ಬಸ್ ನಿಲ್ದಾಣ ಯೋಜನೆ ನೆನೆಗುದಿಗೆ?
ಮಂಗಳೂರು: ರಾಷ್ಟ್ರೀಯ ಹೆದ್ದಾರಿ 75ರ ಬಿ.ಸಿ.ರೋಡಿನಲ್ಲಿ ಹೊಸ ಬಸ್ ನಿಲ್ದಾಣ ನಿರ್ಮಾಣಕ್ಕೆ ಇನ್ನೂ ಯೋಗ ಕೂಡಿ ಬಂದಿಲ್ಲ. ಗುರುತಿಸಿದ ಜಾಗವನ್ನು ನಗರಸಭೆ ಇನ್ನೂ ಸ್ವಾಧೀನಪಡಿಸಿಕೊಂಡಿಲ್ಲ.
ಹಲವು ವರ್ಷಗಳಿಂದ ಬಸ್ ನಿಲ್ದಾಣದ ಸಮಸ್ಯೆ ಎದುರಿಸುತ್ತಿದೆ. ಬಿ.ಸಿ. ರೋಡ್ ನಗರಕ್ಕೆ ಕೆಲವು ವರ್ಷಗಳ ಹಿಂದೆ ಅಂದಿನ ಜಿಲ್ಲಾಧಿಕಾರಿ ಪೊನ್ನುರಾಜ್ ಜಾಗ ನಿಗದಿಗೊಳಿಸಿ, ಅಲ್ಲಿನ ಪೆಟ್ರೋಲ್ ಬಂಕ್ ತೆರವುಗೊಳಿಸಿ ಕಾಮಗಾರಿ ಪ್ರಾರಂಭಿಸಲು ಅನುವು ಮಾಡಿಕೊಟ್ಟಿದ್ದರು.
ಬಿ.ಸಿ.ರೋಡ್ ನಗರದ ಶ್ರೀ ಚಂಡಿಕೇಶ್ವರಿ ದೇವಸ್ಥಾನದ ಹಿಂಭಾಗದ ಸುಮಾರು 1 ಎಕರೆ ಜಾಗವನ್ನು ಗುರುತಿಸಲಾಗಿತ್ತು. ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣಗೊಳ್ಳುತ್ತಿರುವ ನಿಲ್ದಾಣಕ್ಕೆ ಕೇಂದ್ರ ಹೆದ್ದಾರಿ ಇಲಾಖೆಯಿಂದ ಇನ್ನೂ ಸಮ್ಮತಿ ಸಿಕ್ಕಿಲ್ಲ.
ಜಾಗದ ಸ್ವಾಧೀನಕ್ಕೆ ಕೆಲವೊಂದು ತೊಡುಕುಗಳಿವೆ ಎಂದು ಹೇಳುತ್ತಿರುವ ಕೆಎಸ್ಆರ್ಟಿಸಿ ಇಲಾಖೆ ಸ್ಪಷ್ಟ ಕಾರಣ ನೀಡಲು ಹಿಂದೇಟು ಹಾಕುತ್ತಿದೆ. ಬಸ್ ನಿಲ್ದಾಣ ಕಾಮಗಾರಿ ಬಗ್ಗೆ ಸಾರ್ವಜನಿಕರು ಪ್ರಶ್ನಿಸಿ ಪತ್ರ ಬರೆದಿದ್ದರೂ, ಸರಿಯಾದ ಮಾಹಿತಿ ಇಲ್ಲದ ಕಾರಣ ಪ್ರತಿಕ್ರಿಯಿಸುತ್ತಿಲ್ಲ.
ನಗರ ಪ್ರದೇಶದಲ್ಲಿ ಸರಿಯಾದ ಬಸ್ ನಿಲ್ದಾಣವಿಲ್ಲದ ಪರಿಣಾಮ ರಸ್ತೆ ಬದಿಯಲ್ಲಿ ವಾಹನ ನಿಲುಗಡೆಗೊಳ್ಳುತ್ತಿದೆ. ಅಲ್ಲದೆ ಜನರು ರಸ್ತೆ ಬದಿಯಲ್ಲಿಯೇ ಬಸ್ಗಳನ್ನು ಏರಿ, ಇಳಿಯಬೇಕಾದ ಪರಿಸ್ಥಿತಿ.
