ಸುದ್ದಿ ಸಂಕ್ಷೇಪ
ಸಂಜೀವನಾಥ ಐಕಳ ನಿಧನಕ್ಕೆ ಸಂತಾಪ
ಉಡುಪಿ: ಸ್ವಾತಂತ್ರ್ಯ ಹೋರಾಟಗಾರ, ಮಾಜಿ ಶಾಸಕ ಸಂಜೀವನಾಥ ಐಕಳ ಅವರ ನಿಧನಕ್ಕೆ ಹಿಂದೂ ಯುವ ಸೇನೆ ಜಿಲ್ಲಾಧ್ಯಕ್ಷ ವಾಸುದೇವ ಭಟ್ ಪೆರಂಪಳ್ಳಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಸ್ವಾತಂತ್ರ್ಯ ಹೋರಾಟ ಮಾತ್ರವಲ್ಲದೇ ಶಾಸಕರಾಗಿಯೂ ಮೌಲ್ಯಾಧಾರಿತ ರಾಜಕಾರಣ ನಡೆಸಿದವರು. ಈಗಿನ ಶಾಸಕರು ತಮಗೆ ಸರ್ಕಾರ ನೀಡುವ ಸೌಲಭ್ಯ ಸಾಲುತ್ತಿಲ್ಲ ಎನ್ನುತ್ತಿದ್ದರೆ, ಸಂಜೀವನಾಥರು ತಮ್ಮ ಪಿಂಚಣಿ ಹಣದಿಂದ ತಮ್ಮ ಊರಿನಲ್ಲಿ ಶಾಲೆ ಸ್ಥಾಪಿಸಿ ಮುನ್ನಡೆಸಿದರು ಎಂಬುದು ಸಾರ್ವಕಾಲಿಕ ಆದರ್ಶವೇ ಸರಿ ಎಂದು ಹೇಳಿದ್ದಾರೆ.
ಪುತ್ತೂರು: ಮನೆ ಕೆಲಸದ ಯುವತಿ ನಾಪತ್ತೆ
ಪುತ್ತೂರು: ಮನೆಯಲ್ಲಿ ಕೆಲಸಕ್ಕಿದ್ದ ಯುವತಿಯೊಬ್ಬಳು ನಾಪತ್ತೆಯಾದ ಬಗ್ಗೆ ಪುತ್ತೂರು ನಗರ ಪೊಲೀಸರಿಗೆ ದೂರು ನೀಡಲಾಗಿದೆ. ಚಿಕ್ಕ ಪುತ್ತೂರು ನಿವಾಸಿ ಅಬ್ದುಲ್ ರಝಾಕ್ ಎಂಬವರ ಮನೆಯಲ್ಲಿ ಕೆಲಸಕ್ಕಿದ್ದ ಶಿವಮೊಗ್ಗ ಜಿಲ್ಲೆಯ ನೇಂಮ್ತಿ ತಾಲೂಕು ನಿವಾಸಿ ಸಯ್ಯದ್ ಪೀರ್ ಎಂಬವರ ಪುತ್ರಿ ಸಯ್ಯಿದಾ (20) ನಾಪತ್ತೆಯಾದವಳು. ಈಕೆ ಕಳೆದ ಹಲವು ವರ್ಷಗಳಿಂದ ರಝಾಕ್ ಮನೆಯಲ್ಲಿ ಮನೆ ಕೆಲಸ ಮಾಡಿಕೊಂಡಿದ್ದರು. ಫೆ.1ರಂದು ದಿಢೀರನೆ ನಾಪತ್ತೆಯಾಗಿದ್ದಾಳೆ ಎನ್ನಲಾಗಿದೆ. ಈ ಬಗ್ಗೆ ಬುಧವಾರ ಪುತ್ತೂರು ನಗರ ಪೊಲೀಸರಿಗೆ ದೂರು ನೀಡಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬಂದಾರು: ಗ್ಯಾಸ್ ಸಿಲಿಂಡರ್ ಕಳವು
ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಬಂದಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಕ್ಷರ ದಾಸೋಹದ ಎರಡು ಗ್ಯಾಸ್ ಸಿಲಿಂಡರ್ಗಳನ್ನು ಕದ್ದೊಯ್ದ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಲಾಗಿದೆ.
