ಹಿಂಸಾ ಕೃತ್ಯ ತಡೆಗೆ 'ಸಂವಾದ' ಜಾಗೃತಿ
ಬಂಟ್ವಾಳ: ಕೋಮು ವೈಷಮ್ಯ, ಗುಂಪುಗಾರಿಕೆ, ಪ್ರತಿಷ್ಠೆ, ಅತ್ಯಾಚಾರ, ದುಶ್ಚಟಗಳ ಕಾರಣದಿಂದ ಶಿಕ್ಷಣ ನೀಡುವ ಶಾಲೆ, ಕಾಲೇಜು ಆವರಣಗಳಲ್ಲಿಯೂ ಇಂದು ಹಿಂಸಾ ಕೃತ್ಯಗಳು ರಾರಾಜಿಸುತ್ತಿವೆ. ಈ ಬಗ್ಗೆ ರಾಜ್ಯ ಮಟ್ಟದಲ್ಲಿ ಜಾಗೃತಿ ಮೂಡಿಸಲು ಬೆಂಗಳೂರಿನ ಸಂವಾದ ಸಂಸ್ಥೆ ಮುಂದಾಗಿದೆ.
ಯುವಜನರ ವೇದಿಕೆಯಾಗಿರುವ ಸಿಜ್ಞಾ, ಅರಿವು, ಸಖಿ ಹಾಗೂ ಯುವ ಸಂಚಲನ ಸಂಸ್ಥೆಗಳ ನೆರವಿನೊಂದಿಗೆ ಫೆ.4ರಿಂದ 15ರವರೆಗೆ ರಾಜ್ಯದ ಸುಮಾರು 50 ಕಾಲೇಜುಗಳಲ್ಲಿ ಈ ಬಗ್ಗೆ ಸ್ನೇಹ ಶಿಕ್ಷಣ ಅಭಿಯಾನ ಆಯೋಜಿಸಿರುವ ಸಂವಾದ ಸಂಸ್ಥೆ ಮೊದಲ ಹಂತದಲ್ಲೇ 50 ಸಾವಿರ ವಿದ್ಯಾರ್ಥಿಗಳಿಂದ 'ನಮ್ಮದು ವಿದ್ಯಾರ್ಥಿ ಸ್ನೇಹಿ ಮತ್ತು ಹಿಂಸೆ ಮುಕ್ತ ಕ್ಯಾಂಪಸ್' ಎಂದು ಘೋಷಿಸುವ ಗುರಿ ಇರಿಸಿಕೊಂಡಿದೆ.
ಏನಿದು ಯೋಜನೆ..: ಬಹು ಸಂಸ್ಕೃತಿಯ ಸಮಾಜದಲ್ಲಿ ಎಲ್ಲರೂ ಒಬ್ಬರಿಗೊಬ್ಬರು ಮಾತನಾಡಿಕೊಳ್ಳಬೇಕು, ಅರ್ಥ ಮಾಡಿಕೊಳ್ಳಬೇಕು, ಪರಸ್ಪರ ಗೌರವಿಸಬೇಕು. ಆ ಮೂಲಕ ಪರಸ್ಪರರಲ್ಲಿ ಸ್ನೇಹ- ವಿಶ್ವಾಸ ಮೂಡಬೇಕು ಎನ್ನುವ ಆಶಯದಲ್ಲಿ ಸ್ನೇಹ ಶಿಕ್ಷಣ ಅಭಿಯಾನ ಆಯೋಜಿಸಲಾಗಿದೆ.
ಫೆ.4ರಿಂದ ಆರಂಭಗೊಂಡು ಬೆಂಗಳೂರು ನಗರ, ಗ್ರಾಮಾಂತರ, ತುಮಕೂರು, ಬಳ್ಳಾರಿ, ದಕ್ಷಿಣ ಕನ್ನಡ ಜಿಲ್ಲೆಗಳ ಕಾಲೇಜು ಆವರಣಗಳಲ್ಲಿ ಹಾಡು- ಬೀದಿ ನಾಟಕ ಪ್ರದರ್ಶನ, ಕರಪತ್ರ ವಿತರಣೆ ಮಾತುಕತೆ- ಸಂವಾದ, ಮಾಧ್ಯಮ ಪ್ರಕಟಣೆ, ಯುವಧ್ವನಿ ಯುವಜನೋತ್ಸವ ನಡೆಯಲಿದೆ.
ಸಲಹೆ- ವಿದ್ಯಾರ್ಥಿಗಳಿಗೆ: ಲಿಂಗಭೇದ ಬೇಡ. ಎಲ್ಲ ಜಾತಿ, ಧರ್ಮ, ಭಾಷೆಗಳ ವಿದ್ಯಾರ್ಥಿಗಳೊಂದಿಗೆ ಸ್ನೇಹದಿಂದ ಇರಿ, ಅವಮಾನಿಸಬೇಡಿ, ಕಿರುಕುಳ ನೀಡಬೇಡಿ, ಪರಸ್ಪರ ಗೌರವಿಸಿ, ಸ್ನೇಹ ನಿಮ್ಮ ಹಕ್ಕು. ಆದರೆ ನಿಮಗಿದೆ ಮಹತ್ತರ ಜವಾಬ್ದಾರಿ. ಈ ಮನವಿ ನಿಮಗೆ ಒಪ್ಪಿತವಾದರೆ ಹಿಂಸೆ ಮುಕ್ತ ಕ್ಯಾಂಪಸ್ ನಿರ್ಮಾಣಕ್ಕೆ ನಾನು ಬದ್ಧ ಎಂಬ ಘೋಷ ವಾಕ್ಯಕ್ಕೆ ಸಹಿ ಮಾಡಿ ಎನ್ನುವ ಸಲಹೆ ನೀಡಿದೆ.
