮತ ಚಲಾಯಿಸಬೇಕಾಗಿದ್ದು, ಈ ಪೈಕಿ 1,00,588 ಪುರುಷರು ಹಾಗೂ 1,00,845 ಮಹಿಳೆಯರೂ ಸೇರಿದ್ದಾರೆ. ಪ್ರತಿ ಬೂತ್ಗೂ ಓರ್ವ ಕಾನ್ಸ್ಟೇಬಲ್ ಹಾಗೂ ಓರ್ವ ಗೃಹರಕ್ಷಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.ಅತಿಸೂಕ್ಷ್ಮ, ಕ್ರಿಟಿಕಲ್ ಹಾಗೂ 6 ವಲ್ನರೇಬಲ್ ಮತಗಟ್ಟೆಗಳು ಸೇರಿ 24 ಮತಗಟ್ಟೆಗಳಿಗೆ ಹೆಚ್ಚುವರಿ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ.
ಬೆಳ್ತಂಗಡಿ: 57 ಬೂತ್ಗಳಲ್ಲಿ ವಿಡಿಯೊ ಚಿತ್ರೀಕರಣ ವ್ಯವಸ್ಥೆ
ಬೆಳ್ತಂಗಡಿ: ಲೋಕಸಭಾ ಚುನಾವಣೆಯ ಅಂತಿಮ ಸಿದ್ಧತೆಗಳು ಬುಧವಾರ ಉಜಿರೆಯ ಎಸ್ಡಿಎಂ ಕಾಲೇಜಿನಲ್ಲಿ ನಡೆದಿದ್ದು ಮಧ್ಯಾಹ್ನದ ವೇಳೆಗೆ ಮತಯಂತ್ರಗಳೊಂದಿಗೆ ಚುನಾವಣಾ ಸಿಬ್ಬಂದಿ ತಂತಮ್ಮ ಮತಗಟ್ಟೆಗಳಿಗೆ ತೆರಳಿದರು.
ತಾಲೂಕಿನ 238 ಮತಗಟ್ಟೆಗಳಿಗೆ 1112 ಮಂದಿ ಸಿಬ್ಬಂದಿ ನಿಯೋಜಿಸಲಾಗಿದೆ. ಅದರಲ್ಲಿ 834 ಮಂದಿ ಮತಗಟ್ಟೆ ಅಧಿಕಾರಿಗಳು. 278 ಮಂದಿ ಪ್ರಿಸೈಡಿಂಗ್ ಅಧಿಕಾರಿಗಳು ಕರ್ತವ್ಯ ನಿರ್ವಹಿಸಲಿದ್ದಾರೆ. 71 ಮಂದಿ ಮೈಕ್ರೋ ಅಬ್ಸರ್ವರ್ಸ್ ಹಾಗೂ 57 ಮಂದಿ ವೆಬ್ಕಾಸ್ಟಿಂಗ್ ಸ್ಟೂಡೆಂಟ್ಸ್ ಸಹಕರಿಸಲಿದ್ದಾರೆ. 57 ಬೂತ್ಗಳಲ್ಲಿ ವೀಡಿಯೊ ಚಿತ್ರೀಕರಣಕ್ಕೆ ವ್ಯವಸ್ಥೆ ಮಾಡಲಾಗಿದೆ. 238 ಮತಗಟ್ಟೆಗಳಲ್ಲಿ 45 ನಕ್ಸಲ್ ಬಾಧಿತ, 25 ಅತಿ ಸೂಕ್ಷ್ಮ, 50 ಸೂಕ್ಷ್ಮ ಮತ್ತು 118 ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಡಿವೈಎಸ್ಪಿ ನೇತೃತ್ವದಲ್ಲಿ 3 ಮಂದಿ ಇನ್ಸ್ಪೆಕ್ಟರ್ಗಳು, 5 ಮಂದಿ ಸಬ್ಇನ್ಸ್ಪೆಕ್ಟರ್ಗಳು, 9 ಮಂದಿ ಎಎಸ್ಐಗಳು, ಬಿಎಸ್ಎಫ್ನ 60 ಮಂದಿ ಯೋಧರು, ಪುಣೆಯ ಎಸ್ಆರ್ಪಿಎಫ್ನ 25 ಮಂದಿ, ಕೇರಳ ಸ್ಪೆಷಲ್ ಆರ್ಮಿಡ್ ಫೋರ್ಸ್ನ 89 ಮಂದಿ, ಬೆಂಗಳೂರು ಸಿಟಿ ಆರ್ಮಿ ಪಡೆಯ 32 ಮಂದಿ, ಕೆಎಸ್ಆರ್ಪಿಯ 3 ಬೆಟಾಲಿಯನ್, 150 ಮಂದಿ ಸಿವಿಲ್ ಪೊಲೀಸರು, 71 ಮಂದಿ ಹೋಮ್ಗಾರ್ಡ್ಗಳು ಕಾರ್ಯ ನಿರ್ವಹಿಸಲಿದ್ದಾರೆ. ಮತದಾನ ಕೇಂದ್ರಗಳಲ್ಲಿ ತುರ್ತು ಚಿಕಿತ್ಸಾ ವ್ಯವಸ್ಥೆಯನ್ನೂ ಮಾಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