ಅಕ್ಷರ ದಾಸೋಹ ಕೊಠಡಿಯ ಬಾಗಿಲ ಬೀಗ ಮುರಿದು ಕಳ್ಳರು ಕೊಠಡಿಯಲ್ಲಿದ್ದ ಮೂರು ಸಿಲಿಂಡರ್ಗಳ ಪೈಕಿ ಎರಡನ್ನು ಕದ್ದೊಯ್ದಿದ್ದಾರೆ ಎಂದು ಶಾಲಾ ಪ್ರಭಾರ ಮುಖ್ಯೋಪಧ್ಯಾಯಿನಿ ವಿಜಯ ಕುಮಾರಿ ತಿಳಿಸಿದ್ದಾರೆ. ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಂತಿ ಕಾಪಾಡಲು ಪೂಜಾರಿ ಮನವಿ
ಮಂಗಳೂರು: ಉಳ್ಳಾಲದ ದುಷ್ಕರ್ಮಿಗಳು ಭಯದ ವಾತಾವರಣ ಹುಟ್ಟಿಸಿ ನಿರಪರಾಧಿಗಳ ಮನೆಗೆ ಹಾನಿ ಮಾಡಿಕೃತ್ಯವನ್ನು ಕೇಂದ್ರ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಖಂಡಿಸಿದ್ದಾರೆ.
ಸಮಾಜದಲ್ಲಿ ಭಯ, ಅಶಾಂತಿ ಹುಟ್ಟಿಸುವ ಯಾರೇ ಆಗಲಿ ಅಂಥ ಕಿಡಿಗೇಡಿಗಳನ್ನು ಪೊಲೀಸ್ ಇಲಾಖೆ ನಿರ್ದಾಕ್ಷಿಣ್ಯವಾಗಿ ಬಂಧಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಎಲ್ಲರೂ ಜಾತಿ, ಧರ್ಮ ನೋಡದೆ ಶಾಂತಿ ಕಾಪಾಡಲು ಸಹಕರಿಸಿ ಎಂದು ಪೂಜಾರಿ ವಿನಂತಿಸಿದ್ದಾರೆ.
ಬಿಜೆಪಿ ಸದಸ್ಯರ ಕುಮ್ಮಕ್ಕು
ಕಾಂಗ್ರೆಸ್ ಆರೋಪ
ಮಂಗಳೂರು: ಗಲಭೆಯಲ್ಲಿ ತೊಡಗಿರುವ ಗುಂಪುಗಳಿಗೆ ಕೋಟೆಪುರ ಬಿಜೆಪಿ ಪುರಸಭೆ ಸದಸ್ಯರು ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ ಉಳ್ಳಾಲ್ ಆರೋಪಿಸಿದ್ದಾರೆ.
ಯುವ ಸೇನೆ ಕಳವಳ
ಉಡುಪಿ: ಉಳ್ಳಾಲದಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಗೆ ಹಿಂದೂ ಯುವಸೇನೆ ತೀವ್ರ ಕಳವಳ ವ್ಯಕ್ತಪಡಿಸಿದೆ. ಈ ಘಟನೆಗಳಿಂದ ಹಿಂದು ಸಮಾಜ ಎಚ್ಚರಗೊಳ್ಳದಿದ್ದರೆ ನಮ್ಮ ಅಸ್ತಿತ್ವಕ್ಕೆ ಸಂಚಕಾರ ಒದಗಿ ಬರುವುದು ನಿಶ್ಚಿತ ಎಂದು ಹೇಳಿದೆ.
ಹಿಂದೆ ಕಾಶ್ಮೀರ ಆನಂತರ ಕೇರಳ ಇದೀಗ ಕರಾವಳಿ ಜಿಲ್ಲೆಗಳಲ್ಲಿ ದೇಶದ್ರೋಹಿ ಮತಾಂಧ ಶಕ್ತಿಗಳು ಹಂತ ಹಂತವಾಗಿ ನೆಲೆಗೊಂಡು ಬಲಗೊಳ್ಳುತ್ತಿರುವುದರಿಂದ ಹಿಂದೂಗಳ ಅಸ್ತಿತ್ವಕ್ಕೆ ಅಪಾಯ ಬಂದಿದೆ. ಉಳ್ಳಾಲ ಘಟನೆ ಅದಕ್ಕೆ ಒಂದು ಸಾಕ್ಷಿಯಷ್ಟೇ. ಆ ಪ್ರದೇಶದಲ್ಲಿ ಕಳೆದ ಅನೇಕ ವರ್ಷಗಳಿಂದ ಹಿಂದೂಗಳು ಭಯದ ನೆರಳಿನಲ್ಲಿ ಬದುಕುತ್ತಿದ್ದಾರೆ. ನಮ್ಮವರೇ ಕೆಲವರು ದೇಶದ್ರೋಹಿ ಶಕ್ತಿಗಳಿಗೆ ದುಡ್ಡಿನ ಆಸೆಗೆ ಬಲಿಯಾಗಿ ನೆರವಾಗುತ್ತಿರುವುದು ತೀರಾ ವಿಷಾದನೀಯ. ಈ ಘಟನೆಯ ತಪ್ಪಿತಸ್ಥರನ್ನು ಶೀಘ್ರ ಶಿಕ್ಷೆಗೊಳಪಡಿಸಲು ಸರ್ಕಾರ ಮುಂದಾಗಬೇಕು ಎಂದು ಯುವಸೇನೆ ಕೇಂದ್ರೀಯ ಮಂಡಳಿ ಅಧ್ಯಕ್ಷ ಯಶೋಧರ ಚೌಟ, ಪ್ರಧಾನ ಕಾರ್ಯದರ್ಶಿ ಪದ್ಮನಾಭ ನಾವೂರು ವಕ್ತಾರ ಹಾಗೂ ಉಡುಪಿ ಜಿಲ್ಲಾಧ್ಯಕ್ಷ ವಾಸುದೇವ ಭಟ್ ಪೆರಂಪಳ್ಳಿ ಒತ್ತಾಯಿಸಿದ್ದಾರೆ.
