ಕಡಲುಕೊರೆತ; ಎರಡು ಮನೆ ಆಪೋಶನ
ಮಂಗಳೂರು: ನಗರದಲ್ಲಿ ಗುರುವಾರ ಮಧ್ಯಾಹ್ನ ನಂತರ ಧಾರಾಕಾರ ಮಳೆ ಸುರಿದಿದೆ. ಸಂಜೆ ವೇಳೆ ಗಾಳಿ, ಮಳೆ, ಸಿಡಿಲು ಕಾಣಿಸಿದ್ದು, ತಗ್ಗು ಪ್ರದೇಶದಲ್ಲಿ ಕೃತಕ ನೆರೆ ಸೃಷ್ಟಿಯಾಗಿತ್ತು.
ಕೊಟ್ಟಾರ ಚೌಕಿಯಲ್ಲಿ ಸುರತ್ಕಲ್ ಕಡೆ ತೆರಳುವ ಸರ್ವಿಸ್ ರಸ್ತೆಯ ಎರಡು ಕಡೆಯಲ್ಲಿ ದೊಡ್ಡ ಗುಂಡಿಯಾಗಿದ್ದು, ಮಳೆ ನೀರು ತುಂಬಿಕೊಂಡು ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಮಲ್ಲಿಕಟ್ಟೆ ಗ್ರಂಥಾಲಯ ಆವರಣಲ್ಲಿ ಮರವೊಂದು ರಸ್ತೆ ಉರುಳಿ ಬಿದ್ದಿದ್ದು, ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ. ವೆಲೆನ್ಸಿಯಾ ಜೋಸೆಫ್ ನಗರದಲ್ಲಿ ಮನೆಯೊಂದರ ಕಾಂಪೌಡ್ ಗೋಡೆ ಹಾಗೂ ಪಚ್ಚನಾಡಿ ಬಳಿ ಮನೆಯೊಂದರ ಕಾಂಪೌಂಡ್ ಆವರಣ ಮಳೆ ನೀರಿನ ರಭಸಕ್ಕೆ ಕುಸಿದು ಬಿದ್ದಿದೆ.
ಹೆಚ್ಚಾದ ಕಡಲ್ಕೊರೆತ: ಉಳ್ಳಾಲ ವ್ಯಾಪ್ತಿಯ ಮುಕ್ಕಚೇರಿ, ಹಿಲಾರಿ ನಗರ, ಕೈಕೊ, ಮೊಗವೀರಪಟ್ಣ, ಸೋಮೇಶ್ವರ, ಸಮ್ಮರ್ ಸ್ಯಾಂಡ್ನಲ್ಲಿ ಕಡಲಿನ ಅಬ್ಬರ ಹೆಚ್ಚಾಗಿದೆ.
