ಶಾಂತಿ ಸಭೆಯಲ್ಲಿ ಭುಗಿಲೆದ್ದ ಅಶಾಂತಿ!
ಬಂಟ್ವಾಳ: ಹಿಂದೂ ಸಂಗಮ ಹಾಗೂ ವಿವಿಧೆಡೆ ನಡೆಯುವ ಜಾತ್ರೆ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಹಿನ್ನಲೆಯಲ್ಲಿ ತಾಲೂಕಿನಾದ್ಯಂತ ಶಾಂತಿ, ಸೌಹಾರ್ದ್ದತೆ ಕಾಪಾಡುವ ಮುನ್ನಚ್ಚರಿಕೆ ಕ್ರಮವಾಗಿ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ನಡೆದ ಶಾಂತಿ ಸಭೆ ಅಶಾಂತಿಗೆ ತಿರುಗಿದ ವಿದ್ಯಮಾನ ಗುರುವಾರ ನಡೆದಿದೆ.
ಬಂಟ್ವಾಳ ವಿಭಾಗದ ಡಿವೈಎಸ್ಪಿ ರಶ್ಮಿ ಪರಡಿ ಉಪಸ್ಥಿತಿಯಲ್ಲಿ ಸಭೆ ಆಯೋಜಿಸಲಾಗಿತ್ತು. ಸಭೆಯಲ್ಲಿ ಭಾಗವಹಿಸಿದ್ದ ಕೆಲ ಪ್ರಮುಖರು ಬಿ.ಸಿ.ರೋಡಿನಲ್ಲಿ ಆಟೋ ರಿಕ್ಷಾಗಳು, ಟೂರಿಸ್ಟ್ ಕಾರುಗಳು ಅಡ್ಡಾದಿಡ್ಡಿ ಪಾರ್ಕಿಂಗ್ ಮಾಡುವುದರಿಂದ ಜನಸಾಮಾನ್ಯರಿಗೆ ನಡೆದಾಡಲು ಅಡಚಣೆಯಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಡಿವೈಎಸ್ಪಿ, ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವಂತೆ ಸಬ್ಇನ್ಸ್ಪೆಕ್ಟರ್ ಸಂಜಯ್ ಕುಮಾರ್ಗೆ ಸೂಚಿಸಿದರು.
ಬಿ.ಸಿ.ರೋಡು ಬಂಟ್ವಾಳ ಪರಿಸರದಲ್ಲಿ ರಾರಾಜಿಸುತ್ತಿರುವ ಪ್ರಚೋದನಕಾರಿ ಅಂಶಗಳನ್ನೊಳಗೊಂಡ ಅನಧಿಕೃತ ಬ್ಯಾನರ್ಗಳ ಬಗ್ಗೆ ಚರ್ಚೆ ನಡೆಯುತ್ತಿದ್ದಂತೆಯೇ ಪುರಸಭಾ ಸದಸ್ಯ ಮೊನೀಶ್ ಅಲಿ ಹಾಗೂ ಝಕಾರಿಯಾ ಎಂಬವರು ಮಾ.2ರಂದು ಬಿ.ಸಿ.ರೋಡಿನಲ್ಲಿ ನಡೆಯುವ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಆರ್ಎಸ್ಎಸ್ ಮುಖಂಡ ಡಾ. ಪ್ರಭಾಕರ ಭಟ್ಗೆ ಪ್ರಚೋದನಾಕಾರಿ ಭಾಷಣಕ್ಕೆ ಅವಕಾಶ ಕಲ್ಪಿಸಬಾರದೆಂದು ಆಗ್ರಹಿಸಿದರು.
ಈ ಸಂದರ್ಭ ಬಿಜೆಪಿ ಮುಖಂಡರಾದ ಪುರುಷ ಎನ್. ಸಾಲ್ಯಾನ್, ಚರಣ್ ಜುಮಾದಿಗುಡ್ಡೆ, ಭರತ್, ರಮೇಶ್ ಶೆಣೈ ಬಿ.ಸಿ.ರೋಡು, ಮಹಾಬಲ ಶೆಟ್ಟಿ, ಪರಮೇಶ್ವರ ಐತಾಳ್ ಮೊದಲಾದವರು ಶಾಂತಿಸಭೆಯಲ್ಲಿ ಡಾ.ಭಟ್ ಹೆಸರನ್ನು ಅನಗತ್ಯವಾಗಿ ಉಲ್ಲೇಖಿಸಿರುವುದನ್ನು ಆಕ್ಷೇಪಿಸಿದರು. ಆಗ ಡಿವೈಎಸ್ಪಿ ಸಮ್ಮುಖದಲ್ಲೇ ಉಭಯ ಕೋಮಿನ ನಾಯಕರ ಮಧ್ಯೆ ಪರಸ್ಪರ ವಾಗ್ವಾದ ನಡೆಯಿತು. ಈ ವಿದ್ಯಾಮಾನದಿಂದ ಗರಂ ಆದ ಡಿವೈಎಸ್ಪಿ ರಶ್ಮೀ ಪರಡಿ ಮಧ್ಯ ಪ್ರವೇಶಿಸಿ ನಿಮ್ಮನ್ನು ಇಲ್ಲಿ ವಾಗ್ವಾದಕ್ಕೆ ಕರೆದಿಲ್ಲ. ನೀವು ಹೇಳಿದ ಹಾಗೆ ನಾವು ಕೇಳುವುದೂ ಇಲ್ಲ. ಯಾವುದೇ ಅಹಿತಕರ ಘಟನೆ ಉಂಟಾದಲ್ಲಿ ಪೊಲೀಸ್ ಇಲಾಖೆ ಸೂಕ್ತವಾದ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಇದನ್ನು ನಿಮ್ಮಲ್ಲಿ ಹೇಳಿ ಮಾಡುವುದಿಲ್ಲ ಎಂದು ಉಭಯ ಕೋಮಿನ ನಾಯಕರನ್ನು ತರಾಟೆಗೆ ತೆಗೆದುಕೊಂಡರು.
ತಾವು ಸಮಾಜದಲ್ಲಿ ಗಣ್ಯರಿದ್ದೀರ. ಯಾವುದೇ ವಿಚಾರಗಳನ್ನು ಸರಿಯಾಗಿ ಅರಿತುಕೊಂಡು ಮಾತನಾಡಿ ಎಂದು ಎಚ್ಚರಿಕೆ ನೀಡಿ ಸಭೆಯಿಂದ ಹೊರ ನಡೆದರು. ಬಳಿಕ ಎಸ್ಐ ಸಂಜಯ್ ಕುಮಾರ್ ಸಭೆಯನ್ನು ಮುನ್ನಡೆಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

