ಸುಳ್ಯದಲ್ಲಿ ಭಾರಿ ಗಾಳಿ, ಮಳೆ ಹಲವೆಡೆ ಮನೆಗಳಿಗೆ ಹಾನಿ
ಸುಳ್ಯ: ಕಳೆದ ಎರಡು ದಿನಗಳಿಂದ ಸುಳ್ಯ ಪರಿಸರದಲ್ಲಿ ನಿರಂತರ ಮಳೆಯಾಗುತ್ತಿದ್ದು, ಬುಧವಾರ ಸಂಜೆ ಸುರಿದ ಹಠಾತ್ ಗಾಳಿ, ಮಳೆಗೆ ನಗರದಲ್ಲಿ ಭಾರಿ ಹಾನಿ ಸಂಭವಿಸಿದೆ.
ಬೋರುಗುಡ್ಡೆ ವ್ಯಾಪ್ತಿಯ ಅಬ್ದುಲ್ ರೆಹಮಾನ್ ಎಂಬವರ ಮನೆ ಮೇಲೆ ಭಾರಿ ಗಾತ್ರದ ಮರ ಉರುಳಿ ಮೇಲ್ಛಾವಣಿ ಸಂಪೂರ್ಣ ಕುಸಿದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ರು. 2 ಲಕ್ಷಕ್ಕೂ ಅಧಿಕ ನಷ್ಟವಾಗಿದ್ದು, ಸ್ಥಳೀಯರ ಸಹಕಾರದಿಂದ ಮರ ತೆರವುಗೊಳಿಸಲಾಯಿತು.
ಇದೇ ಪರಿಸರದ ಸರೋಜಿನಿ ಎಂಬವರ ಮನೆ ಛಾವಣಿ ಗಾಳಿಗೆ ಸಂಪೂರ್ಣ ಹಾರಿ ಹೋಗಿದೆ. ಅಬ್ದುಲ್ ಲತೀಫ್, ದಾಮೋದರ ಮಣಿಯಾಣಿ, ಲತೀಫ್ ಮತ್ತು ಜೈನಾಬಿ ಮಡಿಕೆ ಮೊದಲಾದವರ ಮನೆಯ ಹೆಂಚು, ಶೀಟ್, ಛಾವಣಿ ಮತ್ತು ಗೋಡೆಗೆ ಭಾಗಶಃ ಹಾನಿಯಾಗಿದೆ. ಬೋರುಗುಡ್ಡೆಯಲ್ಲಿರುವ ಪರಿಶಿಷ್ಟ ಜಾತಿ ಸ್ಮಶಾನ ಮತ್ತು ಅನ್ಸಾರಿಯ ಅನಾಥಾಲಯದ ಕಟ್ಟಡದ ಶೀಟ್ಗೆ ಹಾನಿಯಾಗಿದೆ.
ತಹಸೀಲ್ದಾರ್ ಭೇಟಿ: ಹಾನಿಗೊಳಗಾದ ಪ್ರದೇಶಕ್ಕೆ ಸುಳ್ಯ ತಾಲೂಕು ತಹಸೀಲ್ದಾರ್ ಶ್ರೀನಿವಾಸ್ ಶೆಟ್ಟಿ, ಸುಳ್ಯ ನಗರ ಪಂಚಾಯಿತಿ ಅಧ್ಯಕ್ಷ ಎನ್.ಎ. ರಾಮಚಂದ್ರ, ಸದಸ್ಯರಾದ ಕೆ.ಎಂ. ಮುಸ್ತಫ, ಪ್ರೇಮ ಟೀಚರ್, ಗಿರೀಶ್ ಭೇಟಿ ನೀಡಿದರು. ಕಂದಾಯ ನಿರೀಕ್ಷಕ ಮುರಳೀಧರ್, ಗ್ರಾಮ ಲೆಕ್ಕಿಗ ಚಂದ್ರಕಾಂತ್ ನಷ್ಟದ ಮೌಲ್ಯಮಾಪನ ನಡೆಸಿದರು. ಮಲೆನಾಡು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರಿಯಾಜ್ ಕಟ್ಟೆಕಾರ್, ಅಬ್ಬಾಸ್ ಹಾಜಿ ಕಟ್ಟೆಕಾರ್ಸ್, ತಿಮ್ಮಪ್ಪ ನಾವೂರು, ಅನ್ಸಾರ್ ಅಧ್ಯಕ್ಷ ಮಹಮ್ಮದ್ ಬುಶ್ರ ಇದ್ದರು.
ಪರಿಹಾರ ಮೊತ್ತ ಹೆಚ್ಚಿಸಲು ಮನವಿ: ಪ್ರಾಕೃತಿಕ ವಿಕೋಪದಿಂದ ಹಾನಿಯಾದ ಮನೆಗಳಿಗೆ ಕಂದಾಯ ಇಲಾಖೆಯಿಂದ ನೀಡುವ ಪರಿಹಾರ ಮೊತ್ತ ತೀರ ಅತ್ಯಲ್ಪವಾಗಿದೆ. ಇಂದಿನ ವೆಚ್ಚಕ್ಕೆ ಅನುಗುಣವಾಗಿ ಅದರ ಪರಿಷ್ಕರಣೆ ಆಗಬೇಕಾಗಿದೆ ಎಂದು ಸ್ಥಳದಲ್ಲಿ ಹಾಜರಿದ್ದ ನಗರ ಪಂಚಾಯಿತಿ ಸದಸ್ಯ ಕೆ.ಎಂ. ಮುಸ್ತಫ ಒತ್ತಾಯಿಸಿದರು.
ಶೀಘ್ರ ಪರಿಹಾರ ವಿತರಣೆಗೆ ಸೂಚನೆ: ಸುಳ್ಯದಲ್ಲಿ ನಿರಂತರವಾಗಿ ಸುರಿದ ಮಳೆ ಮತ್ತು ಬೀಸಿದ ಗಾಳಿಯಿಂದಾಗಿ ಮನೆಗಳಿಗೆ ತೀವ್ರ ಹಾನಿಯಾಗಿರುವುದನ್ನು ತಿಳಿದ ತಕ್ಷಣ ಕಾರ್ಯ ಪ್ರವೃತ್ತರಾದ ಸುಳ್ಯ ತಹಸೀಲ್ದಾರ್ ಶ್ರೀನಿವಾಸ ಶೆಟ್ಟಿ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಮೌಲ್ಯಮಾಪನ ನಡೆಸಿ ಶೀಘ್ರ ಪರಿಹರ ವಿತರಣೆಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಅಪಾಯಕಾರಿ ಮರಗಳನ್ನು ತೆರವುಗೊಳಿಸಲು ಮತ್ತು ಹಾನಿಗೊಂಡ ಮನೆಗಳ ಸಂಭಾವ್ಯ ವಿದ್ಯುತ್ ಅವಘಡಗಳ ಬಗ್ಗೆ ಪರಿಶೀಲಿಸಲು ವಿದ್ಯುತ್ ಇಲಾಖೆಗೆ ಸೂಚನೆ ನೀಡುವುದಾಗಿ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

