ಪ್ರತ್ಯೇಕ ಘಟನೆ: ಮೂವರು ನೀರುಪಾಲು
ಉಡುಪಿ: ಈ ಬಾರಿಯ ಮಳೆಗೆ ಉಡುಪಿ ಜಿಲ್ಲೆಯಲ್ಲಿ ಮತ್ತೆ 3 ಮಂದಿ ಬಲಿಯಗಿದ್ದಾರೆ. ಇಲ್ಲಿನ ಬ್ರಹ್ಮಾವರ ಸಮೀಪದ ಹಾರಾಡಿ ಎಂಬಲ್ಲಿ ಮೀನು ಹಿಡಿಯಲು ತೆರಳಿದ್ದ ಅಣ್ಣ- ತಮ್ಮಂದಿರಿಬ್ಬರು ಭಾರಿ ಗಾಳಿ ಮಳೆಗೆ ದೋಣಿ ಮಗುಚಿ ನೀರಿಗೆ ಬಿದ್ದು ಮುಳುಗಿ ಮೃತಪಟ್ಟಿದ್ದಾರೆ. ಇನ್ನೊಂದು ಘಟನೆಯಲ್ಲಿ ವ್ಯಕ್ತಿಯೊಬ್ಬರು ದೇವಾಲಯದ ಕೆರೆಯಲ್ಲಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ.
ಹಾರಾಡಿಯಲ್ಲಿ ಸುವರ್ಣ - ಸೀತಾ ನದಿಗಳು ಸೇರುವ ಅಳಿವೆ ಎಂದು ಕರೆಯುವ ಪ್ರದೇಶದಲ್ಲಿ ಮೊಗವೀರ ಸಮುದಾಯದ ಸುರೇಶ (36) ಮತ್ತು ಜಯಕರ (32) ಸಹೋದರರು ತಮ್ಮ ಅಕ್ಕನ ಮಗ ಅವಿನಾಶ (30) ಎಂಬವರೊಂದಿಗೆ ಎಂದಿನಂತೆ ಬುಧವಾರ ಬೆಳಿಗ್ಗೆ 8 ಗಂಟೆಗೆ ತಮ್ಮ ಸಣ್ಣ ಮರದ ದೋಣಿಯಲ್ಲಿ ಅಳಿವೆಗೆ ಮೀನು ಹಿಡಿಯಲು ಹೋಗಿದ್ದರು. ದೋಣಿಯಲ್ಲಿ ಕುಳಿತು ಬಲೆ ಬೀಸಿ ಮೀನು ಹಿಡಿಯುತ್ತಿದ್ದಾಗ 10 ಗಂಟೆ ಸುಮಾರಿಗೆ ಭಾರಿ ಗಾಳಿಗೆ ದೋಣಿ ನಿಯಂತ್ರಣ ತಪ್ಪಿ ಮಗುಚಿಬಿತ್ತು. ಪರಿಣಾಮ ಮೂರೂ ಮಂದಿ ಮೀನುಗಾರರು ನದಿಗೆ ಬಿದ್ದರು. ನದಿಯಲ್ಲಿ ಮಳೆಯ ನೀರು ತುಂಬಿ ವೇಗವಾಗಿ ಸಮುದ್ರದ ಕಡೆಗೆ ಉಕ್ಕಿ ಹರಿಯುತ್ತಿತ್ತು. ಇದರಿಂದ ನೀರಿಗೆ ಬಿದ್ದ ಮೀನುಗಾರರಿಗೆ ದೋಣಿಯನ್ನು ಏರುವುದಕ್ಕೆ ಸಾಧ್ಯವಾಗಲಿಲ್ಲ.
ಈ ಘಟನೆಯನ್ನು ನೋಡಿದ ಸಮೀಪದಲ್ಲಿಯೇ ದೋಣಿಯಲ್ಲಿ ಕುಳಿತು ಮೀನು ಹಿಡಿಯುತ್ತಿದ್ದ ಮೃತರ ಮಾವ ಗೋಪಾಲ ಸುವರ್ಣ ಮತ್ತು ಅವರ ಪತ್ನಿ ದೋಣಿಯಲ್ಲಿ ಧಾವಿಸಿ ಬಂದರು. ಆದರೆ ಅದಾಗಲೇ ಸುರೇಶ ಮತ್ತು ಜಯಕರ ನೀರುಪಾಲಾಗಿದ್ದರು. ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದ ಅವಿನಾಶ್ ಅವರನ್ನು ಗೋಪಾಲ ಅವರು ಬಹಳ ಕಷ್ಟಪಟ್ಟು ತಮ್ಮ ದೋಣಿಗೆ ಎಳೆದುಕೊಂಡು ಬದುಕಿಸಿದರು.
