ದಕ್ಷಿಣ ಕನ್ನಡ

ರೈತ ಸಾಲಕ್ಕೆ ಸಹಕಾರಿ ಸಂಘಗಳ ನಕಾರ

Published On :

ಮಂಗಳೂರು: ಕಳೆದ ಡಿಸೆಂಬರ್‌ನಿಂದ ಕೃಷಿ ಸಾಲಕ್ಕೆ ಅರ್ಜಿ ಸಲ್ಲಿಸಿದ ರೈತರು ಈಗ ತಲೆಮೇಲೆ ಕೈಹೊತ್ತು ಕುಳಿತಿದ್ದಾರೆ. ರೈತರ ಉದ್ಧಾರಕ್ಕೆ ಇರುವ ಜಿಲ್ಲೆಯ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್‌ಸಿಡಿಸಿಸಿ) ಹಾಗೂ ಕೃಷಿ ಪತ್ತಿನ ಸಹಕಾರಿ ಸಂಘಗಳು ಸಾಲ ಇಲ್ಲ ಎಂದು ರೈತರನ್ನು ಸಾಗಹಾಕುತ್ತಿವೆ!
ಎಸ್‌ಸಿಡಿಸಿಸಿ ಬ್ಯಾಂಕ್ ಸಾಲ ನೀಡುವುದು ಶೇ.9.75 ರಿಯಾಯ್ತಿ ಬಡ್ಡಿದರದಲ್ಲಿ. ಕೃಷಿ ಪತ್ತಿನ ಸಹಕಾರಿ ಸಂಘಗಳು ಶೇ.12.75 ರಿಯಾಯ್ತಿ ಬಡ್ಡಿದರದಲ್ಲಿ ಸಾಲ ಕೊಡುತ್ತವೆ. ಸಾಲ ಮೊತ್ತವನ್ನು ಶೇ.3 ರಿಯಾಯ್ತಿ ಬಡ್ಡಿಯಲ್ಲಿ ಡಿಸಿಸಿ ಬ್ಯಾಂಕ್ ಸಹಕಾರಿ ಸಂಘಕ್ಕೆ ಕೊಡುತ್ತದೆ. ಬ್ಯಾಂಕಿನ ಠೇವಣಿ ವೆಚ್ಚವನ್ನು ಇದರಲ್ಲಿ ಸರಿದೂಗಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಈ ರಿಯಾಯ್ತಿ ಬಡ್ಡಿದರದಲ್ಲಿ ರೈತರಿಗೆ ಸಾಲ ನೀಡಲು ಸಾಧ್ಯವಿಲ್ಲ ಎಂಬ ವಾದವನ್ನು ಡಿಸಿಸಿ ಬ್ಯಾಂಕ್ ಮುಂದಿಟ್ಟಿದೆ. ರಿಯಾಯ್ತಿ ಬಡ್ಡಿ ದರ ಪರಿಷ್ಕರಿಸುವಂತೆ ಕೋರಿ ಸರ್ಕಾರಕ್ಕೆ ಪತ್ರ ಬರೆದಿದೆ. ಆದರೆ ಸರ್ಕಾರದಿಂದಲೂ ಸ್ಪಂದನ ಸಿಕ್ಕಿಲ್ಲ.
ಶೂನ್ಯದಿಂದ ಶೇ.3 ಬಡ್ಡಿ ವರೆಗೆ ರೈತರಿಗೆ ಸಾಲ ನೀಡಲು ಸಹಕಾರಿ ಸಂಘಗಳಿಗೆ ಅವಕಾಶವಿದೆ. ಮಧ್ಯಾವಧಿ 5 ವರ್ಷವರೆಗೆ, ದೀರ್ಘಾವಧಿ 10 ವರ್ಷ ವರೆಗೆ ರೈತರು ಸಾಲ ಪಡೆಯಬಹುದು. ಈ ದೀರ್ಘ ಅವಧಿ ಸಾಲ ನೀಡುವ ತೊಂದರೆ ತೆಗೆದುಕೊಳ್ಳದ ಪತ್ತಿನ ಸಹಕಾರಿ ಸಂಘಗಳು, ಸಾಲ ಅರ್ಜಿಯನ್ನು ಡಿಸಿಸಿ ಬ್ಯಾಂಕ್‌ಗೆ ರವಾನಿಸುತ್ತವೆ.
