ದಕ್ಷಿಣ ಕನ್ನಡ

ಅಂತರ್ಜಾಲದಲ್ಲೂ ಪರ್ಯಾಯೋತ್ಸವ ವಿಶ್ವಪ್ರಸಿದ್ಧ

Published On :

 ಸುಭಾಶ್ಚಂದ್ರ ಎಸ್. ವಾಗ್ಳೆ
ಉಡುಪಿ: ಉಡುಪಿ ಪರ್ಯಾಯೋತ್ಸವವನ್ನು ನಾಡ ಹಬ್ಬ ಎಂದು ಬಿಂಬಿಸಲಾಗುತ್ತಿದೆ. ಅದು ಆಡುಮಾತಿನ ವ್ಯಾಖ್ಯಾನವಾದರೂ ಇತ್ತೀಚಿನ ದಿನಗಳಲ್ಲಿ ಇಂಟರ್ನೆಟ್ ಮೂಲಕ ವಿಶ್ವವ್ಯಾಪಿ ಪ್ರಸಿದ್ಧವಾಗಿರುವುದಂತೂ ನಿಜ.
ಕಳೆದೊಂದು ವಾರದಿಂದಲೇ ಉಡುಪಿಗೆ ವಿದೇಶಿಯರ ಲಗ್ಗೆ ಆರಂಭವಾಗಿದೆ. ಮೈಸೂರು ದಸರೆಗೆ ಕಳೆದ ಅನೇಕ ವರ್ಷಗಳಿಂದ ವಿದೇಶಿಯರು ಬರುವುದು ಸಾಮಾನ್ಯವಾಗಿದೆ.
ಕಳೆದ ನಾಲ್ಕೈದು ವರ್ಷಗಳಿಂದ ಉಡುಪಿ ಕೂಡ ವಿದೇಶಿಯರಿಗೆ ಆಕರ್ಷಣೀಯವಾಗುತ್ತಿದ್ದರೆ ಅದಕ್ಕೆ ಇಂಟರ್ನೆಟ್ ಕಾರಣ.
ಹಲವರ ನಿರೀಕ್ಷೆ: ಈ ಬಾರಿಯ ಪರ್ಯಾಯ ಉತ್ಸವಕ್ಕೆ ಸುಮಾರು 200- 300 ಮಂದಿ ವಿದೇಶಿ ಪ್ರವಾಸಿಗರನ್ನು ನಿರೀಕ್ಷಿಸಲಾಗುತ್ತಿದೆ. ಈಗಾಗಲೇ 100ಕ್ಕೂ ಹೆಚ್ಚು ಮಂದಿ ವಿದೇಶಿಯರು ಉಡುಪಿಯ ಬೀದಿಬೀದಿಗಳಲ್ಲಿ ಕಾಣಸಿಗುತ್ತಿದ್ದಾರೆ. ಅವರಲ್ಲಿ ಬಹುತೇಕ ಮಂದಿ ಇಂಟರ್ನೆಟ್ನಲ್ಲಿ ಪರ್ಯಾಯೋತ್ಸವದ ವೈಭವವನ್ನು ಓದಿದ್ದು ಅದನ್ನು ಕಣ್ಣಾರೆ ನೋಡುವ ಕುತೂಹಲದಿಂದ ಬಂದವರು.
ಪುತ್ತಿಗೆ ಮಠದ ವೆಬ್ಸೈಟ್: ಕಳೆದ ಪುತ್ತಿಗೆ ಪರ್ಯಾಯದ ನಂತರ ಪರ್ಯಾಯ ಮಠಗಳು ತಮ್ಮದೇ ವೆಬ್ಸೈಟ್ಗಳನ್ನು ಹೊಂದಿದ್ದು, ಪ್ರತಿದಿನ ಅಪ್ಡೇಟ್ ಆಗುತ್ತಿರುತ್ತಿವೆ. ದೇಶ ವಿದೇಶಗಳಲ್ಲಿ ಭಕ್ತರನ್ನು ಹೊಂದಿರುವ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥರ ವೆಬ್ಸೈಟ್ ಅವರ ಪರ್ಯಾಯ ಕಾಲದಲ್ಲಿ ನಿತ್ಯ ಸಾವಿರಾರು ಮಂದಿ ಭೇಟಿ ನೀಡುವ ನೆಚ್ಚಿನ ಅಂತರ್ಜಾಲ ತಾಣವಾಗಿತ್ತು.
ಶಿರೂರು ಶ್ರೀ ಕೃಷ್ಣ ಪೂಜೆ ಹಿಟ್: ನಂತರ ಪರ್ಯಾಯ ನಡೆಸಿದ ಶಿರೂರು ಮಠದ ವೆಬ್ಸೈಟ್ ಅಂತು ದಿನಕ್ಕೆ ಲಕ್ಷಾಂತರ ಹಿಟ್ಗಳನ್ನು ದಾಖಲಿಸಿಕೊಳ್ಳುತ್ತಿತ್ತು.
 ಈ ವೆಬ್ಸೈಟ್ಗೆ ಉಡುಪಿಯ ಖ್ಯಾತ ಛಾಯಾಚಿತ್ರಗ್ರಾಹಕ ಗುರುದತ್ ಕಾಮತ್ ಪ್ರತಿದಿನ ತಪಸ್ಸಿನಂತೆ ಅಪ್ಲೋಡ್ ಮಾಡುತ್ತಿದ್ದ ಶ್ರೀಲಕ್ಷ್ಮೀವರ ತೀರ್ಥರ ಶ್ರೀಕೃಷ್ಣ ಪೂಜೆಯ ವೈವಿಧ್ಯಮಯ ಫೋಟೋಗಳನ್ನು ನೋಡುವುದಕ್ಕೆ ದೇಶ ವಿದೇಶಗಳ ಭಕ್ತರು ಮುಗಿಬೀಳುತ್ತಿದ್ದರು.
ಅನಂತರದ ಸೋದೆ ಮಠದ ವೆಬ್ಸೈಟ್ ಚೆನ್ನಾಗಿ ಕೆಲಸ ಮಾಡಿತ್ತು. ಇದೀಕ ಕಾಣಿಯೂರು ಮಠದ ವೆಬ್ಸೈಟ್ ಈಗ ತಾನೇ ಕಾರ್ಯಾರಂಭ ಮಾಡಿದೆ. ಜೊತೆಗೆ ಇತರ ಮಠಗಳು ಕೂಡ ತಂತಮ್ಮ ವೆಬ್ಸೈಟ್ ಆರಂಭಿಸಿವೆ.
ಒಟ್ಟಿನಲ್ಲಿ ಉಡುಪಿಯ ಪರ್ಯಾಯೋತ್ಸವ ಮತ್ತು ಕೃಷ್ಣ ಮಠ ಅಂತರ್ಜಾಲದಲ್ಲಿ ವಿಶ್ವಾದ್ಯಂತ ಗುರುತಿಸಲ್ಪಡುತ್ತಿದೆ. ಪರಿಣಾಮ ವಿದೇಶಿಗರು ಈ ಬಾರಿ ಉಡುಪಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದಾರೆ.
ಅಮೆರಿಕಾ, ಆಸ್ಟ್ರೀಯ, ಆಸ್ಟ್ರೇಲಿಯಾ, ಮಲೇಶಿಯಾ, ಇಂಗ್ಲೆಂಡ್ಗಳಿಂದ ಸಾಕಷ್ಟು ಸಂಖ್ಯೆಯ ಪ್ರವಾಸಿಗರು ಬಂದಿದ್ದಾರೆ. ಸ್ವಲ್ಪ ಸ್ವಚ್ಛಂದ ರೀತಿಯ ಬಟ್ಟೆಗಳನ್ನು ತೊಟ್ಟಿರುವ ಅವರೆಲ್ಲರ ಕೈಯಲ್ಲಿ ಕ್ಯಾಮರಾ ಕಡ್ಡಾಯ ಎಂಬಂತಿದೆ.
ಕೃಷ್ಣ ಮಠ, ಅಲ್ಲಿ ಕಚ್ಚೆ ಹಾಕಿಕೊಂಡು ಬರಿಮೈಯಲ್ಲಿ ಓಡಾಡುವ ವೈದಿಕರು, ಕಾವಿ ತೊಟ್ಟ ಸ್ವಾಮೀಜಿಗಳು, ರಥಬೀದಿಯಲ್ಲಿರುವ ರಥಗಳು, ಬೀಡಾಡಿ ದನಗಳು, ಭಿಕ್ಷುಕರು ಕೊನೆಗೆ ಉಡುಪಿಯ ಬೀದಿ ಬೀದಿಯಲ್ಲಿ ಬಿದ್ದಿರುವ ಕಸದ ರಾಶಿಗಳು ಕೂಡ ಅವರ ಕ್ಯಾಮರಾ ಕಣ್ಣಲ್ಲಿ ಸೆರೆಯಾಗುತ್ತಿವೆ.



