ಪ್ರತಿ ತಿಂಗಳೂ ದಾಖಲೆ ಸಲ್ಲಿಕೆ ಕಡ್ಡಾಯ!
ಆತ್ಮಭೂಷಣ್
ಮಂಗಳೂರು: ರೈಲ್ವೆ ಪ್ರಯಾಣದ ಸೀಸನ್ ಪಾಸ್ ನವೀಕರಿಸಬೇಕಾದರೆ ಪ್ರತಿ ತಿಂಗಳು ಡಿಕ್ಲರೇಷನ್ ಫಾರ್ಮ್ಕಡ್ಡಾಯ ಸಲ್ಲಿಸಬೇಕು!
ರೈಲ್ವೆ ಇಲಾಖೆ ಹೀಗೊಂದು ಎಡಬಿಡಂಗಿ ನಿಯಮವನ್ನು ಜಾರಿಗೆ ತಂದಿದೆ. ಕೇಂದ್ರದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ರೈಲ್ವೆ ಇಲಾಖೆ ದಿಢೀರನೆ ಈ ನಿಯಮ ಜಾರಿಗೆ ತಂದಿತ್ತು.
ರೈಲ್ವೆಯಲ್ಲಿ ಪ್ರಯಾಣಿಕರಿಗೆ ಮಾತ್ರ ಮಾಸಿಕದಿಂದ ಒಂದು ವರ್ಷ ವರೆಗೆ ಸೀಸನ್ ಪಾಸ್ ಸೌಲಭ್ಯ ಇದೆ. ವಿದ್ಯಾರ್ಥಿಗಳು ಮಾತ್ರ ಪ್ರತಿ ತಿಂಗಳು ಪಾಸ್ ನವೀಕರಿಸಬೇಕು. ಇದು ವಿದ್ಯಾರ್ಥಿಗಳಿಗೆ ಮಾತ್ರವಲ್ಲ ರೈಲ್ವೆ ಸಿಬ್ಬಂದಿಗೂ ಅನಗತ್ಯ ಕೆಲಸದ ಹೊರೆ.
ಪ್ರತಿ ತಿಂಗಳು ದಾಖಲೆ ಸಲ್ಲಿಸಬೇಕು!: ಹೊಸದಾಗಿ ರೈಲ್ವೆ ಸೀಸನ್ ಪಾಸ್ ಪಡೆಯುವಾಗ ಸರಿ. ಇದು ನವೀಕರಿಸಬೇಕಾದರೂ ಪ್ರತಿ ತಿಂಗಳು ಡಿಕ್ಲರೇಷನ್ ಫಾರ್ಮ್ ಕಡ್ಡಾಯ ಸಲ್ಲಿಸಬೇಕು. ಇದು ಪ್ರಯಾಣಿಕರಿಗೆ ಮಾತ್ರವಲ್ಲ ವಿದ್ಯಾರ್ಥಿಗಳಿಗೂ ಅನ್ವಯ.
ಕೌಂಟರ್ ಸಿಬ್ಬಂದಿ ಪ್ರತಿ ಸಲ ಕಾಗದದ ದಾಖಲೆ ಪತ್ರ ಪಡೆದುಕೊಳ್ಳುತ್ತಾರೆ. ಮುಂದಿನ ತಿಂಗಳಿಗೆ ಅದರ ಉಪಯೋಗ ಇರುವುದಿಲ್ಲ, ಹಾಗಾಗಿ ಅದನ್ನು ಮೂಲೆಗೆ ತಳ್ಳುತ್ತಾರೆ. ಪ್ರತಿ ತಿಂಗಳೂ ಅನಗತ್ಯವಾಗಿ ಹೊಸ ದಾಖಲೆ ಪತ್ರ ಪಡೆಯುವುದು, ಹಳತನ್ನು ಬಿಸಾಡುವುದು ನಡೆಯುತ್ತಲೇ ಇದೆ.
ಡಿಕ್ಲರೇಷನ್ ಫಾರ್ಮ್ ಜತೆಗೆ ವಿದ್ಯಾರ್ಥಿಗಳು ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್ ಪ್ರತಿ ಪಡಿತರ ಚೀಟಿ ಪ್ರತಿಯಲ್ಲಿ ಯಾವುದಾದರೂ ಒಂದು ಹಾಗೂ ಶಾಲಾ ಗುರುತಿನ ಚೀಟಿ ಪ್ರತಿಯನ್ನು ದಾಖಲೆ ಪತ್ರವಾಗಿ ಸಲ್ಲಿಸಬೇಕು.
