ದಕ್ಷಿಣ ಕನ್ನಡ

ಫಾರಂ ಕೊರತೆ: ಜನರಿಗೆ ಆರ್‌ಟಿಸಿ ಖೋತಾ

Published On :

ಮಂಗಳೂರು: ಆರ್‌ಟಿಸಿ ಫಾರಂ ಮತ್ತು ಹೋಲೋಗ್ರಾಂ ಪೂರೈಸುವ ಏಜೆನ್ಸಿಯ ಅವಧಿ ಮುಕ್ತಾಯವಾಗಿದೆ. ಇದರಿಂದ ಒಂದು ವಾರದಿಂದ ಹೋಬಳಿ ಮಟ್ಟದ ಅಟಲ್‌ಜೀ ಜನಸ್ನೇಹಿ ಕೇಂದ್ರಗಳಲ್ಲಿ ನಾಗರಿಕರಿಗೆ ಆರ್‌ಟಿಸಿ ಸಿಗುತ್ತಿಲ್ಲ.
ಆರ್‌ಟಿಸಿ ಫಾರಂ ಪೂರೈಸುವ ಏಜೆನ್ಸಿ ಅವಧಿ ಮುಕ್ತಾಯವಾದರೂ ಅದರ ಗೊಡವೆಯೇ ಇಲ್ಲದಂತೆ ವರ್ತಿಸುವ ಸರ್ಕಾರ, ಇಲಾಖೆಗಳು ಜನಸಾಮಾನ್ಯನ ಅವಶ್ಯಕತೆಗಳ ವಿಚಾರದಲ್ಲಿ ಎಷ್ಟರ ಮಟ್ಟಿಗೆ ಸ್ಪಂದಿಸುತ್ತವೆ ಎಂಬುದಕ್ಕೆ ಇದೇ ಸಾಕ್ಷಿ.
 ಇದರಿಂದ ಹಿಡುವಳಿದಾರರಿಗೆ ಆರ್‌ಟಿಸಿ(ಪಹಣಿ ಪತ್ರ) ಸಿಗುತ್ತಿಲ್ಲ. ಆರ್‌ಟಿಸಿಗಾಗಿ ಜನರು ಹೋಬಳಿಯಿಂದ ತಾಲೂಕು ಕೇಂದ್ರಕ್ಕೆ ವೃಥಾ ಅಲೆಯುವಂತಾಗಿದೆ. ಈ ಸಮಸ್ಯೆ ರಾಜ್ಯದ ಎಲ್ಲ ಅಟಲ್‌ಜೀ ಜನಸ್ನೇಹಿ ಕೇಂದ್ರಗಳಲ್ಲಿ ತಲೆದೋರಿದ್ದು, ತಾಲೂಕು ಕಚೇರಿಯ ಭೂಮಿ ಕೇಂದ್ರಗಳಲ್ಲೂ ಜನರ ನೆಮ್ಮದಿ ಕೆಡಿಸಿದೆ. ಆರ್ಥಿಕ ವರ್ಷಾಂತ್ಯ ಮಾರ್ಚ್ ಸಮೀಪಿಸುತ್ತಿದೆ, ಜತೆಗೆ ಲೋಕಸಭಾ ಚುನಾವಣೆಯೂ ಹತ್ತಿರ ಬರುತ್ತಿದೆ. ಎಲ್ಲ ಇಲಾಖೆಗಳಲ್ಲೂ ಸರ್ಕಾರಿ ಕಾರ್ಯಕ್ರಮಗಳ ಜರೂರು ಅನುಷ್ಠಾನಕ್ಕೆ ಅಧಿಕಾರಿಗಳು ಮುಂದಾಗುತ್ತಿದ್ದಾರೆ. ಆದರೆ ಆರ್‌ಟಿಸಿ ಸರಿಯಾಗಿ ಸಿಗದ ಕಾರಣ ಸರ್ಕಾರಿ ಕಾರ್ಯಕ್ರಮ ಹಿನ್ನಡೆ ಕಾಣುವಂತಾಗಿದೆ.  
ಒಂದು ವಾರದಿಂದ ಪರದಾಟ: ಅಟಲ್‌ಜೀ ಜನಸ್ನೇಹಿ ಕೇಂದ್ರಕ್ಕೆ ಹೋದವರಿಗೆ ಆರ್‌ಟಿಸಿ ಸಿಗುತ್ತಿಲ್ಲ. ಗಣಕೀಕೃತ ಆರ್‌ಟಿಸಿ ಕೊಡಬೇಕಾದರೆ ಆರ್‌ಟಿಸಿ ಫಾರಂ ಬೇಕು. ಕಳೆದ ಒಂದು ವಾರದಿಂದ ಫಾರಂ ಕೊರತೆ ಉಂಟಾಗಿದೆ. ಆರ್‌ಟಿಸಿಗೆ ಸ್ಟಿಕ್ಕರ್ ಅಂಟಿಸುವ ಹೋಲೋಗ್ರಾಂ ಕೂಡ ಬೇಕಾದಷ್ಟು ಸಿಗುತ್ತಿಲ್ಲ. ಆರ್‌ಟಿಸಿಗೆ ಹೋದವರು ಬರಿಗೈಲಿ ಹಿಂದಿರುಗುತ್ತಿದ್ದಾರೆ.
