ಮಂಗಳೂರು ವಿಮಾನ ನಿಲ್ದಾಣ: ಪ್ರಯಾಣಿಕರ ಸಂಖ್ಯೆ ಶೇ.21 ವೃದ್ಧಿ
ಮಂಗಳೂರು: ಕಳೆದ ಆರ್ಥಿಕ ವರ್ಷದಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದುಹೋಗುವ ವಾರ್ಷಿಕ ಪ್ರಯಾಣಿಕರ ಸಂಖ್ಯೆ 12.50 ಲಕ್ಷ ಮೀರಿದ್ದು, ಪ್ರಥಮ ಬಾರಿಗೆ ದಾಖಲೆ ನಿರ್ಮಿಸಿದೆ. 2013 ಏಪ್ರಿಲ್ನಿಂದ 2014 ಮಾರ್ಚ್ವರೆಗೆ 12.50 ಲಕ್ಷ ಪ್ರಯಾಣಿಕರು ಈ ನಿಲ್ದಾಣಕ್ಕೆ ಬಂದು ಹೋಗಿದ್ದಾರೆ. ಹಿಂದಿನ ಅವಧಿಯಲ್ಲಿ ಈ ಸಂಖ್ಯೆ 10.32 ಲಕ್ಷ ಇತ್ತು. ಕಳೆದ ಅವಧಿಗಿಂತ (ಶೇ.17.09)ಈ ಬಾರಿ ಶೇ.21.71 ಪ್ರಗತಿ ದಾಖಲಿಸಿದೆ. ಅಂತಾರಾಷ್ಟ್ರೀಯ ಪ್ಯಾಸೆಂಜರ್ನಲ್ಲಿ ಶೇ.54, ದೇಶೀಯವಾಗಿ ಪ್ರಯಾಣಿಸಿದವರ ಸಂಖ್ಯೆ ಶೇ.10.1 ಆಗಿದೆ. ಹಿಂದಿನ ವರ್ಷ ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆ 2,67,948 ಇದ್ದುದು ಈಗ 4,13,842 ತಲುಪಿದೆ. ದೇಶೀಯ ಪ್ರಯಾಣಿಕರ ಸಂಖ್ಯೆ 7,64,653ರಿಂದ 8,41,258ಕ್ಕೆ ಏರಿಕೆಯಾಗಿದೆ. ವಿಮಾನ ನಿಲ್ದಾಣದ ಆದಾಯದಲ್ಲೂ ಶೇ.26 ಅಂದರೆ 63.89 ಕೋಟಿ ಆಗಿದೆ. 2014-15ನೇ ಸಾಲಿನಲ್ಲಿ ಈಗಿನದ್ದಕ್ಕಿಂತ ಶೇ.10ರಷ್ಟು ಪ್ಯಾಸೆಂಜರ್ ಹಾಗೂ ಆದಾಯ ಹೆಚ್ಚಳ ನಿರೀಕ್ಷಿಸಲಾಗಿದೆ ಎಂದು ವಿಮಾನ ನಿಲ್ದಾಣ ಪ್ರಾಧಿಕಾರ ನಿರ್ದೇಶಕ ಯು.ಟಿ.ರಾಧಾಕೃಷ್ಣನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎಂಟೆಕ್: ಶ್ರೀನಿವಾಸ
ಶೆಣೈ ರಾಜ್ಯಕ್ಕೆ ಪ್ರಥಮ
ಮಂಗಳೂರು: ಮಂಗಳೂರು ನಿವಾಸಿ, ಮೈಸೂರು ಎನ್ಐಇ ಕಾಲೇಜಿನ ಎಂಟೆಕ್ ಪರೀಕ್ಷೆಯಲ್ಲಿ ಶ್ರೀನಿವಾಸ ಶೆಣೈ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಗಳಿಸಿದ್ದಾರೆ. ವಿಶ್ವೇಶ್ವರಯ್ಯ ತಾಂತ್ರಿಕ ವಿದ್ಯಾಲಯ ಪ್ರಕಟಿಸಿದ ಫಲಿತಾಂಶದಲ್ಲಿ ಶ್ರೀನಿವಾಸ್ ಪ್ರಥಮ ರ್ಯಾಂಕ್ ಪಡೆದಿದ್ದಾರೆ. ಪ್ರಸ್ತುತ ಬೆಂಜನಪದವು ಕೆನರಾ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರು. ಇವರು ಮಂಗಳೂರಿನ ಉದ್ಯಮಿ ಪದ್ಮನಾಭ ಶೆಣೈ ಮತ್ತು ಜಯಶ್ರೀ ಶೆಣೈ ಪುತ್ರ.
