ದಕ್ಷಿಣ ಕನ್ನಡ

ಪಾಣೆಮಂಗಳೂರು ಉಕ್ಕಿನ ಸೇತುವೆಗೆ ಶತಕ ಸಂಭ್ರಮ

Published On :

ಬಂಟ್ವಾಳ: ಬ್ರಿಟಿಷ್ ಆಡಳಿತ 1914ರಲ್ಲಿ ನಿರ್ಮಿಸಿದ್ದು ಎನ್ನುವ ಹಿರಿಮೆಯುಳ್ಳ ಪಾಣೆಮಂಗಳೂರಿನ ನೇತ್ರಾವತಿಯ ಹಳೆಯ ಉಕ್ಕಿನ ಸೇತುವೆಗೆ ಈಗ ಬರೋಬ್ಬರಿ 100 ವರ್ಷ.
 ಆದರೆ ಈ ಸೇತುವೆ ಬಗ್ಗೆ ಹೆಚ್ಚು ನಿಗಾ ವಹಿಸದ ಹಿನ್ನೆಲೆಯಲ್ಲಿ ದಿನ ಕಳೆದಂತೆ ಕುಸಿಯುವ ಭೀತಿ ಎದುರಾಗಿದೆ. ಒಂದೆಡೆ ಕಳ್ಳರ ಹಾವಳಿ, ಇನ್ನೊಂದೆಡೆ ಅಧಿಕಾರಿ ವರ್ಗದ ಗಂಭೀರ ನಿರ್ಲಕ್ಷ್ಯ ಈ ಸೇತುವೆಯ ಸುಸ್ಥಿತಿಗೆ ಶಾಪವೆನ್ನಿಸಿದೆ.
ಸೇತುವೆ ಇತಿಹಾಸ..: 1914ರಲ್ಲಿ ಈ ಸೇತುವೆ ನಿರ್ಮಾಣಗೊಂಡಿದ್ದು, ಆಗ ದ.ಕ. ಜಿಲ್ಲೆ ಮದ್ರಾಸ್ ಪ್ರಾಂತ್ಯಕ್ಕೆ ಸೇರಿತ್ತು. ಇಂಗ್ಲೆಂಡ್ ಮೂಲದ ಹಾರ್ಸ್‌ಹೇಯ್ ಕಂಪೆನಿ ಈ ಸುಭದ್ರ ಉಕ್ಕಿನ ಸೇತುವೆ ನಿರ್ಮಿಸಿತ್ತು. ಬ್ರಿಟಿಷರ ಕಾಲದ ಈ ಹಳೆ ಸೇತುವೆ ತನ್ನ ಸಾಮರ್ಥ್ಯ ಕಳೆದುಕೊಂಡು ಆಪಾಯಕಾರಿಯಾಗಿ ಪರಿಣಮಿಸಿದ ಹಿನ್ನೆಲೆಯಲ್ಲಿ ನೇತ್ರಾವತಿಗೆ ನೂತನ ಸೇತುವೆ ನಿರ್ಮಾಣಗೊಂಡು ಆಗಲೇ ಹತ್ತು ವರ್ಷವೂ ಕಳೆದಿದೆ.
ಕಳ್ಳರ ಹಾವಳಿ..: ಸೇತುವೆಯ ಉಕ್ಕಿನ ಪಟ್ಟಿಗಳಲ್ಲಿ 'ಇದು ಉಕ್ಕಿನ ಸೇತುವೆ' ಎಂಬುದನ್ನು ದೃಢೀಕರಿಸುವ ಆಂಗ್ಲ ಬರಹಗಳಿರುವುದೂ ಸೇತುವೆಗೆ ಸಂಚಕಾರ ತಂದಿದೆ. ಸೇತುವೆಯ ಇಕ್ಕೆಲಗಳಲ್ಲಿ ಹಲವು ಉಕ್ಕಿನ ಸರಳುಗಳು, ಪಟ್ಟಿಗಳು ಕಳ್ಳರ ಪಾಲಾಗುತ್ತಿರುವ ಸಂಶಯ ಎದುರಾಗಿದೆ. ಕಳೆದ ಕೆಲವು ವರ್ಷಗಳಿಂದಲೂ ಈ ಕಳವು ವಿಚಾರದ ಬಗ್ಗೆ ಚರ್ಚೆ ನಡೆಯುತ್ತಿದ್ದರೂ ಆಡಳಿತ ವ್ಯವಸ್ಥೆ ಮಾತ್ರ ಮೌನವಾಗಿ ಕುಳಿತಿದೆ.
ಘನವಾಹನಗಳ ಕಿರಿಕಿರಿ..: ಚಿಂತಾಜನಕ ಸ್ಥಿತಿಯಲ್ಲಿರುವ ಈ ಸೇತುವೆಯ ಮೇಲೆ ಘನ ವಾಹನಗಳ ಸಂಚಾರಕ್ಕೆ ನಿಷೇಧ ಹೇರಿ ವರ್ಷಗಳೇ ಕಳೆದರೂ ಆದೇಶ ಇನ್ನೂ ಪಾಲನೆಯಾಗುತ್ತಿಲ್ಲ. ಬಿ.ಸಿ.