ನೆರೆ ಭೀತಿ, ವಿವಿಧೆಡೆ ಭೂಕುಸಿತ
ಉಪ್ಪಿನಂಗಡಿ: ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ನೇತ್ರಾವತಿ ಮತ್ತು ಕುಮಾರಾಧಾರಾ ನದಿಗಳು ಮೈ ತುಂಬಿ ಹರಿಯುತ್ತಿವೆ. ಉಪ್ಪಿನಂಗಡಿ ಪರಿಸರದ ಐದು ಕಡೆ ಗುಡ್ಡ ಜರಿತದಿಂದಾಗಿ ಮನೆಗಳು ಹಾನಿಗೀಡಾಗಿವೆ.
ಉಪ್ಪಿನಂಗಡಿಯ ನಿನ್ನಿಕ್ಕಲ್ ಪರಿಸರದಲ್ಲಿ ಅಬ್ದುಲ್ ಖಾದರ್, ಮಹಮ್ಮದ್ ನಿನ್ನಿಕ್ಕಲ್ ಹಾಗೂ ಲತೀಫ್ ಎಂಬವರ ಮನೆಗಳು ಹಾನಿಗೀಡಾಗಿವೆ. 34ನೇ ನೆಕ್ಕಿಲಾಡಿ ಗ್ರಾಮದ ದಿನಕರ ಆಚಾರ್ಯ ಮತ್ತು ದೇವಕಿ ಎಂಬವರ ಮನೆಗೂ ಗುಡ್ಡ ಜರಿದು ಹಾನಿಯಾಗಿದೆ.
ನಿನ್ನಿಕ್ಕಲ್ ಪರಿಸರದಲ್ಲಿ ನಿರ್ಮಾಣ ಹಂತದಲ್ಲಿದ್ದ ಮನೆಯೊಂದರ ಮುಂಭಾಗದಲ್ಲಿ ಗುಡ್ಡ ಜರಿತದಿಂದ ಮನೆಗೆ ಆಂಶಿಕ ಹಾನಿಯುಂಟಾಗಿದೆ. ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಳಿನಾಕ್ಷಿ ಶೆಟ್ಟಿ, ಉಪಾಧ್ಯಕ್ಷ ಗಂಗಾಧರ ಟೈಲರ್, ಸದಸ್ಯರಾದ ಗೋಪಾಲ ಹೆಗ್ಡೆ ಸಹಿತ ಪಂಚಾಯಿತಿ ಸದಸ್ಯರು ಮತ್ತು ಕಂದಾಯ ಇಲಾಖಾಧಿಕಾರಿಗಳು ಭೇಟಿ ನೀಡಿದ್ದರು.
34ನೇ ನೆಕ್ಕಿಲಾಡಿಯ ಸುಭಾಷ್‌ನಗರ ಎಂಬಲ್ಲಿ ದಿನಕರ ಆಚಾರ್ಯ ಎಂಬವರ ಮನೆ ಹಿಂಭಾಗದಲ್ಲಿ ನಿರ್ಮಿಸಿದ್ದ ಮುರಕಲ್ಲಿನ ತಡೆಗೋಡೆ ಸಂಪೂರ್ಣ ಕುಸಿದು ಬಿದ್ದು ಮನೆಗೆ ಹಾನಿಯುಂಟಾಗಿದೆ.