ಕಾರಿಗೆ ಬಾಟಲಿ ಎಸೆದ ದುಷ್ಕರ್ಮಿಗಳು: ಬಿಗಿ ಬಂದೋಬಸ್ತ್
ಬಂಟ್ವಾಳ: ಕಿಡಿಗೇಡಿಗಳು ಕ್ವಾಲಿಸ್ ಕಾರಿಗೆ ಬಾಟಲಿ ಎಸೆದು ಹಾನಿ ಉಂಟುಮಾಡಿದ ಘಟನೆ ಕಲ್ಲಡ್ಕದ ಮೇಲಿನ ಪೇಟೆಯಲ್ಲಿ ಗುರುವಾರ ರಾತ್ರಿ ನಡೆದಿದೆ.
ಇಲ್ಲಿನ ಹ್ಯಾರಿಸ್ ಎಂಬವರು ವಾಹನವನ್ನು ರಸ್ತೆ ಪಕ್ಕ ನಿಲ್ಲಿಸಿದ್ದು, ಇದೇ ವೇಳೆ ವಾಹನವೊಂದರಿಂದ ಕ್ವಾಲಿಸ್ ವಾಹನಕ್ಕೆ ಬಾಟಲಿ ಎಸೆಯಲಾಗಿದೆ ಎಂದು ಹೇಳಲಾಗಿದೆ. ಘಟನೆ ಬೆನ್ನಲ್ಲೇ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಕಲ್ಲಡ್ಕ ಮೇಲಿನ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿದರು. ಇದರಿಂದಾಗಿ ಕಲ್ಲಡ್ಕದಲ್ಲಿ ಕೋಮು ಗಲಭೆ ಎಂಬ ವದಂತಿ ಹರಡಿ ಮತ್ತಷ್ಟು ಆತಂಕಕ್ಕೆ ಕಾರಣವಾಯಿತು. ಘಟನೆ ಸ್ಥಳಕ್ಕೆ ಬಂಟ್ವಾಳ ವೃತ್ತ ನಿರೀಕ್ಷಕ ರಾಜಶೇಖರ ಮಿಸ್ತ್ರಿ, ನಗರ ಠಾಣಾಧಿಕಾರಿ ಸಂಜಯ್ ಕಲ್ಲೂರ ಭೇಟಿ ನೀಡಿ ಬಂದೋಬಸ್ತ್ ವ್ಯವಸ್ಥೆ ಗೊಳಿಸಿದ್ದಾರೆ. ಬುಧವಾರ ರಾತ್ರಿಯೂ ಬೈಕ್ವೊಂದರಲ್ಲಿ ತೆರಳುತ್ತಿದ್ದ ಇಬ್ಬರು ಕಿಡಿಗೇಡಿಗಳು ಮೆಲ್ಕಾರ್ನಲ್ಲಿ ಖಾಸಗಿ ಬಸ್ಸಿಗೆ ಕಲ್ಲೆಸೆದು ಹಾನಿಗೊಳಿಸಿದ್ದರು. ಕಿಡಿಗೇಡಿಗಳ ಈ ಕೃತ್ಯಗಳ ಹಿನ್ನೆಲೆಯಲ್ಲಿ ಕಲ್ಲಡ್ಕ, ಪಾಣೆಮಂಗಳೂರು, ಮೆಲ್ಕಾರ್, ಬಿ.ಸಿ.ರೋಡ್, ಕೈಕಂಬ ಪರಿಸರದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.