ಶಿಕ್ಷಣ ಸಂಸ್ಥೆಗಳಿಗೆ: 1997ರ ಸುಪ್ರೀಂ ಕೋರ್ಟ್ ತೀರ್ಪು (ವಿಶಾಖ ತೀರ್ಪು) ಮತ್ತು ಮಾಗದರ್ಶನ, 1998ರ ಯುಜಿಸಿ ಸುತ್ತೋಲೆ, ಕೆಲಸದ ಜಾಗದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ (ತಡೆ, ನಿಷೇಧ ಮತ್ತು ಪರಿಹಾರ) ಕಾಯಿದೆ ಪ್ರಕಾರ ಶಿಕ್ಷಣ ಸಂಸ್ಥೆಗಳಲ್ಲಿ ಲೈಂಗಿಕ ಕಿರುಕುಳ ದೂರು ಸಮಿತಿಯನ್ನು ನೇಮಿಸಿ.
-ಸಮಾನತೆ, ಬಹುತ್ವ ಮತ್ತು ಏಕತೆಯ ಮೌಲ್ಯಗಳನ್ನು ತಿಳಿಸುವ ಲೈಂಗಿಕ ದೌರ್ಜನ್ಯ, ತಾರತಮ್ಯ, ರ್ಯಾಗಿಂಗ್ ಕುರಿತ ಕಾನೂನಿನ ಪರಿಚಯ ಮಾಡಿಸುವ, ಲೈಂಗಿಕ ಕಿರುಕುಳ ದೂರು ಸಮಿತಿ ಮತ್ತು ತಾರತಮ್ಯದ ನಿವಾರಣಾ ಸಮಿತಿಗಳ ವಿವರ ನೀಡುವ ಓರಿಯೆಂಟೇಶನ್ ಕಾರ್ಯಕ್ರಮಗಳನ್ನು ಶೈಕ್ಷಣಿಕ ವರ್ಷದ ಆರಂಭದಲ್ಲೇ ಮಾಡಿ, ವಿದ್ಯಾರ್ಥಿಗಳಲ್ಲಿ ಹಕ್ಕುಗಳ ಅರಿವು ಮೂಡಿಸಿ, ಜವಾಬ್ದಾರಿಗಳಿಗೆ ಬದ್ಧರನ್ನಾಗಿಸಿ.
- ತಮ್ಮ ಶಿಕ್ಷಣ ಸಂಸ್ಥೆಯು ಈ ಕ್ರಮಗಳನ್ನು ಕೈಗೊಳ್ಳಲು ಸಿದ್ಧವಿದ್ದರೆ ವಿದ್ಯಾರ್ಥಿ ಸ್ನೇಹಿ ಮತ್ತು ಹಿಂಸೆ ಮುಕ್ತ ಕ್ಯಾಂಪಸ್ ನಿರ್ಮಾಣಕ್ಕೆ ನಮ್ಮ ಶಿಕ್ಷಣ ಸಂಸ್ಥೆ ಸಿದ್ಧವಿದೆ ಎಂಬ ಘೋಷವಾಕ್ಯಕ್ಕೆ ಸಹಿ ಮಾಡಿ.
ಕರ್ನಾಟಕ ಸರ್ಕಾರಕ್ಕೆ: ಎಲ್ಲ ಶಿಕ್ಷಣ ಸಂಸ್ಥೆಗಳು ಕೆಲಸದ ಜಾಗದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ (ತಡೆ, ನಿಷೇಧ ಮತ್ತು ಪರಿಹಾರ) ಕಾಯಿದೆ ಪ್ರಕಾರ ಸಮಿತಿಯನ್ನು ನೇಮಕ ಮಾಡಲಾಗಿದೆ ಎಂಬುದನ್ನು ಖಾತರಿಪಡಿಸಿಕೊಳ್ಳಿ.
- ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಲಿಂಗ, ಜಾತಿ, ಧರ್ಮ, ಭಾಷೆ, ಜನಾಂಗ, ಅಂಗವೈಕಲ್ಯತೆಯ ತಾರತಮ್ಯವನ್ನು ನಿರ್ಮೂಲನೆಗೊಳಿಸಲು ತಾರತಮ್ಯದ ನಿವಾರಣ ಸಮಿತಿಯನ್ನು ರಚಿಸುವಂತೆ ಸುತ್ತೋಲೆ ಹೊರಡಿಸಿ ಎಂಬ ಹಕ್ಕೊತ್ತಾಯವನ್ನೂ ಸಂವಾದ ಮುಂದಿರಿಸಿದೆ.
ಮೌನೇಶ ವಿಶ್ವಕರ್ಮ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

