ದಕ್ಷಿಣ ಕನ್ನಡ

ಧರ್ಮಸ್ಥಳದಲ್ಲಿ ಕದ್ದ ಕಾರು ಕೊಕ್ಕಡದಲ್ಲಿ ವಶಕ್ಕೆ

Published On :

ಉಪ್ಪಿನಂಗಡಿ: ಧರ್ಮಸ್ಥಳದ ಯಾತ್ರಾರ್ಥಿಗಳ ಕಾರನ್ನು ಕದ್ದ ಪ್ರಕರಣದಲ್ಲಿ ಉಪ್ಪಿನಂಗಡಿ ಪೊಲೀಸರು ಮತ್ತು ಸಾರ್ವಜನಿಕರು ಸಕಾಲಿಕ ಕಾರ್ಯಾಚರಣೆ ನಡೆಸಿ ಕಾರು ಕಳವು ಆರೋಪಿ ಸಹಿತ ಕಾರನ್ನು ವಶ ಪಡಿಸಿಕೊಂಡ  ಘಟನೆ ಬುಧವಾರ ಕೊಕ್ಕಡದಲ್ಲಿ ನಡೆದಿದೆ.
ಧರ್ಮಸ್ಥಳಕ್ಕೆ ಯಾತ್ರಾರ್ಥಿಯಾಗಿ ಬಂದಿದ್ದ ತುಮಕೂರಿನ ಮನೋಹರ ಎಂಬವರು ದೇವರ ದರ್ಶನ ಮಾಡಲೆಂದು ತನ್ನ ಇನ್ನೋವಾ ಕಾರನ್ನು ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡಿ ದೇವಾಲಯಕ್ಕೆ ಹೋಗಿ ಬರುವಷ್ಟರಲ್ಲಿ ಕಾರನ್ನು ಕಳವು ಮಾಡಲಾಗಿತ್ತು. ಕೂಡಲೇ ಧರ್ಮಸ್ಥಳ ಹೊರಠಾಣೆಗೆ ಅವರು ದೂರು ನೀಡಿದರು. ಕಾರು ಕಳವು ಮಾಹಿತಿಯನ್ನು ವಿನಿಮಯ ನಡೆಸಿದ ಪೊಲೀಸರು ಆಯಕಟ್ಟಿನ ಸ್ಥಳದಲ್ಲಿ ತಪಾಸಣೆ ನಡೆಸಿದಾಗ, ಕಾರನ್ನು ಕಳ್ಳರು ಚಲಾಯಿಸಿಕೊಂಡು ಬರುತ್ತಿರುವುದು ಕಂಡು ಬಂತು. ಪೆರಿಯಶಾಂತಿ ಎಂಬಲ್ಲಿ ಪೊಲೀಸರ ಕಾರನ್ನು ನಿಲ್ಲಿಸಲು ಸೂಚಿಸಿದಾಗ ಕಾರು ಕಳ್ಳರು ಕಾರನ್ನು ನಿಲ್ಲಿಸದೆ ಕೊಕ್ಕಡದ ರಸ್ತೆಗೆ ತಿರುಗಿಸಿ ವೇಗವಾಗಿ ಚಲಾಯಿಸಿದರು.
ಪರಿಸರದ ರಸ್ತೆಯ ಬಗ್ಗೆ ಮಾಹಿತಿ ಇರದ ಕಾರು ಕಳ್ಳರು ಪೊಲೀಸರಿಂದ ತಪ್ಪಿಸಿಕೊಳ್ಳುವ ಭರಾಟೆಯಲ್ಲಿ ಕೊಕ್ಕಡದ ಮಲ್ಲಿಗೆ ಮಜಲು ಎಂಬಲ್ಲಿ ಕಾರನ್ನು ವೇಗವಾಗಿ ಚಲಾಯಿಸುವ ಯತ್ನದಲ್ಲಿದ್ದಾಗಲೇ ಸ್ಥಳೀಯರು ತಡೆಗಟ್ಟಿ ಕಾರು ನಿಲ್ಲಿಸುವಲ್ಲಿ ಯಶಸ್ಸು ಗಳಿಸಿದರು.
ಆದರೆ ಕಾರಿನಲ್ಲಿದ್ದ ನಾಲ್ವರ ಪೈಕಿ ಮೂವರು ಓಡಿ ಪರಾರಿಯಾದರು. ಓರ್ವ ಮಾತ್ರ ಸಿಕ್ಕಿ ಬಿದ್ದಿದ್ದು, ಆತನನ್ನು ಕೋರಮಂಗಲದ ನಿವಾಸಿಯಾದ ಸುನಿಲ್ ಯಾನೆ ಸುನಿಲ್ ಕುಮಾರ್ ಎಂದು ಗುರುತಿಸಲಾಗಿದೆ. ಈತನ ಸಹಚರ ಕಳ್ಳರ ಬಗ್ಗೆ ತಿಳಿಯಲು ತನಿಖೆ ನಡೆಯುತ್ತಿದೆ.
ನಗದು ಸುರಕ್ಷಿತ: ಕಳ್ಳರು ಕಾರು ಕದಿಯುವುದರ ಹಿಂದೆ  ಕಾರಿನಲ್ಲಿರಿಸಿದ್ದರೆ ಎನ್ನಲಾದ ಲಕ್ಷಾಂತರ ರು. ಹಣ ದೋಚುವ ಯತ್ನವೂ ಇತ್ತೆಂದು ಅಂದಾಜಿಸಲಾಗಿದ್ದು, ಓರ್ವ ಆರೋಪಿ ಸಹಿತ ಪತ್ತೆಯಾದ ಕಾರಿನಲ್ಲಿ ನಗದು ಹಣ ಸುರಕ್ಷಿತವಾಗಿತ್ತೆಂದು ತಿಳಿಯಲಾಗಿದೆ. ಕಾರ್ಯಾಚರಣೆಯಲ್ಲಿ ಉಪ್ಪಿನಂಗಡಿ ಠಾಣಾ ಪೊಲೀಸರು, ನೆಲ್ಯಾಡಿ ಹೊರ ಠಾಣಾ ಪೊಲೀಸರು ಭಾಗವಹಿಸಿದ್ದರು.  ಪ್ರಕರಣವನ್ನು ಬೆಳ್ತಂಗಡಿ ಪೊಲೀಸರು ಕೈಗೆತ್ತಿಕೊಂಡು ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.