ದಕ್ಷಿಣ ಕನ್ನಡ

ಒಂದೇ ವೇದಿಕೆಯಲ್ಲಿ ಡಾಕ್ಟರೇಟ್ ಪದವಿ ಪಡೆದ ಸಾಧಕ ಸೋದರರು

Published On :

ಬಂಟ್ವಾಳ: ಗ್ರಾಮೀಣ ಪ್ರದೇಶದ ಯುವಕರು ಪಿಎಚ್‌ಡಿ ಮಾಡುವುದು ಸಣ್ಣ ಸಾಧನೆಯೇನಲ್ಲ, ಅದರಲ್ಲೂ ಮುಸ್ಲಿಂ ಸಮುದಾಯಕ್ಕೆ ಸೇರಿದ ಒಂದೇ ಮನೆಯ ಸಹೋದರರಿಬ್ಬರು ಪಿಎಚ್‌ಡಿ ಮಾಡಿ ಮಂಗಳೂರು ವಿ.ವಿ.ಯಲ್ಲಿ ಸೋಮವಾರ ನಡೆದ ಘಟಿಕೋತ್ಸವದ ಒಂದೇ ವೇದಿಕೆಯಲ್ಲಿ ಡಾಕ್ಟರೇಟ್ ಪದವಿ ಪಡೆದಿರುವುದು ವಿಶೇಷ.
ವಿಟ್ಲ ಸಮೀಪದ ಸೆರಂತಿಮಠ ನಿವಾಸಿ ಎಸ್. ಕುಂಞಪ್ಪ ಹಾಜಿ-ಅವ್ವಾಬಿ ದಂಪತಿ ಪುತ್ರರಾದ ಇಸ್ಮಾಯಿಲ್ ಹಾಗೂ ಸಂಶುದ್ದೀನ್ ಈ ಸಾಧನೆ ಮಾಡಿದವರು.
ಮಣಿಪಾಲ ವಿಶ್ವವಿದ್ಯಾನಿಲಯ (ಎಂ.ಐ.ಟಿ.) ಭೌತಶಾಸ್ತ್ರ ವಿಭಾಗದಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇಸ್ಮಾಯಿಲ್, ಭೌತಶಾಸ್ತ್ರ ವಿಭಾಗದಲ್ಲಿ ಅಧ್ಯಯನ ನಡೆಸಿ 'ಮೈಕ್ರೋ ಸ್ಟ್ರಕ್ಚರಲ್ ಸ್ಟಡೀಸ್ ಆನ್ ಇಲೆಕ್ಟ್ರೋನ್ ಇರ್ರೇಡಿಯೇಟೆಡ್ ಪಾಲಿಮರ್ಸ್‌' ಎಂಬ  ಪ್ರಬಂಧ ಸಿದ್ಧಪಡಿಸಿದ್ದರು. ಭೌತಶಾಸ್ತ್ರ ವಿಭಾಗದ ಪ್ರೊ.ವಿ. ರವೀಂದ್ರಾಚಾರ್ ಇಸ್ಮಾಯಿಲ್‌ಗೆ ಪಿಎಚ್‌ಡಿ ಮಾರ್ಗದರ್ಶಕರು.
ಸಂಶುದ್ದೀನ್ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಎಂ.ಎಸ್ಸಿ  ಕೋರ್ಸ್ ಇನ್ ಕೆಮಿಸ್ಟ್ರಿಯಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಮತ್ತು ಕೋ ಆರ್ಡಿನೇಟರ್ ಆಗಿದ್ದಾರೆ. ಇವರು ಮಂಗಳೂರು ವಿಶ್ವವಿದ್ಯಾನಿಲಯದ ರಸಾಯನಶಾಸ್ತ್ರ ವಿಭಾಗದಲ್ಲಿ 'ಸಿಂಥೆಸಿಸ್ ಆ್ಯಂಡ್ ಸ್ಟ್ರಕ್ಚರಲ್ ಸ್ಟಡೀಸ್ ಆಫ್ ಸಮ್ ನ್ಯೂ ನೈಟ್ರೋಜನ್ ಕಂಟೈನಿಂಗ್ ಹೆಟಿರೋ ಸೈಕ್ಲಿಕ್‌' ಪ್ರಬಂಧವನ್ನು ಮಂಗಳೂರು ವಿ.ವಿ.ಯ  ರಿಜಿಸ್ಟ್ರಾರ್, ಪ್ರೊಫೆಸರ್ ಇನ್ ಕೆಮಿಸ್ಟ್ರಿ ಡಾ.ಬಿ. ನಾರಾಯಣ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ.
ಸೋಮವಾರ ಮಂಗಳೂರು ವಿ.ವಿ.ಯಲ್ಲಿ ನಡೆದ 32ನೇ ಘಟಿಕೋತ್ಸವದಲ್ಲಿ ಇಸ್ರೋ ಅಧ್ಯಕ್ಷ ಡಾ. ರಾಧಾಕೃಷ್ಣನ್ ಉಪಸ್ಥಿತಿಯಲ್ಲಿ ವಿ.ವಿಯ ಉಪಕುಲಪತಿ ಪ್ರೊ.ಟಿ.ಸಿ. ಶಿವಶಂಕರ ಮೂರ್ತಿ ಈ ಇಬ್ಬರು ಸಹೋದರರಿಗೆ ಪಿ.ಎಚ್.ಡಿ. ಪ್ರದಾನ ಮಾಡಿದರು.
