ಪೂರ್ಣ ಪ್ರಮಾಣದ ಅಡಕೆ ನಿಷೇಧ ಅಸಾಧ್ಯ
ಮಂಗಳೂರು: ಸಮಸ್ಯೆಗಳ ಸುಳಿಯ ನಡುವೆಯೇ ಬದುಕು ಕಟ್ಟಿಕೊಂಡವರು ಅಡಕೆ ಬೆಳೆಗಾರರು. ಆದರೆ ಅವರ ಬದುಕೀಗ ಮೂರಾಬಟ್ಟೆಯಾಗುವ ಹಂತಕ್ಕೆ ಬಂದಿದ್ದು, ನಿಂತ ನೆಲವೇ ಕುಸಿದಂತೆ ಬೆಳೆಗಾರರನ್ನು ಅಧೀರರನ್ನಾಗಿಸಿದೆ. ಇದಕ್ಕೆ ಕಾರಣ ಇತ್ತೀಚಿನ ಕೇಂದ್ರ ಸರ್ಕಾರದ ನಿರ್ಧಾರ. ಈ ಹಿನ್ನಲೆಯಲ್ಲಿ ಅಖಿಲ ಭಾರತ ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಂಚಿ ಶ್ರೀನಿವಾಸ್ ಆಚಾರ್ ಅವರೊಂದಿಗೆ 'ಕನ್ನಡಪ್ರಭ' ನಡೆಸಿದ ವಿಶೇಷ ಸಂದರ್ಶನದ ಪೂರ್ಣಪಾಠ ಇಲ್ಲಿದೆ.
-ನಿಷೇಧದ ಪ್ರಸ್ತಾಪ ಸರ್ಕಾರದ ಮುಂದಿದೆ, ಸಂಘದಿಂದ ಹೋರಾಟಕ್ಕೆ ಯಾವಾಗ ರಣವೀಳ್ಯ ನೀಡುತ್ತೀರಿ?
- ಈ ಬಗ್ಗೆ ಹೋರಾಟ ಅಗತ್ಯವಿಲ್ಲ ಅನ್ನಿಸುತ್ತಿದೆ. ಏಕೆಂದರೆ ಅಡಕೆಯ ಪೂರ್ಣ ಪ್ರಮಾಣದ ನಿಷೇಧ ಆಗುವುದಿಲ್ಲ ಎಂಬ ನಂಬಿಕೆಯಿದೆ. ಪೊಟ್ಟಣದಲ್ಲಿ ಮಾರುವ ಗುಟ್ಕಾಕ್ಕೆ ಪೂರ್ಣ ನಿಷೇಧ ಬರಬಹುದೇ ಹೊರತು ಅಡಕೆ ನಿಷೇಧ ಆಗದು. ಪರಿಣಾಮಕಾರಿ ನಿಷೇಧವೂ ಅಸಾಧ್ಯ. ಏಕೆಂದರೆ ಪಾನ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿ ತರಲಾಗಿಲ್ಲ. ವಿದೇಶದಿಂದ ಬಂಗಾರವನ್ನು ತರಬಾರದು ಎಂದು ಕಾನೂನು ಇದ್ದರೂ ಕಳ್ಳ ಸಾಗಾಟ ನಡದೇ ಇದೆ. ಒಂದೊಮ್ಮೆ ಅಡಕೆಯನ್ನು ನಿಷೇಧಿಸಿದರೂ ನಿಷೇಧವಾದ ಒಂದೇ ತಿಂಗಳಲ್ಲಿ ತಂಬಾಕನ್ನೂ ಸರ್ಕಾರ ನಿಷೇಧಿಸಲೇ ಬೇಕಾಗುತ್ತದೆ. ಅಡಕೆಗಿಂತ ತಂಬಾಕು ಇನ್ನಷ್ಟು ಹಾನಿಕಾರರಕ.
ಟಿ ಅಸಾಧ್ಯ ಎಂದು ಹೇಳುತ್ತೀರಿ, ಆದಾಗ್ಯೂ ಯಾರದ್ದೋ ಲಾಬಿಗೆ ಮಣಿದು ಸರ್ಕಾರ ನಿಷೇಧಿಸಿದರೆ ಬೆಳೆಗಾರರ ಗತಿಯೇನು?
