15 ಸಾಧಕರಿಗೆ ಪರ್ಯಾಯ ದರ್ಬಾರು ಗೌರವ
ಉಡುಪಿ: 18ರಂದು ಮುಂಜಾನೆ ನಡೆಯುವ ಕಾಣಿಯೂರು ಮಠದ ಪರ್ಯಾಯೋತ್ಸವದ ದರ್ಬಾರಿನಲ್ಲಿ, ಪ್ರತಿಬಾರಿಯಂತೆ ಈ ಬಾರಿಯೂ ಸಮಾಜದ ಗಣ್ಯ ಸಾಧಕ ವ್ಯಕ್ತಿಗಳನ್ನು ಗೌರವಿಸಲಾಗುತ್ತಿದೆ.
ಈ ಬಾರಿ ಒಟ್ಟು 15 ಸಾಧಕರನ್ನು ವೈವಿಧ್ಯಮಯ ಕ್ಷೇತ್ರಗಳಿಂದ ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ.
ಎ.ಶ್ರೀಪತಿ ಆಚಾರ್ಯ
ವೃತ್ತಿಯಲ್ಲಿ ನ್ಯಾಯವಾದಿಯಾಗಿ, ಹಲವಾರು ಸಾಮಾಜಿಕ ಸಂಸ್ಥೆಗಳ ಸಕ್ರಿಯ ಪದಾಧಿಕಾರಿಯಾಗಿ, ಹಲವಾರು ದೇವಸ್ಥಾನಗಳ ಆಡಳಿತ ಮಂಡಳಿಯ ಕಾನೂನು ಸಲಹೆಗಾರರಾಗಿ, ಶ್ರೀ ಕೃಷ್ಣಮಠ ಹಾಗೂ ಉಡುಪಿ ದೇವಸ್ಥಾನಗಳಲ್ಲಿ ಸರ್ಕಾರ ಅನಗತ್ಯ ಹಸ್ತಕ್ಷೇಪ ಮಾಡುವ ಸಂದರ್ಭದಲ್ಲಿ ದೇವಸ್ಥಾನಗಳಿಗೆ ಮತ್ತು ಕೃಷ್ಣಮಠಕ್ಕೆ ನ್ಯಾಯದ ರಕ್ಷಣೆ ಒದಗಿಸಿ, ಸಮಾಜಕ್ಕೆ ಮಾಡಿರುವ ಸೇವೆಗಾಗಿ ಈಗಾಗಲೇ ಹಲವಾರು ಪುರಸ್ಕಾರಗಳನ್ನು ಪಡೆದಿರುತ್ತಾರೆ.
ಡಾ. ಕೃಷ್ಣಪ್ರಸಾದ್ ಕೆ, ಉಡುಪಿ
ಉಡುಪಿಯ ಪ್ರಸಿದ್ಧ ಪ್ರಸಾದ್ ನೇತ್ರಾಲಯವನ್ನು ನಡೆಸುವ ನೇತ್ರತಜ್ಞರಾದ ಕೃಷ್ಣಪ್ರಸಾದ್ ಅವರ ಸೇವೆ ಗಮನಾರ್ಹ. ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ತಮ್ಮ ನೇತ್ರಾಲಯದಲ್ಲಿ, ವೈದ್ಯಕೀಯ ಚಿಕಿತ್ಸೆ, ವಿವಿಧ ಜಿಲ್ಲೆಗಳಲ್ಲಿ ಉಚಿತ ನೇತ್ರ ಚಿಕಿತ್ಸಾ ಶಿಬಿರ, ವಿವಿಧ ವೈದ್ಯಕೀಯ ಸಂಸ್ಥೆಗಳ ಸದಸ್ಯತ್ವ, ನೇತ್ರ ಚಿಕಿತ್ಸೆಗೆ ಸಂಬಂಧಿತ ಸಂಶೋಧನಾತ್ಮಕ ಬರೆಹಗಳು ಇತ್ಯಾದಿಗಳ ಮೂಲಕ ಸಮಾಜದ ಆರೋಗ್ಯಪೂರ್ಣ ಬೆಳವಣಿಗೆಗೆ ಚಿಂತನೆ ಸದಾ ಮಾಡುತ್ತಿರುವವರು.