ಪರ್ಯಾಯ ಡಾಕ್ಯುಮೆಂಟರಿ ಮಾಡಲು ಬಂದಿದ್ದೇನೆ...


ನಾವು 3 ತಿಂಗಳ ಕಾಲ ಭಾರತದ ಪ್ರವಾಸದಲ್ಲಿದ್ದೇವೆ. ಕಾಶಿಯಲ್ಲಿದ್ದಾಗ ಇಂಟರ್ನೆಟ್ನಲ್ಲಿ ಉಡುಪಿಯ ಪರ್ಯಾಯೋತ್ಸವದ ಬಗ್ಗೆ ತಿಳಿಯಿತು. ರಾತ್ರಿ ಇಡೀ ಹಬ್ಬ ನಡೆಯುತ್ತದೆ, ಲಕ್ಷಾಂತರ ಮಂದಿ ಭಾಗವಹಿಸುತ್ತಾರೆ, ಕೃಷ್ಣನ ಪೂಜೆ ನಡೆಯುತ್ತದೆ ಎಂದು ಓದಿದೆ. ಆದ್ದರಿಂದ ಅದನ್ನೆಲ್ಲಾ ದಾಖಲಿಸಿಕೊಂಡು ಡಾಕ್ಯುಮೆಂಟರಿ ಮಾಡಲು ಬಂದಿದ್ದೇವೆ. ಉಡುಪಿಯಲ್ಲಿ 10 ದಿನ ಇದ್ದೇವೆ. ನಂತರ ಚೈನ್ನೈಗೆ ಹೋಗಬೇಕಿದೆ.
 ಜೋಹಾನ್ನೆಸ್ ಮತ್ತು ಆತನ ಗೆಳತಿ ಗಾರ್ಸಿಯಾ, ಆಸ್ಟ್ರಿಯಾ ಪ್ರಜೆಗಳು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.