ಇಕ್ಕಟ್ಟಾದ ಸ್ಥಳ: ಬಸ್ ನಿಲ್ದಾಣಕ್ಕೆ ಈಗಾಗಲೇ ಗುರುತಿಸಿರುವ ಜಾಗದಲ್ಲಿ ಸ್ಥಳಾವಕಾಶದ ಕೊರತೆಯಿದೆ. 1 ಎಕರೆ ಜಾಗದ ರಸ್ತೆ ಹಿಂಬದಿಯಲ್ಲಿ ಸಾಕಷ್ಟು ಜಾಗವಿದ್ದರೂ, ಒಳ ಹಾಗೂ ಹೊರ ಪ್ರವೇಶ ದ್ವಾರದಲ್ಲಿ ಸ್ಥಳದ ಕೊರತೆಯಿದೆ. ಆಸುಪಾಸಿನಲ್ಲಿ ವಾಣಿಜ್ಯ ಸಂಕೀರ್ಣ ಕಟ್ಟಡಗಳಿವೆ. ಅಲ್ಲದೆ ದೇವಸ್ಥಾನ ಕೂಡ ಇದೆ.
ಮಳೆಗಾಲದ ಶೋಚನೀಯ: ಮಳೆಗಾಲದಲ್ಲಂತೂ ಇಲ್ಲಿನ ಪರಿಸ್ಥಿತಿ ಶೋಚನೀಯ. ರಸ್ತೆ ಬದಿಯಲ್ಲಿ ಸರಿಯಾದ ಫುಟ್ಪಾತ್ ನಿರ್ಮಾಣಗೊಳ್ಳದ ಕಾರಣ ಕೆಸರು ನೀರು ರಸ್ತೆಯಲ್ಲಿ ಹರಿಯುತ್ತದೆ. ರಸ್ತೆ ಬದಿಯಲ್ಲಿ ಕಂಬಳ ಸೃಷ್ಟಿಯಾಗುತ್ತದೆ. ಹೆಜ್ಜೆ ತಪ್ಪಿದರೆ ಕೆಸರಿನ ಸ್ನಾನ ಕಟ್ಟಿಟ್ಟಬುತ್ತಿ. ವಾಹನಗಳು ಓಡಾಡಿದ ಪರಿಣಾಮ ರಸ್ತೆಯಲ್ಲಿ ದೊಡ್ಡ ಹೊಂಡಗಳು ಕಾಣಿಸಿಕೊಳ್ಳುತ್ತದೆ.
ರಸ್ತೆ ಬದಿ ಬಸ್ ನಿಲುಗಡೆ: ಇತ್ತೀಚೆಗೆ ನಗರದಲ್ಲಿ ನಿರ್ಮಾಣಗೊಂಡಿರುವ ಕಚ್ಚಾರಸ್ತೆ ಬದಿಯಲ್ಲಿಯೇ ಎಲ್ಲ ಬಸ್ಗಳು ನಿಲುಗಡೆಗೊಳ್ಳುತ್ತಿದೆ. ಇಕ್ಕಟ್ಟಾಗಿರುವ ರಸ್ತೆಯಲ್ಲಿ ವಾಹನಗಳ ಓಡಾಟದಿಂದ ಪಾದಚಾರಿಗಳು ನಡೆದಾಡಲು ಕಷ್ಟಪಡುವಂತಾಗಿದೆ. ರಸ್ತೆ ಬದಿಯಲ್ಲಿಯೇ ಬಸ್ ಏರಬೇಕಾಗುವುದರಿಂದ ನಿಂತುಕೊಳ್ಳಲು ಜಾಗವಿಲ್ಲ.
ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ತುಮಕೂರು, ಕುಣಿಗಲ್, ಹಾಸನ ಕಡೆಯಿಂದ ಮಂಗಳೂರಿಗೆ ಆಗಮಿಸಬೇಕಾದರೆ ಬಿ.ಸಿ.ರೋಡ್ ದಾಟಿ ಸಾಗಬೇಕು. ಬಸ್ ನಿಲ್ದಾಣ ಇಲ್ಲದ ಕಾರಣ ಪ್ರಯಾಣಿಕರು ಬಸ್ ನಿಲ್ಲಿಸಿದ ಜಾಗದಲ್ಲಿಯೇ ಇಳಿಯಬೇಕು.
ತುಮಕೂರು, ಮಡಿಕೇರಿ, ಬೆಂಗಳೂರು ಬಸ್ಗಳು ಮೇಲ್ಸೇತುವೆ ಮೂಲಕ ಸಾಗುವುದರಿಂದ ಪ್ರಯಾಣಿಕರನ್ನು ಸೇತುವೆ ಪ್ರಾರಂಭದಲ್ಲಿ, ಕೊನೆಯ ರಸ್ತೆ ಬದಿಯಲ್ಲಿ ಇಳಿಸುತ್ತಾರೆ. ಮೇಲ್ಸೇತುವೆಯ ಎರಡೂ ಬದಿಯಲ್ಲಿ ಕಚ್ಚಾರಸ್ತೆಯಿದ್ದು, ಪ್ರಯಾಣಿಕರು ರಸ್ತೆ ದಾಟಲು ಕಷ್ಟಪಡುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

