ಗುಳೆ ಹೊರಡಲು ಸಿಬ್ಬಂದಿ ಸಿದ್ಧತೆ
ಮಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಆರ್ಟಿಸಿ)ಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಚಾಲಕ, ನಿರ್ವಾಹಕರು ಈಶಾನ್ಯ ಹಾಗೂ ನೈಋತ್ಯ ಸಾರಿಗೆಯತ್ತ ಗುಳೆ ಹೋಗಲು ಸಿದ್ಧರಾಗಿದ್ದಾರೆ.
ನೈಋತ್ಯ ಹಾಗೂ ಈಶಾನ್ಯ ವಿಭಾಗದಲ್ಲಿ ಚಾಲಕ-ನಿರ್ವಾಹಕರ ನೇಮಕಾತಿ ನಡೆಯುತ್ತಿದೆ. ಕೆಎಸ್ಆರ್ಟಿಸಿ 13 ವಿಭಾಗಗಳಲ್ಲಿ ಶೇ.70ಕ್ಕೂ ಅಧಿಕ ಮಂದಿ ಚಾಲಕ, ನಿರ್ವಾಹಕರು ಉತ್ತರ ಕರ್ನಾಟಕದವರು. ಇವರಲ್ಲಿ ಶೇ.50ಕ್ಕೂ ಅಧಿಕ ಮಂದಿ ತವರು ಜಿಲ್ಲೆಗೆ ಅಥವಾ ಸಮೀಪದ ಜಿಲ್ಲೆಗೆ ವರ್ಗಾವಣೆ ಬಯಸಿದ್ದಾರೆ. ಇದರಿಂದ ಕೆಎಸ್ಆರ್ಟಿಸಿ ಕೆಲವೇ ದಿನಗಳಲ್ಲಿ ಸಿಬ್ಬಂದಿ ಕೊರತೆ ಎದುರಿಸಲಿದೆ.
ವಿಭಾಗವಾರು ವರ್ಗಾವಣೆ ಇಲ್ಲ: ಸಾರಿಗೆ ಸಂಸ್ಥೆಯಲ್ಲಿ ವರ್ಗಾವಣೆ ಇಲ್ಲದಿರುವುದರಿಂದ ಹೊಸದಾಗಿ ನೇಮಕ ಸಂದರ್ಶನಕ್ಕೆ ಹಾಜರಾಗುತ್ತಿದ್ದಾರೆ.
ಕೆಎಸ್ಆರ್ಟಿಸಿಯಲ್ಲಿ 8-10 ವರ್ಷ ವರೆಗೆ ಕರ್ತವ್ಯ ನಿರ್ವಹಿಸಿದವರಿದ್ದಾರೆ. ಇಲ್ಲೇ ವಾಸಿಸುವವರು ಕಡಿಮೆ, ಹೆಚ್ಚಿನ ಚಾಲಕ, ನಿರ್ವಾಹಕರು ವಾರದ ರಜೆ ತೆಗೆಯದೆ, ಒಮ್ಮೆಲೇ ರಜೆಯಲ್ಲಿ ಊರಿಗೆ ಹೋಗಿಬರುತ್ತಾರೆ. ಅಂಥ ಸಂದರ್ಭಗಳಲ್ಲಿ ಸಿಬ್ಬಂದಿ ಕೊರತೆ ಕಾಡುತ್ತದೆ. ಈ ತೊಂದರೆ ಸರಿಪಡಿಸಲಾಗದೆ ಅಧಿಕಾರಿಗಳೂ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿ ಸುಮ್ಮನಾಗಿದ್ದಾರೆ.
1993ರ ವರೆಗೆ ವಿಭಾಗವಾರು ನೇಮಕ ಅವಕಾಶ ಇತ್ತು. ಆಗ ಚಾಲಕ, ನಿರ್ವಾಹಕ ಹುದ್ದೆಗೆ ವಿದ್ಯಾರ್ಹತೆ 4ನೇ ತರಗತಿ ಪಾಸು ಸಾಕಿತ್ತು. ಬಳಿಕ ವಯೋವುತಿಯನ್ನು 10ನೇ ತರಗತಿ ಎಂದು ನಿಗದಿಪಡಿಸಲಾಯಿತು. ನೇಮಕ ವ್ಯವಸ್ಥೆ ಕೇಂದ್ರೀಕರಣಗೊಂಡ ಬಳಿಕ ಸ್ಥಳೀಯರು ಚಾಲಕ, ನಿರ್ವಾಹಕ ಹುದ್ದೆಗೆ ಬರುತ್ತಿಲ್ಲ. ಇದರಿಂದ ಕೆಎಸ್ಆರ್ಟಿಸಿ ಉದ್ಯೋಗದಲ್ಲಿ ಉತ್ತರ ಕರ್ನಾಟಕದವರು ಪಾರಮ್ಯ ಸಾಧಿಸುವಂತಾಯಿತು ಎನ್ನುತ್ತಾರೆ ಅಧಿಕಾರಿಗಳು.
