ದೇಶ ರಕ್ಷಣೆಗೆ, ಪ್ರಗತಿಗೆ ಮತ ನೀಡಿ: ಮೋದಿ
ಮಂಗಳೂರು: ವ್ಯಕ್ತಿಗಿಂತ ಪಕ್ಷ ದೊಡ್ಡದು, ಪಕ್ಷಕ್ಕಿಂತ ದೇಶ ದೊಡ್ಡದು. 2014ರ ಚುನಾವಣೆಯಲ್ಲಿ ವ್ಯಕ್ತಿಗಾಗಿ ಮತ ನೀಡಬೇಡಿ, ಪಕ್ಷಕ್ಕಾಗಿ ಮತ ನೀಡಬೇಡಿ, ದೇಶಕ್ಕೆ ಮತ ನೀಡಿ, ದೇಶದ, ಜನರ ರಕ್ಷಣೆಗೆ ಮತ ನೀಡಿ, ದೇಶದ ಪ್ರಗತಿಗೆ, ಅಖಂಡತೆಗಾಗಿ ಮತ ನೀಡಿ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹೇಳಿದರು.
ಕೇಂದ್ರ ಮೈದಾನದಲ್ಲಿ ಸೋಮವಾರ ಬಿಜೆಪಿ ಆಯೋಜಿಸಿದ 'ಭಾರತ ಗೆಲ್ಲಿಸಿ' ಸಮಾವೇಶದಲ್ಲಿ ಮಾತನಾಡಿದರು. 2014ರ ಚುನಾವಣೆ ಯಾರನ್ನೋ ಅಧಿಕಾರಕ್ಕೇರಿಸುವ ಚುನಾವಣೆಯಲ್ಲ. ಹೊಸ ಭರವಸೆ, ಅತ್ಯುತ್ಸಾಹ ತರುವ, ಭಾರತವನ್ನು ಹೊಸ ಎತ್ತರಕ್ಕೇರಿಸುವ ಗುರಿಯಿಂದ ಈ ಬಾರಿ ಚುನಾವಣೆ ಮೈದಾನದಲ್ಲಿ ಇಳಿಯುತ್ತಿದ್ದೇವೆ. ವಂಶಾಡಳಿತದ ಮುಕ್ತಿಗೆ, ಭ್ರಷ್ಟಾಚಾರದ ಮುಕ್ತಿಗೆ, ಬೆಲೆ ಏರಿಕೆಯಿಂದ ಮುಕ್ತಿಗೆ, ಕೆಟ್ಟ ಆಡಳಿತದ ಮುಕ್ತಿಗೆ, ದೇಶದ ರಕ್ಷಣೆಗೆ, ಜನರ ಸುರಕ್ಷೆಗೆ, ವಾಸ್ತವ್ಯಕ್ಕೆ, ಮನೆಗೆ, ಹೊಟ್ಟೆಯ ಹಿಟ್ಟಿಗೆ, ಅನ್ನಕ್ಕೆ, ರೋಗಿಗಳಿಗೆ ಮದ್ದು ಸಿಗಲು, ಬಡವರ ಒಳಿತಿಗೆ, ಶಿಕ್ಷಣ ಸುಧಾರಣೆಗೆ, ಯುವಕರಿಗೆ ಉದ್ಯೋಗ ಸಿಗಲು, ಮಹಿಳೆಯರ ಗೌರವಕ್ಕೆ, ಕೃಷಿಕರ ಕಲ್ಯಾಣಕ್ಕೆ, ಸ್ವಾವಲಂಬಿ, ಶಕ್ತಿ ಶಾಲಿ, ಸಮೃದ್ಧಿ ಶಾಲಿ, ಪ್ರಗತಿಶಾಲಿ ಭಾರತಕ್ಕಾಗಿ. ಏಕತೆ ಅಖಂಡತೆಗಾಗಿ, ಉತ್ತಮ ಆಡಳಿತ, ಪ್ರಗತಿಗೆ ಎಲ್ಲರೂ ಮತ ನೀಡಬೇಕು ಎಂದರು. ಓಟ್ ಬ್ಯಾಂಕ್ ಬಿಟ್ಟು ವಿಕಾಸ, ಅಭಿವೃದ್ಧಿ ರಾಜಕಾರಣದತ್ತ ಹೋಗಬೇಕು. ಇದಕ್ಕೆ ನಿಮ್ಮ ಆಶೀರ್ವಾದ ಬೇಕು. ನಾನು ಭಾರತದ ವಿಕಾಸಕ್ಕಾಗಿ ಮತ ಯಾಚನೆಗೆ ಬಂದಿದ್ದೇನೆ. ಇಷ್ಟುಜನ ಸೇರಿ ನೀವು ನನ್ನನ್ನು ಗೆಲ್ಲಿಸಿ ಬಿಟ್ಟಿದ್ದೀರಿ ಎಂದು ಕೊಂಡಾಡಿದರು.
