ಮಸೀದಿ, ಖತೀಬರ ಮನೆ ಕಳವು ಯತ್ನ ವಿಫಲ
ಮೂಲ್ಕಿ: ಪುನರೂರು ಸಮೀಪದ ಕುಜಿಂಗಿರಿಯಲ್ಲಿನ ಪುನರೂರು ಮಹಮ್ಮದೀಯ ಜುಮ್ಮಾ ಮಸೀದಿಯ ಸಮೀಪವಿರುವ ಮಸೀದಿಯ ಖತೀಬ ಸಜ್ಜತ್ ಆಲಂ ಮನೆಯಲ್ಲಿ ಭಾನುವಾರ ರಾತ್ರಿ ಕಳವು ಯತ್ನ ನಡೆದಿದೆ. ರಾತ್ರಿ ಮನೆಯಲ್ಲಿ ಯಾರು ಇಲ್ಲದ ಸಂದರ್ಭ ಮನೆಯ ಎದುರಿನ ಬಾಗಿಲು ಮುರಿದು ಒಳ ನುಗ್ಗಿ ಕಳ್ಳತನಕ್ಕೆ ಯತ್ನಿಸಿದ್ದು ಯಾವುದೇ ಸೊತ್ತು ಕಳವಾಗಿಲ್ಲ. ಮಸೀದಿಯಲ್ಲಿ ಕೂಡ ಕಳ್ಳತನಕ್ಕೆ ಯತ್ನಿಸಿದ್ದು ಆದರೆ ಮಸೀದಿಯ ಒಳ ನುಗ್ಗಲು ಸಾಧ್ಯವಾಗಿಲ್ಲ. ಮಸೀದಿಯ ಖತೀಬರು ಮನೆಯಲ್ಲಿ ಇಲ್ಲದ ಸಂದರ್ಭ ನೋಡಿ ಕಳ್ಳತನಕ್ಕೆ ಯತ್ನಿಸಿದ್ದು ಬೆಳಗ್ಗೆ ಮಸೀದಿಗೆ ಬಾಂಗ್ ನೀಡಲು ಆಗಮಿಸಿದವರಿಗೆ ಕಳವಿನ ಸುಳಿವು ಸಿಕ್ಕಿದ್ದು ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಟಿ.ಎಚ್.ಮಯ್ಯದ್ದಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
ರಸ್ತೆ ದುರಂತಕ್ಕೆ ಪುತ್ತೂರು
ಟ್ರಾಫಿಕ್ ಪೇದೆ ಬಲಿ
ಪುತ್ತೂರು: ಪುತ್ತೂರು ಟ್ರಾಫಿಕ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಪೇದೆ ಕುಬೇರ (26) ಎಂಬವರು ಸೋಮವಾರ ದಾವಣಗೆರೆಯಲ್ಲಿ ನಡೆದ ರಸ್ತೆ ಅಫಘಾತದಲ್ಲಿ ಮೃತಪಟ್ಟರು. ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕೊಟ್ರಳ್ಳಿ ನಿವಾಸಿಯಾಗಿದ್ದ ಕುಬೇರ ಕಳೆದ ಒಂದು ವರ್ಷದಿಂದ ಪುತ್ತೂರು ಟ್ರಾಫಿಕ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಜ್ವರ ಬಂದ ಕಾರಣ ರಜೆ ಪಡೆದು ತನ್ನ ಊರಿಗೆ ಹೋಗಿದ್ದ ಕುಬೇರ ಸೋಮವಾರ ಬೈಕ್ನಲ್ಲಿ ಪ್ರಯಾಣಿಸುತ್ತಿದ್ದಾಗ ದಾವಣಗೆರೆಯ ಹೊನ್ನಾಳಿ ಎಂಬಲ್ಲಿ ರಸ್ತೆ ವಿಭಜಕಕ್ಕೆ ಬೈಕ್ ಡಿಕ್ಕಿ ಹೊಡೆದು ರಸ್ತೆಗೆಸೆಯಲ್ಪಟ್ಟು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಪುತ್ತೂರು ಟ್ರಾಫಿಕ್ ಠಾಣೆಯ ಠಾಣಾಧಿಕಾರಿ ರಕ್ಷಿತ್ ದಾವಣಗೆರೆಗೆ ಹೋಗಿ ಮೃತರಿಗೆ ಅಂತಿಮ ಗೌರವ ಸಲ್ಲಿಸಿದರು. ಶಾಸಕಿ ಶಕುಂತಳಾ ಶೆಟ್ಟಿ ಕುಬೇರ ನಿಧನಕ್ಕೆ ಸಂತಾಪ ವ್ಯಕ್ತ ಪಡಿಸಿದ್ದಾರೆ.
ಮಹಿಳೆಗೆ ಕಿರುಕುಳ, ಪತಿ ಮೇಲೆ ಹಲ್ಲೆ: ಯುವಕ ಸೆರೆ
ಸುಳ್ಯ: ಸುಳ್ಯದಿಂದ ಸಂಪಾಜೆಗೆ ಹೋಗುತ್ತಿದ್ದ ವ್ಯಾನ್ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರನ್ನು ಸಹ ಪ್ರಯಾಣಿಕನೋರ್ವ ಚುಡಾಯಿಸಿ, ಆಕೆಯ ಪತಿಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ ಘಟನೆ ಭಾನುವಾರ ಕಲ್ಲುಗುಂಡಿ ಎಂಬಲ್ಲಿ ನಡೆದಿದೆ. ಸುಳ್ಯ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ.
