ಅಮಾಯಕರ ವಿರುದ್ಧದ ಕೇಸು, ಬಂಧನ ತಡೆಯದಿದ್ರೆ ಸ್ವಾಮೀಜಿಗಳ ಉಪವಾಸ ಸತ್ಯಾಗ್ರಹ: ಪೇಜಾವರ ಶ್ರೀ
ಮಂಗಳೂರು: ಉಳ್ಳಾಲ ಗಲಭೆಗೆ ಸಂಬಂಧಿಸಿದಂತೆ ಅಮಾಯಕರ ಬಂಧನ ನಿಲ್ಲಿಸಬೇಕು, ಈಗಾಗಲೇ ಬಂಧಿತರಾಗಿರುವ ಅಮಾಯಕರನ್ನು ಬಿಡುಗಡೆಗೊಳಿಸಬೇಕು, ಸ್ವತ್ತು ಹಾನಿಗೀಡಾದವರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಗುರುವಾರ ಉಳ್ಳಾಲದಲ್ಲಿ ನಡೆದ 'ಸಂತ್ರಸ್ತರ ಕಡೆಗೆ ಸನ್ಯಾಸಿಗಳ ನಡಿಗೆ' ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯಪಾಲರ ಭಾರದ್ವಾಜ್ ಅವರನ್ನು ಒತ್ತಾಯಿಸಲಾಗಿದೆ.
ಶೀಘ್ರವೇ ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ಸ್ವಾಮೀಜಿಗಳು ಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದಾರೆ. ಇದಕ್ಕೆ ಸರ್ಕಾರ ಸ್ಪಂದಿಸದಿದ್ದರೆ ಉಳ್ಳಾಲದಲ್ಲಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆಯನ್ನೂ ಸ್ವಾಮೀಜಿಗಳು ನೀಡಿದ್ದಾರೆ.
ಉಳ್ಳಾಲದ ಮೊಗವೀರಪಟ್ಣದಲ್ಲಿ ಗಲಭೆ ಸಂತ್ರಸ್ತರ ಮನೆಗೆ ಭೇಟಿ ನೀಡಿದ ಸ್ವಾಮೀಜಿಗಳ ತಂಡ ಸಂತ್ರಸ್ತರಿಗೆ ಸಾಂತ್ವನ ಹೇಳಿ ಉಪಚರಿಸಿತು. ಯಾವುದೇ ಕಾರಣಕ್ಕೂ ಗಲಭೆಕೋರರಿಗೆ ಹೆದರಿ ಪಲಾಯನ ಮಾಡದಂತೆ ಸಹಾಯಹಸ್ತ, ರಕ್ಷಣೆಯ ಅಭಯ ನೀಡಿತು. ವಿವಿಧ 12ಕ್ಕೂ ಅಧಿಕ ಮಂದಿ ಸ್ವಾಮೀಜಿಗಳು ಸಂತ್ರಸ್ತರ ಮನೆಗೆ ತೆರಳಿದರು.
ಕಣ್ಣೀರಿಟ್ಟ ಮಹಿಳೆಯರು: ಇದಕ್ಕೂ ಮೊದಲು ವ್ಯಾಘ್ರಚಾಮುಂಡೇಶ್ವರಿ ಸನ್ನಿಧಿಯಲ್ಲಿ ಪೇಜಾವರಶ್ರೀ ಅಧ್ಯಕ್ಷತೆಯಲ್ಲಿ ನಡೆದ ಸ್ವಾಮೀಜಿಗಳ ಸಭೆಯಲ್ಲಿ ಸಂತ್ರಸ್ತ ಕುಟುಂಬದವರು ಕಣ್ಣೀರ್ಗರೆದರು. ವಿನಾ ಕಾರಣ ಅನ್ಯಕೋಮಿನವರು ರಾತ್ರಿ ಮನೆಗಳಿಗೆ ನುಗ್ಗಿ ದಾಂದಲೆ ನಡೆಸಿದ್ದಾರೆ. ಅಲ್ಲದೆ, ಕಲ್ಲು ತೂರಾಟ, ಹಲ್ಲೆ, ಸ್ವತ್ತು ನಾಶ ಮಾಡಿರುವುದನ್ನು ವಿವರಿಸಿದರು. ಸ್ಥಳೀಯ ಸಚಿವರು ಅನ್ಯ ಕೋಮಿನ ಮನೆಗೆ ಭೇಟಿ ನೀಡಿದ್ದು ಬಿಟ್ಟರೆ ಹಿಂದೂ ಮನೆಗಳಿಗೆ ಬಂದಿಲ್ಲ. ಮೀನುಗಾರಿಕೆಯ ಬೋಟ್ಗಳಿಗೆ ಹಾನಿ ಮಾಡಿದ್ದಾರೆ. ರಾತ್ರೋರಾತ್ರಿ ಪೊಲೀಸರು ಬಂದು ಆರೋಪಿಗಳ ಬದಲು ಹಿಂದೂಗಳನ್ನೇ ಬಂಧಿಸಿ ಕರೆದೊಯ್ಯುತ್ತಿದ್ದಾರೆ. ಹಿಂದೂ ಕುಟುಂಬಗಳಿಗೆ ರಕ್ಷಣೆ ನೀಡುವಂತೆ ಗೋಗರೆದರು. ಪೇಜಾವರಶ್ರೀ ಮಾತನಾಡಿ, ಹಿಂದೂ ಸಮಾಜಕ್ಕೆ ತೊಂದರೆಯಾದಾಗ ಸೆಟೆದು ನಿಲ್ಲಬೇಕು. ಆಕ್ರಮಣ ಆದಾಗ ಸುಮ್ಮನೆ ಇರಬಾರದು. ಇದು ರಾಜಕೀಯ ಸಮಾವೇಶ ಅಲ್ಲ, ಹಿಂದೂ ಸಮಾಜದ ಜತೆ ಸಮಸ್ತ ಸ್ವಾಮೀಜಿಗಳಿದ್ದಾರೆ ಎಂಬುದನ್ನು ತೋರಿಸಿಕೊಡಲು ನಾವು ಬಂದಿದ್ದೇವೆ ಎಂದರು.
ನಿರಪರಾಧಿಗಳಿಗೆ ದೌರ್ಜನ್ಯ ನಡೆಸುವುದನ್ನು ತಾನು ಪ್ರಶ್ನಿಸಿರುವುದು ರಾಜಕೀಯವೇ ಎಂದು ಗೃಹ ಸಚಿವ ಜಾರ್ಜ್ಗೆ ಪ್ರಶ್ನಿಸಿದ ಪೇಜಾವರಶ್ರೀ, ಕೇಂದ್ರ ಗೃಹ ಸಚಿವರು ಕೂಡ ಅಲ್ಪಸಂಖ್ಯಾತರ ಪರ ಮಾತನಾಡುತ್ತಾರೆ. ಹಾಗಾದರೆ ಬಹುಸಂಖ್ಯಾತರಿಗೆ ತೊಂದರೆಯಾದಾಗ ರಕ್ಷಿಸುವವರು ಯಾರು ಎಂದು ಪ್ರಶ್ನಿಸಿದರು. ಆರ್ಎಸ್ಎಸ್ ಮುಖಂಡ ಡಾ.ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿದರು.
ಸಮಾವೇಶದಲ್ಲಿ ಶ್ರೀಮುಕ್ತಾನಂದ ಸ್ವಾಮೀಜಿ ಕರಿಂಜೆ, ಶ್ರೀವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಸುಬ್ರಹ್ಮಣ್ಯ ಮಠ, ಒಡಿಯೂರಿನ ಶ್ರೀಗುರುದೇವಾನಂದ ಸ್ವಾಮೀಜಿ, ಓಂಶ್ರೀ ಸ್ವಾಮೀಜಿ ತೊಕ್ಕೊಟ್ಟು, ಶ್ರೀರುದ್ರಮುನಿ ಸ್ವಾಮೀಜಿ, ಶ್ರೀಕಾಳಹಸ್ತೇಂದ್ರ ಸ್ವಾಮೀಜಿ, ನಿತ್ಯಾನಂದ ಸ್ವಾಮಿ, ಕೋಲ್ಯ ಶ್ರೀರಮಾನಂದ ಸ್ವಾಮೀಜಿ, ಬಾಳೆಕುದ್ರು ಶ್ರೀನೃಸಿಂಹಾಶ್ರಮ ಶಂಕರ ಸ್ವಾಮೀಜಿ, ವಜ್ರದೇಹಿ ಶ್ರೀರಾಜಶೇಖರಾನಂದ ಸ್ವಾಮೀಜಿ, ಕೊಂಡವೂರು ಶ್ರೀಯೋಗಾನಂದ ಸ್ವಾಮೀಜಿ, ಮಾಣಿಲ ಶ್ರೀಮೋಹನದಾಸ ಸ್ವಾಮೀಜಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