'ಶಾಲೆಯಲ್ಲಿ ಅರ್ಜಿ ಶುಲ್ಕ ಎಂದು ರು. 3 ನೀಡುತ್ತೇವೆ. ರೈಲ್ವೆ ನಿಲ್ದಾಣದ ಟಿಕೆಟ್ ಕೌಂಟರ್ನಲ್ಲಿ ಜನಸಂದಣಿ ಇದ್ದರೆ ಕಾಯಬೇಕು. ಹೆಚ್ಚಿನ ಸಂದರ್ಭದಲ್ಲಿ ಕ್ಲಾಸ್ ಬಂಕ್ ಮಾಡಿ ಸರದಿಯಲ್ಲಿ ನಿಲ್ಲಬೇಕು. ಪ್ರತಿ ತಿಂಗಳೂ ಈ ಬವಣೆ ತಪ್ಪುತ್ತಿಲ್ಲ. ಈಗ ಪ್ರತಿ ಬಾರಿ ಡಿಕ್ಲರೇಷನ್ ಫಾರ್ಮ್ ಕೇಳುವುದರಿಂದ ಪಾಸ್ ಮಾಡುವುದೇ ದುಸ್ತರವಾಗಿದೆ' ಎನ್ನುತ್ತಾರೆ ಪಾಂಡೇಶ್ವರ ಹೈಸ್ಕೂಲ್ನ 9ನೇ ತರಗತಿ ವಿದ್ಯಾರ್ಥಿ ಅನೂಪ್.
ಅವಧಿ ವಿಸ್ತರಿಸಬೇಕು: 'ನಮಗೂ ಪ್ರತಿ ತಿಂಗಳು ದಾಖಲೆ ಸಂಗ್ರಹಿಸಿ ಮತ್ತೆ ಬಿಸಾಡುವುದು ವೃಥಾ ಕೆಲಸ. ಇದರ ಬದಲು ವಿದ್ಯಾರ್ಥಿಗಳ ಪಾಸ್ ನವೀಕರಣಕ್ಕೆ ಡಿಕ್ಲರೇಷನ್ ಫಾರ್ಮ್ಗೆ ಶಾಲಾ ಮುಖ್ಯಸ್ಥರು ಸಹಿ ಮಾಡಿ ದೃಢೀಕರಿಸುವಂತಾಗಬೇಕು. ಆರಂಭದಲ್ಲಿ ದಾಖಲೆ ಸಲ್ಲಿಸಿದ ಬಳಿಕ ಪ್ರತಿ ಸಲವೂ ದಾಖಲೆ ಕೇಳುವುದು ಅನಗತ್ಯ. ಅಲ್ಲದೆ ವಿದ್ಯಾರ್ಥಿ ಪಾಸ್ನ್ನು ಆರು ತಿಂಗಳು ಅಥವಾ ಒಂದು ವರ್ಷ ಅವಧಿಗೆ ವಿಸ್ತರಿಸಿದರೆ ಅನುಕೂಲ' ಎನ್ನುವುದು ರೈಲ್ವೆ ಅಧಿಕಾರಿಗಳ ಅಭಿಮತ.
ಉಚಿತ ಅರ್ಜಿಗೆ ಶುಲ್ಕ ವಸೂಲಿ!: ಫಾಲ್ಘಾಟ್ ವಿಭಾಗದಿಂದ ಡಿಕ್ಲರೇಷನ್ ಫಾರ್ಮ್ನ್ನು ರೈಲ್ವೆ ಇಲಾಖೆ ಬೇಡಿಕೆ ಇರುವ ಶಾಲೆಗಳಿಗೆ ಉಚಿತ ಪೂರೈಸುತ್ತಿದೆ. ಶಾಲೆಗಳು ಪ್ರತಿ ವಿದ್ಯಾರ್ಥಿಯಿಂದ ರು. 3 ಶುಲ್ಕ ಎಂದು ತೆಗೆದುಕೊಳ್ಳುತ್ತಿರುವ ಮಾಹಿತಿ ಬಂದಿದೆ. ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಕಾಸರಗೋಡಿಗೆ ದಿನಂಪ್ರತಿ ಎರಡೂವರೆ ಸಾವಿರ ವಿದ್ಯಾರ್ಥಿಗಳು, ಅಷ್ಟೇ ಪ್ರಮಾಣದಲ್ಲಿ ಇತರೆ ಪ್ರಯಾಣಿಕರು ಸೀಸನ್ ಪಾಸ್ ಪಡೆದು ಪ್ರಯಾಣಿಸುತ್ತಿದ್ದಾರೆ. ವಿದ್ಯಾರ್ಥಿನಿಯರಿಗೆ ಪದವಿ ವರೆಗೆ, ವಿದ್ಯಾರ್ಥಿಗಳಿಗೆ ಪಿಯುಸಿ ವರೆಗೆ 152 ಕಿ.ಮೀ. ವ್ಯಾಪ್ತಿಯಲ್ಲಿ ಪ್ಯಾಸೆಂಜರ್ ರೈಲಿನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶವಿದೆ' ಎನ್ನುತ್ತಾರೆ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದ ಸಿಬ್ಬಂದಿ.
ರೈಲ್ವೆ ಸೀಸನ್ ಟಿಕೆಟ್ ನವೀಕರಣಕ್ಕೆ ಪ್ರತಿ ತಿಂಗಳು ಡಿಕ್ಲರೇಷನ್ ಫಾರ್ಮ್ ಪಡೆಯುತ್ತಿರುವುದು ತನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಿ ವಿದ್ಯಾರ್ಥಿ ಸೀಸನ್ ಪಾಸ್ ಅವಧಿ ವಿಸ್ತರಣೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆ.
ಡಿ.ವಿ.ಸದಾನಂದ ಗೌಡ, ರೈಲ್ವೆ ಸಚಿವ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

