ದಕ್ಷಿಣ ಕನ್ನಡ

ಉಜಿರೆಯಲ್ಲಿ ದ.ಕೊರಿಯ ತಂಡದ ಯೋಗಾಧ್ಯಯನ

Published On :

ಬೆಳ್ತಂಗಡಿ: ಸ್ವಾಸ್ಥ್ಯ ರಕ್ಷಣೆ, ಆರೋಗ್ಯ ವರ್ಧನೆ, ರೋಗ ನಿವಾರಣೆ, ಚಿಕಿತ್ಸೆ, ಬೌದ್ಧಿಕ ಹಾಗೂ ಆಧ್ಯಾತ್ಮಿಕ ಪ್ರಗತಿ ಈ ಎಲ್ಲಕ್ಕೂ ಅತ್ಯಮೂಲ್ಯ ಸಾಧನ ಯೋಗ. ಯೋಗ ಕುರಿತು ಅಧ್ಯಯನ ಮಾಡಲು ದೂರದ ದಕ್ಷಿಣ ಕೊರಿಯಾ ದೇಶದಿಂದ ಉಜಿರೆಗೆ 30 ಮಂದಿ ಶಿಕ್ಷಕ- ಶಿಕ್ಷಕಿಯರು ಬಂದಿದ್ದರು.
 ಕೊರಿಯಾದ ವಾಂಗ್ವೋಕ್ ಡಿಜಿಟಲ್ ಯುನಿವರ್ಸಿಟಿ ಯೋಗದಲ್ಲಿ ಪದವಿಯನ್ನು ನೀಡುವ ಹೊರದೇಶದ ಏಕೈಕ ವಿದ್ಯಾಲಯವೆಂದು ಪ್ರಸಿದ್ಧಿ ಪಡೆದಿದೆ. ಅಲ್ಲಿನ ಶಿಕ್ಷಕರು ಈ ಭಾರತೀಯ ವಿದ್ಯೆಯನ್ನು ಭಾರತದಲ್ಲಿಯೇ ಅಭ್ಯಸಿಸುವುದು ಸೂಕ್ತ ಎಂಬ ನಿರ್ಧಾರವನ್ನು ತಳೆದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯಕ್ಕೆ ಜ. 21 ರಂದು ಆಗಮಿಸಿ, 5 ದಿನಗಳ ವಿಶೇಷ ತರಬೇತಿಯನ್ನು ಪಡೆದಿದ್ದಾರೆ.
 ಇವರ ನಿರ್ಧಾರಕ್ಕೆ ಪೂರಕವಾಗಿ ಕಾಲೇಜಿನ ಉಪನ್ಯಾಸಕ ವೈದ್ಯರು, ಜ. 22 ರಿಂದ 26ರ ತನಕ ಕಾಲೇಜಿನಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಬಗ್ಗೆ ವಿವಿಧ ರೀತಿಯ ಶಿಕ್ಷಣ ನೀಡಲು ನಿರ್ಧರಿಸಿ ಅದಕ್ಕೆ ತಕ್ಕಂತೆ ಪಠ್ಯಕ್ರಮ ಸಿದ್ಧಪಡಿಸಿ ತರಬೇತಿ ನೀಡಲಾಗಿದೆ.
ಯೋಗದ ಸಮಗ್ರ ಪರಿಚಯ, ಪ್ರಕೃತಿ ಚಿಕಿತ್ಸೆಯ ತತ್ವ, ರೇಖಿಯ ವಿಶೇಷ ತಂತ್ರಗಳು, ಶರೀರ ಶಾಸ್ತ್ರದ  ಮೂಲಭೂತ ಸಿದ್ಧಾಂತ, ಕಾರ್ಯಶೀಲತೆ, ಪ್ರಕೃತಿ ಚಿಕಿತ್ಸೆಯ ಕಾರ್ಯನಿರ್ವಹಣಾ ಪದ್ಧತಿ, ನಿತ್ಯ ಜೀವನದಲ್ಲಿ ಅಷ್ಟಾಂಗ ಯೋಗದ ಲಾಭ, ಪೌಷ್ಟಿಕತೆ ಮತ್ತು ಪಥ್ಯದ ನಿರ್ವಹಣೆ, ಜೀವಶಾಸ್ತ್ರದ ಸಿದ್ಧಾಂತ, ಯೋಗ ಮತ್ತು ಪ್ರಕೃತಿ ಚಿಕಿತ್ಸೆಯಲ್ಲಿನ ಇತ್ತೀಚೆಗಿನ ಸುಧಾರಣೆಗಳು, ಚಿಕಿತ್ಸೆ ನೀಡುವ ಕೌಶಲ್ಯತೆ, ಯೋಗ ಚಿಕಿತ್ಸೆಯ ತತ್ತ್ವ ಮತ್ತು ಅಭ್ಯಾಸ, ತುರ್ತು ಚಿಕಿತ್ಸೆ ಮತ್ತು ಪರಿಹಾರಗಳು, ರೋಗ ಪರಿಹಾರಕ್ಕೆ ಯೋಗ ಹೇಗೆ ಉಪಯೋಗವಾಬಲ್ಲುದು ಎಂಬ ಮಾಹಿತಿಯನ್ನು ಕಾಲೇಜಿನ ಪ್ರಾಚಾರ್ಯ ಡಾ. ಪ್ರಶಾಂತ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ  ವೈದ್ಯರಾದ ಶಿವಪ್ರಸಾದ ಶೆಟ್ಟಿ, ದೀಕ್ಷಿತ್ ಆಳ್ವ, ಸುಜಾತಾ ದಿನೇಶ್, ಚಂದ್ರಕಾಂತ್, ರೋಶನಿ, ನಂದೀಶ್, ಗೀತಾ ಕುಮಾರಿ, ದಿವ್ಯಲತಾ, ಶಶಿಕಿರಣ್, ಅಭಯ್, ಲಕ್ಷ್ಮೀಶ, ಮೊಹಮ್ಮದ್ ರಫೀಕ್, ಜಾಸ್ಮಿನ್ ಡಿ' ಸೋಜ, ಸೆಲ್ವ ಕುಮಾರ್, ನವೀನ್ ಜಿ.ಎಚ್. ತರಬೇತಿ ನೀಡಿದ್ದಾರೆ.
ಇಷ್ಟೇ ಅಲ್ಲದೆ ಯೋಗ ಪಿರಮಿಡ್, ಯೋಗದ ಕ್ರೀಡೆಗಳ ಜೊತೆಗೆ ಶಿಬಿರಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ತರಬೇತಿಯಲ್ಲಿ ಹಮ್ಮಿಕೊಳ್ಳಲಾಗಿದೆ.
 ವೋಂಗ್‌ವಾಂಗ್ ಯುನಿವರ್ಸಿಟಿಯ ಉಪಕುಲಪತಿ ಡಾ. ಜುಂಗ ಸೂನ್ಸ್ ಸಿಯೋ ಅವರು ತಮ್ಮ ವಿದ್ಯಾಲಯದ ಶಿಕ್ಷಕರನ್ನು ಭಾರತಕ್ಕೆ ಕರೆತಂದು ತರಬೇತಿ ಒದಗಿಸುವಲ್ಲಿ ಶ್ರಮ ವಹಿಸಿದ್ದಾರೆ.
ಕೊರಿಯಾದ ವಿದ್ಯಾರ್ಥಿಗಳು ಭಾರತೀಯ ಶಾಸ್ತ್ರವನ್ನು ಅಧ್ಯಯನ ಮಾಡಲು ವಿಶೇಷ ಆಸಕ್ತಿಯನ್ನು ಹೊಂದಿರುವುದರಿಂದ ಇಲ್ಲಿಗೆ ಬಂದಿದ್ದೇವೆ ಎನ್ನುತ್ತಾರೆ ಅವರು. ಸಿಯೋ ಅವರು 10 ವರ್ಷಗಳ ಕಾಲ ವಾರಣಾಸಿಯಲ್ಲಿದ್ದು, ಹಿಂದಿ ಮತ್ತು ಸಂಸ್ಕೃತವನ್ನು ಅಧ್ಯಯನ ಮಾಡಿರುವುದು ವಿಶೇಷ.ಯೋಗ ಪದವಿ
ಕೊರಿಯಾದ ಐಕ್ಸಾನ್ ನಗರದಲ್ಲಿರುವ ವೋಂಕ್‌ವಾಂಗ್ ಡಿಜಿಟಲ್ ಯುನಿವರ್ಸಿಟಿಯಲ್ಲಿ ಯೋಗ ಮತ್ತು ಧ್ಯಾನದಲ್ಲಿ ಬ್ಯಾಚುಲರ್ ಆಫ್ ಸಾಯನ್ಸ್ ಎಂಬ ಪದವಿಯನ್ನು ನೀಡಲಾಗುತ್ತದೆ. ಭಾರತೀಯ ವೈದ್ಯ ವಿಜ್ಞಾನ, ಪಂಚಕರ್ಮ ಕೋರ್ಸ್, ಪ್ರಕೃತಿ ಚಿಕಿತ್ಸಾ ತರಬೇತಿಯನ್ನು ಪಡೆದವರಿಗೆ ಭಾರತ ಸಹಿತ ಅನ್ಯದೇಶದಲ್ಲಿ ತರಬೇತಿ ನೀಡುವ ಪರವಾನಗಿಯನ್ನು ವಿಶ್ವವಿದ್ಯಾಲಯ ನೀಡುತ್ತದೆ.



-ದೀಪಕ್ ಅಳದಂಗಡಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.