ಅಡಕೆ ತೋಟ ವಿಸ್ತರಣೆ, ಕೆರೆ ಅಭಿವೃದ್ಧಿ ಸೇರಿದಂತೆ ಕೃಷಿ ಅಭಿವೃದ್ಧಿಗೆ ಸಹಕಾರಿ ಸಂಘದಿಂದ ಸಾಲ ಪಡೆಯುವ ಕನಸು ಕಂಡ ರೈತರ ಮೊಗದಲ್ಲಿ ನಿರಾಶೆ ಆವರಿಸಿದೆ. ರೈತರ ನೆರವಿಗೆ ಬರಬೇಕಾದ ಜಿಲ್ಲೆಯ ಕೇಂದ್ರ ಸಹಕಾರಿ ಬ್ಯಾಂಕ್ ಹಾಗೂ ತಾಲೂಕಿನ ಕೃಷಿ ಪತ್ತಿನ ಸಹಕಾರಿ ಸಂಘಗಳು ಸಾಲ ನೀಡುವ ವಿಚಾರದಲ್ಲಿ ಮೌನ ವಹಿಸಿವೆ.
ಕಳೆದ ನಾಲ್ಕು ತಿಂಗಳಿಂದ ಸಾಲಕ್ಕೆ ಅಲೆದು ಸುಸ್ತಾದ ರೈತರು ಸಹಕಾರಿ ಬ್ಯಾಂಕ್‌ಗಳ ಸಹವಾಸವೇ ಬೇಡ ಎಂಬಲ್ಲಿಗೆ ತಲುಪಿದ್ದಾರೆ. ಈ ಅವಧಿಯಲ್ಲಿ ಕೇಂದ್ರ ಸಹಕಾರಿ ಬ್ಯಾಂಕಿನಿಂದ ಅಥವಾ ಕೃಷಿ ಪತ್ತಿನ ಸಹಕಾರಿ ಸಂಘಗಳಿಂದ ಯಾವುದೇ ರೈತನಿಗೆ ಮಧ್ಯಾವಧಿ ಅಥವಾ ದೀರ್ಘಾವಧಿ ಸಾಲ ಮಂಜೂರಾಗಿಲ್ಲ. ಇದರಿಂದ ಜಿಲ್ಲೆಯಲ್ಲಿ ಕೃಷಿ ಅಭಿವೃದ್ಧಿ ಹಿನ್ನಡೆ ಕಾಣುವಂತಾಗಿದೆ.
4 ತಿಂಗಳಿಂದ ಸಾಲ ಇಲ್ಲ: ಅವಿಭಜಿತ ದ.ಕ.ಜಿಲ್ಲೆಯಲ್ಲಿ 166 ಪತ್ತಿನ ಸಹಕಾರಿ ಸಂಘಗಳಿವೆ. ಇಲ್ಲಿಂದ ಸುಮಾರು 500ಕ್ಕೂ ಅಧಿಕ ರೈತರ ಸಾಲ ಅರ್ಜಿ ಡಿಸಿಸಿ ಬ್ಯಾಂಕ್‌ಗೆ ಬಂದಿದೆ. ಡಿಸಿಸಿ ಬ್ಯಾಂಕ್‌ನಲ್ಲಿ ಪ್ರಸಕ್ತ ರು. 2 ಸಾವಿರ ಕೋಟಿ ಠೇವಣಿ ಇದೆ. ಡಿಸೆಂಬರ್ ವರೆಗೆ ಸುಮಾರು 200 ಮಂದಿಗೆ ರು. 450 ಕೋಟಿ ಸಾಲ ನೀಡಿದೆ. ಆದರೆ ಬ್ಯಾಂಕಿನಲ್ಲಿರುವ ಠೇವಣಿಯಿಂದ ಎಲ್ಲರಿಗೆ ಸಾಲ ನೀಡಲು ಸಾಧ್ಯವಿಲ್ಲ. ಶೇ.9.75 ರಿಯಾಯ್ತಿ ಬಡ್ಡಿಯಲ್ಲಿ ಸಾಲ ನೀಡಿ, ಠೇವಣಿಗೆ ಶೇ.10 ಬಡ್ಡಿ ವಿಧಿಸುವುದು ಬ್ಯಾಲೆನ್ಸ್ ಆಗುವುದಿಲ್ಲ. ಈ ಕಾರಣಕ್ಕೆ ಸದ್ಯಕ್ಕೆ ಸಾಲ ಅರ್ಜಿ ಮಂಜೂರು ಮಾಡುತ್ತಿಲ್ಲ ಎಂದು ಬ್ಯಾಂಕಿನ ಮೂಲಗಳು ಸ್ಪಷ್ಟಪಡಿಸಿವೆ.