ದೇಶದ ಪ್ರತಿ ಮನೆಯವರಿಗೆ ಉದ್ಯೋಗ ನೀಡುತ್ತೇವೆ ಎಂದು ಕಾಂಗ್ರೆಸ್ 2009ರ ಚುನಾವಣೆಯಲ್ಲಿ ಹೇಳಿದರು. ಆದರೆ ಐದು ವರ್ಷದಲ್ಲಿ 27 ಲಕ್ಷ ಮಂದಿಗೆ ಮಾತ್ರ ಉದ್ಯೋಗ ನೀಡಿದ್ದಾರೆ. ದೇಶದ ಯುವಕರಿಗೆ ಉದ್ಯೋಗ ಸಿಗದಿದ್ದರೇ ಅವರು ಎಲ್ಲಿಗೆ ಹೋಗಬೇಕು. ಭಾರತ ಮುನ್ನಡೆಸಬೇಕಿದ್ದರೆ ಯುವಕರತ್ತ ಗಮನ ಹರಿಸುವುದು ಆದ್ಯತೆಯಾಗಬೇಕು.
ನಮ್ಮ ದೇಶದಲ್ಲಿ 35 ವರ್ಷಕ್ಕಿಂತ ಕಡಿಮೆಯ ಯುವಜನರ ಪ್ರಮಾಣ ಶೇ.65. ಕೋಟಿ ಕೋಟಿ ಯುವಜನರ ತರುಣ ದೇಶ ನಮ್ಮದು. ಯುವಜನರಿಗೆ ಅವಕಾಶ ನೀಡಿದರೆ ಭಾರತದ ಭವಿಷ್ಯವನ್ನು ಬದಲಿಸಬಲ್ಲರು. ಅವರಿಗೆ ಕೌಶಲ ಆಧರಿತ ಉದ್ಯೋಗ ನೀಡಬೇಕು. ಕಾಂಗ್ರೆಸ್ ಸರ್ಕಾರ ಹತ್ತು ವರ್ಷದಿಂದ ಕೌಶಲ ಆಧರಿತ ಉದ್ಯೋಗ ಬಗ್ಗೆ ಹೇಳುತ್ತಾರೆ, ಆದರೆ ಈ ಬಗ್ಗೆ ಸ್ಪಷ್ಟತೆ ಇಲ್ಲ. ಯೋಜನೆ ಇಲ್ಲ. ದೇಶ ಮುನ್ನಡೆಸಬೇಕಿದ್ದರೆ ಕೌಶಲ ಅಭಿವೃದ್ಧಿ ಮುಂದಿಟ್ಟು ಆಡಳಿತ ನಡೆಸಬೇಕು ಎಂದರು.
ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ಮುಳುಗಿ ಬಿಟ್ಟಿದೆ. ಕಾಂಗ್ರೆಸ್ ಭ್ರಷ್ಟಾಚಾರದ ತಾಯಿ. ಕಾಂಗ್ರೆಸ್‌ನಿಂದ ಮುಕ್ತಿ ಸಿಗದಿದ್ದರೆ ಭ್ರಷ್ಟಾಚಾರದಿಂದ ಮುಕ್ತಿ ಸಿಗದು. ಈ ಕಾಂಗ್ರೆಸ್ ಸರ್ಕಾರಕ್ಕೆ ಪ್ರತಿ ದಿನ ಎಂಬಂತೆ ಸುಪ್ರೀಂ ಕೋರ್ಟ್ ತಲೆ ಮೇಲೆ ಕುಟ್ಟುತ್ತಿದೆ. ಭಾರತದಲ್ಲಿ ಯಾವುದೇ ಸರ್ಕಾರಕ್ಕೆ ಇಷ್ಟು ಬಾರಿ ಸುಪ್ರೀಂ ಕೋರ್ಟ್ ತರಾಟೆ ತೆಗೆದುಕೊಂಡಿರಲಿಕ್ಕಿಲ್ಲ ಎಂದು ಲೇವಡಿ ಮಾಡಿದರು.
ಕರಾವಳಿ, ಬಂದರು ಅಭಿವೃದ್ಧಿಗೆ, ಮೀನುಗಾರಿಕೆ ಆಭಿವೃದ್ಧಿಗೆ ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಚಿಂತಿಸಲು ಕಾಂಗ್ರೆಸ್‌ಗೆ ಪುರುಸೊತ್ತು ಇಲ್ಲ. ಐಟಿ ಬಿಟಿಯಲ್ಲಿ ನಾವು ಇನ್ನು ತಳಮಟ್ಟದಲ್ಲಿದ್ದೇವೆ. ಕೂಲಿ ರಫ್ತು ಮಾಡಬಾರದು, ಕೌಶಲ ರಫ್ತು ಮಾಡುವಂತಾಗಬೇಕು ಎಂದರು.
ಕರೆಂಟ್ ಕಾಣೆ!
ಒಂದೆಡೆ ಮೋದಿ ಅಬ್ಬರದ ಭಾಷಣ ಮಾಡುತ್ತಿದ್ದರೆ, ಮೋದಿ ಭಾಷಣ ಕೇಳದಂತೆ ಕೆಲವೆಡೆ ವಿದ್ಯುತ್ ಕಾಣೆಯಾಗಿತ್ತು. ಉಳ್ಳಾಲ, ಗುರುಪುರ, ಬಜ್ಪೆ, ಸುರತ್ಕಲ್, ಮೂಡುಬಿದಿರೆ, ಬಂಟ್ವಾಳ, ಕಾರ್ಕಳ ಸಹಿತ ಹಲವೆಡೆ ವಿದ್ಯುತ್ ಕಡಿತಗೊಳಿಸಲಾಗಿತ್ತು. ಇದರಿಂದ ಮನೆಯಲ್ಲೇ ಕುಳಿತು ಮೋದಿ ಭಾಷಣ ನೋಡಲು ಸಾಧ್ಯವಾಗಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