ವಿಶ್ವೇಶ್ವರ ಭಟ್, ಬೆಂಗಳೂರು
ಕನ್ನಡಪ್ರಭ ದಿನಪತ್ರಿಕೆ ಹಾಗೂ ಸುವರ್ಣ ಸುದ್ದಿವಾಹಿನಿಯ ಪ್ರಧಾನ ಸಂಪಾದಕರಾಗಿರುವ ವಿಶ್ವೇಶ್ವರ ಭಟ್ ಪತ್ರಿಕಾ ಸಾಹಿತ್ಯದಲ್ಲಿ ಬಹುದೊಡ್ಡ ಸಾಧನೆ ಮಾಡಿ ಖ್ಯಾತರಾಗಿರುವವರು. ವಿವಿಧ ಪತ್ರಿಕೆಗಳಲ್ಲಿ ಸಂಪಾದಕತ್ವದ ಅನುಭವ ಪಡೆದು, ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ಪರಿಣತಿಯನ್ನು ಪಡೆದವರು. ಜಗತ್ತಿನ ಹಲವಾರು ದೇಶಗಳಲ್ಲಿ ಆಗಾಗ್ಗೆ ಸಂಚರಿಸಿ ಅಮೂಲ್ಯ ಸುದ್ದಿಗಳನ್ನು, ಮಾಹಿತಿಗಳನ್ನು ಸಂಗ್ರಹಿಸಿ, ಪತ್ರಿಕೆಗಳಲ್ಲಿ ನಿರಂತರ ವಿವಿಧ ರೀತಿಯ ಲೇಖನಗಳನ್ನು ಬರೆಯುತ್ತಾ, ಹಲವಾರು ಪ್ರಶಸ್ತಿ ಸನ್ಮಾನಗಳನ್ನು ಅರ್ಹತೆಯಿಂದಲೇ ಪಡೆದವರು.
ರವಿ ಶಾಮ್, ಕೊಯಮುತ್ತೂರು
ಬಟ್ಟೆ ಉದ್ಯಮಕ್ಕೆ ಸಂಬಂಧಿಸಿ ವಿದೇಶದಲ್ಲಿ ವಿಶೇಷ ಅಧ್ಯಯನ ಮಾಡಿ, ಕೊಯಮುತ್ತೂರಿನಲ್ಲಿ ಪ್ರಕೃತ ಪ್ರಸಿದ್ಧ ಉದ್ಯಮಿಯಾಗಿದ್ದಾರೆ. ಸಮಾಜ ಸೇವೆಯ ಹಲವಾರು ಸಂಸ್ಥೆಗಳ ನಿರ್ದೇಶಕರಾಗಿದ್ದು ಸಾರ್ವಜನಿಕ ಆಂದೋಲನಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು, ವಿದ್ಯಾಸಂಸ್ಥೆಗಳ ಸಂಚಾಲಕರಾಗಿದ್ದಾರೆ. ಆಕಾಡೆಮಿ ಆಫ್ ಆರ್ಕಿಯೋಲೊಜಿಯ ಅಧ್ಯಕ್ಷರೂ ಆಗಿರುವ ಇವರು ಉದಾರ ದಾನಿಯಾಗಿ ಹಲವಾರು ದೇವಸ್ಥಾನಗಳ ಜೀರ್ಣೋದ್ಧಾರ ಮಾಡಿದ್ದಾರೆ.
ಡಾ. ಪಿ. ದಯಾನಂದ ಪೈ, ಬೆಂಗಳೂರು
ಬೆಂಗಳೂರಿನ ಸೆಂಚುರಿ ಗ್ರೂಪ್ಸ್ನ ಆಡಳಿತ ನಿರ್ದೇಶಕರಾಗಿರುವ ಇವರ ಸಮಾಜ ಸೇವೆ ಬಹುಮುಖಿಯಾದುದು. ಕರ್ನಾಟಕದ ಮುಖ್ಯ ಕಟ್ಟಡ ನಿರ್ಮಾಣಕಾರರಲ್ಲಿ ಒಬ್ಬರಾಗಿರುವ ಇವರು, ಮಂಗಳೂರು ವಿ.ವಿ. ಗೌರವ ಡಾಕ್ಟರೇಟ್, ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪುರಸ್ಕಾರ ಮೊದಲಾದ ಗೌರವ ಪಡೆದಿದ್ದಾರೆ.
ಡಾ. ವ್ಯಾಸನಕೆರೆ ಪ್ರಭಂಜನಾಚಾರ್ಯ: ಸಂಸ್ಕೃತ ಭಾಷಾ ವಿದ್ವಾಂಸರಾಗಿರುವ ಇವರು ಮಾಧ್ವ ತತ್ವಜ್ಞಾನಕ್ಕೆ ಜಾಗತಿಕ ಮಟ್ಟದಲ್ಲಿ ಅಮೂಲ್ಯ ಸೇವೆ ಮಾಡಿದವರು. ತಾಳೆಗರಿಗಳಲ್ಲಿ ಅಜ್ಞಾತವಾಗಿದ್ದ ಸಾವಿರಾರು ಸ್ತೋತ್ರ ಮತ್ತು ಗ್ರಂಥಗಳನ್ನು ಸಂಪಾದಿಸಿ ಸಂಶೋಧಿಸಿ ಪ್ರಕಟಿಸಿದವರು. ಇದುವರೆಗೆ 170ಕ್ಕೂ ಹೆಚ್ಚು ಗ್ರಂಥಗಳನ್ನು ರಚನೆ- ಭಾಷಾಂತರ ಮಾಡಿದ್ದಾರೆ. ವ್ಯಾಕರಣ, ಮೀಮಾಂಸ, ತರ್ಕ, ವೇದ, ವೇದಾಂತಗಳಲ್ಲಿ ಅಪಾರ ವಿದ್ವತ್ತು ಹೊಂದಿರುವ ಇವರು ಮಧ್ವಾಚಾರ್ಯರ ಸರ್ವಮೂಲ ಗ್ರಂಥಗಳ ಸಂಪಾದನೆಗೆ ಡಿ.ಲಿಟ್. ಪದವಿ ಪಡೆದಿದ್ದಾರೆ. ಬೆಂಗಳೂರಿನ ಸರ್ಕಾರಿ ಕಾಲೇಜಿನ ಪ್ರಾಚಾರ್ಯರಾಗಿ ನಿವೃತ್ತರಾಗಿದ್ದಾರೆ.
ರಾಧಾಕೃಷ್ಣ ಉಪಾಧ್ಯಾಯ ಮೂಡುಬೆಳ್ಳೆ
ರಾಷ್ಟ್ರಪ್ರಶಸ್ತಿ ಪಡೆದ ಕರ್ನಾಟಕದ ಮೊದಲ ಚಿತ್ರಕಲಾ ಶಿಕ್ಷಕರಾಗಿ ಚಿತ್ರಕಲೆಯಲ್ಲಿ ಅಧ್ಯಾಪನ ಮತ್ತು ಸೃಜನಶೀಲ ಕಲಾಕೃತಿಗಳನ್ನು ರಚಿಸಿರುವುದರ ಮೂಲಕ ಹಲವು ಕಾರ್ಯಕ್ರಮಗಳನ್ನು ಸಂಯೋಜಿಸುತ್ತಿರುವವರು. ರಂಗೋಲಿ ರಚನೆ, ಧಾರ್ಮಿಕ ಮಂಡಲ ರಚನೆಗಳಲ್ಲಿ ಪರಿಣತರು. ತನ್ನ ಸಂಪಾದನೆಯಲ್ಲಿ ಕಲಾಕ್ಷೇತ್ರಕ್ಕೆ, ಧಾರ್ಮಿಕ ಕ್ಷೇತ್ರಕ್ಕೆ ದಾನ ಮಾಡುತ್ತಿರುವ, ದೇವಾಲಯ ಚಿತ್ರಗಳ ಪುನರುತ್ಥಾನ ಮಾಡುತ್ತಿರುವ ಆದರ್ಶ ಶಿಕ್ಷಕರು.