- ಬೆಳೆಗಾರರಿಗೆ ಸ್ವಲ್ಪ ಸಮಯ ಕಷ್ಟವಾಗುತ್ತೆ. ಒಂದು ವ್ಯವಸ್ಥೆಯನ್ನು ಸರ್ಕಾರ ನಾಶ ಮಾಡಬಾರದು. ಅಷ್ಟೊಂದು ಹಾನಿಯಿದೆ ಎಂದು ಕಂಡುಬಂದು ಒಂದೊಮ್ಮೆ ನಾಶ ಮಾಡಲು ಹೊರಟರೆ ಪರ್ಯಾಯ ವ್ಯವಸ್ಥೆಯನ್ನೂ ಕಲ್ಪಿಸಬೇಕು. ಅಡಕೆ ಬೆಳೆಗಾರರು ಕೊಕ್ಕೊ, ವೆನಿಲ್ಲಾ, ರಬ್ಬರ್, ತಾಳೆ, ಪಚೋಲಿ ಹೀಗೆ ಏನೆಲ್ಲಾ ಪ್ರಯತ್ನ ಮಾಡಿ ನೋಡಿದ್ದಾರೆ, ಯಾವುದೂ ರೈತರ ಕೈ ಹಿಡಿಯಲಿಲ್ಲ. ಸರ್ಕಾರವೇ ಅಡಕೆಗೆ ಬದಲು ಸೂಕ್ತ ಪರ್ಯಾಯ ಬೆಳೆ ಸೂಚಿಸಲಿ, ತರಬೇತಿ ನೀಡಲಿ. 2ರಿಂದ 3 ವರ್ಷದವರೆಗೆ ಪರಿಹಾರವನ್ನೂ ಸರ್ಕಾರವೇ ನೀಡಲಿ, ಬಳಿಕ ನಿಷೇಧಿಸಲಿ. ಮುಖ್ಯವಾಗಿ ಒಂದು ವ್ಯವಸ್ಥೆ ನಾಶ ಮಾಡಲು ಹೊರಟಾಗ ಸಾರ್ವಜನಿಕ ಚರ್ಚೆ ನಡೆಸಬೇಕು. ಏಕಾಏಕಿ ನಿರ್ಧಾರ ಸರಿಯಲ್ಲ. ಸರ್ಕಾರದ ಪ್ರಕಾರ ಏನೆಲ್ಲಾ ಹಾನಿಕಾರಕ ಅಂಶವಿದೆ ಎಂದು ತಿಳಿಸಲಿ, ನಾವು ಅಡಕೆಯಲ್ಲಿರುವ ಆರೋಗ್ಯಕರ ಅಂಶವನ್ನು ಮುಂದಿಡುತ್ತೇವೆ. ಬಳಿಕ ತೀರ್ಮಾನವಾಗಲಿ.
- ಆಹಾರ ಪಟ್ಟಿಯಲ್ಲಿ ಅಡಕೆ ಸೇರ್ಪಡೆಗೊಂಡ ಬಳಿಕ ಈ ದುರ್ದೆಸೆ ಬಂತಾ?
