ಉಜಿರೆ: 50 ಮೀ. ಈಜುಕೊಳ ನಿರ್ಮಾಣ
ರು. 2.50 ಕೋಟಿ ವೆಚ್ಚ, ಅತ್ಯಾಧುನಿಕ ತಂತ್ರಜ್ಞಾನ, 6 ತಿಂಗಳಲ್ಲಿ ಲೋಕಾರ್ಪಣೆ
ಬೆಳ್ತಂಗಡಿ: ತಾಲೂಕಿನ ಶೈಕ್ಷಣಿಕ ನಗರಿ ಎಂದು ಗುರುತಿಸಲ್ಪಟ್ಟಿರುವ ಉಜಿರೆಯಲ್ಲಿ ಪ್ರಥಮ ಬಾರಿಗೆ ರು. 2.50 ಕೋಟಿ ವೆಚ್ಚದಲ್ಲಿ 50 ಮೀ. ಉದ್ದದ ಈಜುಕೊಳ ನಿರ್ಮಾಣವಾಗುತ್ತಿದೆ. ಈ ಕಾಯಕಕ್ಕೆ ಎಸ್ಡಿಎಂ ಶಿಕ್ಷಣ ಸಂಸ್ಥೆ ಮುಂದಾಗಿದೆ.
ಕೆ.ಜಿ.ಯಿಂದ ಪ್ರಾರಂಭಗೊಂಡು ಪಿ.ಜಿ.ವರೆಗೆ ಎಸ್ಡಿಎಂ ಶಿಕ್ಷಣ ಮಹಾ ವಿದ್ಯಾಲಯ ಸಮೂಹದಲ್ಲಿ ಸುಮಾರು 10 ಸಾವಿರದಷ್ಟು ವಿದ್ಯಾರ್ಥಿಗಳಿದ್ದಾರೆ. ಕ್ರೀಡೆ ಮತ್ತು ಇತರ ವಿಭಾಗಗಳ ಆಸಕ್ತ ವಿದ್ಯಾರ್ಥಿಗಳ ದೈಹಿಕ ಕ್ಷಮತೆ ಮತ್ತು ದೃಢತೆ ಅಧಿಕಗೊಳಿಸಲು, ಈಜು ಸ್ಪರ್ಧಾರ್ಥಿಗಳಿಗೆ ತರಬೇತಿ ನೀಡಲು ಹಾಗೂ ದೇಹ ಸೌಂದರ್ಯ ವೃದ್ಧಿಗೆ ಪೂಕರವಾಗಿ ಈ ಈಜುಕೊಳ ನಿರ್ಮಾಣವಾಗುತ್ತಿದೆ.
ಕೇಂದ್ರ ಸರ್ಕಾರ ಪ್ರಾಯೋಜಿತ ಯುಜಿಸಿ ಮಾನ್ಯತಾ ಕಾಲೇಜುಗಳಿಗೆ ದೊರೆಯಬಹುದಾದ ಸುಮಾರು ರು. 98 ಲಕ್ಷ ಅನುದಾನ ಸೇರಿ ಸುಮಾರು ರು. 2.50 ಕೋಟಿ ವೆಚ್ಚದಲ್ಲಿ ಈ ಕಾಮಗಾರಿ ನಡೆಯುತ್ತಿದ್ದು, ಈಜು ಕೆರೆಯ ಹೊಂಡದ ನಿರ್ಮಾಣ ಪೂರ್ತಿಯಾಗಿದೆ. ಉಳಿಕೆ ಮೊತ್ತವನ್ನು ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಮೂಲಕ ಒದಗಿಸಲಿದೆ. ಧರ್ಮಸ್ಥಳದ ಡಿಎಂಸಿ ನಿರ್ಮಾಣ ಸಂಸ್ಥೆ ಇದರ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದೆ. ವಿಶೇಷ ಪರಿಣತಿ ಹೊಂದಿರುವ ಬೆಂಗಳೂರಿನ ಬೋಪಣ್ಣ ವರ್ಲ್ಪೂಲ್ ಸಂಸ್ಥೆ ಇ ಟೆಂಡರ್ ಮೂಲಕ ಕಾಮಗಾರಿ ವಹಿಸಿಕೊಂಡಿದೆ.
ಏನೆಲ್ಲ ಇರಲಿದೆ: ಜಿಲ್ಲೆಯಲ್ಲೇ ಮೊಟ್ಟಮೊದಲ 50 ಮೀ. ಉದ್ದದ ಈಜುಕೊಳವಿದು. 2.5 ಮೀಟರ್ ಅಗಲದ 10 ಟ್ಯಾಕ್ಗಳು. ಇದರಲ್ಲಿ 8 ಟ್ರ್ಯಾಕ್ಗಳು ಪಂದ್ಯಾಟಕ್ಕೆ, ಇನ್ನೆರಡು ಟ್ರ್ಯಾಕ್ಗಳು ಪಂದ್ಯಪೂರ್ವಾಭ್ಯಾಸಕ್ಕೆ. ಟ್ರ್ಯಾಕ್ ಪ್ರಾರಂಭದ 50 ಅಡಿಯ ಮೊದಲ ಹಂತದಲ್ಲಿ 4ರಿಂದ 5 ಅಡಿ ಆಳ, ಅದಕ್ಕಿಂತ ಮುಂದಕ್ಕೆ ಕೊನೆಯವರೆಗೆ 6 ಅಡಿ ಆಳ. ಕೆರೆಯ ನೀರಿನ ಒಳಗಡೆ ರಾತ್ರಿ ವೇಳೆಯೂ ಬಳಕೆಯಾಗುವಂತೆ ಅತ್ಯಾಧುನಿಕ ವಿದ್ಯುದೀಪಗಳ ವ್ಯವಸ್ಥೆ, ಆವರಣದಲ್ಲಿ ವಿಶಾಲವಾದ ವಾಹನ ನಿಲುಗಡೆ, ಪರಿಸರ ಸೌಂದರ್ಯಕ್ಕೆ ಹಸಿರು ಹುಲ್ಲು ಹೊದಿಕೆ, ವಸ್ತ್ರ ಬದಲಾವಣೆ ಕೋಣೆಗಳು, ತಾಂತ್ರಿಕ ಅಧಿಕಾರಿಗಳ ಕೊಠಡಿ. 7-8ರಷ್ಟು ಸಿಬ್ಬಂದಿ ವಸತಿ ನಿಲಯಗಳು, ಜೀವರಕ್ಷಕ ಉಪಕರಣಗಳು, ಜೀವರಕ್ಷಕರ ಕೊಠಡಿ, ಸುಮಾರು ರು. 22 ಲಕ್ಷ ವೆಚ್ಚದಲ್ಲಿ ಅತ್ಯಾಧುನಿಕ ನೀರು ಶುದ್ಧೀಕರಣ ಮತ್ತು ಮರುಪೂರಣ ಘಟಕ. ಈಜುಕೊಳಕ್ಕೆ ಇಳಿಯುವ ಮೊದಲು ಸ್ನಾನ ಮಾಡಲು ವ್ಯವಸ್ಥೆ.. ಇವೆಲ್ಲವೂ ನಿರ್ಮಾಣವಾಗಲಿದೆ. ಮುಂದಿನ 6 ತಿಂಗಳಲ್ಲಿ ಲೋಕಾರ್ಪಣೆಯಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