ಡಾ.ಎಚ್.ಎಸ್. ಬಲ್ಲಾಳ್
ನಲ್ವತ್ತು ವರ್ಷಗಳಿಗೂ ಮಿಕ್ಕಿ ಮಣಿಪಾಲದ ಉನ್ನತ ವಿದ್ಯಾ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿರುವ ಇವರು ಈಗ ಮಣಿಪಾಲ ವಿ.ವಿ. ಸಹಕುಲಪತಿ ಆಗಿದ್ದಾರೆ. ವೈದ್ಯಶಾಸ್ತ್ರದ ಉನ್ನತ ವಿದ್ಯಾಭ್ಯಾಸವನ್ನು ಅಮೆರಿಕದಲ್ಲಿ ಮಾಡಿ, ವೈದ್ಯರಾಗಿ, ಪರೀಕ್ಷಕರಾಗಿ, ವಿವಿಧ ವೈದ್ಯಕೀಯ ಸಂಸ್ಥೆಗಳ ಸದಸ್ಯರಾಗಿದ್ದಾರೆ. ಸಮರ್ಥ ಆಡಳಿತಗಾರರಾಗಿ, ಕ್ಷಿಪ್ರಗತಿಯಲ್ಲಿ
ಪ್ರಸಿದ್ಧರಾದವರು. ಕಲೆ, ಕ್ರೀಡೆಗಳಲ್ಲಿ ಆಸಕ್ತಿ ಇರುವ ಬಡ ವಿದ್ಯಾರ್ಥಿಗಳಿಗೆ, ರೋಗಿಗಳಿಗೆ ಧನ ಸಹಾಯ ಮಾಡುವವರು.
ಪ್ರೊ. ಕಿನ್ನಿಕಂಬ್ಳ ಪದ್ಮನಾಭ ರಾವ್
ಜೀವನದಲ್ಲಿ ಬಹುಮುಖ ಆಸಕ್ತಿ ಹೊಂದಿರುವ ಪ್ರೊ. ಕೆ.ಪಿ. ರಾವ್ ಅವರ ಸಾಧನೆ ಅತ್ಯಂತ ವಿಶಿಷ್ಟವಾದುದು. ಮಣಿಪಾಲದ ಎಂ.ಐ.ಟಿ. ಹಾಗೂ ಪತ್ರಿಕೋದ್ಯಮ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿರುವುದು ಮಾತ್ರವಲ್ಲದೆ ದೇಶದ ಹಲವು ವಿವಿಗಳಲ್ಲಿ ಪ್ರಿಂಟಿಂಗ್, ತಂತ್ರಜ್ಞಾನ, ಕಂಪ್ಯೂಟರ್ ವಿಜ್ಞಾನ ಇತ್ಯಾದಿಗಳ ಬಗ್ಗೆ ಬೋಧನೆ ಮಾಡಿದವರು. ಕನ್ನಡ ಭಾಷೆಯನ್ನು ಕಂಪ್ಯೂಟರ್ನಲ್ಲಿ ಬಳಸುವ ಕುರಿತು ಅನ್ವೇಷಣೆ ಮಾಡಿದವರಲ್ಲಿ ಇವರು ಮೊದಲಿಗರು. ಹಲವಾರು ಪುರಸ್ಕಾರಗಳೊಂದಿಗೆ ಈ ವರ್ಷ ರಾಜ್ಯೋತ್ಸವ ಪ್ರಶಸ್ತಿ ಪಡೆದವರು.
ಕದ್ರಿ ಗೋಪಾಲನಾಥ್, ಮಂಗಳೂರು
ಪಾಶ್ಚಾತ್ಯ ಸಂಗೀತ ವಾದ್ಯ ಸ್ಯಾಕ್ಸೋಫೋನ್ ಅನ್ನು ಕರ್ನಾಟಕ ಸಂಗೀತಕ್ಕೆ ಅಳವಡಿಸಿ ಒಂದು ಹೊಸ ವಾದ್ಯ ಸಂಗೀತ ವಿಧವನ್ನು ಸೃಷ್ಟಿ ಮಾಡಿ, ಆಶ್ಚರ್ಯಕರವಾದ ಸಾಧನೆ ಮಾಡಿ, ಕಲೈಮಾಮಣಿ, ಪದ್ಮಶ್ರೀ, ಮೊದಲಾದ ಉನ್ನತ ಪ್ರಶಸ್ತಿಗಳನ್ನು ಪಡೆದವರು. ಕರ್ನಾಟಕ ಸಂಗೀತವನ್ನು ಪಾಶ್ಚಾತ್ಯರಿಗೆ ಪರಿಚಯಿಸಿ ವಿಶ್ವವಿಖ್ಯಾತ ಕಲಾವಿದರೊಂದಿಗೆ ಫ್ಯೂಶನ್ ಸಂಗೀತದಲ್ಲಿ ಭಾಗವಹಿಸಿ ಎಲ್ಲ ಸಂಗೀತ ವಿದ್ವಾಂಸರ, ಕಲಾರಸಿಕರ ಆದರಗಳಿಗೆ ಪಾತ್ರರಾದವರೂ, ಸಂಗೀತದ ಮೂಲಕ ಭಾವೈಕ್ಯವನ್ನು, ಸಮಾಜ ಸೇವೆಯನ್ನು ಮಾಡುತ್ತಿರುವವರು.
