ಲಾರಿಯಿಂದ ರಾತ್ರಿ ಡೀಸೆಲ್ ಕಳವು ಜಾಲ: ಓರ್ವ ಆರೋಪಿ ಸೆರೆ
ಉಪ್ಪಿನಂಗಡಿ: ರಾತ್ರಿ ವೇಳೆ ನಿಲ್ಲಿಸಲಾದ ಲಾರಿಗಳಿಂದ ಡೀಸೆಲ್ ಕಳವು ಮಾಡುತ್ತಿದ್ದ ಪ್ರಕರಣವನ್ನು ಸ್ಥಳೀಯ ಜನತೆ ಹೊಂಚು ಹಾಕಿ ಭೇದಿಸಿದ್ದು, ಓರ್ವಆರೋಪಿಯನ್ನು ಪತ್ತೆ ಹಚ್ಚಿ ಪೊಲೀಸರಿಗೊಪ್ಪಿಸಿದ ಘಟನೆ ಸೋಮವಾರ ಗೋಳಿತೊಟ್ಟು ಎಂಬಲ್ಲಿ ಸಂಭವಿಸಿದೆ.
ನಿರ್ಮಾಣ ಸಂಸ್ಥೆಯೊಂದಕ್ಕೆ ಸೇರಿದ ಲಾರಿಗಳಿಂದ ನಿತ್ಯವೂ ಎಂಬಂತೆ ಡೀಸೆಲ್ ಕಳವಾಗುತ್ತಿದ್ದ ಹಿನ್ನೆಲೆಯಲ್ಲಿ ಸಿ.ಸಿ. ಕ್ಯಾಮೆರಾ ಸಹಿತ ಹಲವು ಪತ್ತೆ ಕಾರ್ಯಗಳನ್ನು ನಡೆಸಿದರೂ, ಚಾಣಾಕ್ಷ ಕಳ್ಳರು ತಪ್ಪಿಸಿಕೊಳ್ಳುತ್ತಿದ್ದರು.
ಈ ಬಗ್ಗೆ ನಿಖರ ಕಾರ್ಯಾಚರಣೆ ನಡೆಸಿದ ಸಂಸ್ಥೆಯ ಕನ್ಸ್ಟ್ರಕ್ಷನ್ ಮ್ಯಾನೇಜರ್ ಅಬ್ದುಲ್ ಆರೀಫ್ ತನ್ನ ಸಂಗಡಿಗರೊಂದಿಗೆ ಕಾರ್ಯಾಚರಣೆಗಿಳಿದಿದ್ದರು.
ಸೋಮವಾರ ನಸುಕಿನ ವೇಳೆ ಮಾರುತಿ ಕಾರು ಮತ್ತು ಬೈಕ್ನಲ್ಲಿ ಆಗಮಿಸಿದ ಡಿಸೀಲ್ ಕಳ್ಳರು ಹೆದ್ದಾರಿಯಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಿ, ಗೋಳಿತೊಟ್ಟಿನ ವಾಹನ ನಿಲುಗಡೆ ಸ್ಥಳದಲ್ಲಿ ನಿಲ್ಲಿಸಲಾಗಿದ್ದ ಲಾರಿಯಿಂದ 75 ಲಿ. ಡೀಸೆಲ್ ಕಳವು ಮಾಡಿ ನಾಲ್ಕು ಕ್ಯಾನ್ಗಳಲ್ಲಿ ತುಂಬಿಸಿದರು. ಈ ವೇಳೆ, ಅವಿತಿದ್ದ ತಂಡ ಮಿಂಚಿನ ವೇಗದಲ್ಲಿ ಕಳ್ಳರನ್ನು ಹಿಡಿಯಲು ಮುಂದಾಯಿತು. ಆಗ, ಶಿಬಾಜೆಯ ಸೋನು ಮತ್ತು ಗೋಳಿತೊಟ್ಟಿನ ಶರತ್ ಎಂಬಿಬ್ಬರು ಬೈಕ್ನಲ್ಲಿ ಪರಾರಿಯಾಗುವಲ್ಲಿ ಯಶಸ್ಸು ಗಳಿಸಿದರು.
ಮಾರುತಿ ಓಮ್ನಿ ಚಲಾಯಿಸಿ ಪರಾರಿಯಾಗಲು ಯತ್ನಿಸಿದ ಅರುಣ್ ಎಂಬಾತ ವೇಗವಾಗಿ ಕಾರನ್ನು ಚಲಾಯಿಸಿದ ಸಂದರ್ಭ ಕಾರು ಅಪಘಾತಕ್ಕೀಡಾಯಿತು. ಅದರಿಂದಲೂ ಓಡಿ ತಪ್ಪಿಸಲು ಯತ್ನಿಸಿದ ಆತನನ್ನು ಸುಮಾರು ಎಂಟತ್ತು ಮಂದಿ ಹಿಡಿದು ವಶಕ್ಕೆ ತೆಗೆದುಕೊಂಡರು.
ಗುಂಪಿನ ದಾಳಿಗೆ ಸಿಲುಕಿ ಕಾರು ಜಖಂಗೊಂಡಿದೆ ಎಂಬ ಮಾತು ಕೇಳಿಬರುತ್ತಿದ್ದರೂ, ದೂರಿನಲ್ಲಿ ಅಪಘಾತದ ವೇಳೆ ಕಾರು ಜಖಂಗೊಂಡಿದೆ ಎಂದು ಉಲ್ಲೇಖಿಸಲಾಗಿದೆ.
ಆರೋಪಿಗೆ ಯಥೋಪಚಾರ ನೀಡಿದ ಬಳಿಕ ಕಾರ್ಯಾಚರಣೆ ತಂಡ ಆತನನ್ನು ಉಪ್ಪಿನಂಗಡಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಸಕ್ರಿಯ ಜಾಲದ ಸದಸ್ಯ: ಬಂಧಿತ ಅರುಣ್ ಡೀಸೆಲ್ ಕಳವು ನಡೆಸಿ ವಿಕ್ರಯಿಸುತ್ತಿರುವ ಜಾಲವೊಂದರ ಸದಸ್ಯನೆಂದು ಒಪ್ಪಿಕೊಂಡಿದ್ದು, ಈ ಹಿಂದೆಯೂ ಹಲವು ಬಾರಿ ಕಳವು ನಡೆಸಿರುವುದಾಗಿ ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾನೆ.
ಈತ ಶಿಬಾಜೆ ಮೂಲದ ಬಾರ್ ಸಿಬ್ಬಂದಿಯಾಗಿದ್ದು, ರಾತ್ರಿ ವೇಳೆ ಕಳವು ನಡೆಸುತ್ತಿದ್ದುದಾಗಿ ತಿಳಿಸಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