ಶೋಧ ಕಾರ್ಯ ಮುಂದುವರಿಕೆ: ಘಟನೆ ಬಗ್ಗೆ ಮಾಹಿತಿ ತಿಳಿದ ತಕ್ಷಣ ಇತರ ಮೀನುಗಾರರು ಬಂದು ನೀರುಪಾಲಾದ ಸುರೇಶ ಮತ್ತು ಜಯಕರ ಅವರಿಗಾಗಿ ಹುಡುಕಾಡಿದರೂ ತುಂಬಿ ಹರಿಯುತ್ತಿದ್ದ 2 ನದಿಗಳ ನೀರಿನಲ್ಲಿ ಅವರನ್ನು ಪತ್ತೆ ಮಾಡಲಾಗಲಿಲ್ಲ. ಅಗ್ನಿ ಶಾಮಕದಳ, ಪೊಲೀಸರು ಸ್ಥಳಕ್ಕಾಗಮಿಸಿ ಶೋಧ ಮುಂದುವರಿಸಿದ್ದಾರೆ. ಸಂಜೆಯವರೆಗೂ ಅವರಿಬ್ಬರ ಶವಗಳು ಪತ್ತೆಯಾಗಿಲ್ಲ.
ಕಳಚಿದ ಆಧಾರಸ್ತಂಭ: ಮೃತ ಸಹೋದರರು ರಾಮಪ್ಪ ಅಮೀನ್ ಮತ್ತು ರಾಧು ಸುವರ್ಣ ದಂಪತಿ ಮಕ್ಕಳು. ಮೀನುಗಾರಿಕೆಯಿಂದಲೇ ಅವರ ಈ ಕುಟುಂಬದ ಜೀವನ ಸಾಗುತ್ತಿತ್ತು. ಮೃತರಾದ ಜಯಕರ ಅವಿವಾಹಿತರಾಗಿದ್ದರೆ, ಸುರೇಶ ಅವರಿಗೆ 2 ವರ್ಷಗಳ ಹಿಂದೆ ಮದುವೆಯಾಗಿದ್ದು, 8 ತಿಂಗಳ ಗಂಡು ಮಗುವಿದೆ. ಈಗ ಈ ಕುಟುಂಬ ದುಡಿಯುವವರಿಲ್ಲದೆ ಅನಾಥವಾಗಿದೆ.
ಬ್ರಹ್ಮಾವರದ ವಿಶೇಷ ತಹಸೀಲ್ದಾರ್ ತಿಪ್ಪೇಸ್ವಾಮಿ ಸ್ಥಳಕ್ಕಾಗಮಿಸಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಪ್ರಕೃತಿ ವಿಕೋಪ ನಿಧಿಯಲ್ಲಿ ಪರಿಹಾರ ನೀಡುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡುವುದಾಗಿ ಭರವಸೆ ನೀಡಿದರು.
ಕೆರೆಯಲ್ಲಿ ಮುಳುಗಿ ವೃದ್ಧ ಸಾವು: ಬುಧವಾರ ಮಧ್ಯಾಹ್ನ 5 ಗಂಟೆಗೆ ಕೋಟತಟ್ಟು ಎಂಬಲ್ಲಿ ನಡೆದ ಇನ್ನೊಂದು ಘಟನೆಯಲ್ಲಿ ಶವಸಂಸ್ಕಾರದ ಮೈಲಿಗೆ ಕಳೆಯಲು ಸ್ನಾನಕ್ಕೆಂದು ಕೆರೆಗೆ ಇಳಿದಿದ್ದ ವೃದ್ಧರೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮೃತರು ಶಂಕರ ಪೂಜಾರಿ (80).
ಅವರ ಅಕ್ಕ ಸೋಮಕ್ಕ ನಿಧನರಾಗಿದ್ದು, ಅಂತ್ಯಸಂಸ್ಕಾರದ ನಂತರ ಶಂಕರ ಪೂಜಾರಿ ಮತ್ತು ಇತರರು ಸಮೀಪದ ಅಂಬಾಗಿಲುಕೆರೆಗೆ ಇಳಿದು ಸ್ನಾನ ಮಾಡುತ್ತಿದ್ದರು. ಆವರಣ ಗೋಡೆಗಳಿಲ್ಲದ, ಸ್ನಾನಘಟ್ಟ- ಮೆಟ್ಟಿಲುಗಳಿಲ್ಲದ ತೆರೆದ ಬಯಲಿನಲ್ಲಿರುವ ವಿಶಾಲವಾದ ಈ ಕೆರೆಯಲ್ಲಿ ಮಳೆ ನೀರು ತುಂಬಿ ತುಳುಕುತ್ತಿತ್ತು. ನೀರಿಗೆ ಇಳಿದ ಶಂಕರ ಪೂಜಾರಿ ಆಕಸ್ಮಿಕವಾಗಿ ಕೆಸರಿನಲ್ಲಿ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ. ತಕ್ಷಣ ಇತರರು ಅವರ ಸಹಾಯಕ್ಕೆ ಧಾವಿಸಿದರಾದರೂ ನೀರಿನ ಪ್ರಮಾಣ ಹೆಚ್ಚಿದ್ದರಿಂದ ಅವರು ಅಸಹಾಯಕರಾಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