ಜಯ ಸಿ. ಸುವರ್ಣ ಮುಂಬಯಿ
ಮೂಲತಃ ಉಡುಪಿ ಸಮೀಪದ ಅಡ್ವೆಯವರಾಗಿರುವ ಜಯ ಸಿ. ಸುವರ್ಣ ಮುಂಬಯಿಯಲ್ಲಿ ಹೊಟೇಲ್ ಉದ್ಯಮಿಯಾಗಿ ಬೆಳಕಿಗೆ ಬಂದವರು. ವ್ಯವಹಾರ ಚತುರ, ಉತ್ತಮ ಸಂಘಟಕರಾಗಿ ಮುಂಬಯಿಯ ಬಿಲ್ಲವರ ಸಂಘ, ಬಿಲ್ಲವ ಭವನದ ನಿರ್ಮಾಣದಲ್ಲಿ ಮುಂದಾಳತ್ವವಹಿಸಿ, ಮುಂಬಯಿಯಲ್ಲಿ ಮತ್ತು ಊರಿನಲ್ಲಿ ಎಲ್ಲರ ಗೌರವಾದರಗಳಿಗೆ ಪಾತ್ರರಾದ ನಿಗರ್ವಿ, ನೇರ ನಡೆ ನುಡಿಯ ಆದರ್ಶ ಸಮಾಜ ಸೇವಕ.
ಡಾ.ಶ್ರೀಧರ ಹೊಳ್ಳ, ಉಡುಪಿ
ಮಣಿಪಾಲದಲ್ಲಿ ಉನ್ನತ ವೈದ್ಯಕೀಯ ಶಿಕ್ಷಣ ಪಡೆದು, ಉಡುಪಿಯಲ್ಲಿ ಮಿತ್ರ ಹಾಸ್ಪಿಟಲ್ ಸ್ಥಾಪಿಸಿ ವಿವಿಧ ವೈದ್ಯಕೀಯ ಸೇವೆಯನ್ನು ಮಾಡುತ್ತಿರುವವರು. ರೋಟರಿಯಂಥ ಸಮಾಜ ಸೇವಾ ಸಂಸ್ಥೆಗಳ ಮೂಲಕ ಸದಾ ಜನಪರ ಕಾರ್ಯಗಳಲ್ಲಿ ತೊಡಗಿಸಿಕೊಂಡವರು.
ನೇರಂಬಳ್ಳಿ ರಾಘವೇಂದ್ರ ರಾವ್, ಬೆಂಗಳೂರು
ಕುಂದಾಪುರ ಸಮೀಪದ ನೇರಂಬಳ್ಳಿಯಲ್ಲಿ ಜನಿಸಿ ಕಾಲೇಜು ಶಿಕ್ಷಣವನ್ನು ಕುಂದಾಪುರದಲ್ಲಿ ಪೂರೈಸಿ, ಹೈದರಾಬಾದಿನಲ್ಲಿ ಬಹುದೊಡ್ಡ ಹೊಟೇಲ್ ಉದ್ಯಮಿ ಎಂದು ಖ್ಯಾತರಾಗಿರುವವರು. ಸಂಸ್ಕೃತಿ, ಕಲೆ, ಕ್ರೀಡೆ, ಶಿಕ್ಷಣ ಇತ್ಯಾದಿಗಳಿಗೆ ಉದಾರ ಧನ ಸಹಾಯ ಮಾಡುತ್ತಿರುವವರು. ವಿವಿಧ ರೀತಿಯ ಜನಪರ ಕಾಳಜಿ ಸೇವೆಗಳನ್ನು ಪರಿಗಣಿಸಿ ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ. ಹಲವಾರು ಸಂಸ್ಥೆಗಳ ಅಧ್ಯಕ್ಷರು, ಮಾರ್ಗದರ್ಶಕರು ಹಾಗೂ ಪ್ರೋತ್ಸಾಹಕರು.
