ದಕ್ಷಿಣ ಕನ್ನಡ

ಗೃಹಿಣಿ ಸಾವು: ಆತ್ಮಹತ್ಯೆ ಶಂಕೆ

Published On :

ಮೂಲ್ಕಿ: ಪುನರೂರಿನ ಕಲ್ಲಕಟ್ಟ ಎಂಬಲ್ಲಿ ಗೃಹಿಣಿ ಮೃತಪಟ್ಟಿದ್ದು, ಇದು ಆತ್ಮಹತ್ಯೆ ಪ್ರಕರಣ ಎಂದು ಹೇಳಲಾಗಿದೆ. ಮಲ್ಲಿಕಾ ಅಂಚನ್ (23) ಮೃತರು. ಅವರು ಕೆಲವು ವರ್ಷಗಳ ಹಿಂದೆ ಐಕಳದ ಸುಧಾಕರ್ ಎಂಬವರನ್ನು ವಿವಾಹವಾಗಿದ್ದು, ಹೆರಿಗೆಗಾಗಿ ತವರು ಮನೆಗೆ ಬಂದಿದ್ದರು. ಇತ್ತೀಚೆಗೆ ಮಗುವಿನ ನಾಮಕರಣಕ್ಕೆ ಪತಿ ಸುಧಾಕರ್ ವಿದೇಶದಿಂದ ಬಂದು ವಾಪಸ್ ತೆರಳಿದ್ದರು. ಮಂಗಳವಾರ ಬೆಳಗ್ಗೆ 10ರಿಂದ ಮಧ್ಯಾಹ್ನ 12 ಗಂಟೆ ಅವಧಿಯಲ್ಲಿ ತಂದೆ- ತಾಯಿ ಪೇಟೆಗೆ ಹೋಗಿದ್ದು, ಮರಳಿ ಬಂದ ಸಂದರ್ಭ, ಮನೆಯ ಜಗುಲಿಯಲ್ಲಿ ಆಕೆಯ ಮೃತದೇಹ ಇರಿಸಲಾಗಿತ್ತು.  ಈಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಹೇಳಲಾಗಿದ್ದರೂ, ನೇಣು ಬಿಗಿದುದಕ್ಕೆ ಯಾವುದೇ ಕುರುಹು ಕಂಡುಬಂದಿಲ್ಲ. ಅವರಿಗೆ ನಾಲ್ಕು ತಿಂಗಳ ಹಸುಗೂಸು ಇದೆ. ಮೂಲ್ಕಿ ಠಾಣೆಯಲ್ಲಿ ಸಂಶಯಾಸ್ಪದ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.
ಮುಂಗಡ ಪಡೆದು ವಂಚನೆ: ಆರೋಪ
ವಿಟ್ಲ: ಜಾಗ ಮಾರಾಟ ಮಾಡುತ್ತೇನೆಂದು ತಿಳಿಸಿ ಮುಂಗಡ ಹಣ ಪಡೆದು ವಂಚಿಸಿದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಟ್ಲ ದಲಿತ್ ಸೇವಾ ಸಮಿತಿ ಅಧ್ಯಕ್ಷ ಸೇಸಪ್ಪ ಬೆದ್ರಕಾಡು, ಕೇಪು ಗ್ರಾಮದ ಬಡೆಕ್ಕೋಡಿ ನಿವಾಸಿ ಯೊಬ್ಬರು ಕೃಷಿಕರೊಬ್ಬರಿಂದ ಮುಂಗಡ ರು. 8.75 ಲಕ್ಷ ಪಡೆದು ಇದೀಗ ಹಣ ವಾಪಸ್ ನೀಡದೆ, ಜಾಗವನ್ನೂ ಕೊಡದೆ ಸತಾಯಿಸುತ್ತಿದ್ದಾನೆ ಎಂದು ಆರೋಪಿಸಿದರು. ತನ್ನ 0.68 ಮತ್ತು 0.58 ಸೆಂಟ್ಸ್ ಜಾಗವನ್ನು ರು. 14 ಲಕ್ಷಕ್ಕೆ ಮಾರಾಟ ಮಾಡುವ ಕರಾರಿಗೆ ಸಹಿ ಹಾಕಿ, ಬಳಿಕ ಅಗ್ರಿಮೆಂಟ್ ಮೂಲಕ ರು. 7 ಲಕ್ಷಗಳನ್ನು ನೀಡಿದ್ದರು. ಮತ್ತೆ ಕೆಲ ಸಮಯದಲ್ಲಿ ರು. 1.75 ಲಕ್ಷ ವಸೂಲಿ ಮಾಡಿದ್ದ. ಆದರೆ ಎರಡು ವರ್ಷಗಳ ಜಾಗವನ್ನು ಮೊದಲೇ ಮಾರಾಟ ಮಾಡಿರುವ ವಿಷಯ ತಿಳಿದುಬಂತು. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಈಶ್ವರ ಕಾಟುಕುಕ್ಕೆ, ದಲಿತ್ ಸಮಿತಿ ಖಜಾಂಚಿ ಉಮೇಶ್ ಸುರುಳಿಮೂಲೆ, ಮಾಜಿ ಗೌರವಾಧ್ಯಕ್ಷ ಲಿಂಗಪ್ಪ ನಾಯ್ಕ, ಮಾಜಿ ಉಪಾಧ್ಯಕ್ಷೆ ಸಾವಿತ್ರಿ ಸೀಗೆಬಲ್ಲೆ ಮೊದಲಾದವರು ಇದ್ದರು.
ಮಗು ಮೇಲೆ ಅತ್ಯಾಚಾರ?
ಮಂಗಳೂರು: ಮಂಗಳೂರಿನ ಮನೆಯೊಂದರಲ್ಲಿ ಮಂಜೇಶ್ವರದ ಎರಡೂವರೆ ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದಿದೆ. ಮಂಜೇಶ್ವರದ ಕುಟುಂಬವೊಂದು ಮೂರು ದಿನಗಳ ಹಿಂದೆ ಮಂಗಳೂರಿನ ಸಂಬಂಧಿಕರ ಮನೆಗೆ ಕಾರ್ಯಕ್ರಮ ನಿಮಿತ್ತ ಆಗಮಿಸಿತ್ತು. ಆಗ ಮಗುವಿನ ಗುಪ್ತಾಂಗ ಗಾಯವಾಗಿ ರಕ್ತ ಬಂದಿತ್ತು. ಬಿದ್ದು ಗಾಯವಾಗಿರಬೇಕು ಎಂದು ಮನೆಯವರು ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ವೈದ್ಯರು ತಪಾಸಣೆ ನಡೆಸಿದಾಗ ಮಗುವಿನ ಮೇಲೆ ಅತ್ಯಾಚಾರ ನಡೆದಿದೆ ಎಂಬುದು ತಿಳಿದುಬಂದಿತ್ತು. ಮಗುವನ್ನು ಸೋಮವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು. ಮಂಜೇಶ್ವರ ಪೊಲೀಸರಿಗೆ ಹೆತ್ತವರು ದೂರು ನೀಡಿದ ಹಿನ್ನೆಲೆಯಲ್ಲಿ ಮಂಗಳವಾರ ಮಂಜೇಶ್ವರ ಪೊಲೀಸರು ಪಾಂಡೇಶ್ವರಕ್ಕೆ ಆಗಮಿಸಿ ತನಿಖೆ ನಡೆಸಿದ್ದಾರೆ. ಆದರೆ ಇದೀಗ ಹೆತ್ತವರು ಅಧಿಕೃತ ದೂರು ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.