ಮುಕ್ಕಚೇರಿ, ಹಿಲಾರಿ ನಗರದಲ್ಲಿ ಗುರುವಾರ ಸುರಿದ ಮಳೆಗೆ ಕಡಲಿನ ಅಬ್ಬರ ಹೆಚ್ಚಾಗಿದ್ದು, ಕೆಲವು ಮನೆಗಳಿಗೆ ನೀರು ನುಗ್ಗಿದೆ. ಈ ಮನೆಗಳಿಗೆ ತಹಸೀಲ್ದಾರ್ ಭೇಟಿ ನೀಡಿದ್ದು, ಜನರನ್ನು ಸ್ಥಳಾಂತರಗೊಳ್ಳುವಂತೆ ಆದೇಶಿಸಲಾಗಿದೆ. ಮಾಸ್ತಿಕಟ್ಟೆ ಬಿಎಂ ಶಾಲೆ ಮತ್ತು ಒಂಭತ್ತು ಕೆರೆಯ ಸರ್ಕಾರಿ ಶಾಲೆಯಲ್ಲಿ ವ್ಯವಸ್ಥೆ ಕಲ್ಪಿಸಲಾಗಿದ್ದು, ವಿಕೋಪ ಸಂಭವಿಸಿದ್ದಲ್ಲಿ ಜನರನ್ನು ಶಾಲೆಗಳಲ್ಲಿ ಉಳಿಯಲು ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಮುಕ್ಕಚ್ಚೇರಿ ಗ್ರಾಮ ಲೆಕ್ಕಿಗ ಪೂರ್ಣಚಂದ್ರ ಹೇಳಿದ್ದಾರೆ. ಉಳ್ಳಾಲದ ಕೈಕೊ, ಹಿಲಾರಿ ನಗರ, ಮೊಗವೀರಪಟ್ಣದಲ್ಲಿ ಕಡಲ್ಕೋರೆತ ಸಂಭವಿಸದಂತೆ ಕಲ್ಲು ಹಾಕಿ ಭದ್ರತೆ ಒದಗಿಸಲಾಗಿದೆ. ಜನರನ್ನು ಸುರಕ್ಷಿತ ಪ್ರದೇಶ, ಸಂಬಂಧಿಕರ ಮನೆಯಲ್ಲಿ ತಂಗುವಂತೆ ಜನರಿಗೆ ಪಂಚಾಯ್ತಿ ಅಧಿಕಾರಿಗಳು ಸೂಚಿಸಿದ್ದಾರೆ.
ಎರಡು ಮನೆ ಸಮುದ್ರಪಾಲು: ಸೋಮೇಶ್ವರ ಉಚ್ಚಿಲದ ಶುಭಕರ್ ಭಂಡಾರಿ ಎಂಬವರ ಮನೆ ಸಮುದ್ರದ ಕೊರೆತಕ್ಕೆ ತೀವ್ರ ಹಾನಿಗೊಳಗಾಗಿದ್ದು, ಹಲವು ತೆಂಗಿನ ಮರಗಳು ನೀರು ಪಾಲಾಗಿವೆ. ಸೋಮೇಶ್ವರ ಗ್ರಾ.ಪಂ. ಸದಸ್ಯರೊಬ್ಬರ ಮನೆ ಗುರುವಾರ ಸಮುದ್ರ ಪಾಲಾಗಿದೆ. ಕೊರೆತ ಹೆಚ್ಚಾಗಿದ್ದು, ಸಮ್ಮರ್ ಸ್ಯಾಂಡ್ ಬಳಿ ಹೆಚ್ಚು ಹಾನಿಯಾಗಿದೆ.
ತೊಟ್ಟಂ, ಉದ್ಯಾವರ
ಗ್ರಾಮದ ಕನಕೋಡದಲ್ಲಿ
ಸಮುದ್ರ ಕೊರೆತ ತೀವ್ರ
ಪಡುಬಿದ್ರಿ: ಈ ಬಾರಿ ಮುಂಗಾರು ಮಳೆಯ ಆರಂಭದಲ್ಲಿಯೇ ಕಡಲು ಕೊರೆತ ತೀವ್ರ ರೂಪದಲ್ಲಿ ಆರಂಭವಾಗಿದೆ. ಪ್ರತಿವರ್ಷವೂ ಕೊರೆತಕ್ಕೊಳಗಾಗುವ ಇಲ್ಲಿನ ಕಾಪು ಪಡು ಗ್ರಾಮದ ತೊಟ್ಟಂ ಮತ್ತು ಉದ್ಯಾವರ ಗ್ರಾಮದ ಕನಕೋಡ ಸಮುದ್ರ ತೀರದಲ್ಲಿ ಈ ಬಾರಿ ಭಾರಿ ಬೇಗ ಕೊರೆತ ಆರಂಭಗೊಂಡಿದ್ದು, ಇಲ್ಲಿನ ತೀರದ ಹತ್ತಾರು ಕುಟುಂಬಗಳು ಆತಂಕಕ್ಕೊಳಗಾಗಿವೆ.
