ನಂತೂರು ವೃತ್ತಕ್ಕೆ ಓವರ್ ಪಾಸ್
ಟ್ರಾಫಿಕ್ ಜಾಮ್ ಪರಿಹಾರಕ್ಕೆ ಸಂಸದ ಸೂಚನೆ
ಮಂಗಳೂರು: ಸದಾ ಟ್ರಾಫಿಕ್ ಜಾಮ್ ಆಗುತ್ತಿರುವ ರಾಷ್ಟ್ರೀಯ ಹೆದ್ದಾರಿ ನಂತೂರು ವೃತ್ತದಲ್ಲಿ 58 ಕೋಟಿ ವೆಚ್ಚದಲ್ಲಿ ಓವರ್ ಪಾಸ್ ಮತ್ತು ಸಂಪರ್ಕ ರಸ್ತೆಗೆ ಸಾರಿಗೆ ಸಚಿವಾಲಯದಿಂದ ಪ್ರಾಥಮಿಕ ಅನುಮತಿ ದೊರೆತಿದೆ.
ಸಂಸದ ನಳಿನ್ ಕುಮಾರ್ ಕಟೀಲ್ ಸರ್ಕಿಟ್ ಹೌಸ್ನಲ್ಲಿ ಗುರುವಾರ ನಡೆಸಿದ ಹೆದ್ದಾರಿ ಕುಂದುಕೊರತೆ ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನೆ ನಿರ್ದೇಶಕ ಶ್ರೀರಾಮ್ ಮಿಶ್ರಾ ವಿವರ ನೀಡಿದರು.
ಅಂತಿಮ ಒಪ್ಪಿಗೆ ಸಿಕ್ಕಿ ಯೋಜನೆ ಕಾರ್ಯರೂಪಕ್ಕೆ ಬಂದರೆ ನಂತೂರು ಮತ್ತು ಪಂಪ್ವೆಲ್ ವೃತ್ತದಲ್ಲಿ ಟ್ರಾಫಿಕ್ ಜಾಮ್ ತಪ್ಪಲಿದೆ ಎಂದರು. ಬಿಸಿ ರೋಡ್ ರೇಲ್ವೆ ಮೇಲ್ಸೇತುವೆ ಮತ್ತು ಬೈಕಂಪಾಡಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ರೇಲ್ವೆ ಇಲಾಖೆ ಸಮಸ್ಯೆಯಿಂದ ವಿಳಂಬವಾಗಿದೆ. ದೀಪಾವಳಿ ವೇಳೆಗೆ ಎರಡೂ ಮೇಲ್ಸೇತುವೆ ಪೂರ್ಣಗೊಳ್ಳಲಿದೆ ಎಂದು ಭರವಸೆ ನೀಡಿದರು.
ಮೂಲ್ಕಿ, ಬಿ.ಸಿರೋಡ್, ತಲಪಾಡಿ ವರೆಗೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ವಿಳಂಬಕ್ಕೆ ಕಾರಣ ಏನು ಎಂದು ಗುತ್ತಿಗೆ ಸಂಸ್ಥೆ ನವಯುಗ ಕನ್ಸ್ಟ್ರಕ್ಷನ್ ಪ್ರತಿನಿಧಿ ಬಳಿ ವಿಚಾರಿಸಿದರು.
ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಜತೆ ಕಾಮಗಾರಿ ಸ್ಥಗಿತಗೊಂಡಿರುವ ಕುರಿತು ಕುರಿತು ಚರ್ಚಿಸಲು ಅವಕಾಶ ಲಭಿಸಿದೆ ಎಂದರು. ಎಲ್ಲ ಸಮಸ್ಯೆಗಳನ್ನು ತಕ್ಷಣ ಪಟ್ಟಿ ಮಾಡಿ, ಸಚಿವಾಲಯದಿಂದ ಪರಿಹಾರ ಪಡೆಯಬಹುದು ಎಂದು ಸೂಚಿಸಿದರು.
ತೊಕ್ಕೊಟ್ಟು ಬಳಿ ಸಂಪರ್ಕ ರಸ್ತೆ ಹಾಳಾಗಿದ್ದು, ದುರಸ್ತಿ ಮಾಡದೇ ಹೋದರೆ ಈ ಮಳೆಗಾಲದಲ್ಲಿ ಅಪಘಾತ ಗ್ಯಾರಂಟಿ ಎಂದು ಅಲ್ಲಿನ ನಿವಾಸಿಯೊಬ್ಬರು ದೂರಿದರು.
ಬಿ.ಸಿ.ರೋಡ್ನಲ್ಲಿ ಹೆದ್ದಾರಿ ಸಂಪರ್ಕ ರಸ್ತೆ ಕಿರಿದಾಗಿರುವುದರಿಂದ ಸದಾ ಸಂಚಾರ ಬ್ಲಾಕ್ ಆಗುತ್ತಿರುವ ಕುರಿತು ಬಂಟ್ವಾಳ ದೇವದಾಸ್ ಶೆಟ್ಟಿ ದೂರಿದರು. ಸಂಪರ್ಕ ರಸ್ತೆ ಅಗಲಗೊಳಿಸುವಂತೆ ಸಂಸದರು ಸೂಚಿಸಿದರು. ಅಕ್ಕ, ಪಕ್ಕ ಅಂಗಡಿಗಳ ಜಾಗ ಬಿಟ್ಟುಕೊಟ್ಟರೆ ಶೀಘ್ರ ರಸ್ತೆ ಅಗಲ ಮಾಡುವುದಾಗಿ ಹೆದ್ದಾರಿ ಪ್ರಾ. ಯೋಜನೆ ನಿರ್ದೇಶಕ ಮಿಶ್ರಾ ಹೇಳಿದರು.
ಪೊಲೀಸ್ ಸಲಹೆ!
ನಂತೂರು ವೃತ್ತ ದಿನದಲ್ಲಿ ಕೆಲವು ಗಂಟೆಗಳ ಕಾಲ ಎಷ್ಟು ಜಾಮ್ ಆಗಿರುತ್ತದೆ ಎಂದರೆ ಅಕ್ಕ ಪಕ್ಕದ ಮನೆಯವರಿಗೂ ಸಂಚರಿಸಲು ಅಸಾಧ್ಯವಾಗುತ್ತದೆ. ನಾವೆಲ್ಲ ಮನೆಯಲ್ಲಿ ಶುಭ ಕಾರ್ಯ ಇಟ್ಟುಕೊಳ್ಳುವಾಗ ಪುರೋಹಿತರ ಬಳಿ ಹೋಗುವ ಬದಲು ಟ್ರಾಫಿಕ್ ಪೊಲೀಸರ ಬಳಿ ಸಮಯ ಕೇಳುವ ಪರಿಸ್ಥಿತಿ ಎದುರಾಗಿದೆ ಎಂದು ನಾಗರಿಕರೊಬ್ಬರು ನೋವು ತೋಡಿಕೊಂಡರು !
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