ಸಗ್ರಿ ರಾಘವೇಂದ್ರ ಉಪಾಧ್ಯಾಯ
ಶ್ರೀವಿಶ್ವೇಶ ತೀರ್ಥ ಶ್ರೀಪಾದರು ಹಾಗೂ ಶ್ರೀವಿದ್ಯಾಮಾನ್ಯ ತೀರ್ಥ ಶ್ರೀಪಾದರ ವಿಶೇಷ ಶಿಷ್ಯರಾಗಿ, ವೇದಾಂತ, ತರ್ಕ, ಸಾಹಿತ್ಯ, ಪುರಾಣ ಶಾಸ್ತ್ರಗಳಲ್ಲಿ ಆಳವಾದ ಜ್ಞಾನ ಹೊಂದಿ, ಉಡುಪಿಯ ಸಂಸ್ಕೃತ ಕಾಲೇಜಿನಲ್ಲಿ ವೇದಾಂತ ಪ್ರಾಧ್ಯಾಪಕರಾಗಿ, ವಿವಿಧ ಧಾರ್ಮಿಕ ಪತ್ರಿಕೆಗಳಲ್ಲಿ ಸಾವಿರಾರು ವಿದ್ವತ್ಪೂರ್ಣ ಲೇಖನಗಳನ್ನು ಬರೆದು, ಪರವಿದ್ಯಾಪ್ರಕಾಶನ ಎಂಬ ಸ್ವಂತ ಸಂಸ್ಥೆಯ ಮೂಲಕ ನಲ್ವತ್ತಕ್ಕಿಂತಲೂ ಅಧಿಕ ಪುಸ್ತಕಗಳನ್ನು ಪ್ರಕಟಿಸಿ, ಪ್ರವಚನಕಾರರಾಗಿ, ಮಾಧ್ವ ಪರಂಪರೆಗೆ ಅಮೂಲ್ಯ ಕೊಡುಗೆ ಕೊಟ್ಟಿರುತ್ತಾರೆ.
ಪಿ. ಎಸ್. ಬಾಗಿಲ್ತಾಯ
ದಿವಂಗತ ಡಾ.ಪಿ.ಜೆ. ಬಾಗಿಲ್ತಾಯರ ಸುಪುತ್ರರಾಗಿ ವಿವಿಧ ರೀತಿಯ ಸಮಾಜಸೇವೆಯಲ್ಲಿ ಅವರ ಪರಂಪರೆಯಲ್ಲೇ ಮುಂದುವರಿದು, ಜ್ಞಾನಾಶ್ರಮ ಎಂಬ ವೃದ್ಧಾಶ್ರಮದ ಕಾರ್ಯದರ್ಶಿಯಾಗಿ, ರೋಗಿಗಳ ಉಪಚಾರಕ್ಕಾಗಿ ನವಜೀವನ ನಿಲಯವನ್ನು ನಡೆಸುತ್ತ, ಹೊಟೇಲ್ ಹಾಗೂ ಇತರ ಉದ್ಯಮಗಳಿಂದ ಆರ್ಜಿಸಿದ ಧನಸಂಪತ್ತನ್ನು ಬಡ ವಿದ್ಯಾರ್ಥಿಗಳ, ಸಮಾಜದ ದೀನದಲಿತರ ಸಹಾಯಕ್ಕಾಗಿ ವಿನಿಯೋಗಿಸುತ್ತ, ಹಲವಾರು ಸಮಾಜಸೇವಾ ಸಂಸ್ಥೆಗಳಲ್ಲಿ ಪದಾಧಿಕಾರಿಗಳಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