ತೊಟ್ಟಂನ ನಾರಾಯಣ, ಸೂರಪ್ಪ ಕೋಟ್ಯಾನ್, ಸಂಜೀವ, ಜಯ ಪೂಜಾರಿ ಅವರಿಗೆ ಸೇರಿದ ಸಮುದ್ರ ತೀರದ ತೆಂಗಿನ ತೋಟಕ್ಕೆ ಸಮುದ್ರದ ಅಲೆಗಳು ಅಪ್ಪಳಿಸುತ್ತಿದ್ದು 10ಕ್ಕೂ ಅಧಿಕ ತೆಂಗಿನ ಮರಗಳು ಸಮುದ್ರ ಪಾಲಾಗಿವೆ. ಕೊರೆತ ಇದೇ ತೀವ್ರತೆಯಲ್ಲಿದ್ದರೆ ಇನ್ನೂ ಹತ್ತಾರು ತೆಂಗಿನ ಮರಗಳು ಸಮುದ್ರದ ಪಾಲಾಗಲಿದೆ. ಈ ಮನೆಗಳೂ ಅಪಾಯಕ್ಕೊಳಗಾಗುವ ಭೀತಿ ಇದೆ.
ಕನಕೋಡದ ಪಂಡರೀನಾಥ ಭಜನಾ ಮಂದಿರ ಬಳಿ ಕೊರೆತ ತೀವ್ರಗೊಂಡಿದ್ದು ಭಾರಿ ಗಾತ್ರದ ಅಲೆಗಳು ಇಲ್ಲಿನ ಮೀನುಗಾರಿಕಾ ಕಾಂಕ್ರೀಟ್ ರಸ್ತೆಗೆ ಅಪ್ಪಳಿಸುತ್ತಿವೆ. ಇದರಿಂದ ಈ ಮೀನುಗಾರಿಕಾ ರಸ್ತೆ, ಜನರ ಸಂಪರ್ಕ ಕಡಿಯುವ ಅಪಾಯ ಎದುರಾಗಿದೆ. ಕುಂದಾಪುರ ತಾಲೂಕಿನ ಗಂಗೊಳ್ಳಿ, ಮರವಂತೆ ಪ್ರದೇಶದಲ್ಲಿಯೂ ಕೊರೆತ ಮುಂದುವರಿದ್ದು, ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಒಂದೆರಡು ದಿನಗಳಲ್ಲಿ ಸಮುದ್ರ ತೀರಕ್ಕೆ ಕೋಟ್ಯಂತರ ರುಪಾಯಿ ವೆಚ್ಚದಲ್ಲಿ ಕಲ್ಲು ತಂದು ಸುರಿದು ಕೊರೆತವನ್ನು ತಾತ್ಕಾಲಿಕವಾಗಿ ಹಿಮ್ಮೆಟ್ಟಿಸುವ, ಅದು ಪ್ರತಿವರ್ಷದಂತೆ ವಿಫಲವಾಗಿ, ಕಲ್ಲುಗಳು ಸಮುದ್ರ ಹೊಟ್ಟೆ ಸೇರುವ ವಾರ್ಷಿಕ ಕಾರ್ಯಕ್ರಮ ಆರಂಭವಾಗಲಿದೆ. ಕಾರ್ಕಳ ತಾಲೂಕಿನ ಬೋಳ ಗ್ರಾಮದ ತೇಜು ಪೂಜಾರಿ ಮನೆಗೆ ಬುಧವಾರ ರಾತ್ರಿ ಸಿಡಿಲು ಬಡಿದು 25 ಸಾವಿರ ನಷ್ಟವಾಗಿದೆ. ಪಳ್ಳಿ ಗ್ರಾಮದ ಕಂಬಳಕೋಡಿ ಎಂಬಲ್ಲಿನ ಸಂಪರ್ಕ ರಸ್ತೆಯ ಮೋರಿ ಕುಸಿದು ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