ಹೈಕೋರ್ಟ್ ವಕೀಲರ ಸಂಘ ಅಧ್ಯಕ್ಷರಾಗಿ ಹಿರೇಮಠ ಪುನರಾಯ್ಕೆ
ಧಾರವಾಡ: ಇಲ್ಲಿಯ ಹೈಕೋರ್ಟ್ ವಕೀಲರ ಸಂಘದ ಚುನಾವಣೆಗೆ ಹಿರಿಯ ನ್ಯಾಯವಾದಿ ಬಿ.ಡಿ. ಹಿರೇಮಠ ಮತ್ತೊಂದು ಅವಧಿಗೆ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ. ಗುರುವಾರ ಸಂಘದ ಆವರಣದಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟು 425 ಮತದಾರರ ಪೈಕಿ ಬಿ.ಡಿ. ಹಿರೇಮಠ (202) ಅವರು ಎದುರಾಳಿ ಮದನಮೋಹನ ಕುಣ್ಣೂರ (159) ಅವರಿಗಿಂತ 43 ಮತಗಳನ್ನು ಹೆಚ್ಚು ಪಡೆದು ಜಯ ಸಾಧಿಸಿದರು. ಪ್ರಧಾನ ಕಾರ್ಯದರ್ಶಿಯಾಗಿ ಶಿವರಾಜ ಮುಧೋಳ (167), ಕಾರ್ಯದರ್ಶಿಯಾಗಿ ಹರೀಷ ಮೈಗೂರ (216), ಖಜಾಂಚಿಯಾಗಿ ಶ್ರೀಹರ್ಷ ನಿಲೋಪಂತ (179), ಜಂಟಿ ಕಾರ್ಯದರ್ಶಿಯಾಗಿ ಎಚ್.ಎನ್. ಗೂಳರೆಡ್ಡಿ ಹಾಗೂ ಮಹಿಳಾ ಪ್ರತಿನಿಧಿಯಾಗಿ ಅನುರಾಧಾ ಕುಲಕರ್ಣಿ ಆಯ್ಕೆಯಾಗಿದ್ದಾರೆ.
ಆಡಳಿತ ಮಂಡಳಿ ಐದು ಸದಸ್ಯ ಸ್ಥಾನಕ್ಕೆ ಏಳು ಜನ ಚುನಾವಣಾ ಕಣದಲ್ಲಿದ್ದು, ಈ ಪೈಕಿ ಪಿ.ಜಿ. ಅಂದಾನಿಮಠ, ಶಿವರಾಜ ಬೆಳ್ಳಕ್ಕಿ, ಐ.ವೈ. ಪಾಟೀಲ, ಪಿ.ಜಿ. ನರಸಾಪುರ, ಆರ್.ಎ. ಗ್ರಾಮಪುರೋಹಿತ ಚುನಾಯಿತರಾದರು. ಪ್ರಥಮ ಬಾರಿಗೆ ಸಂಘದ ಚುನಾವಣೆಯಲ್ಲಿ ನೋಟಾ ವ್ಯವಸ್ಥೆ ಬಳಕೆ ಮಾಡಿದ್ದು, ಅಧ್ಯಕ್ಷ ಸ್ಥಾನಕ್ಕೆ ಮೂರು ಮತಗಳು ನೋಟಾ ಹಾಕಲಾಗಿದೆ.
ಅಪಘಾತದಲ್ಲಿ ರೈತ ಸಾವು
ದಾವಣಗೆರೆ: ಕೆಎಸ್ಸಾರ್ಟಿಸಿ ಬಸ್ಸು ಡಿಕ್ಕಿ ಹೊಡೆದ ಪರಿಣಾಮ ರೈತನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದು, ಆಕ್ರೋಶಗೊಂಡ ಗ್ರಾಮಸ್ಥರು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ತಾಲೂಕಿನ ಮಲ್ಲಶೆಟ್ಟಿಹಳ್ಳಿಯಲ್ಲಿ ರಾ.ಹೆ. 4 ತಡೆ ನಡೆಸಿದ ಘಟನೆ ಗುರುವಾರ ನಡೆದಿದೆ. ತಾಲೂಕಿನ ಮಲ್ಲಶೆಟ್ಟಿಹಳ್ಳಿಯ ರೈತ ಎಂ. ರೇವಣಿಸಿದ್ದಪ್ಪ(64) ಮೃತರು. ಎಂದಿನಂತೆ ಹೊಲದಿಂದ ಮಲ್ಲಶೆಟ್ಟಿಹಳ್ಳಿಯ ತನ್ನ ಮನೆಗೆ ಹೋಗಲು ರಸ್ತೆ ದಾಟುವಾಗ ವೇಗವಾಗಿ ಬಂದ ಸರ್ಕಾರಿ ಬಸ್ಸು ಡಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟರು. ಈ ಸುದ್ದಿ ಗೊತ್ತಾಗುತ್ತಿದ್ದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಸೇರಿ ಕೆಲ ಸಮಯ ಹೆದ್ದಾರಿ ತಡೆ ನಡೆಸಿದರು.
ಅದೇ ಸ್ಥಳದ ಬಳಿ ಮತ್ತೊಂದು ಬಲಿ: ಇದೇ ಸ್ಥಳದಲ್ಲೇ ಸಂಜೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರನೊಬ್ಬ ಸರ್ಕಾರಿ ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸಂಭವಿಸಿದೆ. ಮೃತನನ್ನು ಚಿತ್ರದುರ್ಗ ಜಿಲ್ಲೆಯ ಭರಮಸಾಗರದ ವಿಜಯಕುಮಾರ ಎಂಬುದಾಗಿ ಗುರುತಿಸಲಾಗಿದೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಎರಡೂ ಪ್ರಕರಣಗಳು ದಾಖಲಾಗಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

