ದೇರಳಕಟ್ಟೆ ಘಟನೆ ಕೋಮು ರಾಜಕೀಯಕ್ಕೆ ಬಳಕೆ: ನರೇಂದ್ರ ನಾಯಕ್
ಮಂಗಳೂರು: ದೇರಳಕಟ್ಟೆ ಯುವತಿ ಅಪಹರಣ, ಅತ್ಯಾಚಾರ ಘಟನೆಯನ್ನು ಕೋಮು ಭಾವನೆ ಕೆರಳಿಸಲು, ರಾಜಕೀಯಗೊಳಿಸಲಾಗುತ್ತಿದೆ ಎಂದು ವಿಚಾರವಾದಿ ಪ್ರೊ.ನರೇಂದ್ರ ನಾಯಕ್ ಆರೋಪಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಘಟನೆ ದಿನದಂದು ತನಗೆ ದೆಹಲಿಯಿಂದ ವ್ಯಕ್ತಿಯೊಬ್ಬರು ಕರೆ ಮಾಡಿ ಯುವತಿಗೆ ಸಹಾಯ ಮಾಡುವಂತೆ ವಿನಂತಿಸಿದ್ದರು. ತಾನಾಗ ಮಂಗಳೂರಿನಲ್ಲಿ ಇರಲಿಲ್ಲ, ಪತ್ನಿಗೆ ಕರೆಮಾಡಿ ವಿಚಾರ ತಿಳಿಸಿದ್ದೆ. ಆಕೆ ಸಂತ್ರಸ್ತ ವಿದ್ಯಾರ್ಥಿನಿ ಜತೆ ನಗರ ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿ ದೂರು ನೀಡಿದ್ದಳು. ಆರೋಪಿಗಳು ಹಣ ತರುವಂತೆ ಹೇಳಿದಾಗ, ಯುವತಿ ಜತೆ ತಾನು ಹಾಗೂ ಮಫ್ತಿಯಲ್ಲಿದ್ದ ಪೊಲೀಸರು ಕಾರ್ಯಾಚರಣೆ ನಡೆಸಿದೆವು. ಅಷ್ಟರಲ್ಲಿ ಆರೋಪಿಗಳು ಪೊಲೀಸರ ವಿರುದ್ಧವೇ ಏರಿಬಂದಿದ್ದರು. ಆರೋಪಿಗಳ ರೌಡಿ ಹಿನ್ನೆಲೆಯನ್ನು ಗಮನಿಸಿ ಆರೋಪಿಗಳನ್ನು ಪತ್ತೆಮಾಡಿ ಬಂಧಿಸಲಾಯಿತು. ಇವಿಷ್ಟು ನಡೆದ ನೈಜ ಸಂಗತಿ. ದೇರಳಕಟ್ಟೆ ಘಟನೆ ನಡೆದಾಗ ಬುದ್ಧಿಜೀವಿಗಳು ಎಲ್ಲಿದ್ದರು ಎಂದು ಹೇಳುವವರಿಗೆ ಈ ಸತ್ಯ ಸಂಗತಿಯನ್ನು ಅನಿವಾರ್ಯವಾಗಿ ಹೇಳಬೇಕಾಯಿತು ಎಂದರು.
ಈ ಘಟನೆಯ ನಿಜ ಸಂಗತಿ ಗೊತ್ತಿಲ್ಲದವರು ಅದಕ್ಕೆ ರಾಜಕೀಯ ಬಣ್ಣ ನೀಡಿ, ಕೋಮುಭಾವನೆ ಕೆರಳಿಸುವ ಕೆಲಸ ಮಾಡುತ್ತಿದ್ದಾರೆ. ಚುನಾವಣೆ ದೃಷ್ಟಿಯಿಂದ ಹಿಂದೂ-ಮುಸ್ಲಿಂ ಮಧ್ಯೆ ಭಿನ್ನಾಭಿಪ್ರಾಯ ಮೂಡಿಸುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದರು.
ಘಟನೆ ಬಳಿಕ ತಕ್ಷಣಕ್ಕೆ ಅತ್ಯಾಚಾರ ಪ್ರಕರಣ ದಾಖಲಿಸಲು ಯುವತಿ ವೈದ್ಯಕೀಯ ಪರೀಕ್ಷೆಗೆ ಸಮ್ಮತಿ ನೀಡಿಲ್ಲ. ಪ್ರಾಥಮಿಕ ತನಿಖೆ ನಡೆಸಿದ ನಂತರ ಪೊಲೀಸರು ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಯುವಕನ ವೈದ್ಯಕೀಯ ಪರೀಕ್ಷೆ ಶುಕ್ರವಾರ ನಡೆದಿದೆ. ಘಟನೆ ವೇಳೆ ಆತನ ಕಣ್ಣಿಗೆ ಏಟಾಗಿದ್ದು, ಕೈ ಮುರಿತಕ್ಕೊಳಗಾಗಿದೆ. ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸುತ್ತಿದ್ದು, ಯಾವುದಕ್ಕೂ ಬಗ್ಗಿಲ್ಲ ಎಂದು ಹೇಳಿದರು.
ಆರೋಪಿಗಳ ವಿರುದ್ಧ ಗೂಂಡಾ ಕಾಯ್ದೆ ದಾಖಲಿಸುವ ಬೇಡಿಕೆ ಕುರಿತಂತೆ ಮಾತನಾಡಿದ ಪ್ರೊ.ನರೇಂದ್ರ ನಾಯಕ್, ಈಗಾಗಲೇ ದಾಖಲಾಗಿರುವ ಪ್ರಕರಣಗಳ ತನಿಖೆ ಸರಿಯಾಗಿ ನಡೆಸಿದರೆ, ಆರೋಪಿಗಳಿಗೆ ಜೀವಾವಧಿ ಶಿಕ್ಷೆಗೆ ಸಾಕು. ಹೀಗಿರುವಾಗ ಗೂಂಡಾ ಕಾಯ್ದೆ ದಾಖಲಿಸಿ ಏನು ಪ್ರಯೋಜನ ಎಂದು ಪ್ರಶ್ನಿಸಿದರು. ನ್ಯಾಯವಾದಿ ಆಶಾ ನಾಯಕ್ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

