ಗ್ಯಾಸ್ ದರ ಏರಿಕೆ ವಿರುದ್ಧ ಪ್ರತಿಭಟನೆ
ಮಂಗಳೂರು: ಮಹಿಳೆಯರ ಮೇಲಿನ ದೌರ್ಜನ್ಯಗಳಲ್ಲಿ ಗ್ಯಾಸ್ ಬೆಲೆಯೇರಿಕೆಯನ್ನೂ ಸೇರಿಸಬಹುದು. ಇದರಿಂದ ಜೀವನ ನಡೆಸುವುದೇ ದುಸ್ತರವಾಗಿದೆ. ಇದಕ್ಕೆಲ್ಲಾ ಕೇಂದ್ರ ಸರ್ಕಾರವೇ ನೇರ ಹೊಣೆ ಎಂದು ಗ್ಯಾಸ್ ಮತ್ತು ಪಡಿತರ ಬಳಕೆದಾರರ ವೇದಿಕೆಯ ಸಂಘಟನಾ ಕಾರ್ಯದರ್ಶಿ ಆಯಿಷಾ ಮಮ್ತಾಜ್ ಆಕ್ರೋಶ ವ್ಯಕ್ತಪಡಿಸಿದರು.
ಗ್ಯಾಸ್ ಬೆಲೆಯೇರಿಕೆಯನ್ನು ಖಂಡಿಸಿ ಗ್ಯಾಸ್ ಮತ್ತು ಪಡಿತರ ಬಳಕೆದಾರರ ವೇದಿಕೆಯು ಶನಿವಾರ ಜಿಲ್ಲಾಧಿಕಾರಿ ಕಚೇರಿಯೆದುರು ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದರು. ಒಲೆಯಲ್ಲಿ ಕಟ್ಟಿಗೆ ಉಪಯೋಗಿಸಿ ಚಹಾ ಮಾಡುವ ಮೂಲಕ ಪ್ರತಿಭಟನೆಗೆ ಚಾಲನೆ ನೀಡಲಾಗಿತ್ತು.
ಗ್ಯಾಸ್ ಬೆಲೆ ಏರಿಕೆ ಒಂದೆಡೆಯಾದರೆ, ಆಧಾರ್ ಕಾರ್ಡನ್ನು ಕಡ್ಡಾಯ ಮಾಡುವ ಮೂಲಕ ಮತ್ತೊಂದು ಸಮಸ್ಯೆಯನ್ನು ಜನರ ಮೇಲೆ ಹೇರಿದೆ. ಹೆಚ್ಚಿನ ಜನರಿಗೆ ಇನ್ನೂ ಆಧಾರ್ ಬಂದಿಲ್ಲ. ಆದ್ದರಿಂದ ಯಾವುದಕ್ಕೂ ಆಧಾರ್ ಕಾರ್ಡ್ ಕಡ್ಡಾಯ ಮಾಡಬಾರದು ಎಂದು ಒತ್ತಾಯಿಸಿದರು.
ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಸಿದ್ದೀಕ್ ಮಾತನಾಡಿ, ಎಲ್ಪಿಜಿ ದರವನ್ನು ಕೆ.ಜಿ.ಗೆ ರು. 11.60 ಪೈಸೆ ಏರಿಕೆಯಾಗಿದ್ದು, ಆಟೋ ಓಡಿಸುವುದೇ ಕಷ್ಟವಾಗಿದೆ. ದೇಶದಲ್ಲಿಯೇ ಪೆಟ್ರೋಲ್ ಸಿಗುತ್ತಿದ್ದರೂ, ಅಧಿಕ ಬೆಲೆ ತೆತ್ತು ವಿದೇಶಗಳಿಂದ ತರಲಾಗುತ್ತಿದೆ. ಬಂಡವಾಳಶಾಹಿಗಳಿಗೆ ಸರ್ಕಾರ ಮಣೆ ಹಾಕಿದ ಪರಿಣಾಮವನ್ನು ಇಂದು ಜನಸಾಮಾನ್ಯರು ಎದುರಿಸುವಂತಾಗಿದೆ ಎಂದರು. ಮಹಿಳೆಯರ ಬಗ್ಗೆ ಕಾಳಜಿಯಿರುವುದಾಗಿ ಬೊಬ್ಬೆ ಹಾಕುವ ನಾಯಕರು ಗ್ಯಾಸ್ ದರ ಏರಿಕೆಯಾದಾಗ ಬಾಯಿ ಮುಚ್ಚಿ ಕುಳಿತಿದ್ದಾರೆ. ಬೆಲೆಯೇರಿಕೆ ವಿರುದ್ಧ ಹೋರಾಟ ಮಾಡಬೇಕಾದ ಸಚಿವರ, ಶಾಸಕರ ಪತ್ನಿಯರು ಮನೆಯೊಳಗಿನಿಂದ ಹೊರಬರುತ್ತಿಲ್ಲ. ಕೆಲವು ಮಹಿಳೆಯರಿಗೆ ಬ್ಯಾಂಕ್ ಖಾತೆಯೇ ಇಲ್ಲ. ಇವರು ಸಬ್ಸಿಡಿ ಪಡೆಯುವುದಾದರೂ ಹೇಗೆ ದೊರೆಯುತ್ತದೆ. ತಕ್ಷಣ ಗ್ಯಾಸ್ ದರ ಕಡಿಮೆ ಮಾಡಬೇಕು ಎಂದು ಆಗ್ರಹಿಸಿದರು.
ಅಣುಕು ಪ್ರದರ್ಶನಗಳ ಮೂಲಕ ಗ್ಯಾಸ್ ದರ ಏರಿಕೆ ಖಂಡಿಸಲಾಯಿತು. ನಂತರ ತಯಾರಿಸಿದ ಚಹಾವನ್ನು ಭಾಗವಹಿಸಿದವರಿಗೆ ನೀಡಲಾಯಿತು. ವೇದಿಕೆ ಅಧ್ಯಕ್ಷ ಧರ್ಮೇಂದ್ರ.ಕೆ., ಉಪಾಧ್ಯಕ್ಷೆ ರೇಖಾ ಬಾಳಿಗ, ಸದಸ್ಯರಾದ ಜ್ಯೂಲಿಯೆಟ್ ಬುತೆಲ್ಲೊ, ಸರಳ ಪ್ರಕಾಶ್, ನೌಶಾದ್ ರಶೀದ್ ಹಾಗೂ ಆಮ್ ಆದ್ಮಿ ಕಾರ್ಯಕರ್ತರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