ರೈಲಿನ ಗಾಳಿಗೆ ಕುಸಿದು ವೃದ್ಧಗೆ ಗಾಯ
ಪುತ್ತೂರು: ರೈಲು ತೆರಳುತ್ತಿದ್ದ ಸಂದರ್ಭ ರೈಲು ಹಳಿ ಪಕ್ಕದಲ್ಲಿ ಸಾಗುತ್ತಿದ್ದ ವೃದ್ಧರೊಬ್ಬರು ವೇಗದ ಗಾಳಿಗೆ ಸಿಲುಕಿ ಕುಸಿದು ಬಿದ್ದು ಗಾಯಗೊಂಡ ಘಟನೆ ಮಿತ್ತೂರು ರೇಲ್ವೆ ಹಳಿಯ ಬಳಿ ನಡೆದಿದೆ. ಪುತ್ತೂರು ತಾಲೂಕಿನ ಮಿನಾವು ನಿವಾಸಿ ಸುಬ್ಬಯ್ಯ ಗೌಡ (60) ಗಾಯಗೊಂಡವರು. ಅವರು ಮಿತ್ತೂರು ಬಳಿ ರೈಲು ಹಳಿ ಸಮೀಪ ನಡೆದುಕೊಂಡು ಹೋಗುತ್ತಿದ್ದರು. ಈ ಸಂದರ್ಭ ವೇಗವಾಗಿ ಚಲಿಸುತ್ತಿದ್ದ ರೈಲಿನ ಗಾಳಿಯ ಹೊಡೆತಕ್ಕೆ ಸಿಲುಕಿ ಕುಸಿದು ಬಿದ್ದರು. ಅವರ ತಲೆ ಹಾಗೂ ಎದೆಯ ಭಾಗಕ್ಕೆ ಗಾಯಗಳಾಗಿವೆ. ಸುಬ್ಬಯ್ಯ ಅವರನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಉಭಯ ಸಮುದಾಯ ಮುಖಂಡರ ಶಾಂತಿಸಭೆ
ಮಂಗಳೂರು: ಉಳ್ಳಾಲ ಮೊಗವೀರಪಟ್ಟಣದಲ್ಲಿ ಘರ್ಷಣೆ ಹಿನ್ನೆಲೆಯಲ್ಲಿ ಪೊಲೀಸ್ ಕಮಿಷನರ್ ಹಿತೇಂದ್ರ ಗುರುವಾರ ಉಳ್ಳಾಲದಲ್ಲಿ ಮೊಗವೀರ ಸಮುದಾಯ ಮುಖಂಡರು ಮಸೀದಿ ಮತ್ತು ಮುಸ್ಲಿಂ ಸಮುದಾಯದ ಮುಖಂಡರ ಸಭೆ ಕರೆದು ಶಾಂತಿ ಕಾಪಾಡುವಂತೆ ಸೂಚಿಸಿದರು.
ಎರಡು ಸಮುದಾಯದ ಮುಖಂಡರು ತಮ್ಮ ಯುವಕರು ಅಹಿತಕರ ಘಟನೆಯಲ್ಲಿ ಭಾಗವಹಿಸದಂತೆ ತಡೆಯುವುದಾಗಿ, ಶಾಂತಿ ಕಾಪಾಡಲು ಸಹಕರಿಸುವುದಾಗಿ ಭರವಸೆ ನೀಡಿದರು.
ಶುಕ್ರವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆ ವರೆಗೆ ನಿಷೇಧಾಜ್ಞೆ ಸಡಿಲಿಸುವುದಾಗಿ ಕಮಿಷನರ್ ಹಿತೇಂದ್ರ ಭರವಸೆ ನೀಡಿದರು.
'ಎರಡು ಸಮುದಾಯ ಮುಖಂಡರು ಶಾಂತಿ ಕಾಪಾಡುವ ಭರವಸೆ ನೀಡಿದ್ದಾರೆ. ನಿಷೇಧಾಜ್ಞೆ ಜಾರಿಗೊಳಿಸಿದ ಬಳಿಕ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಆದರೂ ಈ ಪ್ರದೇಶದಲ್ಲಿ ಕೆಲವು ದಿನಗಳ ಕಾಲ ಭದ್ರತೆ ನೀಡಲಾಗುವುದು. ಅಹಿತಕರ ಘಟನೆ ನಡೆದರೆ, ನಿಷೇಧಾಜ್ಞೆ ವಿಧಿಸಲಾಗುವುದು' ಎಂದು ಕಮಿಷನರ್ ಆರ್. ಹಿತೇಂದ್ರ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

