ದಕ್ಷಿಣ ಕನ್ನಡ

ಮಂಗಳೂರು ವಿಶ್ವವಿದ್ಯಾನಿಲಯ ರು. 3.70 ಕೋಟಿ ಕೊರತೆ ಬಜೆಟ್

Published On :

ಮಂಗಳೂರು: '2014-15ನೇ ಸಾಲಿಗೆ ಮಂಗಳೂರು ವಿಶ್ವವಿದ್ಯಾಲಯದ ರು. 3.70 ಕೋಟಿ ಮೊತ್ತದ ಕೊರತೆಯ ಆಯವ್ಯಯ ಪಟ್ಟಿ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಅಂಗೀಕರಿಸಲಾಯಿತು.
ಬುಧವಾರ ಕಾಲೇಜಿನ ಆಡಳಿತ ಸೌಧದ ಹೊಸ ಸೆನೆಟ್ ಸಭಾಂಗಣದಲ್ಲಿ ನಡೆದ 2013-14ನೇ ಸಾಲಿನ ಶೈಕ್ಷಣಿಕ ಮಂಡಳಿಯ 4ನೇ ಸಾಮಾನ್ಯ ಸಭೆಯಲ್ಲಿ ಕುಲಪತಿ ಪ್ರೊ.ಟಿ.ಸಿ. ಶಿವಶಂಕರ ಮೂರ್ತಿ ವಿವರ ಮಂಡಿಸಿದರು.
ಒಟ್ಟು ರು. 179.83 ಕೋಟಿ ಮೊತ್ತದ ಅಂದಾಜುಪಟ್ಟಿ ಸಿದ್ಧಪಡಿಸಲಾಗಿದೆ. ಇದರಲ್ಲಿ ರು. 176.13 ಕೋಟಿ ಸ್ವೀಕೃತಿ ನಿರೀಕ್ಷಿಸಲಾಗಿದೆ. ಕೊರತೆ ಮೊತ್ತ ರು. 3.70 ಕೋಟಿಯನ್ನು ಹೊಂದಾಣಿಕೆ ಮಾಡಲು ತೀರ್ಮಾನಿಸಲಾಯಿತು.
 2013-14ರಲ್ಲಿ ಒಟ್ಟು ರು. 5.76 ಕೋಟಿ ಕೊರತೆಯುಂಟಾಗಿದ್ದು, 2014-15ನೇ ಸಾಲಿಗೆ ಹೋಲಿಸಿದರೆ ರು. 2.6 ಕೋಟಿ ಕಡಿಮೆಯಾಗಿದೆ. ಯೋಜನಾ ಆದಾಯವು ಒಟ್ಟು ರು. 45.9 ಕೋಟಿ ಅಂದಾಜಿಸಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 4.22 ಹೆಚ್ಚುವರಿ ಎಂದರು.
ಬಜೆಟ್‌ನಲ್ಲಿ ಮಡಿಕೇರಿ ಚಿಕ್ಕ ಅಳುವಾರು ಸ್ನಾತಕೋತ್ತರ ಕೇಂದ್ರ ಸ್ಥಾಪನೆಗೆ ರು. 5ಕೋಟಿ, ಮಂಗಳೂರು ವಿಶ್ವವಿದ್ಯಾಲಯ ಆವರಣದಲ್ಲಿ ಅಧ್ಯಯನ ಕೇಂದ್ರ ಕಟ್ಟಡ ನಿರ್ಮಾಣಕ್ಕೆ ರು. 50 ಲಕ್ಷ, ವಿಶ್ವವಿದ್ಯಾಲಯ ಕಾಲೇಜು ಮಂಗಳೂರು ಇಲ್ಲಿನ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ರು. 50 ಲಕ್ಷ ಸಸ್ಯಶಾಸ್ತ್ರ ವಿಭಾಗದ ಕಟ್ಟಡ ನಿರ್ಮಾಣ ಕಾಮಗಾರಿಗೆ ರು. 1 ಕೋಟಿ, ವಿಜ್ಞಾನ ಸಂಕಿರ್ಣ ಕಟ್ಟಡದ ನವೀಕರಣ ಕಾಮಗಾರಿಗೆ ರು. 