ಸಿಬ್ಬಂದಿ ಗುಳೆಗೆ ಸಿದ್ಧತೆ: ಉತ್ತರ ಕರ್ನಾಟಕದವರಿಗೆ ಕೆಎಸ್ಆರ್ಟಿಸಿಯಲ್ಲಿ ಈಗಾಗಲೇ ಕರ್ತವ್ಯ ನಿರ್ವಹಿಸಿ ಅನುಭವ ಇರುವುದರಿಂದ ನೇಮಕಗೊಳ್ಳುವುದು ಸುಲಭ. ಹಾಗಾಗಿ ಕೆಲವೇ ದಿನಗಳಲ್ಲಿ ಇಲ್ಲಿನ ಚಾಲಕ ನಿರ್ವಾಹಕರು ಮಂಗಳೂರಿನ ಕೆಎಸ್ಆರ್ಟಿಸಿಗೆ ಗುಡ್ಬೈ ಹೇಳಲಿದ್ದಾರೆ. ಇದರಿಂದ ಕೆಎಸ್ಆರ್ಟಿಸಿಯಲ್ಲಿ ಚಾಲಕ ನಿರ್ವಾಹಕರ ಕೊರತೆ ತಲೆದೋರಲಿದೆ. ಕೆಎಸ್ಆರ್ಟಿಸಿ ಮತ್ತೆ ನೇಮಕ ಪ್ರಕ್ರಿಯೆ ನಡೆಸಿದರೂ ಸ್ಥಳೀಯರ ಬದಲು ಹೊರ ಜಿಲ್ಲೆಯವರೇ ಆಗಮಿಸಲಿದ್ದು, ಕೆಎಸ್ಆರ್ಟಿಸಿಗೆ ಮುಗಿಯದ ತಲೆನೋವಾಗಿ ಪರಿಣಮಿಸಲಿದೆ. ರಾಜ್ಯದಲ್ಲಿ ಬಿಎಂಟಿಸಿ, ಕೆಎಸ್ಆರ್ಟಿಸಿ, ಈಶಾನ್ಯ ಹಾಗೂ ನೈಋತ್ಯ ಎಂಬ ನಾಲ್ಕು ವಿಭಾಗಗಳಿವೆ. ಬೆಂಗಳೂರು ಹಾಗೂ ಮೈಸೂರಲ್ಲಿ ತಲಾ 2, ದಾವಣಗೆರೆ, ಚಾಮರಾಜನಗರ, ಹಾಸನ, ಚಿಕ್ಕಮಗಳೂರು, ತುಮಕೂರು, ರಾಮನಗರ, ಮಂಗಳೂರು ಹಾಗೂ ಪುತ್ತೂರು ಕೆಎಸ್ಆರ್ಟಿಸಿ ವ್ಯಾಪ್ತಿಗೆ ಸೇರುತ್ತದೆ. ಈ ವಿಭಾಗದಲ್ಲಿ ರಾಯಚೂರು, ಹುಬ್ಬಳ್ಳಿ, ಬೆಳಗಾವಿ, ಬಾಗಲಕೋಟೆ, ಗುಲ್ಬರ್ಗ ಜಿಲ್ಲೆಗಳಿಂದ ಬಂದವರು ಚಾಲಕ ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಈಗಲೇ ರೂಟ್ ಕಡಿತ: ಕಳೆದ ವಾರದಿಂದ ನೇಮಕ ಪ್ರಕ್ರಿಯೆ ನಡೆಯುತ್ತಿದ್ದು, ಪುತ್ತೂರು ವಿಭಾಗದಿಂದ 25ಕ್ಕೂ ಅಧಿಕ ಮಂದಿ ತೆರಳಿದ್ದಾರೆ. ಅವರಲ್ಲಿ ಕನಿಷ್ಠ 20 ಮಂದಿಗೆ ಅನುಭವ ಹಿನ್ನೆಯಲ್ಲಿ ಉದ್ಯೋಗ ಸಿಕ್ಕಿದರೆ ಅಷ್ಟು ಹುದ್ದೆಯನ್ನು ಭರ್ತಿಗೊಳಿಸಬೇಕು. ಚಾಲಕ, ನಿರ್ವಾಹಕರ ಕೊರತೆಯಿಂದ ಈಗಾಗಲೇ ನಾಲ್ಕೈದು ದೂರದ ರೂಟ್ ಕಡಿತಗೊಂಡಿದೆ. ಇದರಿಂದ ದಿನಂಪ್ರತಿ ರು. 50 ಸಾವಿರ ನಷ್ಠ ಅನುಭವಿಸುತ್ತಿದೆ.
56 ಮಂದಿ ಸಂದರ್ಶನಕ್ಕೆ: ಮಂಗಳೂರು ವಿಭಾಗದಲ್ಲಿ ಬಸ್ ರೂಟ್ ಕಡಿತಗೊಳಿಸಿಲ್ಲ, 56 ಮಂದಿ ಚಾಲಕ, ನಿರ್ವಾಹಕರು ಸಂದರ್ಶನಕ್ಕೆ ತೆರಳಿದ್ದಾರೆ. ಇವರ ಬದಲು ಹಾಲಿ ಚಾಲಕ, ನಿರ್ವಾಹಕರಿಗೆ ಡಬ್ಬಲ್ ಡ್ಯೂಟಿ ಹಾಕಲಾಗಿದೆ. ವಿಶ್ರಾಂತಿ ಇಲ್ಲದೆ ದುಡಿಯುವಬೇಕಾದ ಅನಿವಾರ್ಯತೆ ಸಿಬ್ಬಂದಿಗಳದ್ದು.
-ಆತ್ಮಭೂಷಣ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