ಮರ್ಕಂಜದ ಗೂಡಂಬೆಯ ಹರಿಣಾಕ್ಷಿ ಮತ್ತು ಅವರ ಪತಿ ಗಿರೀಶ ಎಂಬವರು ಸಂಪಾಜೆಯ ಅವರ ಸಂಬಂಧಿಕರ ಮನೆಗೆ ಸುಳ್ಯದಿಂದ ವ್ಯಾನ್ನಲ್ಲಿ ಹೋಗುತ್ತಿದ್ದರು. ವ್ಯಾನ್ ಕಲ್ಲುಗುಂಡಿಯ ಕೂಲಿಶೆಡ್ ಬಳಿ ತಲುಪುವಾಗ ಅದೇ ವ್ಯಾನ್ ಎದುರಿನ ಸೀಟ್ನಲ್ಲಿ ಕುಳಿತಿದ್ದ ಕಲ್ಲುಗುಂಡಿಯ ಮನೋಹರ್ ಎಂಬಾತ ಹರಿಣಾಕ್ಷಿದಂಪತಿ ಕುಳಿತಿದ್ದ ಸೀಟಲ್ಲಿ ಬಂದು ಕುಳಿತು ಹರಿಣಾಕ್ಷಿ ಜತೆ ಅನುಚಿತವಾಗಿ ವರ್ತಿಸತೊಡಗಿದ ಎನ್ನಲಾಗಿದೆ. ಇದನ್ನು ಹರಿಣಾಕ್ಷಿ ಪ್ರತಿಭಟಿಸಿ, ಗಂಡನಿಗೆ ವಿಷಯ ತಿಳಿಸಿದರು. ಗಿರೀಶ ಅವರು ಮನೋಹರನ್ನು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಾಗ ಅವರ ನಡುವೆ ಮಾತಿನ ಚಕಮಕಿ ನಡೆಯಿತು. ಬಳಿಕ ಕಲ್ಲುಗುಂಡಿಯಲ್ಲಿ ಇಳಿಯುವ ವೇಳೆ ಮನೋಹರ ಗಿರೀಶರಿಗೆ ಹೊಡೆದು ಇಳಿದು ಹೋದ ಎನ್ನೆಲಾಗಿದೆ. ಹರಿಣಾಕ್ಷಿ ಮತ್ತು ಗಿರೀಶ ಸಂಪಾಜೆ ಗೇಟ್ ಬಳಿ ಇಳಿದು ಅಲ್ಲಿ ಪೊಲೀಸ್ ಠಾಣೆಗೆ ಹೋಗಿ ವ್ಯಾನ್ನಲ್ಲಿ ನಡೆದ ವಿಷಯ ತಿಳಿಸಿದರು. ಅದು ಸುಳ್ಯ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆಯಾದುದರಿಂದ ಸಂಪಾಜೆ ಪೊಲೀಸರು ಅವರನ್ನು ಸುಳ್ಯ ಪೊಲೀಸ್ ಠಾಣೆಗೆ ಕಳುಹಿಸಿಕೊಟ್ಟರು. ರಾತ್ರಿ ಪೊಲೀಸ್ ಠಾಣೆಗೆ ಬಂದ ಹರಿಣಾಕ್ಷಿ, ವ್ಯಾನಲ್ಲಿ ತನ್ನ ಮೇಲೆ ಕೈ ಹಾಕಿದ್ದಲ್ಲದೆ, ತನ್ನ ಪತಿ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವುದಾಗಿ ಮನೋಹರನ ವಿರುದ್ಧ ದೂರು ನೀಡಿದರು.
ಬಂಧನ: ದೂರು ದಾಖಲಿಸಿಕೊಂಡ ಪೊಲೀಸರು, ರಾತ್ರಿಯೇ ಕಲ್ಲುಗುಂಡಿಗೆ ಹೋಗಿ ಮನೋಹನನ್ನು ಬಂಧಿಸಿದರು. ಬಳಿಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದಾಗ ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಯಿತು.
ಇಂದು ವಿದ್ಯುತ್ ನಿಲುಗಡೆ
ಪುತ್ತೂರು: ಕೆಪಿಟಿಸಿಎಲ್ ವತಿಯಿಂ ನೆಟ್ಲ ಮುಡ್ನೂರು- ಪುತ್ತೂರು ಮಾರ್ಗದಲ್ಲಿ ಬಹುಮಾರ್ಗ ಮತ್ತು ದ್ವಿಮಾರ್ಗ ಕಾಮಗಾರಿ ನಡೆಯುತ್ತಿರುವ ಕಾರಣ ಜ.7ರಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯ ತನಕ ವಿದ್ಯುತ್ ನಿಲುಗಡೆ ಮಾಡಲಾಗುವುದು ಎಂದು ಮೆಸ್ಕಾಂ ಪುತ್ತೂರು ವಿಭಾಗದ ಕಾರ್ಯ ನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಾಮಗಾರಿಯ ಹಿನ್ನೆಲೆಯಲ್ಲಿ ಪುತ್ತೂರು, ಕುಂಬ್ರ, ನೆಲ್ಯಾಡಿ, ಕಡಬ, ಸವಣೂರು, ಸುಳ್ಯ ಮತ್ತು ಬೆಳ್ಳಾರೆ ಉಪಕೇಂದ್ರದಿಂದ ಸರಬರಾಜು ಮಾಡಲಾಗುತ್ತಿರುವ ಎಲ್ಲಾ ಕೇಂದ್ರಗಳಲ್ಲಿ ವಿದ್ಯುತ್ ಸ್ಥಗಿತಗೊಳಿಸಲಾಗುವುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

