ದಕ್ಷಿಣ ಕನ್ನಡ

ಮೀನು ಮಾಂಸ ಮಾರುಕಟ್ಟೆ ಟೆಂಡರ್ ಅಕ್ರಮ: ಆರೋಪ

Published On :

ಪುತ್ತೂರು: ಪುರಸಭಾ ವ್ಯಾಪ್ತಿಯ ಹಸಿಮೀನು, ಒಣಮೀನು, ಕೋಳಿ, ಆಡು, ಕುರಿ ಮಾಂಸದ ಮಾರುಕಟ್ಟೆ ಟೆಂಡರು ಸ್ಥಿರೀಕರಣ ವಿಚಾರದಲ್ಲಿ ಸೋಮವಾರ ನಡೆದ ಪುರಸಭಾ ವಿಶೇಷ ಸಾಮಾನ್ಯ ಸಭೆಯಲ್ಲಿ ವ್ಯಾಪಕ ಚರ್ಚೆ ನಡೆದು ಸರ್ವ ಸದಸ್ಯರ ಅಭಿಪ್ರಾಯದಂತೆ ಪುರಸಭೆಯ ಕೌನ್ಸಿಲ್ ಅನುಮತಿ ಪಡೆಯದೆ ಟೆಂಡರ್ ಪ್ರಕ್ರಿಯೆ ನಡೆಸಿರುವುದನ್ನು ಕಾನೂನು ಬಾಹಿರ ಎಂದು ಪರಿಗಣಿಸಿ ಶರತ್ತುಬದ್ದ ಅನುಮೋದನೆಯೊಂದಿಗೆ ಮರು ಟೆಂಡರ್ ಕರೆಯಲು ತೀರ್ಮಾನಿಸಲಾಯಿತು.
ಪುರಸಭೆಯ ವಿಶೇಷ ಸಾಮಾನ್ಯ ಸಭೆಯು ಅಧ್ಯಕ್ಷರಾದ ವಾಣಿ ಶ್ರೀಧರ್ ಅವರ ಅಧ್ಯಕ್ಷತೆಯಲ್ಲಿ ಶಾಸಕಿ ಶಕುಂತಳಾ ಶೆಟ್ಟಿ ಉಪಸ್ಥಿತಿಯಲ್ಲಿ ಪುರಸಭಾ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ವಿಷಯ ಮಂಡಿಸಿದ ಮುಖ್ಯಾಧಿಕಾರಿ ಸುಧಾಕರ್ ಹಸಿಮೀನು, ಒಣಮೀನು, ಕೋಳಿ ಮತ್ತು ಆಡುಕುರಿ ಮಾಂಸದ ಮಾರುಕಟ್ಟೆಯ ದರ ವಸೂಲಿ ಬಗ್ಗೆ ಡಿ. 26ರಂದು ಟೆಂಡರ್ ಕರೆಯಲಾಗಿದ್ದು ಅತೀ ಹೆಚ್ಚು ಬಿಡ್ಡ್ ಸೂಚಿಸಿದ ಟೆಂಡರುದಾರರ ಹೆಸರಿಗೆ ಸ್ಥಿರೀಕರಣಗೊಳಿಸಲು ಸಭೆಯಲ್ಲಿ ಮಂಡಿಲಾಗಿದೆ ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ವಿಪಕ್ಷ ನಾಯಕ ಮಹಮ್ಮದ್ ಆಲಿ ಮತ್ತು ವಿಪಕ್ಷ ಸದಸ್ಯ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ ಪುರಸಭೆಯ ಕೌನ್ಸಿಲ್ ಅನುಮೋದನೆ ಪಡೆಯದೆ ಕಾನೂನು ಬಾಹಿರವಾಗಿ ಟೆಂಡರ್ ನವೀಕರಿಸಲಾಗಿದೆ. ಇದರಿಂದ ಪರಂಪರಾಗತ ಬಡ ಮೀನು ಮಾಂಸದ ವ್ಯಾಪಾರಿಗಳಿಗೆ ಹೊಡೆತವಾಗಿದೆ. ಅಲ್ಲದೆ ಮೀನು ಮಾಂಸ ಮಾರುಕಟ್ಟೆಯ ಕಟ್ಟಡವನ್ನು ಶೀಟು ಹಾಕಿ ನಿರ್ಮಿಸಿದಲ್ಲಿ ಸಾಕಾಗುತ್ತಿತ್ತು. ಕಟ್ಟಡ ನಿರ್ಮಾಣಕ್ಕೆ ಇಷ್ಟೊಂದು ಖರ್ಚು ಮಾಡುವ ಅಗತ್ಯವಿರಲಿಲ್ಲ. ಕಟ್ಟಡ ಖರ್ಚು ಹೆಚ್ಚಾದರೆ ಬಿಡ್ಡು ಮೊತ್ತವೂ ಹೆಚ್ಚಾಗುತ್ತಿದೆ. ಇದೀಗ ಕೌನ್ಸಿಲ್ ಗಮನಕ್ಕೆ ತಾರದೆ ಟೆಂಡರ್ ಪೂರ್ಣಗೊಳಿಸಲಾಗಿದೆ. ಪುರಸಭೆಯ ಅಭಿವೃದ್ಧಿಯ ದೃಷ್ಟಿಯಲ್ಲಿ ಸಣ್ಣ ವಿಚಾರವೂ ಕೌನ್ಸಿಲ್ ಗಮನಕ್ಕೆ ಬರಬೇಕಾಗಿದ್ದು ಜನಸಾಮಾನ್ಯರಿಗೆ ಮತ್ತು ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕಾಗಿದೆ ಈ ಹಿನ್ನೆಲೆಯಲ್ಲಿ ಈಗಾಗಲೇ ಮಾಡಲಾಗಿರುವ ಟೆಂಡರನ್ನು ರದ್ದುಗೊಳಿಸಿ ಮರು ಟೆಂಡರ್ ಕರೆಯಬೇಕು ಎಂದು ಆಗ್ರಹಿಸಿದರು. ಇದಕ್ಕೆ ಸದಸ್ಯರಾದ ಅನ್ವರ್ ಖಾಸಿಂ ಮತ್ತು ಶಕ್ತಿಸಿನ್ಹಾ ಧ್ವನಿಗೂಡಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಾಧಿಕಾರಿ ಸುಧಾಕರ್ ಹಿಂದಿನ ಮುಖ್ಯಾಧಿಕಾರಿಗಳಿದ್ದ ಸಂದರ್ಭದಲ್ಲಿಯೇ ಟೆಂಡರ್ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿತ್ತು. ತಾನು ಅದನ್ನು ಮುಂದುವರಿಸಿದ್ದು ಕಾನೂನಿನಂತೆ ಜಿಲ್ಲಾಧಿಕಾರಿಗಳಿಗೆ ಕಳುಹಿಸಿದ್ದೆ. ಬಾಕ್ಸ್ ಟೆಂಡರ್ ವ್ಯವಸ್ಥೆ ಸುಲಭವಾಗಿದ್ದು ಅದನ್ನು ಅಳವಡಿಸಲಾಗಿದೆ. ಮೀನು ವ್ಯಾಪಾರಿಗಳಿಗೆ ಇನ್ನಷ್ಟು ಸರಳವಾಗಿರುವ ಈ ಟೆಂಡರ್ ಕಷ್ಟಸಾಧ್ಯವಾಗಿರುವುದರಿಂದ ಬಾಕ್ಸ್ ಟೆಂಡರ್ ಮಾಡಲಾಗಿದೆ. ಪುರಸಭೆಯ ಆದಾಯ ಸೋರಿಕೆಯಾಗದಂತೆ ಆದಾಯವೃದ್ಧಿಗೆ ಟೆಂಡರ್ ಪ್ರಕ್ರಿಯೆ ನಡೆಸಲಾಗಿದ್ದು, ಬಿಡ್ಡುದಾರರಿಂದ ಮುಂಗಡ ಹಣ ಪಡೆಯುತ್ತಿರುವುದರಿಂದ ಯಾವುದೇ ಗೊಂದಲಗಳಾಗುವ ಸಾಧ್ಯತೆಯಿಲ್ಲ ಎಂದರು.
ಆಡಳಿತ ಮಂಡಳಿ ಸದಸ್ಯ ರಾಜೇಶ್ ಬನ್ನೂರು, ಪುರಸಭೆಗೆ ಕೇವಲ ಆದಾಯ ಮಾತ್ರ ಮುಖ್ಯವಲ್ಲ. ಜನರ ಹಿತದೃಷ್ಟಿಯೂ ಬಹಳ ಮುಖ್ಯ. ಈ ಹಿನ್ನೆಲೆಯಲ್ಲಿ ಮಾರ್ಚ್ 1ರಿಂದ ಅನ್ವಯವಾಗುವಂತೆ ಮರುಟೆಂಡರ್ ಕರೆಯುವಂತೆ ತಿಳಿಸಿದರು. ಈಗಾಗಲೇ ಮಾಡಲಾಗಿರುವ ಮಾರುಕಟ್ಟೆ ಟೆಂಡರನ್ನು ರದ್ದುಗೊಳಿಸಿ ಈ ಬಗ್ಗೆ ಇನ್ನೊಂದು ವಿಶೇಷ ಸಭೆ ಕರೆದು ತಿದ್ದುಪಡಿಯೊಂದಿಗೆ ಶರತ್ತುಬದ್ಧ ಅನುಮೋದನೆ ಪಡೆದು ಟೆಂಡರ್ ಕರೆಯೋಣ ಎಂದು ಉಪಾಧ್ಯಕ್ಷ ಜೀವಂದರ್ ಜೈನ್ ತಿಳಿಸಿದರು. ಆಡಳಿತ ಮತ್ತು ವಿಪಕ್ಷದಿಂದ ಒಂದೇ ತೀರ್ಮಾನ ಬಂದಿರುವ ಕಾರಣ ಮರು ಟೆಂಡರ್ ನಡೆಸಿ ಎಂದು ಸೂಚಿಸಿದ ಶಾಸಕಿ ಶಕುಂತಳಾ ಶೆಟ್ಟಿ, ಆದರೆ ಮಾರುಕಟ್ಟೆಗೆ ಮೂಲಸೌಕರ್ಯ ಒದಗಿಸಿದ ಬಳಿಕ ಟೆಂಡರ್ ಆರಂಭಿಸಿ ಎಂದರು.
ಸೋಮಪ್ಪ ಸಫಲ್ಯ, ಹರೀಶ್ ನಾಯ್ಕ, ರಾಮಣ್ಣ ಗೌಡ ಹಲಂಗ, ವಿಶ್ವನಾಥ ಗೌಡ, ಚಂದ್ರಸಿಂಗ್, ಜಯಲಕ್ಷ್ಮಿ ಸುರೇಶ್, ವನಿತ ಕೆ.ಟಿ, ಯಶೋದಾ ಹರೀಶ್, ಕಮಲ ಅನಂದ್, ವಿನಯ ಭಂಡಾರಿ, ದೀಕ್ಷಾ ಪೈ, ಸೀಮಾ ಗಂಗಾಧರ್, ಮುಖೇಶ್ ಕೆಮ್ಮಿಂಜೆ, ಬಾಲಚಂದ್ರ, ಪುರಸಭಾ ಎಂಜಿನಿಯರ್ ಶಿವಕುಮಾರ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.