- ಅಡಕೆಯನ್ನು ಜಗಿಯುವುದರಿಂದ ಅದನ್ನು ಆಹಾರ ಪಟ್ಟಿಯಲ್ಲಿ ಎರಡು ವರ್ಷಗಳ ಹಿಂದೆ ಕೇಂದ್ರ ಸರ್ಕಾರ ಸೇರ್ಪಡೆಗೊಳಿಸಿತು. ಈಗ ವಿಷಕಾರಕ ಅಂಶವಿದೆ ಎಂದು ಹೇಳುತ್ತಿದ್ದಾರೆ. ಆದರೆ ಒಂದಂತೂ ಸತ್ಯ, ಕೇವಲ ಅಡಕೆಯೊಂದರಿಂದಲೇ ಖಂಡಿತಾ ಹಾನಿಯಿಲ್ಲ. ಅಡಕೆಯೊಂದಿಗೆ ತಂಬಾಕು ಸೇರ್ಪಡೆಯಾದಾಗ ಆರೋಗ್ಯಕ್ಕೆ ಹಾನಿಕಾರಕವಾಯ್ತು, ಬರೀ ಅಡಕೆಯಿಂದ ಹಾನಿಯಿಲ್ಲ, ತಾಂಬೂಲದ ಜೊತೆ ತಂಬಾಕು ಸೇರ್ಪಡೆಯಾಗಿ ಹಾನಿಕಾರಕ ಪಟ್ಟಿಗೆ ಸೇರ್ಪಡೆಯಾಯ್ತು. ಕೇವಲ ಅಡಕೆ ಪುಡಿಯಿಂದಷ್ಟೇ ಗುಟ್ಕಾ ಮಾಡಿದ್ದರೆ ಅದರಿಂದ ಅಪಾಯವಿರುತ್ತಿರಲಿಲ್ಲ, ಅದರಲ್ಲಿ ರಾಸಾಯನಿಕ ಸೇರ್ಪಡೆಯಾಗಿ ರೋಗಕಾರಕವಾಯ್ತು.
- ಅಡಕೆಯಲ್ಲಿರುವ ಆರೋಗ್ಯಕರ ಅಂಶಗಳನ್ನು ಸರ್ಕಾರಕ್ಕೆ ಮನದಟ್ಟು ಮಾಡಲು ಸಂಘ ವಿಫಲವಾಯ್ತಾ?
- ಸ್ವಲ್ಪ ಮಟ್ಟಿನ ವಿಫಲತೆಯಿದೆ. ಆದರೆ ಬೆಳೆಗಾರರ ಸಂಘ ಸುಮ್ಮನೆ ಕುಳಿತಿಲ್ಲ. ಎರಡು ವರ್ಷಗಳ ಹಿಂದೆ ಅಡಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ (ಎಆರ್ಡಿಎಫ್) ವತಿಯಿಂದ ಶಿರಸಿಯಲ್ಲಿ ಆಯುರ್ವೇದ ವೈದ್ಯರ, ಸಂಶೋಧಕರ ಸಭೆ ನಡೆಸಿದ್ದು, ಅದರ ವರದಿಯನ್ನು ನೀಡಿದ್ದೇವೆ. ವಿಟ್ಲದ ಬದನಾಜೆ ಶಂಕರ ಭಟ್ ಅವರು ಹಲವಾರು ಸಂಶೋಧನೆ ಕೈಗೊಂಡಿದ್ದಾರೆ. ಇತ್ತೀಚೆಗೆ ಅಡಕೆಯಿಂದ ಸಾಬೂನು, ಅಂಟು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ. ಆದರೆ ಸಂಶೋಧನೆಗಳು ಜನರನ್ನು ತಲುಪಬೇಕಿದೆ.
- ಬೆಳೆಗಾರರಲ್ಲಿ ಒಗ್ಗಟ್ಟಿನ ಕೊರತೆಯ ಲಾಭ, ಬಹು ರಾಷ್ಟ್ರೀಯ ಕಂಪನಿಗಳು ಲಾಬಿ ನಿಷೇಧದ ಹಿಂದೆ ಕೆಲಸ ಮಾಡಿವೆಯಾ?