ಸಾಧಕ..: ಗ್ರಾಮೀಣ ಪ್ರದೇಶದಲ್ಲೇ ಬೆಳೆದು ಬಂದ ಇಸ್ಮಾಯಿಲ್ ಹಾಗೂ ಸಂಶುದ್ದೀನ್ ವಿಟ್ಲದ ಸಂತ ರೀಟಾ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಅಭ್ಯಾಸ, ವಿಟ್ಲ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಢ ಹಾಗೂ ಪದವಿ ಪೂರ್ವ ವಿದ್ಯಾಭ್ಯಾಸ, ಪುತ್ತೂರು ಸಂತ ಫಿಲೋಮಿನಾ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಪಡೆದವರು. ಪ್ರಾಥಮಿಕದಿಂದ ಪದವಿ ತನಕದವರೆಗಿನ ಪ್ರತಿ ಫಲಿತಾಂಶದಲ್ಲಿ ಡಿಸ್ಟಿಂಕ್ಷನ್ ಕಾಯ್ದುಕೊಂಡು ಬಂದಿದ್ದರು. ಎಂ.ಎಸ್ಸಿಯಲ್ಲೂ ಕೂಡಾ ಅತ್ಯುತ್ತಮ ಅಂಕಗಳು ಇವರ ಪಾಲಾಗಿದೆ.
ಇಸ್ಮಾಯಿಲ್ ಸಂಶೋಧನಾ ಅವಧಿಯಲ್ಲಿ ಸಿಂಗಾಪುರ ಹಾಗೂ ಭಾರತದ ಪ್ರಮುಖ ವಿಶ್ವವಿದ್ಯಾನಿಲಯಗಳು ಹಾಗೂ ಸಂಶೋಧನಾ ಸಂಸ್ಥೆಗಳಿಗೆ ತೆರಳಿ ತಮ್ಮ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿ ಸೈ ಎನ್ನಿಸಿಕೊಂಡಿದ್ದಾರೆ. ವಿಟ್ಲದ ಸುದ್ದಿ- ಮಾಹಿತಿಗೆ ಒತ್ತು ಕೊಟ್ಟು ನಮ್ಮ ವಿಟ್ಲ ಎಂಬ ವೆಬ್‌ಸೈಟ್ ಪತ್ರಿಕೆಯನ್ನು ಸ್ಥಾಪಿಸಿದ ಹೆಗ್ಗಳಿಕೆಯೂ ಇಸ್ಮಾಯಿಲ್‌ರದ್ದು.
ಸಾಹಿತ್ಯ ಕೃಷಿಯಲ್ಲಿ ತಮ್ಮ ಸಂಶುದ್ದೀನ್ ಕೂಡ ಹಿಂದೆ ಬಿದ್ದಿಲ್ಲ. ಹಲವು ಅಂತಾರಾಷ್ಟ್ರೀಯ ಮಟ್ಟದ ಸಂಶೋಧನಾ ಪತ್ರಿಕೆಗಳಲ್ಲಿ ಇವರ ಲೇಖನ ಪ್ರಕಟಗೊಂಡಿದೆ. ಇವರ ಸಾಹಿತ್ಯ ಸೇವೆಯ ಗುರುತಿಸಿ ಯು.ಎಸ್.ಎ.ಯ ಸ್ಕಿನೋ ಪಬ್ಲಿಕೇಶನ್‌ನ ಅಂತಾರಾಷ್ಟ್ರೀಯ ಸಂಶೋಧನಾ ಮಾಧ್ಯಮವಾದ ಜರ್ನಲ್ ಆಫ್ ಸಿಂಗಲ್ ಮೋಲ್ ಕ್ಯೂಲ್ ರಿಸರ್ಚ್ ಪತ್ರಿಕೆಗೆ ಪ್ರಧಾನ ಸಂಪಾದಕರನ್ನಾಗಿ ಸಂಶೂದ್ದೀನ್ ಅವರನ್ನು ನೇಮಿಸಿದೆ. ಛಲದೊಂದಿಗೆ ಬದುಕು ಕಟ್ಟಿಕೊಂಡ ಈ ಸಹೋದರರ ಕಲಿಕಾ ಶ್ರದ್ಧೆ- ಸಾಧನೆ ಯುವಜನರಿಗೆ ಮಾದರಿ ತಾನೇ?


-ಮೌನೇಶ ವಿಶ್ವಕರ್ಮ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.