ಕಂದಾಯ ಇಲಾಖೆ ಅಧಿಕಾರಿಗಳ ಪ್ರಕಾರ, ಈ ಸಮಸ್ಯೆ ಎಲ್ಲ ಅಟಲ್‌ಜೀ ಜನಸ್ನೇಹಿ ಕೇಂದ್ರಗಳಲ್ಲಿ ಇದೆ. ಭೂಮಿ ಕೇಂದ್ರಗಳಲ್ಲಿ ಸಮಸ್ಯೆ ಅಷ್ಟಾಗಿ ಬಾಧಿಸದಿದ್ದರೂ, ಕೆಲವು ತಾಲೂಕುಗಳಲ್ಲಿ ಭೂಮಿ ಕೇಂದ್ರದಲ್ಲಿರುವ ಫಾರಂನ್ನು ಹೋಬಳಿ ಕೇಂದ್ರಕ್ಕೆ ಕಳುಹಿಸುತ್ತಾರೆ. ಇದರಿಂದ ಭೂಮಿ ಕೇಂದ್ರದಲ್ಲೂ ಸಮಸ್ಯೆ ತಲೆದೋರುತ್ತಿದೆ. ಜಿಲ್ಲೆಯ ಬೇಡಿಕೆಯಷ್ಟು ಆರ್‌ಟಿಸಿ ಫಾರಂ ಪೂರೈಕೆಯಾಗುತ್ತಿಲ್ಲ. ತಿಂಗಳಿಗೆ 3 ಲಕ್ಷ ಫಾರಂ ಬೇಕು, ಅಷ್ಟೇ ಪ್ರಮಾಣದಲ್ಲಿ ಹೋಲೋಗ್ರಾಂ ಬೇಕು, ಆದರೆ ಬೆಂಗಳೂರಿನಿಂದ ಅರ್ಧದಷ್ಟು ಮಾತ್ರ ಕಳುಹಿಸುತ್ತಾರೆ. ಮೇಲಧಿಕಾರಿಗಳಲ್ಲಿ ಬೇಡಿಕೆ ಇರಿಸಿದರೆ, ನಾಳೆ ಬರುತ್ತದೆ ಎಂದು ಸಬೂಬು ಹೇಳುತ್ತಾರೆ. ಇದರಿಂದ ಆರ್‌ಟಿಸಿ ಬೇಡಿಕೆ ಪ್ರಮಾಣದಲ್ಲಿ ನೀಡಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಅಧಿಕಾರಿಗಳು.
 ಆರ್‌ಟಿಸಿ ಫಾರಂ ಕೊರತೆ ಒಂದೆಡೆಯಾದರೆ, ಆರ್‌ಟಿಸಿಯ ಪ್ರತಿ ಪುಟದಲ್ಲೂ ಹೋಲೋಗ್ರಾಂ ಅಂಟಿಸಬೇಕು ಎಂಬುದು ನಿಯಮ. ಆದರೆ ಹೋಲೋಗ್ರಾಂ ಕೊರತೆಯಿಂದ ಅದನ್ನು ಎಲ್ಲ ಪುಟದಲ್ಲಿ ಅಂಟಿಸುತ್ತಿಲ್ಲ.
ಬದಲು ಒಂದು ಸರ್ವೇ ನಂಬರಿಗೆ ಮೂರ್ನಾಲ್ಕು ಆರ್‌ಟಿಸಿ ಇದ್ದರೆ, ಒಂದು ಆರ್‌ಟಿಸಿಗೆ ಮಾತ್ರ ಅಂಟಿಸಬೇಕಾಗುತ್ತದೆ ಎನ್ನುತ್ತಾರೆ ಕೇಂದ್ರದ ಸಿಬ್ಬಂದಿ.
'ಭೂಪರಿವರ್ತನೆಗೆ ಆರ್‌ಟಿಸಿಗಾಗಿ ಸುರತ್ಕಲ್ ನಾಡಕಚೇರಿಗೆ ತೆರಳಿದರೆ ಅಲ್ಲಿ ಫಾರಂ ಇಲ್ಲ ಎನ್ನುತ್ತಿದ್ದಾರೆ. ಇದೇ ಪಡಿಪಾಟಿಲು ಕಳೆದ ಮೂರ್ನಾಲ್ಕು ದಿನಗಳಿಂದ ನಡೆಯುತ್ತಿದೆ. ನನ್ನಂತೆ ಅನೇಕ ಮಂದಿ ಆರ್‌ಟಿಸಿಗೆ ಕಚೇರಿಗೆ ಎಡತಾಕುವುದು ಸಾಮಾನ್ಯವಾಗಿದೆ. ಸರ್ಕಾರಕ್ಕೆ ಆದಾಯ ಬರುತ್ತಿದ್ದರೂ ಯಾಕೆ ಫಾರಂ ಸರಿಯಾಗಿ ಪೂರೈಸುತ್ತಿಲ್ಲ ಎಂಬುದು ಅರ್ಥವಾಗುತ್ತಿಲ್ಲ' ಎನ್ನುತ್ತಾರೆ ಸುರತ್ಕಲ್‌ನ ಆನಂದ ಅಮೀನ್.
- ಆತ್ಮಭೂಷಣ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.