- ಲಾಬಿ ಎಷ್ಟರ ಮಟ್ಟಿಗೆ ಪ್ರಭಾವ ಬೀರಿದೆಯೋ ಗೊತ್ತಿಲ್ಲ, ಲಾಬಿಯಂತೂ ನಡೆದೇ ಇದೆ. ಬೆಳೆಗಾರರಲ್ಲಿಯೂ ಒಗ್ಗಟ್ಟು ಇಲ್ಲವಾಗಿದೆ. ಕಾಲಿಗೆ ಹಾಕಿದ ಶೂ ಕಚ್ಚಿದಾಗ ಮಾತ್ರ ಅಳುವಂತಾಗಿದೆ ಬೆಳೆಗಾರರ ಸ್ಥಿತಿ. ದಕ್ಷಿಣ ಕನ್ನಡ, ಶಿವಮೊಗ್ಗದಲ್ಲಿ ಚಾಲಿ, ರಾಶಿ, ಉತ್ತರ ಕನ್ನಡದ ಕೆಲವೆಡೆ ಕೆಂಪಡಿಕೆ ಇದೆ. ಚಾಲಿಗೆ ಬೆಲೆ ಇಲ್ಲದಾದಾಗ ಕೆಂಪಡಿಕೆಗೆ ಬೆಲೆ ಇರುತ್ತೆ, ಕೆಂಪಡಿಕೆಗೆ ಬೆಲೆ ಇಲ್ಲದಾದಾಗ ಚಾಲಿಗೆ ಬೆಲೆ ಇರುವುದರಿಂದ ಬೆಳೆಗಾರರು ಬೆರೆಯುವುದು ಕಡಿಮೆ. ಇದರ ಲಾಭ ಎಂಎನ್ಸಿಗಳು ಪಡೆಯುತ್ತಿವೆ.
- ನಿಷೇಧಿಸಿದರೆ ಆರ್ಥಿಕ ದುಷ್ಪರಿಣಾಮ ಏನಾಗಬಹುದು?
- ದೇಶದಲ್ಲಿ ಸುಮಾರು 10 ಲಕ್ಷ ಕುಟುಂಬ ಅಡಕೆಯನ್ನೇ ಅವಲಂಬಿಸಿವೆ. ಸುಮಾರು 25 ಕೋಟಿ ಜನರು ಪ್ರತ್ಯಕ್ಷ, ಪರೋಕ್ಷವಾಗಿ ಅಡಕೆ ಅವಲಂಬಿಸಿದ್ದಾರೆ. 436 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಇದನ್ನು ಬೆಳೆಯುತ್ತಿದ್ದು, 50ರಿಂದ 75 ಸಾವಿರ ಕೋಟಿ ವ್ಯವಹಾರ ಸ್ಥಗಿತಗೊಳ್ಳುತ್ತದೆ. ಸರ್ಕಾರಕ್ಕೆ ಬರುವ ಸುಮಾರು 500 ಕೋಟಿ ವಿದೇಶಿ ವಿನಿಮಯ ಸ್ಥಗಿತಗೊಳ್ಳುತ್ತದೆ. ಮುಖ್ಯವಾಗಿ ಕರಾವಳಿ, ಮಲೆನಾಡಿನಲ್ಲಿ ಆರ್ಥಿಕ, ಶೈಕ್ಷಣಿಕ ಕುಸಿತ ಕಂಡುಬರುತ್ತದೆ.
- ಗುಬ್ಬಿ ಮೇಲೆ ಬ್ರಹ್ಮಾಸ್ತ್ರವೆಂಬಂತೆ ಅಡಕೆ ಮೇಲೆ ಕೆಂಗಣ್ಣು ಬೀರಿ ಸರ್ಕಾರ ದ್ವಿಮುಖ ನೀತಿ ಅನುಸರಿಸುತ್ತಿದೆಯಾ?
- ವೈನ್ ಮತ್ತು ತಂಬಾಕು ಕಟ್ಟುನಿಟ್ಟಿನ ನಿಷೇಧದ ಬಗ್ಗೆ ಸರ್ಕಾರ ಚಕಾರವೆತ್ತುತ್ತಿಲ್ಲ. ಅಡಕೆ ಬೆಳೆಗಾರರ ಮೇಲೆ ಗುಬ್ಬಿ ಮೇಲೆ ಬ್ರಹ್ಮಾಸ್ತ್ರವೆಂಬಂತೆ ನಿಷೇಧ ಹೇರಲು ಹೊರಟಿದೆ. ಸರ್ಕಾರ ದ್ವಿಮುಖ ನೀತಿಯನ್ನಷ್ಟೇ ಅನುಸರಿಸುತ್ತಿಲ್ಲ, ಜೊತೆಯಲ್ಲಿ ಒಡೆದು ಆಳುವ ನೀತಿಯನ್ನೂ ಅನುಸರಿಸುತ್ತಿದೆ.
ರಾಘವೇಂದ್ರ ಅಗ್ನಿಹೋತ್ರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