ಆದರೆ ಪತ್ತಿನ ಸಹಕಾರಿ ಸಂಘಗಳಿಗೆ ಸ್ವಂತ ಬಂಡವಾಳದಿಂದ ಸಾಲ ನೀಡಲು ಸಾಧ್ಯವಿದ್ದರೂ, ಅವರು ರಿಸ್ಕ್ ತೆಗೆದುಕೊಳ್ಳಲು ಮುಂದಾಗುತ್ತಿಲ್ಲ.
ರೈತರ ಸಂಕಷ್ಟ: ಸಹಕಾರಿ ಸಂಘಗಳಲ್ಲಿ ಬೆಳೆ ಸಾಲ ಹೊಂದಿರುವ ರೈತರಿಗೆ ಖಾಸಗಿ ಬ್ಯಾಂಕ್‌ಗಳಿಂದ ಸಾಲ ಪಡೆಯಲು ಆಗುತ್ತಿಲ್ಲ. ಸಾಲ ಚುಕ್ತಾ ಆದವರು ಸಾಲ ದೀರ್ಘಾವಧಿ ವಿಸ್ತರಣೆಗೆ ಮತ್ತೆ ಸಹಕಾರಿ ಸಂಘಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಸಾಲಕ್ಕೆ ಖಾತರಿಯಾಗಿ ನೀಡಿದ ಆಸ್ತಿ ದಾಖಲೆ ಡಿಸಿಸಿ ಬ್ಯಾಂಕ್‌ನಲ್ಲೇ ಇರುತ್ತದೆ. ಹಾಗಾಗಿ ಡಿಸಿಸಿ ಬ್ಯಾಂಕ್ ಸಾಲ ನೀಡದಿದ್ದರೆ ಇವರಿಗೆ ಬೇರೆ ಗತಿ ಇಲ್ಲ.
'ಕೃಷಿ ತೋಟ ವಿಸ್ತರಣೆಗೆ ರು. 3 ಲಕ್ಷ ಸಾಲ ಕೋರಿ ಡಿಸೆಂಬರ್‌ನಲ್ಲಿ ಸ್ಥಳೀಯ ಸಹಕಾರಿ ಸಂಘದ ಮುಖೇನ ಅರ್ಜಿ ಸಲ್ಲಿಸಿದ್ದೆ. ಆದರೆ ಇದುವರೆಗೂ ಸಾಲ ಮಂಜೂರಾತಿ ಆಗಿಲ್ಲ, ಅಥವಾ ಅರ್ಜಿ ತಿರಸ್ಕರಿಸಿದ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಬ್ಯಾಂಕಿನಿಂದ ಸರಿಯಾದ ಮಾಹಿತಿ ಸಿಗುತ್ತಿಲ್ಲ. ನಮ್ಮ ಅವಶ್ಯಕತೆಗೆ ಸಾಲ ನೀಡದೆ ಯಾವುದೋ ಸಮಯದಲ್ಲಿ ಸಾಲ ಕೊಟ್ಟರೆ ಏನು ಪ್ರಯೋಜನ' ಎಂದು ಪ್ರಶ್ನಿಸುತ್ತಾರೆ ಬೆಳ್ಳಾರೆಯ ಕಿರಣ್(ಹೆಸರು ಬದಲಿಸಲಾಗಿದೆ.)

ಆತ್ಮಭೂಷಣ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.