ರೋಡ್ ಮುಖ್ಯ ವೃತ್ತ ಹಾಗೂ ಪಾಣೆಮಂಗಳೂರು ಪೇಟೆಯಿಂದ ಸೇತುವೆ ಸಂಪರ್ಕಿಸುವ ರಸ್ತೆಯಲ್ಲಿ ಘನ ವಾಹನಗಳ ಸಂಚಾರ ನಿಷೇಧದ ಸೂಚನಾ ಫಲಕ ಹಾಕಿದ್ದರೂ, ಎಗ್ಗಿಲ್ಲದೆ ಸಂಚರಿಸುವ ವಾಹನಗಳಿಗೆ ಕಡಿವಾಣ ಬಿದ್ದಿಲ್ಲ. ಮರಳು ಸಾಗಾಟ ಲಾರಿಗಳು, ಸರಕು ಲಾರಿಗಳು, ಗೂಡ್ಸ್ ಟೆಂಪೋ, ಬಸ್ಸುಗಳೂ ಸಂಚರಿಸುವುದರಿಂದ ಕುಸಿಯುವ ಭೀತಿಯಲ್ಲಿದೆ.
 ಘನ ವಾಹನ ಸಂಚಾರದಿಂದ ಸೇತುವೆಯ ಒಂದು ಪಾರ್ಶ್ವದ ಆಧಾರಸ್ತಂಭ ಬಿರುಕು ಬಿಟ್ಟಾಗ ಕುಸಿಯುವ ಹಂತದಲ್ಲಿದ್ದ ಅದನ್ನು ದುರಸ್ತಿಪಡಿಸಲಾಯಿತು. ಇದಲ್ಲದೆ ಸಣ್ಣಪುಟ್ಟ ಬಿರುಕುಗಳಿಗೆ ತೇಪೆ ಹಚ್ಚಲಾಗಿದೆ. ಈ ಸೇತುವೆಯನ್ನು ರಕ್ಷಿಸುವ ಸಲುವಾಗಿ ಕೆಲವು ಸಂಘಟನೆಗಳು ಸೇತುವೆಯಲ್ಲಿ ಘನವಾಹನ ಸಂಚಾರ ನಿಷೇಧಿಸುವಂತೆ ಜಿಲ್ಲಾಧಿಕಾರಿಗೆ ಮನವಿಯನ್ನೂ ಸಲ್ಲಿಸಿದ್ದವು. ಆದರೆ ಆ ಬಗೆಗಿನ ಯಾವ ಪ್ರಕ್ರಿಯೆಗಳೂ ಈಗ ಇಲಾಖಾ ಮಟ್ಟದಲ್ಲಿ ನಡೆಯುತ್ತಿಲ್ಲ.
ಯಾರು ಹೊಣೆ..: ನಾದುರಸ್ತಿಯಲ್ಲಿರುವ ಪಾಣೆಮಂಗಳೂರು ಹಳೆ ಸೇತುವೆ ಸದ್ಯಕ್ಕೆ ಬಂಟ್ವಾಳ ಪುರಸಭೆಯ ಸೊತ್ತು. ರಾ.ಹೆ. ಇಲಾಖೆಯು ಪುರಸಭೆಗೆ ಈ ಸೇತುವೆಯನ್ನು ಹಸ್ತಾಂತರಿಸಿ ವರ್ಷಗಳೇ ಕಳೆದಿವೆ. ಈ ಹಿನ್ನೆಲೆಯಲ್ಲಿ ಸೇತುವೆಯ ದುರಸ್ತಿ ಮತ್ತು ನಿರ್ವಹಣೆಗಾಗಿ ಅನುದಾನ ಕೋರಿ ಪುರಸಭೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಅದಕ್ಕೆ ಸರ್ಕಾರವೂ ಸ್ಪಂದಿಸಿಲ್ಲ. ಪುರಸಭೆಯೂ ಸೇತುವೆ ನಿರ್ವಹಣೆಗೆ ಕವಡೆ ಕಾಸು ಬಿಚ್ಚುತ್ತಿಲ್ಲ. ದುರಸ್ತಿಗೆ ಕನಿಷ್ಠವೆಂದರೂ ರು. ಒಂದು ಕೋಟಿ ಬೇಕಾಗಿರುವುದರಿಂದ ಈ ಸೇತುವೆಯ ದುರಸ್ತಿ ನಮ್ಮಿಂದ ಸಾಧ್ಯವಿಲ್ಲ ಎನ್ನುತ್ತಾರೆ ಪುರಸಭೆ ಅಧಿಕಾರಿಗಳು. ಹಾಗೆಂದು ಕಡ್ಡಾಯವಾಗಿ ಘನ ವಾಹನಕ್ಕೆ ಸೇತುವೆಯ ಮೇಲೆ ನಿಷೇಧವನ್ನೂ ಹೇರಿಲ್ಲ.
ನೂರನೇ ವರ್ಷದ ನೆನಪಿಗಾದರೂ ಈ ಸೇತುವೆಯ ಜೀರ್ಣೋದ್ಧಾರಕ್ಕೆ ಸರ್ಕಾರ ಮನಸ್ಸು ಮಾಡಿದರೆ ಒಳ್ಳೆಯದು ಎನ್ನುವುದು ಬಂಟ್ವಾಳದ ಜನತೆಯ ಒತ್ತಾಸೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.