ಅಬ್ಬಬ್ಬಾ ಎಲ್ಲಿದ್ದರೋ ಇಷ್ಟು ಜನ... !
ಉಡುಪಿ: ಉಡುಪಿ ನಗರದಲ್ಲಿ ಶುಕ್ರವಾರ ರಾತ್ರಿ ಕತ್ತಲಾಗಲೇ ಇಲ್ಲ. ಇಡಿ ನಗರವೇ ಬೆಳಕಿನಿಂದ ಝಗಮಗಿಸಿತು, ಬೀದಿಗಳೆಲ್ಲಾ ಎಲ್ಲೆಲ್ಲಿಂದಲೂ ಬಂದ ಜನರಿಂದ ತುಂಬಿ ತುಳುಕಾಡಿದವು, ನಗರದ ಮೂಲೆಮೂಲೆಯಿಂದ ಸಂಗೀತ ಸುಧೆ ಹರಿಯಿತು, ನೃತ್ಯ ಸಾಂಸ್ಕೃತಿಕ ಕಾರ್ಯಕ್ರಮ ಮೇಳೈಸಿತ್ತು...
ಉಡುಪಿಯ ಪರ್ಯಾಯೋತ್ಸವ ಇಂದು ಉಡುಪಿಯ ಉತ್ಸವವಾಗಿಲ್ಲ, ಅದು ನಾಡಹಬ್ಬದ ರೂಪ ಪಡೆದುಕೊಳ್ಳುತ್ತಿದೆ ಎನ್ನುವುದಕ್ಕೆ ಹರಿದು ಬಂದ ಜನಸಾಗರವೇ ಸಾಕ್ಷಿ. ಹೊರ ಜಿಲ್ಲೆ, ಹೊರರಾಜ್ಯಗಳಿಂದ ಸಾಕಷ್ಟು ಮಂದಿ ಭಕ್ತಾಭಿಮಾನಿಗಳು, ಪ್ರವಾಸಿಗರು ಉಡುಪಿಗೆ ಆಗಮಿಸಿದ್ದರು. ಮಾತ್ರವಲ್ಲ ನೂರಾರು ಸಂಖ್ಯೆಯಲ್ಲಿ ವಿದೇಶಿ ಪ್ರವಾಸಿಗರು ಅತ್ಯಂತ ಕುತೂಹಲದಿಂದ ಕೌತುಕದಿಂದ ಪರ್ಯಾಯೋತ್ಸವವನ್ನು ವೀಕ್ಷಿಸಿದರು.
ಪೊಲೀಸ್ ವ್ಯವಸ್ಥೆ ಚೆನ್ನಾಗಿತ್ತು...: ಯಾವುದೇ ರೀತಿಯ ಅವ್ಯವಸ್ಥೆ, ಶಾಂತಿ ಭಂಗ ಉಂಟಾಗದಂತೆ ಈ ಬಾರಿ ಜಿಲ್ಲಾಡಳಿತ ವಿಶೇಷ ಮುತುವರ್ಜಿ ವಹಿಸಿತ್ತು. ಮುಖ್ಯವಾಗಿ ಜನರು ನಡುವೆ ಸುಮಾರು ಪೊಲೀಸರು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರು. ಒಟ್ಟು 1200 ಪೊಲೀಸರು ಮತ್ತು ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು. ಸ್ವತಃ ಎಸ್ಪಿ ಡಾ. ಬೋರಲಿಂಗಯ್ಯ ಅವರು ಉಸ್ತುವಾರಿ ವಹಿಸಿಕೊಂಡಿದ್ದರು.
ಮೆರವಣಿಗೆಯಲ್ಲಿ ನೂಕನುಗ್ಗಲಾಗದಂತೆ, ಸರಗಳ್ಳರ ಬಗ್ಗೆ ಎಚ್ಚರಿಕೆಯಿಂದಿರುವಂತೆ ಪೊಲೀಸರು ವಿನಂತಿಸುತ್ತಿದ್ದರು ಮತ್ತು ನಗರದ ಆಯಕಟ್ಟಿನಲ್ಲಿ ಸರಗಳ್ಳರ ಭಾವಚಿತ್ರಗಳನ್ನು ಅಂಟಿಸಿ ಜಾಗೃತಿ ಮೂಡಿಸಿದ್ದರು. ಮರೆವಣಿಗೆ ಸಾಗಿ ಬರುವ ಕೋರ್ಟ್ ರಸ್ತೆ, ಕೊಳಪೇಟೆ, ತೆಂಕಪೇಟೆ ಮತ್ತು ರಥಬೀದಿಯಲ್ಲಿ ಅಲ್ಲಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿದ್ದರು.
ಸಂಗೀತ- ನೃತ್ಯ- ನಾಟಕ... : ಶುಕ್ರವಾರ ಸಂಜೆಯಿಂದಲೇ ಉಡುಪಿಗೆ ಆಗಮಿಸಲಾರಂಭಿಸಿದ್ದ ಜನರ ಮನೋರಂಜನೆಗೆ ನಗರದ ವಿವಿಧ ಕಡೆಗಳಲ್ಲಿ ಸಂಗೀತ - ನೃತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಪೂರ್ಣಪ್ರಜ್ಞಾ ಸಭಾಂಗಣದಲ್ಲಿ ಶಾಸ್ತ್ರೀಯ ಸಂಗೀತ ಕಛೇರಿ, ಪುರಭವವನದಲ್ಲಿ ತುಳು ನಾಟಕ ಪ್ರದರ್ಶನಗಳಿದ್ದವು. ವಿಶೇಷವಾಗಿ ಕಿನ್ನಿಮೂಲ್ಕಿಯಲ್ಲಿ ಸಮಾಜ ಸೇವಕ ಕೃಷ್ಣಮೂರ್ತಿ ಆಚಾರ್ಯ ಅವರು ಸಿನೆಮಾ ನಟ ನಟಿಯರನ್ನು ಕರೆಸಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿದ್ದರು. ಪರ್ಯಾಯ ಕಾಣಿಯೂರು ಮಠದ ವತಿಯಿಂದ ರಾಜಾಂಗಣದಲ್ಲಿ ಪ್ರಾತ- ವಿದ್ವಾನ್ ಪವನ್ ಕೃಷ್ಣ ಬಗಳದ ವೇಣುವಾದನ, ಕಟೀಲಿನ ದುರ್ಗಾ ಮಕ್ಕಳ ಮೇಳದಿಂದ ಯಕ್ಷಗಾನ, ಕಲೈಮಾಮಣಿ ಕದ್ರಿ ಗೋಪಾಲ್ನಾಥ್ ಬಳಗದಿಂದ ಅವರಿಂದ ದೈವಿ ಸ್ಯಾಕ್ಸೋಫೋನ್ ಕಾರ್ಯಕ್ರಮಗಳು ಮನರಂಜಿಸಿದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