ಮನೆ ಮಂದಿ ನಸುಕಿನ ಸಿಹಿ ನಿದ್ದೆಯಲ್ಲಿದ್ದಾಗ ಘಟನೆ ನಡೆದಿದೆ. ತಡೆಗೋಡೆ ಹಂತ ಹಂತವಾಗಿ ಬೀಳುತ್ತಿದ್ದಂತೆ ಮೂಡಿದ ಶಬ್ದದಿಂದ ಬೆಚ್ಚಿಬಿದ್ದ ಮನೆ ಮಂದಿ ಹೊರಗೋಡಿ ಬರುತ್ತಿದ್ದಂತೆ ಮನೆ ಹಿಂಭಾಗ ಕುಸಿದು ಬಿದ್ದು ತಡೆಗೋಡೆಗೆ ಸಿಲುಕಿ ಸಂಪೂರ್ಣ ಪುಡಿಗೈಯಲ್ಪಟ್ಟಿತ್ತು. ಮನೆಯಲ್ಲಿ ನೆಂಟರು ಸೇರಿದಂತೆ ಒಟ್ಟು 13 ಮಂದಿ ಇದ್ದು, ಯಾವುದೇ ಅಪಾಯಗಳಿಲ್ಲದೆ ಪಾರಾಗಿದ್ದಾರೆ.
ಇದೇ ಪರಿಸರದ ದೇವಕಿ ಎಂಬವರ ಮನೆಗೂ ಗುಡ್ಡ ಜರಿದು ಹಾನಿಯುಂಟಾಗಿದೆ. ಘಟನಾ ಸ್ಥಳಕ್ಕೆ ಪುತ್ತೂರು ತಹಸೀಲ್ದಾರ್ ಕುಳ್ಳೇಗೌಡ, ನೆಕ್ಕಿಲಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಸ್ಕರಾಲಿ, ಕಂದಾಯ ಇಲಾಖಾಧಿಕಾರಿಗಳು ಭೇಟಿ ನೀಡಿ ನಷ್ಟ ಅಂದಾಜಿಸಿದ್ದಾರೆ.
ಮೈತುಂಬಿದ ನೇತ್ರಾವತಿ, ಕುಮಾರಧಾರಾ: ಉಪ್ಪಿನಂಗಡಿಯ ಉಭಯ ನದಿಗಳ ಸಂಗಮ ಸ್ಥಳದಲ್ಲಿ ನದಿಗಳೆರಡೂ ಮೈತುಂಬಿ ಹರಿಯುವ ವಿಹಂಗಮ ದೃಶ್ಯ ಕಂಡು ಬಂದಿದೆ. ನದಿಗಳೆರಡೂ ಮೈ ತುಂಬಿ ಹರಿಯುತ್ತಿದ್ದರೂ ಅಪಾಯದ ಮಟ್ಟದಿಂದ ಸಾಕಷ್ಟು ಕೆಳಗೆಯೇ ಹರಿಯುತ್ತಿವೆ.
ರಂಜಾನ್ ಉಪವಾಸ ಪ್ರಾಣ ಉಳಿಸಿತು!
ನಿನ್ನಿಕ್ಕಲ್ ಮನೆ ನಿವಾಸಿ ಅಬ್ದುಲ್ ಖಾದರ್ ಎಂಬವರ ಮನೆ ಸಮೀಪದ ಗುಡ್ಡವೊಂದು ಭಾನುವಾರ ನಸುಕಿನ ಜಾವ 4.30ರ ವೇಳೆಗೆ ಜರಿದು ಮನೆಯ ಒಂದು ಪಾರ್ಶ್ವದ ಗೋಡೆ ಕಿತ್ತು ಮಲಗುವ ಕೋಣೆಗೆ ಎಸೆಯಲ್ಪಟ್ಟಿತ್ತು. ರಂಜಾನ್ ಉಪವಾಸದ ನಿಮಿತ್ತ ಮನೆ ಮಂದಿ ನಸುಕಿನ 4 ಗಂಟೆಗೆ ಎದ್ದು ಉಪಹಾರ ಸೇವಿಸಲು ಡೈನಿಂಗ್ ರೂಮ್‌ನಲ್ಲಿದ್ದ ಕಾರಣ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದರು. ಅವಘಡ ಸಂಭವಿಸಿದ ಕೋಣೆಯೊಳಗೆ ಸಾಮಾನ್ಯವಾಗಿ ನಾಲ್ವರು ಮಕ್ಕಳು ಮಲಗುತ್ತಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

