ದಕ್ಷಿಣ ಕನ್ನಡ

ಒಂದಾಗಿ ಬೆರೆತರು, ನಕ್ಕು ನಲಿದರು..

Published On :

ಮಂಗಳೂರು: ಬ್ಯಾಂಡ್, ವಾಲಗ ಸದ್ದಿನ ಸಡಗರದಲ್ಲಿ ಕಷ್ಟಪಟ್ಟು ಸಾಗಿ ಬಂದ ಮಕ್ಕಳು... ಸಭಾಂಗಣದಲ್ಲಿ ಒಂದೆಡೆ ಕಲೆತರು, ಬೆರೆತರು, ಒಟ್ಟಾಗಿ ನಲಿದರು. ಒಬ್ಬರನ್ನೊಬ್ಬರು ಮಾತನಾಡಿಸಿದರು, ಪೋಷಕರು, ಹೆತ್ತವರು ಜತೆಗೂಡಿದರು.. ಕಷ್ಟಸುಖ ಹಂಚಿಕೊಂಡರು.
ಇವಿಷ್ಟು ನಡೆದದ್ದು ಭಾನುವಾರ ನಗರದ ಕೆನರಾ ಹೈಸ್ಕೂಲ್ ಸಭಾಂಗಣದಲ್ಲಿ. ಸೇವಾ ಭಾರತಿ ಅಂಗಸಂಸ್ಥೆ ಆಶಾ ಜ್ಯೋತಿ ಅಶಕ್ತ ಮಕ್ಕಳ ಮತ್ತು ಹೆತ್ತವರ ವೇದಿಕೆ ಹಮ್ಮಿಕೊಂಡ ವಿಶಿಷ್ಟರಿಗಾಗಿ ವಿಶಿಷ್ಟ ಮೇಳದ ನೋಟವೂ ವಿಶಿಷ್ಟವೇ ಆಗಿತ್ತು. ತಾವು ಯಾರಿಗೂ ಕಡಿಮೆ ಅಲ್ಲ ಎಂಬ ಆತ್ಮವಿಶ್ವಾಸದೊಂದಿಗೆ ವಿಶಿಷ್ಟ ಮಕ್ಕಳು ಅಲೋಶಿಯಸ್ ಕಾಲೇಜಿನ ಲೊಯಲಾ ಸಭಾಭವನದಿಂದ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಮೇಳದಲ್ಲಿ ಒಂದಷ್ಟು ಹೊತ್ತು ಭಾಷಣ ಕೇಳಿದರು. ವಿಶಿಷ್ಟ ಮಕ್ಕಳ ಅಗ್ನಿಭಯ ನಿವಾರಿಸಲು ಅಗ್ನಿಶಾಮಕದಳ ಪ್ರಾತ್ಯಕ್ಷಿತೆ ಏರ್ಪಡಿಸಿತ್ತು. ಅದನ್ನು ಕಂಡು ನಿಬ್ಬೆರಗಾದ ಮಕ್ಕಳು, ಚೆಲ್ಲಿದ ನೀರಿನಲ್ಲಿ ಚಿನ್ನಾಟವಾಡಿದರು. ಕುದುರೆ ಸವಾರಿ, ಕಣ್ಣಿಗೆ ಬಟ್ಟೆಕಟ್ಟಿ ಮಹಿಳೆಯ ಹಣೆಗೆ ತಿಲಕ ಇಡುವ ಚಾಕಚಕ್ಯತೆ, ತಿರುಗುವ ತೊಟ್ಟಿಲು, ಜಾರುಬಂಡಿ ಮುಂತಾದ ವಿವಿಧ ಬಗೆಯ ಆಟಗಳು ಚಿಣ್ಣರನ್ನು ಆಕರ್ಷಿಸಿದವು. ಕುದುರೆ, ಒಂಟೆ ಸವಾರಿ ಮಾಡಿ ಸಂತಸಪಟ್ಟರು. ಜತೆ ಪೋಷಕರೂ ನಲಿದಾಡಿದರು.
ಮೇಳದಲ್ಲಿ ವಿಶಿಷ್ಟ ಮಕ್ಕಳಿಗೆ ವಿವಿಧ ಸಾರಿಗೆ ಸೌಲಭ್ಯದ ಬಗ್ಗೆ ನೋಂದಣಿ ವ್ಯವಸ್ಥೆ ಮಾಡಲಾಗಿತ್ತು. ವಿಶಿಷ್ಟ ಮಕ್ಕಳಿಗೆ ನಂದಿನಿ ಉತ್ಪನ್ನ, ಬಾಳೆ ಹಣ್ಣು, ಕಡ್ಲೆ ಕಾಯಿ, ಕಲ್ಲಂಗಡಿ ಹಣ್ಣು, ತಿಂಡಿ ತಿನಿಸು, ಪುಷ್ಕಳ ಭೋಜನ ಸವಿದರು. ನಗರದ ವಿವಿಧ ಕಡೆಗಳಿಂದ 700ಕ್ಕೂ ಅಧಿಕ ವಿಶಿಷ್ಟ ಮಕ್ಕಳು ಮೇಳದಲ್ಲಿ ಭಾಗವಹಿಸಿದ್ದರು.
ಮೇಳದ ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಜಿಲ್ಲಾಧಿಕಾರಿ ಇಬ್ರಾಹಿಂ, ಅಂಗವಿಕಲ ಮಕ್ಕಳಿಗೆ ಎಲ್ಲ ವಿಧದಲ್ಲೂ ಪ್ರೋತ್ಸಾಹ ನೀಡಬೇಕಾಗಿದೆ. ಇತರರಿಗೆ ತಾವು ಕಡಿಮೆ ಇಲ್ಲ ಎಂಬ ಸ್ವಾಭಿಮಾನವನ್ನು ಅಂಥ ಮಕ್ಕಳಲ್ಲಿ ಮೂಡಿಸಬೇಕು ಎಂದು ಹೇಳಿದರು. ಕಾರ್ಪೊರೇಷನ್ ಬ್ಯಾಂಕ್ ಅಧಿಕಾರಿ ಗೋವಿಂದ ಪೈ ಅತಿಥಿಯಾಗಿ ಆಗಮಿಸಿದ್ದರು. ಸೇವಾ ಭಾರತಿ ಮೆನೇಜಿಂಗ್ ಟ್ರಸ್ಟಿ ಡಾ.ಯು.ವಿ. ಶೆಣೈ ಮಾತನಾಡಿ, ಅಂಗವಿಕಲರಿಗೆ ಅನುಕೂಲವಾಗಲು ಜಿಲ್ಲಾ ಮಟ್ಟದಲ್ಲಿ ಹೆಲ್ಫ್‌ಡೆಸ್ಕ್ ತೆರೆಯುವಂತೆ ವಿನಂತಿ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.