1.50 ಕೋಟಿ ಹಾಗೂ ನಾರಾಯಣಗುರು ಪೀಠ ಸ್ಥಾಪನೆಗೆ ರು. 1 ಕೋಟಿ ಸೇರಿದಂತೆ ಒಟ್ಟು ರು. 17.10 ಕೋಟಿ ಮೀಸಲಿರಿಸಲಾಗಿದೆ ಎಂದರು. ಕೊಡಗು, ದ.ಕ., ಉಡುಪಿ ಜಿಲ್ಲೆಯಲ್ಲಿ ವಿಶ್ವವಿದ್ಯಾಲಯ ವ್ಯಾಪ್ತಿಯ 33 ಸರ್ಕಾರಿ ಕಾಲೇಜು ಹಾಗೂ 140 ಖಾಸಗಿ ಕಾಲೇಜುಗಳಿಗೆ 2014-15ನೇ ಸಾಲಿಗೆ ಮುಂದುವರಿಕೆಗಾಗಿ ಸಂಯೋಜನೆ ಮಂಜೂರಾತಿ ನೀಡಲಾಗಿದೆ.
ಕೋಟ ಇಸಿಆರ್ ವಿದ್ಯಾಸಂಸ್ಥೆ, ಮಂಗಳೂರು ಯೇನೆಪೊಯ ಕಾಲೇಜು, ಕೆನರಾ ಸಂಧ್ಯಾ ಕಾಲೇಜು, ಉಳ್ಳಾಲ ಸಂತ ಸೆಬಾಸ್ಟಿನ್ ಕಾಲೇಜು, ಕಾರ್ಕಳ ಶಿರ್ಡಿ ಸಾಯಿ ಪದವಿ ಕಾಲೇಜು, ಪುತ್ತೂರು ಮಾರ್ ಐವಾನಿಯಸ್ ಕಾಲೇಜು, ಮೂರ್ನಾಡು ಪ್ರಥಮ ದರ್ಜೆ ಕಾಲೇಜು, ಮಡಿಕೇರಿ ಗ್ರೀನ್ ಮೌಂಟೇನ್ ಕಾಲೇಜುಗಳನ್ನು 2014-15ನೇ ಸಾಲಿಗೆ ಕೆಲವೊಂದು ಕೋರ್ಸಿನೊಂದಿಗೆ ಹೊಸ ಸಂಯೋಜನೆ ಮಾಡಲು ಷಕತ್ತುಬದ್ಧ ಅನುಮತಿ ನೀಡಲಾಗಿದೆ ಎಂದರು.
ಕನ್ನಡ ವಿಶ್ವವಿದ್ಯಾಲಯದ ದೃಶ್ಯ ಕಲಾ ಮೂಲ ಕೋರ್ಸನ್ನು ಪಿಯುಸಿ ಪ್ರಥಮ, ದ್ವಿತೀಯ ವರ್ಷದಲ್ಲಿ  100 ಅಂಕಗಳ ಎರಡು ಭಾಷಾ ವಿಷಯ ಅಭ್ಯಾಸ ಮಾಡಿದ ವಿದ್ಯಾರ್ಥಿ ಬಿಎಸ್ಸಿ ಅನಿಮೇಶನ್ ಕೋರ್ಸಿಗೆ ಅರ್ಹರೆಂದು ಪರಿಗಣಿಸಬಹುದು ಎಂದು ಅನುಮೋದಿಸಲಾಯಿತು.
ವಿದ್ಯಾರ್ಥಿ ಶುಲ್ಕವನ್ನು ಕಳೆದ 4 ವರ್ಷಗಳಲ್ಲಿ ಹೆಚ್ಚಿಸಲಾಗಿಲ್ಲ. ಸರ್ಕಾರ ಪ್ರತಿ ವರ್ಷ ಶೇ. 10 ಶುಲ್ಕವನ್ನು ಏರಿಸುವಂತೆ ತಿಳಿಸಿದ್ದರೂ, ಹೆಚ್ಚಿಸಿಲ್ಲ ಎಂದರು.
2014-15ನೇ ಸಾಲಿನಲ್ಲಿ ಹಿಂದಿ ಎಂ.ಎ ಕೋರ್ಸನ್ನು ಪ್ರಾರಂಭಿಸಲಾಗುವುದು. ಎಂ.ಇಡ್. ಪ್ರಾರಂಭಿಸಲು ಉನ್ನತ ಶಿಕ್ಷಣ ಮಂಡಳಿಗೆ ಪ್ರಸ್ತಾವನೆ ಕಳುಹಿಸಿದ್ದು, ಉತ್ತರ ಸಿಕ್ಕಿಲ್ಲ ಎಂದರು.
 ರಿಜಿಸ್ಟ್ರಾರ್ ಡಾ.ಪಿ.ಎಸ್. ಯಡಿಪಡಿತ್ತಾಯ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.